
ಬೆಂಗಳೂರು(ಸೆ.14): ರಾಜ್ಯದಲ್ಲಿರುವ ಪ್ರಮುಖ ಸರ್ಕಾರಿ ಕಣ್ಣಿನ ಆಸ್ಪತ್ರೆಯಾದ ಮಿಂಟೋ ಆರು ತಿಂಗಳಿಂದ ಕಣ್ಣಿನ ಶಸ್ತ್ರಚಿಕಿತ್ಸೆ ಸೇವೆ ನಿಲ್ಲಿಸಿದೆ. ಜತೆಗೆ ರಾಜ್ಯಾದ್ಯಂತ ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮವು ಸ್ಥಗಿತಗೊಂಡಿದ್ದು, ಕಾರ್ಯಕ್ರಮವನ್ನು ಕೂಡಲೇ ಪ್ರಾರಂಭಿಸದಿದ್ದರೆ ಸಾವಿರಾರು ಮಂದಿ ಶಾಶ್ವತ ಅಂಧತ್ವಕ್ಕೆ ತುತ್ತಾಗಲಿದ್ದಾರೆ ಎಂದು ರಾಷ್ಟ್ರೀಯ ನೇತ್ರಾಧಿಕಾರಿಗಳ ಸಂಘವು ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಸಂಘದ ಅಧ್ಯಕ್ಷ ಎಂ.ವೆಂಕಟೇಶ್ ಅವರು, ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿರುವ ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮವನ್ನು ಪುನರ್ ಆರಂಭ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸೋಂಕಿತರ ಕಣ್ಣೀರಲ್ಲೂ ಕೊರೊನಾ ಇರತ್ತಂತೆ ಜೋಕೆ!
ಕೊರೋನಾ ಲಾಕ್‌ಡೌನ್ ಬಳಿಕ ಎಲ್ಲಾ ಸೇವೆಗಳು ಸಾರ್ವಜನಿಕರಿಗೆ ಮುಕ್ತವಾಗುತ್ತಿವೆ. ತೀರಾ ಅನಿವಾರ್ಯವಾದಂತಹ ಕಣ್ಣಿನ ಚಿಕಿತ್ಸೆಯೇ ಜನರಿಗೆ ದೊರೆಯದಂತಾಗಿದೆ. ಕೊರೋನಾದಿಂದಾಗಿ ಸಾರ್ವಜನಿಕರು, ಗ್ರಾಮಾಂತರ ಭಾಗದ ಬಡ ಜನರು ತಮ್ಮ ಕಣ್ಣಿನ ಸಮಸ್ಯೆಗೆ ಸೂಕ್ತ ಚಿಕಿತ್ಸೆ ದೊರೆಯದೆ ಪರದಾಡುತ್ತಿದ್ದಾರೆ. ಹಣ ಉಳ್ಳವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಬಡವರು ಹಾಗೂ ಗ್ರಾಮೀಣ ಪ್ರದೇಶದ ಜನರು ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮ ಹಾಗೂ ಮಿಂಟೋ ಕಣ್ಣಿನ ಆಸ್ಪತ್ರೆಯನ್ನೇ ನೆಚ್ಚಿಕೊಂಡಿರುತ್ತಾರೆ. ಕಾಟರಾಕ್ಟ್ ಶಸ್ತ್ರಚಿಕಿತ್ಸೆ, ಲೇಸರ್ ಚಿಕಿತ್ಸೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಬೇಕು. ಹೀಗಾಗಿ ಕಣ್ಣಿನ ಶಸ್ತ್ರಚಿಕಿತ್ಸಕರು, ನೇತ್ರಾಧಿಕಾರಿಗಳು ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಅಡಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮ ನಿರ್ವಹಿಸಲು ಸೂಚನೆ ನೀಡಬೇಕು. ಜತೆಗೆ ಆಸ್ಪತ್ರೆಗಳಲ್ಲೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ತುರ್ತು ಅನಿವಾರ್ಯವಿರುವ ರೋಗಿಗಳಿಗೆ ಸೇವೆ ಒದಗಿಸಬೇಕು ಎಂದು ಕೋರಿದ್ದಾರೆ.
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳಿಂದ ಸುಮಾರು 10 ಸಾವಿರದಷ್ಟು ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಜತೆಗೆ ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವವರಿಗೆ ಫಾಲೋಅಪ್ ಚಿಕಿತ್ಸೆ ನೀಡಬೇಕಿತ್ತು. ಹಣ ಉಳ್ಳವರು ಖಾಸಗಿ ಆಸ್ಪತ್ರೆಗಳಲ್ಲಿ ತೋರಿಸಿಕೊಳ್ಳುತ್ತಿದ್ದಾರೆ. ಬಡವರು ಸೂಕ್ತ ವೇಳೆಗೆ ಚಿಕಿತ್ಸೆ ದೊರೆಯದೆ ಶಾಶ್ವತ ಅಂಧರಾಗುವ ಅಪಾಯವಿದೆ ಎಂದು ರಾಷ್ಟ್ರೀಯ ನೇತ್ರಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ವೆಂಕಟೇಶ್ ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ