
ಬೆಂಗಳೂರು(ಸೆ.14): ಕಳೆದ 2016ರಲ್ಲಿ ಶಿವಾಜಿನಗರದಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಐದನೇ ಆರೋಪಿ ಪಿಎಫ್‌ಐ ಸಂಘಟನೆ ಜಿಲ್ಲಾಧ್ಯಕ್ಷ ಆಸೀಮ್ ಶರೀಫ್‌ಗೆ ಜಾಮೀನು ನೀಡಲು ನಗರದ ಎನ್‌ಐಎ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ವೆಂಕಟೇಶ್ ಅರ್.ಹುಲಿಗಿ ಅವರು ಜಾಮೀನು ನೀಡಲು ನಿರಾಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.
ವಿಚಾರಣೆ ವೇಳೆ ಎನ್‌ಐಎ ಪರ ವಕೀಲರು ವಾದ ಮಂಡಿಸಿ, ಘಟನೆಯಲ್ಲಿ ಮೃತರಾದ ರುದ್ರೇಶ್ ಕೊಲೆ ಮಾಡುವ ಉದ್ದೇಶ ಯಾವುದೇ ಆರೋಪಿಗಳಿಗಿರಲಿಲ್ಲ. ಆರ್‌ಎಸ್‌ಎಸ್ ಕಾರ್ಯಕರ್ತ ಎಂಬ ಕಾರಣದಿಂದ ಕೊಲೆ ಮಾಡಲಾಗಿದೆ. ಕೃತ್ಯಕ್ಕೆ ಅರ್ಜಿದಾರನೇ ಮುಂದಾಳತ್ವ ವಹಿಸಿದ್ದರು ಎಂಬುದು ತನಿಖೆ ವೇಳೆ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳಿಂದ ತಿಳಿದು ಬಂದಿದೆ. ನ್ಯಾಯಂಗ ಬಂಧನದಲ್ಲಿದ್ದರೂ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ, ಕೊರೋನಾ ಕಾರಣ ನೀಡಿ ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದಲ್ಲಿ ಸಮಾಜಕ್ಕೆ ಕೆಟ್ಟಸಂದೇಶ ರವಾನೆಯಾಗಲಿದೆ. ಆದ್ದರಿಂದ ಜಾಮೀನು ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.
ಬೆಂಗಳೂರಿನಲ್ಲಿ ಹಾಡಹಗಲೇ ಆರೆಸ್ಸೆಸ್ ಕಾರ್ಯಕರ್ತನ ಬರ್ಬರ ಹತ್ಯೆ
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ಇತರೆ ಆರೋಪಿಗಳ ಹೇಳಿಕೆ ಆಧರಿಸಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ, ವಾಸ್ತವವಾಗಿ ಪ್ರಕರಣದ ಇತರೆ ಆರೋಪಿಗಳೊಂದಿಗೆ ಅರ್ಜಿದಾರರ ಸಂಪರ್ಕ ಇಲ್ಲ. ಆದರೂ, ಅವರ ವಿರುದ್ಧ ಸುಳ್ಳು ಆರೋಪ ಹೊರಿಸಿ ಆರೋಪ ಪಟ್ಟಿಸಲ್ಲಿಕೆ ಮಾಡಲಾಗಿದೆ. ಅರ್ಜಿದಾರರ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ(ಪಿಎಫ್‌ಐ) ಸಂಘಟನೆ ಜಿಲ್ಲಾಧ್ಯಕ್ಷರಾಗಿದ್ದಾರೆ. ದೀನ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಲ್ಲದೆ, ಆರೋಪಿಗೆ ಹೃದಯ ಸಂಬಂಧಿ ಕಾಯಿಲೆಯಿದೆ. ಮನೆಯಲ್ಲಿ ವಯಸ್ಸಾದ ತಾಯಿ, ಹೆಂಡತಿ ಮತ್ತು ಮೂರು ಅಪ್ರಾಪ್ತ ಮಕ್ಕಳಿದ್ದಾರೆ. ಕುಟುಂಬದಲ್ಲಿ ಅರ್ಜಿದಾರರ ದುಡಿಮೆಯೀ ಜೀವನಾಧಾರ. ಜೊತೆಗೆ, ಅವರಿಗೆ ಕೊರೋನಾ ಸೋಂಕು ತಗುಲುವ ಆತಂಕವಿದೆ. ಆದ್ದರಿಂದ ಅಗತ್ಯ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದಾರೆ. ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನು 2016ರ ನವೆಂಬರ್ 2 ರಂದು ಶಿವಾಜಿನಗರದ ಶ್ರೀನಿವಾಸ ಮೆಡಿಕಲ್ ಸ್ಟೋರ್ ಬಳಿ ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು. ಈ ಇದೇ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ