
ಬೆಂಗಳೂರು(ಜ.11): ಹೊಸವರ್ಷದ ದಿನವೇ 15 ವರ್ಷದ ಬಾಲಕಿಯೊಬ್ಬಳು ತಾಯಿಯ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಉತ್ತರಹಳ್ಳಿಯ ಆಶ್ರಮ ಸೇರಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಬಾಲಕಿಯ ತಂದೆ ತುರಹಳ್ಳಿ ನಿವಾಸಿ ಜಿ.ಚಂದ್ರಮೌಳಿ ಅವರು, ‘ಈ ಹಿಂದೆ ಆತ್ಮಾನಂದ ಸರಸ್ವತಿ ಸ್ವಾಮೀಜಿ, ಮಗಳಿಗೆ ದೀಕ್ಷೆ ಕೊಡಿಸುವುದಾಗಿ ಹೇಳುತ್ತಿದ್ದರು. ಇದೀಗ ಮಗಳು ನಾಪತ್ತೆಯಾಗಿದ್ದು, ಆಕೆ ಸ್ವಾಮೀಜಿ ಬಳಿ ಇರುವ ಅನುಮಾನವಿದೆ’ ಎಂದು ನೀಡಿದ ದೂರಿನ ಮೇರೆಗೆ ತಲಘಟ್ಟಪುರ ಠಾಣೆ ಪೊಲೀಸರು, ತನಿಖೆ ನಡೆಸಿ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಬಾಲಕಿಯನ್ನು ಪತ್ತೆ ಹಚ್ಚಿ ಕರೆತಂದು ನಿಮ್ಹಾನ್ಸ್ ಸಮೀಪದ ಮಕ್ಕಳ ಆರೈಕೆ ಕೇಂದ್ರಕ್ಕೆ ಸೇರಿಸಿದ್ದಾರೆ.
ಜ.1ರಂದು ಬಾಲಕಿ ಸಂಜೆ 5ರ ಸುಮಾರಿಗೆ ತನ್ನ ತಾಯಿಯೊಂದಿಗೆ ಜಗಳ ಮಾಡಿಕೊಂಡು ಮನೆಯಲ್ಲಿ ತಾಯಿ ಮತ್ತು ಅವರ ಮಾವನನ್ನು ಕೊಠಡಿಯಲ್ಲಿ ಕೂಡಿ ಹಾಕಿ, ತಂದೆಯ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಮನೆ ಬಿಟ್ಟು ಹೋಗಿದ್ದಳು. ಬಳಿಕ ಆಕೆಯನ್ನು ಎಲ್ಲೆಡೆ ಹುಡುಕಾಡಿದಾಗ ಉತ್ತರಹಳ್ಳಿಯಲ್ಲಿರುವ ಆತ್ಮಾನಂದ ಸರಸ್ವತಿ ಸ್ವಾಮೀಜಿ ಆಶ್ರಮಯದ ಮುಂಭಾಗ ದ್ವಿಚಕ್ರ ವಾಹನ ಪತ್ತೆಯಾಗಿತ್ತು.
ಈ ಹಿಂದೆ ಪುತ್ರಿಗೆ ದೀಕ್ಷೆ ಕೊಡುವುದಾಗಿ ಸ್ವಾಮೀಜಿ ಹೇಳುತ್ತಿದ್ದರು. ಹೀಗಾಗಿ ಅವರ ಮೋಡಿಯಿಂದಲೇ ಪುತ್ರಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ತಂದೆ ಚಂದ್ರಮೌಳಿ ದೂರಿನಲ್ಲಿ ಆರೋಪಿಸಿದ್ದರು. ಹೀಗಾಗಿ ಬಾಲಕಿಯನ್ನು ಪತ್ತೆಹೆಚ್ಚಿ ಮಹಿಳಾ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಬಾಲಕಿ ಸ್ವ ಇಚ್ಛೆಯಿಂದ ಆಶ್ರಮಕ್ಕೆ ಬಂದಿದ್ದಾಗಿ ಹೇಳಿಕೆ ನೀಡಿದ್ದಾಳೆ. ಸ್ವಾಮೀಜಿ ವಿರುದ್ಧ ಯಾವುದೇ ಆರೋಪ ಮಾಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಮಾವನ ವಿರುದ್ಧ ದೂರು:
ಬಾಲಕಿಯ ತಂದೆ ಚಂದ್ರಮೌಳಿ ಅವರು ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಭಕ್ತರಾಗಿದ್ದರು. ಈ ಹಿಂದೆ ಪುತ್ರಿ ಜತೆ ಆಶ್ರಮಕ್ಕೆ ಹೋಗಿದ್ದು, ಎರಡು ತಿಂಗಳು ಆಶ್ರಮದಲ್ಲಿ ಪುತ್ರಿಯನ್ನು ಬಿಟ್ಟಿದ್ದರು ಎನ್ನಲಾಗಿದೆ, ಈ ವೇಳೆ ಸ್ವಾಮೀಜಿ ಆಕೆಗೆ ದೀಕ್ಷೆ ನೀಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ಆಕೆಯ ಮಾವ ವಿರೋಧಿಸಿದ್ದರು ಎನ್ನಲಾಗಿದೆ. ಅಲ್ಲದೆ, ಬಾಲಕಿ ಮಾವನ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಮಾವವನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ