ಶಾಸಕ ಯತ್ನಾಳ್‌ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ: ಸಚಿವ ವಿ.ಸೋಮಣ್ಣ

Published : May 09, 2022, 03:25 AM IST
ಶಾಸಕ ಯತ್ನಾಳ್‌ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ: ಸಚಿವ ವಿ.ಸೋಮಣ್ಣ

ಸಾರಾಂಶ

‘2500 ಕೋಟಿ ಕೊಟ್ರೆ ಸಿಎಂ ಮಾಡ್ತೀವಿ ಅಂದ್ರು’ ಎಂಬ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ತಪ್ಪಾಗಿದ್ದು, ಪಕ್ಷಕ್ಕೆ ಮುಜುಗರ ತಂದಿದೆ ಎಂದು ಅಭಿಪ್ರಾಯಪಟ್ಟಿರುವ ವಸತಿ ಮತ್ತು ಮೂಲಭೂತ ಸೌಕರ್ಯ ಸಚಿವ ವಿ.ಸೋಮಣ್ಣ, ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಗಮನಹರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಚಾಮರಾಜನಗರ (ಮೇ.09): ‘2500 ಕೋಟಿ ಕೊಟ್ರೆ ಸಿಎಂ (CM) ಮಾಡ್ತೀವಿ ಅಂದ್ರು’ ಎಂಬ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಹೇಳಿಕೆ ತಪ್ಪಾಗಿದ್ದು, ಪಕ್ಷಕ್ಕೆ ಮುಜುಗರ ತಂದಿದೆ ಎಂದು ಅಭಿಪ್ರಾಯಪಟ್ಟಿರುವ ವಸತಿ ಮತ್ತು ಮೂಲಭೂತ ಸೌಕರ್ಯ ಸಚಿವ ವಿ.ಸೋಮಣ್ಣ (V Somanna), ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಗಮನಹರಿಸಿದ್ದಾರೆ ಎಂದು ತಿಳಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ಹಿರಿಯರಿದ್ದಾರೆ, ಅನುಭವಿಗಳಿದ್ದಾರೆ. ದೊಡ್ಡ ಸಮಾಜವೊಂದರ ನಾಯಕರಾಗಿದ್ದಾರೆ. 

ಅವರು ಇಂತಹ ಮಾತುಗಳನ್ನಾಡುವುದು ಸಮಂಜಸವಲ್ಲ. ಯಾಕೆ ಇಂತಹ ಹೇಳಿಕೆ ಕೊಟ್ಟರೋ ಗೊತ್ತಿಲ್ಲ. ಹಾಗೆ ಮಾತನಾಡಿದ್ದರೆ ಖಂಡಿತ ತಪ್ಪು ಎಂದರು. ಅವರನ್ನು ಸಂಪರ್ಕಿಸಲು ಯತ್ನಿಸಿದ್ದೆ. ಆದರೆ ಅವರು ಸಿಗುತ್ತಿಲ್ಲ ಎಂದರು. ಇದೇ ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ರಾಷ್ಟ್ರೀಯ ನಾಯಕರು ಈಗಾಗಲೇ ತೀರ್ಮಾನಕ್ಕೆ ಬಂದಿದ್ದಾರೆ. ಬದಲಾವಣೆ ಎಂಬುದು ಕಟ್ಟು ಕಥೆ ಎಂದು ಸ್ಪಷ್ಟಪಡಿಸಿದರು. ಸ್ವತಃ ಅಮಿತ್‌ ಷಾ (Amit Shah) ಅವರೇ ‘ಲೋಕಮಾನ್ಯ ಮುಖ್ಯಮಂತ್ರಿಜೀ’ ಎಂದು ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಹಾಡಿ ಹೊಗಳಿದ್ದಾರೆ. 

Chamarajanagar: ಗೋ ಶಾಲೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಚಾಲನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಸ್ಪೀಡ್‌ ಕೆಲವರಿಗೆ ಮುಜುಗರ ತಂದಿದೆ. ಸಿಎಂ ಅಂದ್ರೆ ಕಾಮನ್‌ ಮ್ಯಾನ್‌ ಎಂದು ಅವರೇ ಹೇಳಿದ್ದಾರೆ. ಅದರಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು. ಇನ್ನು ಹಿರಿಯ ಸಚಿವರನ್ನು ಕೈ ಬಿಡುತ್ತಾರೆ ಎಂಬುದು ಮಾಧ್ಯಮಗಳ ಸೃಷ್ಟಿ. ನಿಮಗೇನಾದರು ಕನಸು ಬಿದ್ದಿತ್ತಾ? ನಮ್ಮನ್ನು ಕೆಲಸ ಮಾಡಲು ಬಿಡಿ ಎಂದು ಮನವಿ ಮಾಡಿದರು.

ಗಂಗಾ ನದಿ ಶುದ್ಧೀಕರಿಸಿದ ಪ್ರಧಾನಿ ಆಧುನಿಕ ಭಗೀರಥ: ಭಗೀರಥರಂತೆಯೇ ಇಂದಿನ ಕಾಲಘಟ್ಟದಲ್ಲಿ ಪವಿತ್ರಗಂಗೆಯನ್ನು ಶುದ್ಧೀಕರಿಸಿದ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರಮೋದಿಜೀಯವರು ಕೂಡ ಆಧುನಿಕ ಭಗೀರಥರಾಗಿದ್ದಾರೆ ಎಂದು ವಸತಿ, ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ಶ್ರೀ ಭಗೀರಥ ಜಯಂತಿ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಶ್ರೀ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅದ್ಧೂರಿ ಮೆರವಣಿಗೆಗೆ ನಗರದ ಪ್ರವಾಸಿ ಮಂದಿರದಲ್ಲಿ ಚಾಲನೆ ನೀಡಿ ಮಾತನಾಡಿದರು.

ಹಲವು ಮಹರ್ಷಿಗಳ, ದಾರ್ಶನಿಕರ, ಚಿಂತಕರ, ತತ್ವಜ್ಞಾನಿಗಳ, ಅನುಭವ ಜನ್ಯವಾದ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ವಿಶ್ವದಲ್ಲಿಯೇ ಅದ್ವಿತೀಯ ಸ್ಥಾನವನ್ನು ಪಡೆದಿದೆ. ಮಾನವ ಜನಾಂಗದ ಉದ್ಧಾರಕ್ಕೆ ಕಾಲಕಾಲಕ್ಕೆ ಅಗತ್ಯ ಮಾರ್ಗದರ್ಶನ ಮಾಡುತ್ತಾ ಸಮಾಜವನ್ನು ಸಂಸ್ಕೃತಿ ಸಂಪನ್ನ ರಾಷ್ಟ್ರವನ್ನಾಗಿ ರೂಪಿಸುವುದರಲ್ಲಿ ಮಹರ್ಷಿಗಳ ಕೊಡುಗೆ ಅವಿಸ್ಮರಣೀಯವಾದದ್ದು. ಈ ಪೈಕಿ ಶ್ರೀ ಭಗೀರಥ ಮಹರ್ಷಿಗಳು ಅಗ್ರಗಣ್ಯ ಮತ್ತು ಶ್ರೇಷ್ಠರೆನಿಸಿದ್ದಾರೆ ಎಂದರು. ತಮ್ಮ ಅಚಲ ಪ್ರಯತ್ನದಿಂದ ದೇವಲೋಕದ ಗಂಗೆಯನ್ನು ಧರೆಗಿಳಿಯುವಂತೆ ಮಾಡಿ ತಮ್ಮ ಪೂರ್ವಜರ ಆತ್ಮಗಳಿಗೆ ಶಾಂತಿ ದೊರಕಿಸಿಕೊಟ್ಟು ನಾಡನ್ನು ಸುಜನ ಮತ್ತು ಸುಫಲವನ್ನಾಗಿಸಿದ ಮಹಾನ್‌ ಛಲಗಾರ ಶ್ರೀ ಭಗೀರಥ ಮಹರ್ಷಿಗಳು ಎಂದರು.

PMAY: ಕರ್ನಾಟಕದಲ್ಲಿ ವಸತಿ ಯೋಜನೆ ಶರವೇಗದಲ್ಲಿ ಜಾರಿ: ಸೋಮಣ್ಣ

ಹಳೆಯ ಮೈಸೂರು ಪ್ರಾಂತ್ಯದ ಚಾಮರಾಜನಗರ ಜಿಲ್ಲೆಯಲ್ಲಿ ಉಪ್ಪಾರ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದು, ಇವರ ಶ್ರೇಯೋಭಿವೃದ್ಧಿಗೆ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಎಲ್ಲ ಸೌಲಭ್ಯಗಳನ್ನು ಸಮುದಾಯದ ಪ್ರತಿಯೊಬ್ಬರು ಪಡೆದುಕೊಂಡು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂದು ಅವರು ತಿಳಿಸಿದರು. ಛಲ ಬಿಡದ ಪ್ರಯತ್ನಕ್ಕೆ ಅನ್ವರ್ಥವಾಗಿರುವ ಭಗೀರಥರ ನೆನಪುಗಳು ಸದಾ ಹಸಿರಾಗಿದ್ದು, ಸರ್ವರಿಗೂ ಸ್ಪೂರ್ತಿಯಾಗಿವೆ. ಜೀವ-ಜಲವನ್ನು ಉಳಿಸುವ ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಕೂಡ ಭಗೀರಥ ಪ್ರಯತ್ನಗಳಾಗಿರಲಿ ಎಂಬ ಆಶಯವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!