
ಬೆಂಗಳೂರು (ಮೇ.09): ‘ಸಮಯದ ಪರಿಮಿತಿ ಬಿಟ್ಟು ಕೆಲಸ ಮಾಡಿ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರ (Corruption) ಸಹಿಸುವುದಿಲ್ಲ. ವಿಳಂಬ ಧೋರಣೆಯನ್ನೂ ಒಪ್ಪುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ರಾಜ್ಯದ (Karnataka) ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ (District Commissioners) ಚಾಟಿ ಬೀಸಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ. ಬಡವರಿಗೆ ನೆರವಾಗಲು, ಅಭಿವೃದ್ಧಿ (Development) ಉದ್ದೇಶದಿಂದ ಯಾವುದೇ ನಿರ್ಧಾರ ತೆಗೆದುಕೊಂಡರೂ ಸರ್ಕಾರ ನಿಮ್ಮ ರಕ್ಷಣೆಗೆ ನಿಲ್ಲುತ್ತದೆ. ಬಜೆಟ್ (Budget) ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತು ನೀಡಿ ಆಡಳಿತದಲ್ಲಿ ಸಂಪೂರ್ಣ ಬದಲಾವಣೆ ತರುವ ಸಂಕಲ್ಪ ಮಾಡಿ ಎಂದೂ ಅವರು ಸೂಚನೆ ನೀಡಿದ್ದಾರೆ.
ಕೆಲ ದಿನಗಳಿಂದೀಚೆಗೆ ಆಡಳಿತಕ್ಕೆ ಚುರುಕು ನೀಡುವ ಕಾರ್ಯದಲ್ಲಿ ನಿರತರಾಗಿರುವ ಮುಖ್ಯಮಂತ್ರಿಗಳು ಸರ್ಕಾರಿ ರಜಾ ದಿನವಾದ ಭಾನುವಾರ ಕೂಡ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಬಜೆಟ್ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದರು. ನನ್ನದೇ ಕಲ್ಪನೆಯ ನವ ಕರ್ನಾಟಕದ ಸಾಕಾರಕ್ಕೆ ಡೀಸಿಗಳ ಸಹಕಾರ ಅತ್ಯಗತ್ಯ. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿ. ಸಾರ್ವಜನಿಕರ ಸಮಸ್ಯೆ, ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ರೈತರು, ದೀನ ದಲಿತರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗಬೇಕು. ಇದರಲ್ಲಿ ರಾಜಿ ಆಗುವುದಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಪರಿಹರಿಸಲು ಪ್ರತ್ಯೇಕ ಘಟಕ ಆರಂಭಿಸಿ.
3 ದಿನದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎಂದ ಯಡಿಯೂರಪ್ಪ
ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿದರೆ ಹೊಸ ಚೈತನ್ಯ ಮೂಡುತ್ತದೆ. ಅದರಿಂದ ನಿಮಗೂ ತೃಪ್ತಿ. ಜನಸಾಮಾನ್ಯರಿಗೆ ಆಡಳಿತದಲ್ಲಿ ಬದಲಾವಣೆ ಆಗುತ್ತಿದೆ ಎಂಬ ಭಾವನೆ ಮೂಡುತ್ತದೆ. ಈ ನಿಟ್ಟಿನಲ್ಲಿ ಕೈಗೊಳ್ಳುವ ನಿರ್ಧಾರಗಳಿಗೆ ಸರ್ಕಾರ ತಮ್ಮ ಪರ ಇರುತ್ತದೆ ಎಂದು ತಿಳಿಸಿದರು. ಭ್ರಷ್ಟಾಚಾರ, ಸ್ವಜನಪಕ್ಷಪಾತ ಸಹಿಸುವುದಿಲ್ಲ. ಸಮಯದ ಮಿತಿ ಹಾಕಿಕೊಂಡು ಕೆಲಸ ಮಾಡಬೇಡಿ. ಹಾಗೆ ಮಾಡುವವರಿಗೆ ಜಿಲ್ಲಾಧಿಕಾರಿ ಹುದ್ದೆ ಬೇಕಿಲ್ಲ. ಅವರಿಗೆ ಸರ್ಕಾರದಲ್ಲಿ ಬೇರೆ ಕೆಲಸಗಳಿವೆ. ಐದು, ಹತ್ತು ಗಂಟೆಯ ಮಿತಿಯಲ್ಲಿ ಇಡೀ ಜಿಲ್ಲೆಯ ಜವಾಬ್ದಾರಿ ನಿಭಾಯಿಸಲು ಆಗುವುದಿಲ್ಲ.
ಕ್ರಿಯಾಶೀಲವಾಗಿ ಕೆಲಸ ಮಾಡಿದರೆ ಯಾವ ಪ್ರಶ್ನೆಯೂ ಬರುವುದಿಲ್ಲ ಎಂದು ಹೇಳುವ ಮೂಲಕ ಸಮಯ ಮಿತಿ ಬಿಟ್ಟು ಕೆಲಸ ಮಾಡದಿದ್ದರೆ ಜಿಲ್ಲಾಧಿಕಾರಿ ಹುದ್ದೆಯಿಂದ ಹೊರನಡೆಯಬೇಕಾಗುತ್ತದೆ ಎಂದು ಸೂಕ್ಷ್ಮವಾಗಿ ತಿಳಿಸಿದರು ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಸಿ.ಸಿ.ಪಾಟೀಲ್, ಕೆ.ಸಿ.ನಾರಾಯಣಗೌಡ, ಕೆ.ಗೋಪಾಲಯ್ಯ, ಬಿ.ಸಿ.ನಾಗೇಶ್, ಬಿ.ಸಿ. ಪಾಟೀಲ್, ಸುನೀಲ್ ಕುಮಾರ್ , ಪ್ರಭು ಚವ್ಹಾಣ್, ಉಮೇಶ್ ಕತ್ತಿ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಸಗೊಬ್ಬರ, ಬೀಜ ದಾಸ್ತಾನು ಪರಿಶೀಲಿಸಿ: ಡೀಸಿಗಳಿಗೆ ಸಿಎಂ: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲೇ ಉತ್ತಮ ಮಳೆಯಾಗುತ್ತಿದೆ. ಇದರಿಂದ ಈ ಬಾರಿ ರಸಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ರೈತರಿಂದ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದೆ. ಪ್ರತಿ ಜಿಲ್ಲೆಯಲ್ಲೂ ಅಗತ್ಯದಷ್ಟುರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ದಾಸ್ತಾನು ಇದೆಯೇ ಎಂದು ಪರಿಶೀಲಿಸಿ. ಕೊರತೆ ಇದ್ದರೆ ಕೂಡಲೇ ತರಿಸಿಕೊಳ್ಳಲು ಕ್ರಮ ಕೈಗೊಳ್ಳಿ ಎಂದು ಇದೇ ವೇಳೆ ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಯತ್ನಾಳ್ 2500 ಕೋಟಿ ಹೇಳಿಕೆ ತನಿಖೆಯಾಗಲಿ ಎಂದ ಸಿದ್ದರಾಮಯ್ಯ!
ಅಕಾಲಿಕ ಮಳೆಯಿಂದ ಮಾವು, ಹುಣಸೆ ಮುಂತಾದ ಬೆಳೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿ ಸಲ್ಲಿಸಿ ಸರ್ಕಾರದಿಂದ ಪರಿಹಾರ ಪಡೆದುಕೊಂಡು ನಷ್ಟಅನುಭವಿಸಿದ ರೈತರಿಗೆ ನೀಡಬೇಕು. ಭೂಮಿ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಪ್ರಕರಣಗಳ ವಿಲೇವಾರಿಯನ್ನು 30 ದಿನಗಳೊಳಗೆ ಮಾಡಬೇಕು. ಭೂ ಮಂಜೂರಾತಿ, ಭೂ ಪರಿವರ್ತನೆ, ಸರ್ವೆ ಇಲಾಖೆಯಲ್ಲಿ ಅಳತೆಗಾಗಿ ಬಾಕಿ ಇರುವ ಅರ್ಜಿಗಳು, ತಹಶೀಲ್ದಾರರ ಬಳಿ 3 ಮತ್ತು 9 ವಿಸ್ತೀರ್ಣ ವ್ಯತ್ಯಾಸದಿಂದ ತಿದ್ದುಪಡಿಗಾಗಿ ಬಾಕಿ ಇರುವ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು ಎಂದು ಹೇಳಿದರು.
ಡಿಸಿಗಳಿಗೆ ಸಿಎಂ ನೀಡಿದ ಸೂಚನೆಗಳು
* ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳಿಗೆ ಜಮೀನಿನ ಅಗತ್ಯವಿರುವೆಡೆ ಆದ್ಯತೆಯ ಮೇಲೆ ಒಂದು ತಿಂಗಳೊಳಗೆ ಗುರುತಿಸಿ
* ಗೋಶಾಲೆಗಳ ನಿರ್ಮಾಣಕ್ಕೆ ಜಿಲ್ಲಾ ಕೇಂದ್ರಗಳಲ್ಲಿ 10 ಎಕರೆ ಜಮೀನು ಗುರುತಿಸಿ
* 19 ಜಿಲ್ಲೆಗಳಲ್ಲಿರುವ ಅಲೆಮಾರಿಗಳಿಗೆ ವಸತಿ ನಿರ್ಮಿಸಲು ಸ್ಥಳ ಗುರುತಿಸಿ
* ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಾರಾಯಣ ಗುರು ವಸತಿ ಶಾಲೆಗಳ ನಿರ್ಮಾಣಕ್ಕೆ ಜಮೀನು ಗುರುತಿಸಿ
* ಸಕಾಲ ಯೋಜನೆಯಡಿ 1.90 ಲಕ್ಷ ಅರ್ಜಿಗಳು ಸಮಯ ಮೀರಿ ಉಳಿದುಕೊಂಡಿವೆ, ಇವುಗಳ ವಿಲೇವಾರಿಗೆ ಕ್ರಮ ವಹಿಸಿ
* ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಪೌಷ್ಟಿಕತೆ ನಿವಾರಣೆಗೆ ಒತ್ತು ನೀಡಿ
* ಬಜೆಟ್‌ನಲ್ಲಿ ಘೋಷಿಸಿರುವ 7000 ಶಾಲಾ ಕೊಠಡಿಗಳ ನಿರ್ಮಾಣ, ನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವುದು ಹಾಗೂ 4 ಸಾವಿರ ಅಂಗನವಾಡಿಗಳ ನಿರ್ಮಾಣ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ