
ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹಾಗೂ ವಿಧಾನಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ನಡುವೆ ನಡೆದ ಜಟಾಪಟಿ ವೇಳೆ ಪ್ರಸ್ತಾಪಕ್ಕೆ ಬಂದ ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ ಮಿರ್ಜಿ ಅವರಿಗೆ ಸೇರಿದ 120 ಎಕರೆ ಪಟ್ಟಾ ನೀಡಲಾಗಿದೆ ಎನ್ನಲಾದ ಭೂಮಿಯ ಹುಡುಕಾಟದಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಕ್ಷರಶಃ ಹೈರಾಣಾಗಿದ್ದಾರೆ.
ಯಾವ ಊರು, ಯಾವ ತಾಲೂಕು ಎಂಬುದು ತಿಳಿಯದೇ ಇಡೀ ದಿನ ಕಡತಗಳನ್ನು ಕೆದರಿದ್ದೇ ಸಾಧನೆಯಾಗಿದೆಯೇ ವಿನಃ ಭೂಮಿ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಆರೋಪ ಮಾಡಿದ್ದ ಜಕ್ಕಪ್ಪನವರ ಕೂಡ ತಮ್ಮ ಮಾತಿಗೆ ಬದ್ಧರಾಗಿ ಮಾಹಿತಿ ನೀಡದಿರುವುದು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ನಿಜಕ್ಕೂ ಮಿರ್ಜಿ ಅವರಿಗೆ ಸೇರಿದ 120 ಎಕರೆ ಭೂಮಿ ಧಾರವಾಡ ಜಿಲ್ಲೆಯಲ್ಲಿ ಇದೆಯಾ?
ಧಾರವಾಡ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಲಾಡ್- ಜಕ್ಕಪ್ಪನವರ ಮಧ್ಯೆ ತೀವ್ರ ವಾಕ್ಸಮರ ನಡೆದಿತ್ತು. ಒಂದೇ ಪಕ್ಷದ ಜನಪ್ರತಿನಿಧಿಗಳಿಬ್ಬರು ಅಧಿಕಾರಿಗಳ ಸಮ್ಮುಖದಲ್ಲೇ ಪರಸ್ಪರ ಜಟಾಪಟಿಯಲ್ಲಿ ತೊಡಗಿರುವುದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದ ಕುರುಹು ಎಂಬತ್ತಿತ್ತು. ಕೊನೆಗೆ ಬಿಜೆಪಿ ಶಾಸಕರಾದ ಎಂ.ಆರ್. ಪಾಟೀಲ, ಪ್ರದೀಪ ಶೆಟ್ಟರ್ ಅವರು, ಜಕ್ಕಪ್ಪನವರ ಅವರನ್ನು ಸಮಾಧಾನ ಪಡಿಸಿದ್ದು ಕಾಂಗ್ರೆಸ್ಸಿಗೆ ತೀವ್ರ ಮುಜುಗರ ಹುಟ್ಟಿಸಿದೆ.
ಜಕ್ಕಪ್ಪನವರ ಅರಣ್ಯ ಮತ್ತು ಕಂದಾಯ ಇಲಾಖೆಗಳು ದನಿ ಇಲ್ಲದ ಬಡ ಗೌಳಿ ಸಮುದಾಯದವರಿಗೆ ಸಾಗುವಳಿ ಪತ್ರ ಕೊಟ್ಟಿಲ್ಲ. ಆದರೆ, ಮಾಜಿ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ ಮಿರ್ಜಿ ಅವರಿಗೆ 120 ಎಕರೆ ಜಮೀನಿಗೆ ಸಾಗುವಳಿ ಪತ್ರ ನೀಡುವ ಮೂಲಕ ಜಿಲ್ಲಾಡಳಿತ ದಲಿತ ಮತ್ತು ಬಡವರ ವಿರೋಧಿಯಾಗಿದೆ ಎಂದು ಅಬ್ಬರಿಸಿದ್ದರು.
ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಲಾಡ್, ಅದ್ಹೇಗೆ 120 ಎಕರೆ ಜಮೀನಿನ ಸಾಗುವಳಿ ಪತ್ರ ಕೊಟ್ಟಿರಿ? ಯಾವ ರೀತಿಯ ಜಮೀನು ಅದು? ತಕ್ಷಣ ಪರಿಶೀಲಿಸಿ ತಿಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.
ಆದರೆ, ಜಕ್ಕಪ್ಪನವರ ಯಾವ ಸರ್ವೇ ನಂಬರ್, ಯಾವ ತಾಲೂಕು, ಯಾವ ಊರು, ಯಾವ ಹೋಬಳಿ ಎಂಬ ಬಗ್ಗೆ ಕಿಂಚಿತ್ತೂ ಮಾಹಿತಿ ನೀಡಿರಲಿಲ್ಲ. ಆದರೆ ಅಧಿಕಾರಿಯೊಬ್ಬರು ಯಾವ ಸರ್ವೇ ನಂಬರ್ ಹೇಳಿ ಪರಿಶೀಲನೆ ನಡೆಸಲಾಗುವುದು ಎಂದು ಸಭೆಯಲ್ಲಿ ಜಕ್ಕಪ್ಪನವರ ಅವರನ್ನು ಪ್ರಶ್ನಿಸಿದರಂತೆ. ಆದರೆ ಅವರು, ಇಲ್ಲ ಸರ್ವೇ ನಂಬರ್ ತಮಗೆ ಗೊತ್ತಿಲ್ಲ ಎಂದು ಉತ್ತರಿಸಿ ಜಾರಿಕೊಂಡಿದ್ದಾರೆ.
ಸಭೆಯಲ್ಲೇ ಬಹಿರಂಗವಾಗಿ 120 ಎಕರೆ ಸಾಗುವಳಿ ಪತ್ರ ನೀಡಲಾಗಿದೆ ಎಂದು ಆರೋಪ ಕೇಳಿ ಬಂದಿರುವುದರಿಂದ ಯಾವ ಜಾಗೆ ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಹುಡುಕಾಟದಲ್ಲಿ ತೊಡಗಿದ್ದಾರೆ. ಕಂದಾಯ ಹಾಗೂ ಅರಣ್ಯ ಇಲಾಖೆ ಎರಡು ಇಲಾಖೆಗಳು ತಮ್ಮ ತಮ್ಮ ಸಿಬ್ಬಂದಿಯನ್ನು ಪತ್ತೆ ಹಚ್ಚುವಂತೆ ಹೇಳಿವೆ. ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಸರಿಯಾದ ಮಾಹಿತಿ ಇಲ್ಲದೇ ಎಲ್ಲ ಸರ್ವೇ ನಂಬರ್ ತಪಾಸಣೆ ಮಾಡುವುದರಲ್ಲಿ ನಿರತರಾಗಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ತರಕಾರಿಯಲ್ಲಿನ ಅಪಾಯಕಾರಿ ಅಂಶ ದೇಹಕ್ಕೆ ಸೇರದಿರಲು ಈ ಕ್ರಮ ಅನುಸರಿಸಿ ಸೇವಿಸಿ
ಒಂದು ವೇಳೆ ಜಕ್ಕಪ್ಪನವರ ಆರೋಪಿಸಿದಂತೆ ಮಿರ್ಜಿ ಅವರಿಗೆ ಸೇರಿದ 120 ಎಕರೆ ಜಮೀನಿಗೆ ಸಾಗುವಳಿ ಪತ್ರ ಕೊಟ್ಟಿದ್ದೇ ನಿಜವಾದರೆ ದೊಡ್ಡ ಹಗರಣವೇ ಹೊರಗೆ ಬಂದಂತಾಗಲಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಮಿರ್ಜಿ ಅವರಿಗೆ ಸಾಗುವಳಿ ಪತ್ರ ನೀಡಲಾಗಿದೆ ಎಂದು ವಿಪ ಸದಸ್ಯ ಜಕ್ಕಪ್ಪನವರ ಅವರು ಆರೋಪಿಸಿದ್ದಾರೆ. ಸರ್ವೇ ನಂಬರ್ ಕೇಳಿದ್ದೇವೆ. ಆದರೆ, ಅವರು ಗೊತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸರ್ವೇ ನಂಬರ್ ಪರಿಶೀಲಿಸುವಂತೆ ತಹಸೀಲ್ದಾರರಿಗೆ ತಿಳಿಸಲಾಗಿದೆ ಎಂದು ಧಾರವಾಡದ ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಹೇಳಿದ್ದಾರೆ.
ಇದನ್ನೂ ಓದಿ: ಇಡೀ ಊರಿಗೆ ಊಟ ಹಾಕಿಸಿ ಎತ್ತಿನ ಹುಟ್ಟುಹಬ್ಬ ಆಚರಿಸಿದ ರೈತ; ಗ್ರಾಮದಲ್ಲಿ ಹಬ್ಬದ ವಾತಾವರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ