ಪಡಿತರ ರೀತಿಯಲ್ಲಿ ರೈತರಿಗೆ ರಸಗೊಬ್ಬರ ವಿತರಿಸಿ: ಸಚಿವ ಸಂತೋಷ್ ಲಾಡ್ ಸಲಹೆ

Published : Jul 31, 2025, 09:59 PM IST
Santosh Lad

ಸಾರಾಂಶ

ಪಡಿತರ ಚೀಟಿ ರೀತಿಯಲ್ಲೇ ರೈತರಿಗೆ ರಸಗೊಬ್ಬರ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಲಹೆ ನೀಡಿದ್ದಾರೆ.

ಧಾರವಾಡ (ಜು.31): ಪಡಿತರ ಚೀಟಿ ರೀತಿಯಲ್ಲೇ ರೈತರಿಗೆ ರಸಗೊಬ್ಬರ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಲಹೆ ನೀಡಿದ್ದಾರೆ. ಈ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿರುವ ಅವರು, ಪ್ರತಿಯೊಬ್ಬ ರೈತರಿಗೂ ಸರ್ವೇ ನಂಬರ್‌ವಾರು ಬೆಳೆಯಬೇಕಾದ ಬೆಳೆ ಮತ್ತು ಅವಶ್ಯವಿರುವ ರಸಗೊಬ್ಬರಗಳನ್ನು ಪ್ರತ್ಯೇಕವಾಗಿ ರಸಗೊಬ್ಬರ ಚೀಟಿಯಲ್ಲಿ ನಮೂದಿಸಿ ವಿತರಿಸಬಹುದಾಗಿದೆ. ಈ ಸಂಬಂಧ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ, ಜಿಪಂ ಸಿಇಓ, ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಪತ್ರ ಮುಖೇನ ಸೂಚಿಸಿದ್ದಾರೆ.

ಕೃಷಿ ವಿಶ್ವವಿದ್ಯಾಲಯವು ವಿವಿಧ ಬೆಳೆಗಳಿಗೆ ಸಂಬಂಧಿಸಿದ ಹಲವು ಸಂಶೋಧನೆಗಳನ್ನು ನಡೆಸುತ್ತಿದೆ. ಗ್ರಾಮಗಳಲ್ಲಿರುವ ರೈತರಿಗೆ ಅನುಕೂಲವಾಗುವಂತೆ ಪ್ರತಿ ರೈತರ ಸರ್ವೇ ನಂಬರ್‌ವಾರು ಬೆಳೆಗಳನ್ನು ಬೆಳೆಯಲು ಸೂಕ್ತ ಅಧ್ಯಯನ ನಡೆಸಿ ಶಿಫಾರಸು ಮಾಡುವುದು ಅನಿವಾರ್ಯ. ಇದರಿಂದ ರೈತರ ಬೇಡಿಕೆಗಳಾದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಅನುಪಾತವನ್ನು ಸರಿದೂಗಿಸಲು ಸಹಾಯವಾಗಲಿದೆ. ರಸಗೊಬ್ಬರ ಚೀಟಿಯಲ್ಲಿ ಹಲವು ಅಂಶಗಳು ಒಳಗೊಂಡಿರಬೇಕು. ರೈತರ ಸರ್ವೇ ನಂಬರ್, ಜಮೀನಿನ ಮಣ್ಣಿನ ಫಲವತ್ತತೆಯ ಪರೀಕ್ಷಾ ವರದಿ, ಪರೀಕ್ಷಾ ವರದಿಯ ಅನುಗುಣವಾಗಿ ಬೆಳೆಯ ಬೇಕಾದ ಬೆಳೆ, ಶಿಫಾರಸು ಮಾಡಿದ ಬೆಳೆಗೆ ಬೇಕಾದ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರದ ವಿವರ ಹಾಗೂ ಶಿಫಾರಸಿಗೆ ಅನುಗುಣವಾಗಿ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ವಿವರಣೆ ಇರಬೇಕು ಎಂದಿದ್ದಾರೆ.

ಅನುಕೂಲಗಳು ಏನು: ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಸಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳುವುದರಿಂದ ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರದ ಕೊರತೆ ಉಂಟಾಗುವುದಿಲ್ಲ. ಈ ಸಂಬಂಧ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಒಂದು ತಾಲೂಕಿನಲ್ಲಿ ಒಂದು ಹೋಬಳಿಯಲ್ಲಿ ಪ್ರಾಯೋಗಿಕವಾಗಿ ಈ ವಿಧಾನ ಅನುಸರಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಿದ್ದಾರೆ. ರೈತರು ಬೆಳೆಯುತ್ತಿರುವ ಬೆಳೆಗಳಿಗೂ ಹಾಗೂ ರಸಗೊಬ್ಬರದ ಬೇಡಿಕೆಗೂ ವ್ಯತ್ಯಾಸ ಉಂಟಾಗುತ್ತಿದೆ. ಒಂದೇ ರೀತಿಯ ಬೆಳೆ ಬೆಳೆಯುವುದು ಹೆಚ್ಚುತ್ತಿದೆ. ಹಲವು ಬಾರಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕುತ್ತಿಲ್ಲ. ಇದೆಲ್ಲಕ್ಕಿಂತ ಮಣ್ಣಿನ ಫಲವತ್ತತೆ ಸಹ ಕ್ಷೀಣಿಸುತ್ತಿದೆ. ಈ ಎಲ್ಲವೂಗಳಿಗೆ ಪರಿಹಾರ ಎಂಬಂತೆ ರಸಗೊಬ್ಬರ ಚೀಟಿ ಸಹಾಯವಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.

ಕೈಗಾರಿಕೋದ್ಯಮಿಗಳಿಗೆ ಪ್ರತ್ಯೇಕ ನಿಧಿ ಸ್ಥಾಪನೆಗೆ ಆಗ್ರಹ: ಹಿಂದುಳಿದ ವರ್ಗದ ಉದಯೋನ್ಮುಖ ಯುವ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು ಮೀಸಲಾದ ಪ್ರತ್ಯೇಕ ನಿಧಿ ಸ್ಥಾಪಿಸಬೇಕು ಎಂದು ಕಾರ್ಮಿಕ, ಉಸ್ತುವಾರಿ ಸಚಿವ ಸಂತೋಷ್ ಲಾಡ್ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಹಿಂದುಳಿದ ವರ್ಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ 2015ರಲ್ಲಿ ನಡೆದ ಸಮೀಕ್ಷೆ ಪ್ರಕಾರ, ಹಿಂದುಳಿದ ವರ್ಗಗಳ ಸಂಖ್ಯೆ ಸುಮಾರು ಶೇ. 70ರಷ್ಟು (5.42 ಕೋಟಿ) ಇದ್ದು, ಒಬಿಸಿ ವರ್ಗದ ವ್ಯಾಪ್ತಿಯಲ್ಲಿ 1880 ಜಾತಿ ಮತ್ತು ಉಪಜಾತಿಗಳಿವೆ. ಈ ವರ್ಗದ ಉದಯೋನ್ಮುಖ ಯುವ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು ಮೀಸಲಾದ ಯಾವುದೇ ಪ್ರತ್ಯೇಕ ಬಂಡವಾಳ, ಅನುದಾನ ವ್ಯವಸ್ಥೆ ಇಲ್ಲ. ಈ ವರ್ಗದ ಯುವ ಉದ್ಯಮಿಗಳ ಕೈಗಾರಿಕೆ ಸ್ಥಾಪನೆ ವಲಯದಿಂದ ದೂರ ಉಳಿಯುತ್ತಿದ್ದಾರೆ. ಹಾಗಾಗಿ, ಇವರಿಗೆ ಅನುಕೂಲವಾಗಲು ಸರ್ಕಾರದ ಹಂತದಲ್ಲಿ ಒಂದು ನಿಧಿ ಸ್ಥಾಪಿಸುವುದು ಅನಿವಾರ್ಯ. ಈ ಸಂಬಂಧ ನೀತಿ ರೂಪಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನವನ್ನು ನೀಡಲು ಕೋರಿದ್ದಾರೆ.

ಪ್ರತ್ಯೇಕ ನಿಧಿಗೆ ಅನುದಾನ ಕ್ರೋಡೀಕರಿಸುವ ಸಂಬಂಧ ತಮ್ಮ ಪತ್ರದಲ್ಲಿ ವಿವರಿಸಿರುವ ಸಚಿವರು, ಈ ನಿಧಿಗೆ ಸರ್ಕಾರದಿಂದ ಅನುದಾನ ಒದಗಿಸುವುದು, ಖಾಸಗಿ ವಲಯದ ವಿವಿಧ ರೀತಿಯ ಹೂಡಿಕೆದಾರರಿಂದ ಹೂಡಿಕೆಗೆ ಅವಕಾಶ ಮಾಡಿಕೊಡಬಹುದಾಗಿದೆ ಎಂದು ಹೇಳಿದ್ದಾರೆ. ಈ ಪ್ರತ್ಯೇಕ ನಿಧಿಯಿಂದ, ಸರ್ಕಾರ ಮತ್ತು ಖಾಸಗಿ ವಲಯದ ಹೂಡಿಕೆದಾರರು ಅಂತಿಮಗೊಳಿಸುವ ಯುವ ಹಿಂದುಳಿದ ವರ್ಗಗಗಳಿಗೆ ನವೋದ್ಯಮಗಳನ್ನು ಆರಂಭಿಸಲು ಅನುದಾನ ಒದಗಿಸಬಹುದು. ಇದರಿಂದ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲಿದ್ದಾರೆ ಎಂಬ ಆಶಾಭಾವನೆಯನ್ನು ಸಚಿವರು ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌