ಭೂಕುಸಿತದ ಭೀತಿಯಲ್ಲಿ ವೃದ್ಧೆಯ ಕಣ್ಣೀರಿನ ಮನವಿ: ಕೊಡಗಿನಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ

Published : Jul 31, 2025, 08:27 PM IST
Kodagu landslide

ಸಾರಾಂಶ

ಭಾರೀ ಮಳೆಗೆ ಭೂಕುಸಿತವಾಗಿದ್ದರಿಂದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಬಾರದೆಂದು ಹೆದ್ದಾರಿ ಕುಸಿಯದಂತೆ ಕೋಟ್ಯಂತರ ರೂಪಾಯಿಯಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜು.31): ಭಾರೀ ಮಳೆಗೆ ಭೂಕುಸಿತವಾಗಿದ್ದರಿಂದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಬಾರದೆಂದು ಹೆದ್ದಾರಿ ಕುಸಿಯದಂತೆ ಕೋಟ್ಯಂತರ ರೂಪಾಯಿಯಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಅದೇ ಭೂಕುಸಿತದಲ್ಲಿ ಅಪಾಯಕ್ಕೆ ಸಿಲುಕಿದ್ದವರಿಗೆ ಮನೆಯನ್ನು ಕೊಡಲಿಲ್ಲ. ಕೋಟ್ಯಂತರ ರೂಪಾಯಿ ವ್ಯಯಿಸಿದ್ದ ತಡೆಗೋಡೆ ಈಗ ಕುಸಿಯುವ ಭೀತಿ ಎದುರಾಗಿದ್ದು, ನಮಗೆ ಸುರಕ್ಷಿತ ಸ್ಥಳದಲ್ಲಿ ಮನೆ ನೀಡಿ ಎಂದು ವೃದ್ಧೆಯೊಬ್ಬರು ಜಿಲ್ಲಾಧಿಕಾರಿಯ ಕಾಲಿಗೆರಗಿದ ಆ ಕರುಣಾಜನಕ ಕಥೆಯನ್ನೊಮ್ಮೆ ಕೇಳಿ. ಕುಳಿತು ಉಂಡು ಆರಾಮಾಗಿ ಇರಬೇಕಾದ ಇಳಿವಯಸ್ಸಿನಲ್ಲೂ ಮನೆ ಕೆಲಸಕ್ಕೆ ಹೋಗಿ, ಅವರ ಮನೆಗಳ ಮುಸುರೆ ತೊಳೆದು ಬದುಕು ದೂಡುತ್ತಿರುವ ಈ ವೃದ್ಧೆ ತಾನೇನೂ ತಪ್ಪು ಮಾಡದಿದ್ದರೂ ಜಿಲ್ಲಾಧಿಕಾರಿಯವರ ಕಾಲು ಹಿಡಿಯುತ್ತಿದ್ದಾರೆ.

ಯಾಕೆ ಅಂದ್ರೆ ಕೊನೆಗಾಲದಲ್ಲಾದರೂ ಸುರಕ್ಷಿತವಾದ ಸ್ಥಳದಲ್ಲಿ, ನೆಮ್ಮದಿಯ ಒಂದು ಸೂರು ಬೇಕು ಅಂತ. ಹೌದು ಇಂತಹ ಕರುಣಾ ಜನಕ ದೃಶ್ಯ ಕಾಣಿಸಿದ್ದು, ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ. ಮಡಿಕೇರಿ ನಗರ ಸಭೆ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಮಡಿಕೇರಿ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ರ ಬದಿಯಲ್ಲಿ 2018 ರಲ್ಲಿ ಭೂಕುಸಿತವಾಗಿದ್ದ ಸ್ಥಳದಲ್ಲಿ ನಿರ್ಮಿಸಿರುವ ತಡೆಗೋಡೆಯೇ ಕುಸಿದು ಬೀಳುವಂತ ಆತಂಕವಿದೆ. 3 ಕೋಟಿ ರೂಪಾಯಿ ವೆಚ್ಚದಲ್ಲಿ ಐದು ವರ್ಷಗಳಿಂದ ನಿರ್ಮಿಸುತ್ತಿದ್ದ ಈ ತಡೆಗೋಡೆ ಕಾಮಗಾರಿ ಕಳೆದ ಒಂದು ವರ್ಷದ ಹಿಂದೆಯಷ್ಟೇ ಪೂರ್ಣಗೊಂಡಿತ್ತು.

ಆದರೆ ಕಳೆದ ಮೂರು ತಿಂಗಳಿನಿಂದ ಸುರಿಯುತ್ತಿರುವ ಭಾರೀ ಮಳೆಗೆ ಈ ತಡೆಗೋಡೆ ಕುಸಿಯುತ್ತಿದೆ. ತಡೆಗೋಡೆಯ ಬಹುತೇಕ ಭಾಗ ಈಗಾಗಲೇ ಕುಸಿದು ಒಂದೆಡೆಗೆ ಜಾರಿದೆ. ಇದು ಯಾವುದೇ ಕ್ಷಣದಲ್ಲಾದರೂ ಕೆಳಭಾಗದಲ್ಲಿ ಇರುವ ವೃದ್ಧೆ ರತ್ನಮ್ಮ ಸೇರಿದಂತೆ ಇತರೆ ಐದು ಕುಟುಂಬಗಳ ಮನೆಗಳನ್ನು ಬಲಿ ಪಡೆಯಲು ಕಾಯುತ್ತಿದೆ. 2018 ರಲ್ಲಿ ಇಲ್ಲಿ ಭೂಕುಸಿತವಾದಾಗ ವೃದ್ಧೆ ರತ್ನಮ್ಮ ಅವರಿಗೆ ಮನೆ ಕೊಡಲು ನಿರ್ಧರಿಸಲಾಗಿತ್ತು. ಆನಂತರದ ದಿನಗಳಲ್ಲಿ ಮನೆ ಕೊಡಲು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೀಗ ಹೆದ್ದಾರಿ ಬದಿಯ ತಡೆಗೋಡೆ ಕುಸಿಯುತ್ತಿರುವುದರಿಂದ ಸ್ಥಳಕ್ಕೆ ಭೇಟಿ ನೀಡಿದ್ದ ಕೊಡಗು ಜಿಲ್ಲಾಧಿಕಾರಿ ಮುಂದೆ ಕಣ್ಣೀರಿಟ್ಟು ಗೋಳಾಡಿದ ರತ್ನಮ್ಮ ಜಿಲ್ಲಾಧಿಕಾರಿಯವರ ಕಾಲಿಗೆ ಎರಗಲು ಮುಂದಾದರು. 

ಪತಿಯೂ ಇಲ್ಲದೆ ಕಷ್ಟದಲ್ಲಿ ಬದುಕು ನಡೆಸುತ್ತಿರುವ ನನಗೆ ಸುರಕ್ಷಿತವಾದ ಸ್ಥಳದಲ್ಲಿ ಮನೆ ಕೊಡಿ ಎಂದು ವೃದ್ಧೆ ರತ್ನಮ್ಮ ಕಣ್ಣೀರಿನಲ್ಲಿ ಕೈತೊಳೆದರು. ತಡೆಗೋಡೆಯಿಂದ ಇನ್ನೂ ಪ್ರಪಾತದಲ್ಲಿ ಇರುವ ಕುಟುಂಬಗಳನ್ನು ಭೇಟಿ ಮಾಡಿದ ಕಂದಾಯ ಇಲಾಖೆ ಅಧಿಕಾರಿಗಳು ಎಲ್ಲರೂ ಇಲ್ಲಿಂದ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ತಿಳಿಸಿದರು. ಆದರೆ ಜನರು ಇದಕ್ಕೆ ಒಪ್ಪಲಿಲ್ಲ. ನಾವು ಸಾಕಿರುವ ಕೋಳಿ, ಹಂದಿ ಸೇರಿದಂತೆ ಯಾವುದನ್ನೂ ಬಿಟ್ಟು ಇಲ್ಲಿಂದ ಹೋಗಲು ಸಾಧ್ಯವಿಲ್ಲ ಎಂದರು. ಆದರೆ ತಡೆಗೋಡೆ ಭಾರೀ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆ ಇದ್ದು, ಯಾವುದೇ ಕ್ಷಣದಲ್ಲಾದರೂ ಅವಘಡ ಎದುರಾಗಬಹುದು. ಆದ್ದರಿಂದ ಇಲ್ಲಿಂದ ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದು ಮನವೊಲಿಸಿದರು.

ಇದರಿಂದ ಜನರು ತಮ್ಮ ಮಕ್ಕಳು, ಮರಿಗಳು ತಮ್ಮ ಅಗತ್ಯದ ವಸ್ತು, ದಾಖಲೆಗಳನ್ನು ತೆಗೆದುಕೊಂಡು ಅಲ್ಲಿಂದ ಹೊರಟರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಇವರ ಸಂಕಷ್ಟವನ್ನು ನೋಡಿದ್ದೇನೆ. ಸರ್ಕಾರದ ಗಮನಕ್ಕೆ ತಂದು ಇವರಿಗೆ ಮನೆ ಒದಿಸುವ ಕೆಲಸ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಏನೇ ಆಗಲಿ ಕಳೆದ ಮೂರು ತಿಂಗಳಿನಿಂದ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಇನ್ನಿಲ್ಲ ಸಂಕಷ್ಟಗಳನ್ನು ತಂದೊಡ್ಡಿದ್ದು, ಆಗಸ್ಟ್ ತಿಂಗಳಿನಲ್ಲಿ ಸುರಿಯುವ ಮಳೆ ಅದೇನು ಗಂಡಾಂತರ ತರುತ್ತೋ ಕಾದು ನೋಡಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌