ತಾಲೂಕಿನ ಹೊಳಲೂರಿನಲ್ಲಿ ಜ.28ರಂದು ಹಮ್ಮಿಕೊಂಡಿರುವ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಪ್ರಯುಕ್ತ ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಶಿವಮೊಗ್ಗ (ಜ.16): ತಾಲೂಕಿನ ಹೊಳಲೂರಿನಲ್ಲಿ ಜ.28ರಂದು ಹಮ್ಮಿಕೊಂಡಿರುವ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಪ್ರಯುಕ್ತ ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲ ತಾಲೂಕು ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ತಹಸೀಲ್ದಾರ್ ಡಾ.ನಾಗರಾಜ್ ಸೂಚನೆ ನೀಡಿದರು. ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕುರಿತು ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜ.28ರಂದು ತಾಲೂಕಿನ ಹೊಳಲೂರು ಗ್ರಾಮದ ಮಾರುತಿ ಪ್ರೌಢಶಾಲೆ ಆವರಣದಲ್ಲಿ ಬೆಳಗ್ಗೆ 11ರಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭವಾಗಲಿದೆ. ತಾಲೂಕು ಕಚೇರಿ ವ್ಯಾಪ್ತಿಯ 41 ಇಲಾಖೆಗಳಿಗೆ ಈಗಾಗಲೇ ಕಾರ್ಯಕ್ರಮ ಸಿದ್ಧತೆ ಕುರಿತು ಮಾಹಿತಿ ನೀಡಲಾಗಿದೆ. ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಫಲಾನುಭವಿಗಳ ಪಟ್ಟಿತಯಾರಿಸಿ, ಅವರಿಗೆ ಸೂಕ್ತ ಆಸನ ವ್ಯವಸ್ಥೆ ಮಾಡಿ, ಆದೇಶಗಳ ಸುಗಮ ವಿತರಣೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಸಭೆ ನಡೆಸಿ ಎಲ್ಲ ಇಲಾಖೆಗಳು, ನಿಗಮಗಳು ತಮ್ಮ ತಮ್ಮ ವ್ಯಾಪ್ತಿಯ ಫಲಾನುಭವಿಗಳ ಪಟ್ಟಿ ತಯಾರಿಸಿ, ಕಾರ್ಯಕ್ರಮದ ಸಮರ್ಪಕ ಆಯೋಜನೆಗೆ ಸೂಕ್ತ ವ್ಯವಸ್ಥೆ ಮತ್ತು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
Chikkaballapur: ಕಾಂಗ್ರೆಸ್ ಪಕ್ಷವು ದರೋಡೆಕೋರರ ಕೂಟ: ಸಚಿವ ಅಶೋಕ್
ಅಂದು ಇಲಾಖೆಗಳಿಂದ ಲಭ್ಯವಾಗುವ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿತೆ ಒದಗಿಸುವ ವಿವಿಧ 14 ಮಳಿಗೆಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆರಕ್ಷಕ ಇಲಾಖೆಯವರು ಪೂರ್ವಭಾವಿಯಾಗಿ ಸ್ಥಳ ಪರಿಶೀಲನೆ ನಡೆಸಿ, ವಾಹನಗಳ ಪಾರ್ಕಿಂಗ್, ಸುಗಮ ಸಂಚಾರ ಹಾಗೂ ಇತರೆ ಸುರಕ್ಷತಾ ವ್ಯವಸ್ಥೆಗಳ ಅಚ್ಚುಕಟ್ಟು ನಿರ್ವಹಣೆ ಕುರಿತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ಡಿವೈಎಸ್‌ಪಿ ಸುರೇಶ್, ಉಪ ತಹಸೀಲ್ದಾರ್ ಗಣೇಶ್, ತಾಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.
ಸಿದ್ದು ದಿಕ್ಕು ಕಾಣದೆ ಅಲೆಯುತ್ತಿರುವ ನಾಯಕ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ರೀತಿ ದಿಕ್ಕು ಕಾಣದೆ ಅಲೆಯುತ್ತಿರುವ ನಾಯಕ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹೀನಾಯ ಸೋಲು ಕಂಡರು. ಚಾಮುಂಡೇಶ್ವರಿ ಕ್ಷೇತ್ರವನ್ನು ಯಾಕೆ ತೊರೆದರು ಎಂದು ಜನರು ಕೂಡ ಕೇಳುತ್ತಿದ್ದಾರೆ. ಒಂದು ವೇಳೆ ಅಭಿವೃದ್ಧಿ ಕಾರ್ಯ ಮಾಡಿದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೆ ಸೋಲು ಅನುಭವಿಸಿದರು? ನಂತರ ಬಾದಾಮಿಗೆ ಹೋದರು. ಅಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದರೆ ಜನ ಯಾಕೆ ಓಡಿಸುತ್ತಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಚಿಮ್ಮನಕಟ್ಟಿಅವರು ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಜ.19ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ: ಸಚಿವ ಆರ್.ಅಶೋಕ್‌ರಿಂದ ಪೂರ್ವಸಿದ್ಧತೆ ಪರಿಶೀಲನೆ
ಸಿದ್ದರಾಮಯ್ಯ ಅವರಿಗೆ ಛಲ, ಗೌರವ ಇದ್ದರೆ ಬಾದಾಮಿ ಅಥವಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಅವರು ಪದೇ ಪದೇ ಕ್ಷೇತ್ರ ಪಲಾಯನ ಯಾಕೆ ಮಾಡುತ್ತಿದ್ದಾರೆ? ಒಂದು ಬಾರಿ ಗೆದ್ದರೂ ಜನರ ಪ್ರೀತಿ, ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮುಖಂಡರಾದ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿದರು. ಇಬ್ಬರೂ ಅವರನ್ನು ಸೋಲಿಸಲು ಕಾಯುತ್ತಿದ್ದಾರೆ. ಎಚ್ಚರಿಕೆಯಿಂದ ಇರಬೇಕು. ಒಂದು ಕಡೆ ನಿಂತು ರಾಜಕಾರಣ ಮಾಡಬೇಕು. ಕ್ಷೇತ್ರದ ಜನತೆ ಮೇಲೆ ವಿಶ್ವಾಸ ಇಟ್ಟು, ನಿರ್ದಿಷ್ಟಕೆಲಸ ಮಾಡಿಕೊಡುತ್ತೇನೆ ಎಂಬುದಾಗಿ ಹೇಳಿ ಮಾಡಿಕೊಡಬೇಕು. ಅದು ಬಿಟ್ಟು ಕೆಲಸ ಮಾಡದೆ ಕ್ಷೇತ್ರಕ್ಕಾಗಿ ಅಲೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.