ಜುಲೈ, ಆಗಸ್ಟಲ್ಲಿ ಮಹಾಸ್ಫೋಟ; ವಾರಕ್ಕೆ 2 ದಿನ ಲಾಕ್‌ಡೌನ್?| 6 ತಿಂಗಳು ಇದೇ ಸ್ಥಿತಿ: ರಾಜ್ಯ ಸರ್ಕಾರ ಮುನ್ನೆಚ್ಚರಿಕೆ
ಬೆಂಗಳೂರು(ಜೂ.30): ಮನುಕುಲವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ಸೋಂಕು ಬರುವ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಮುಂದಿನ ಆರು ತಿಂಗಳು ಕಾಲ ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂಬ ಮುನ್ನೆಚ್ಚರಿಕೆಯನ್ನು ರಾಜ್ಯ ಸರ್ಕಾರ ನೀಡಿದೆ.
ಈ ಹಿನ್ನೆಲೆಯಲ್ಲಿ ಬರುವ ಜು.7ರ ನಂತರ ವಾರಾಂತ್ಯದ ಎರಡು ದಿನಗಳ ಕಾಲ ಲಾಕ್‌ಡೌನ್ ಜಾರಿಗೊಳಿಸುವುದೂ ಸೇರಿದಂತೆ ಜನರು ಗುಂಪುಗೂಡಲು ಅವಕಾಶವಿರುವ ಉದ್ಯಾನವನ, ಆಟದ ಮೈದಾನ ಮತ್ತಿತರ ನಿರ್ದಿಷ್ಟಸ್ಥಳಗಳಲ್ಲಿ ಮತ್ತೆ ನಿರ್ಬಂಧ ಹೇರುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಬುಲೆಟಿನ್ ಶಾಕ್, ಕೊರೋನಾ ಗಂಡಾಂತರ, ಮತ್ತೆ ಸಾವಿರ, ಬೆಂಗಳೂರೆಷ್ಟು?
ಹೇಗಿದ್ದರೂ ಜು.4ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯಲಿದೆ. ಮರುದಿನ ಭಾನುವಾರ. ಅದೇ ದಿನದಿಂದ ಪ್ರತಿ ಭಾನುವಾರ ಲಾಕ್‌ಡೌನ್ ಮಾಡುವ ಬಗ್ಗೆ ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಮುಂದೆ ಅದನ್ನು ಬದಲಾಯಿಸಿ ವಾರಾಂತ್ಯದ ಎರಡು ದಿನಗಳಾದ ಶನಿವಾರ ಮತ್ತು ಭಾನುವಾರ ಲಾಕ್‌ಡೌನ್ ಘೋಷಣೆ ಮಾಡುವ ಪ್ರಸ್ತಾಪವೂ ಸರ್ಕಾರದ ಮುಂದಿದೆ ಎಂದು ತಿಳಿದು ಬಂದಿದೆ.
ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಜಧಾನಿ ಬೆಂಗಳೂರಿನ ಕೋವಿಡ್ ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಆರ್.ಅಶೋಕ್, ತಜ್ಞರ ವರದಿ ಪ್ರಕಾರ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಕೊರೋನಾ ಸೋಂಕು ಮತ್ತಷ್ಟುಗಂಭೀರವಾಗಲಿದೆ. ಮುಂದಿನ ಆರು ತಿಂಗಳು ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ತಿಳಿಸಿದರು.
ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಸಡಿಲಿಕೆಗೊಂಡಿರುವ ಹಲವು ನಿಯಮಗಳಿಗೆ ಮತ್ತೆ ನಿರ್ಬಂಧ ಹೇರಲಾಗುವುದು. ಮುಖ್ಯಮಂತ್ರಿಗಳು ಈ ಬಗ್ಗೆ ಅಂತಿಮವಾಗಿ ತೀರ್ಮಾನ ಕೈಗೊಳ್ಳಲಿದ್ದಾರೆ. ಜು.7ರ ಬಳಿಕ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಹೇಳಿದರು.
ಜಿಮ್, ಸಿನಿಮಾ? ಹೊಸ ಲಾಕ್ ಡೌನ್ ನಿಯಮ ಪ್ರಕಟ, ಮಂಗಳವಾರದ ಮೋದಿ ಭಾಷಣ ಕುತೂಹಲ!
ಪಾರ್ಕ್ ಸೇರಿದಂತೆ ಇತರೆಡೆಗಳಲ್ಲಿ ಮುಕ್ತವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಆದರೆ, ಅಲ್ಲಿ ನಿಯಮಗಳ ಪಾಲನೆ ಸರಿಯಾಗಿ ಆಗುತ್ತಿಲ್ಲ ಹಾಗೂ ವಾಕಿಂಗ್ ಮುಗಿಸಿ ಹಿಂತಿರುಗದೆ ಅಲ್ಲಿಯೇ ಕಾಲಹರಣ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಅವುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೊರ ರಾಜ್ಯಗಳಿಂದ ಆಗಮಿಸುವವರ ನಿರ್ಬಂಧ ಸಂಬಂಧವೂ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಪ್ರಸ್ತುತ ನೀಡುತ್ತಿರುವ ಸೇವೆಯ ಮಾದರಿಯಲ್ಲಿಯೇ ಮುಂದಿನ ಆರು ತಿಂಗಳು ಕಾಲ ತೊಡಗಿಸಿಕೊಳ್ಳಬೇಕು. ಇದಕ್ಕಾಗಿ ಮಾನಸಿಕವಾಗಿ ವೈದ್ಯಕೀಯ ವಾರಿಯರ್ಸ್ ತಯಾರಾಗಬೇಕಿದೆ ಎಂದು ಇದೇ ವೇಳೆ ಸಚಿವರು ಕರೆ ನೀಡಿದರು.