ಮೂರೇ ತಿಂಗಳಲ್ಲಿ ವಿಧಾನಸೌಧದ ಮುಂಭಾಗ ಪ್ರತಿಮೆ ಸ್ಥಾಪಿಸಿ ಅಶೋಕ್ ಸಾಧನೆ

By Kannadaprabha NewsFirst Published Mar 27, 2023, 12:10 PM IST
Highlights

ಹನ್ನೆರಡನೇ ಶತಮಾನದ ಸಾಮಾಜಿಕ ಹರಿಕಾರ ಜಗಜ್ಯೋತಿ ಬಸವೇಶ್ವರ ಮತ್ತು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಭವ್ಯವಾದ ಅಶ್ವಾರೂಢ ಭಂಗಿಯ ಪ್ರತಿಮೆಗಳು ವಿಧಾನಸೌಧದ ಮುಂಭಾಗ ಭಾನುವಾರ ಅನಾವರಣಗೊಳ್ಳುವ ಮೂಲಕ ಶಕ್ತಿಸೌಧ ಇದೀಗ ಇನ್ನಷ್ಟು ಕಳೆಗಟ್ಟಿದೆ. 

ಬೆಂಗಳೂರು (ಮಾ.27): ಹನ್ನೆರಡನೇ ಶತಮಾನದ ಸಾಮಾಜಿಕ ಹರಿಕಾರ ಜಗಜ್ಯೋತಿ ಬಸವೇಶ್ವರ ಮತ್ತು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಭವ್ಯವಾದ ಅಶ್ವಾರೂಢ ಭಂಗಿಯ ಪ್ರತಿಮೆಗಳು ವಿಧಾನಸೌಧದ ಮುಂಭಾಗ ಭಾನುವಾರ ಅನಾವರಣಗೊಳ್ಳುವ ಮೂಲಕ ಶಕ್ತಿಸೌಧ ಇದೀಗ ಇನ್ನಷ್ಟು ಕಳೆಗಟ್ಟಿದೆ. ವಿಧಾನಸೌಧದ ಪೂರ್ವದ್ವಾರದಲ್ಲಿ ಈಗಾಗಲೇ ಇದ್ದ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗಳ ನಡುವೆ ಇದೀಗ ಇಬ್ಬರು ಮಹಾಪುರುಷರ ಪ್ರತಿಮೆಗಳನ್ನು ಸ್ಥಾಪಿಸಿರುವುದು ನಾಡಿನ ಶಕ್ತಿಕೇಂದ್ರಕ್ಕೆ ಇನ್ನಷ್ಟು ಶಕ್ತಿ, ಸ್ಫೂರ್ತಿ ತಂದಿದೆ. 

ಈ ಎರಡೂ ಪ್ರತಿಮೆಗಳನ್ನು ಕಾಲಮಿತಿಯಲ್ಲಿ ಅನಾವರಣಗೊಳಿಸಲು ಅವಿರತವಾಗಿ ಶ್ರಮಿಸಿದವರು ಪುತ್ಥಳಿಯ ಸ್ಥಾಪನಾ ಉಸ್ತುವಾರಿ ಸಮಿತಿ ಅಧ್ಯಕ್ಷರೂ ಆದ ಕಂದಾಯ ಸಚಿವ ಆರ್‌.ಅಶೋಕ್‌. ವಿಧಾನಸೌಧದ ಆವರಣದಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸುವುದಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 2021ರಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾಸಲಾಗಿತ್ತು. ಬಳಿಕ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರು ಕಳೆದ ಕೆಂಪೇಗೌಡರ ಜಯಂತಿ ವೇಳೆ ವಿಧಾನಸೌಧದ ಮುಂಭಾಗ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವ ಘೊಷಣೆ ಮಾಡಿದ್ದರಲ್ಲದೆ, ನಂತರದ ಕ್ಯಾಬಿನೆಟ್‌ನಲ್ಲಿ ಅನುಮೋದನೆಯನ್ನೂ ನೀಡಿದ್ದರು.

ವಿಧಾನಸೌಧ ಆಧುನಿಕ ಅನುಭವ ಮಂಟಪವಾಗಲಿ: ಸಿಎಂ ಬೊಮ್ಮಾಯಿ

ಕಳೆದ ಜ.13ರಂದು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಪ್ರತಿಮೆಗಳ ಸ್ಥಾಪನೆಗೆ ಗುದ್ದಲಿಪೂಜೆಯನ್ನೂ ನೆರವೇರಿಸಲಾಗಿತ್ತು. ಪ್ರತಿಮೆಗಳ ಸ್ಥಾಪನೆ ಸಂಬಂಧ ಆರ್‌.ಅಶೋಕ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಅಶೋಕ್‌ ಅವರು ಮೂರೇ ತಿಂಗಳಲ್ಲಿ ಪ್ರತಿಮೆಗಳ ಅನಾವರಣವಾಗುವಂತೆ ನೋಡಿಕೊಂಡಿದ್ದಾರೆ. ತಲಾ 4 ಅಡಿ ಎತ್ತರದಲ್ಲಿ ಅಶ್ವಾರೂಢ ಭಂಗಿಯ ಕಂಚಿನ ಪ್ರತಿಮೆಗಳನ್ನು 8 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಸಚಿವ ಆರ್‌.ಅಶೋಕ್‌ ಅವರು, ಬಸವಣ್ಣನವರು 12ನೇ ಶತಮಾನದ ‘ಅನುಭವ ಮಂಟಪ’ದ ಮೂಲಕ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಸಮಾನತೆಯ ಹರಿಕಾರರು.

ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಮೇಲು ಕೀಳು, ಜಾತೀಯತೆಯನ್ನು ತೊಡೆದುಹಾಕಲು ಅರಿವು ಮೂಡಿಸಿದರು. ಅಂಥ ಮಹಾನ್‌ ವ್ಯಕ್ತಿಯ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುಕುಟಪ್ರಾಯವಾಗಿದೆ ಎಂದರು. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇದುವರೆಗೆ ಅವರ ಪ್ರತಿಮೆಯನ್ನು ವಿಧಾನಸೌಧದ ಮುಂದೆ ಸ್ಥಾಪಿಸಿರಲಿಲ್ಲ. ಅದನ್ನು ನಮ್ಮ ಸರ್ಕಾರ ಮಾಡಿದೆ. ತಮಗೆ ನೀಡಿದ್ದ ಮಹನೀಯರ ಪುತ್ಥಳಿ ನಿರ್ಮಾಣ ಕಾರ್ಯದ ಹೊಣೆಯನ್ನು ಕಾಲಮಿತಿಯಲ್ಲಿ ಜವಾಬ್ದಾರಿ ನಿಭಾಯಿಸಿದ್ದು ಆತ್ಮತೃಪ್ತಿ ತಂದಿದೆ ಎಂದರು.

ಕೆಂಪೇಗೌಡ ಕಂಚಿನ ಪ್ರತಿಮೆ ವಿಶೇಷತೆ
ಎತ್ತರ 4 ಮೀಟರ್‌
ತೂಕ 6 ಟನ್‌
ಪ್ರತಿಮೆ ವೇದಿಕೆ ಉದ್ದಳತೆ 12.05 ಮೀ -13.45 ಮೀ.
ಪೀಠದ ಸುತ್ತಳತೆ 1.80 ಮೀ-5.50 ಮೀ-3 ಮೀ
ಅಂದಾಜು ಮೊತ್ತ 3.5 ಕೋಟಿ

ಮೀಸಲಾತಿ ವಿಚಾರದಲ್ಲಿ ನಾನು ಸ್ವಾಮೀಜಿಗಳಿಗೆ ಒತ್ತಡ ಹಾಕಿಲ್ಲ: ಸಿಎಂ ಬೊಮ್ಮಾಯಿ

ಬಸವೇಶ್ವರ ಕಂಚಿನ ಪ್ರತಿಮೆ ವಿಶೇಷತೆ
ಪ್ರತಿಮೆ ಎತ್ತರ 4 ಮೀ
ತೂಕ 6 ಟನ್‌
ಪೀಠದ ಉದ್ಧಳತೆ 1.8 ಮೀ-5.20 ಮೀ-3 ಮೀ
ವೇದಿಕೆ ಉದ್ದಳತೆ 12.05 ಮೀ-13.45 ಮೀ
ಅಂದಾಜು ಮೊತ್ತ 3 ಕೋಟಿ

click me!