* ಕಾರ್ಖಾನೆಯ ಹೆಚ್ಚುವರಿ ಜಾಗದಲ್ಲಿ ಟೌನ್‌ಶಿಪ್
* ಕೇಂದ್ರ ಸರ್ಕಾರ ಸ್ವಾಮ್ಯದ ಈ ಕಾರ್ಖಾನೆಯನ್ನು ಲಾಭದಾಯಕ ಮಾಡಬೇಕು
* ಆಧುನೀಕರಣಗೊಳಿಸಿ ಹೆಚ್ಚು ಜನರಿಗೆ ಉದ್ಯೋಗ ದೊರಕಿಸಬೇಕು
ಬೆಂಗಳೂರು(ಮಾ.09): ಕೋಲಾರ ಜಿಲ್ಲೆಯ ಕೆಜಿಎಫ್ ‘ಬೆಮೆಲ್ ಕಾರ್ಖಾನೆ’ಯನ್ನು(BEML Factory) ಬಂದ್ ಮಾಡುವ ಉದ್ದೇಶವಿಲ್ಲ, ಕಾರ್ಖಾನೆಯ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ(Murugesh Nirani) ಭರವಸೆ ನೀಡಿದರು
ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರ(Central Government) ಸ್ವಾಮ್ಯದ ಈ ಕಾರ್ಖಾನೆಯನ್ನು ಲಾಭದಾಯಕ ಮಾಡಬೇಕು, ಆಧುನೀಕರಣಗೊಳಿಸಿ ಹೆಚ್ಚು ಜನರಿಗೆ ಉದ್ಯೋಗ(Jobs) ದೊರಕಿಸಬೇಕು ಎಂಬ ಉದ್ದೇಶದಿಂದ ಖಾಸಗೀಕರಣ(Privatization) ಮಾಡಲು ಕೇಂದ್ರ ಸರ್ಕಾರವೇ ಬಂಡವಾಳ(Investment) ಹಿಂಪಡೆವ ನಿರ್ಧಾರ ತೆಗೆದುಕೊಂಡಿದೆ. ಕಾರ್ಖಾನೆಗೆ ಸೇರಿದ 1849 ಎಕರೆ ಪೈಕಿ 947 ಎಕರೆ ಜಾಗವನ್ನು ಬೆಮೆಲ್ ಕೆಐಎಡಿಬಿಗೆ ವಾಪಸ್ ನೀಡಿದೆ. ಈ ಜಾಗದಲ್ಲಿ ಕೈಗಾರಿಕೆ ಸ್ಥಾಪಿಸಲು ಸೂಚಿಸಲಾಗಿದೆ. ಶೇ. 22 ರಷ್ಟು ಜಾಗವನ್ನು ಪರಿಶಿಷ್ಟರಿಗೆ ಮೀಸಲಿಡಲಾಗುವುದು. ಜೊತೆಗೆ ಆರ್ಥಿಕವಾಗಿ ಹಿಂದುಳಿದ ಜನರಿಗೆ ಕೈಗಾರಿಕೆ ಸ್ಥಾಪಿಸಲು ಎಲ್ಲ ರೀತಿಯ ಪ್ರೋತ್ಸಾಹ ನೀಡಲಾಗುವುದು ಎಂದರು.
ಜಮೀನು ನೀಡಿದ ರೈತ ಕುಟುಂಬಕ್ಕೆ ಕೆಲಸ ನೀಡಲು ವೋಲ್ವೋ ಒಪ್ಪಿಗೆ
ಬೆಮೆಲ್‌ಗೆ ಎಷ್ಟು ಜಾಗ ಬೇಕೋ ಅಷ್ಟನ್ನು ಉಳಿಸುವ ಜೊತೆಗೆ ಕಟ್ಟಡ ಇತ್ಯಾದಿಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು, ಆದರೆ ಕಾರ್ಖಾನೆಗೆ ಸೇರಿದ ಹೆಚ್ಚುವರಿ ಜಾಗದಲ್ಲಿ ವಿವಿಧ ಸಮುದಾಯಗಳಿಗೆ ಕೈಗಾರಿಕೆ ಸ್ಥಾಪಿಸಲು, ಟೌನ್‌ಶಿಪ್ ಮಾಡಲು ನೀಡಲು ಉದ್ದೇಶಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಗೋವಿಂದರಾಜು, ಕೇಂದ್ರ ಸರ್ಕಾರ ಸ್ವಾಮ್ಯದ ಕಾರ್ಖಾನೆಯಾಗಿದ್ದರೂ, ಖಾಸಗೀಕರಣ ಮಾಡುವ ಮುನ್ನ ರಾಜ್ಯದ ಅಭಿಪ್ರಾಯ ಕೇಳಬೇಕಿತ್ತು. ಸುಮಾರು 5 ಸಾವಿರ ಕೋಟಿ ರು. ಬೆಲೆ ಬಾಳುವ ಆಸ್ತಿ ಹೊಂದಿರುವ ಕಾರ್ಖಾನೆಯನ್ನು ರಾಜ್ಯ ಸರ್ಕಾರವೇ ನಡೆಸಲು ಮುಂದಾಗಬೇಕು, ಖಾಸಗೀಕರಣ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಗೋವಿಂದರಾಜು ಅವರ ಮಾತನ್ನು ಬೆಂಬಲಿಸಿದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್(BK Hariprasad) ಅವರು, ಕೈಗಾರಿಕೆ ಸ್ಥಾಪನೆ ಸರ್ಕಾರದ ಕೆಲಸ ಅಲ್ಲದಿರಬಹುದು, ಆದರೆ ಸರ್ಕಾರದ ಕೈಗಾರಿಕೆಗಳಲ್ಲಿ ಎಲ್ಲ ಸಮುದಾಯದವರಿಗೆ ಉದ್ಯೋಗ ಸಿಗುವ ಮೂಲಕ ಸಾಮಾಜಿಕ ನ್ಯಾಯ ಸಿಗುತ್ತದೆ, ಖಾಸಗೀಕರಣ ಮಾಡುವುದರಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಹಾಗಾಗಿ ಖಾಸಗೀಕರಣ ಮಾಡದೇ ರಾಜ್ಯ ಸರ್ಕಾರವೇ ನಡೆಸಬೇಕು ಎಂದು ಆಗ್ರಹಿಸಿದರು.
ಮೈಸೂರು ಲ್ಯಾಂಪ್ಸ್ ಜಾಗ ಮಾರೋದಿಲ್ಲ: ಸಚಿವ ನಿರಾಣಿ
ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ(Mysore Lamps Factory) 21 ಎಕರೆ ಜಾಗವನ್ನು ಪರಭಾರೆ ಮಾಡುವ ಯಾವುದೇ ಉದ್ದೇಶವಿಲ್ಲ, ಬದಲಾಗಿ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ‘ಎಕ್ಸಪೀರಿಯನ್ಸ್ ಬೆಂಗಳೂರು’(Bengaluru Experience) ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ(Murugesh Nirani) ಸ್ಪಷ್ಟಪಡಿಸಿದ್ದರು.
ಭವಿಷ್ಯದಲ್ಲಿ ಆಶೀರ್ವಾದವಿದ್ದರೆ ಮುಖ್ಯಮಂತ್ರಿಯಾಗುವ ಸಾಧ್ಯತೆ: ನಿರಾಣಿ
ಫೆ.15 ರಂದು ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ್ದ ಅವರು, ಯೋಜನೆ ಅನುಷ್ಠಾನ ಸಂಬಂಧ ಹಿರಿಯ ಐಎಎಸ್ ಅಧಿಕಾರಿಗಳು, ಸಾರ್ವಜನಿಕ ಗಣ್ಯರನ್ನು ಒಳಗೊಂಡ ಟ್ರಸ್ಟ್ ರಚಿಸಲಾಗಿದೆ. ಅಲ್ಲದೇ ಕಾರ್ಖಾನೆಯ ಜಾಗದಲ್ಲಿ ಇರುವ ಕಟ್ಟಡಗಳಲ್ಲಿ ಬೆಂಗಳೂರಿನ ಬೆಳವಣಿಗೆ ಬಗ್ಗೆ ವಿನೂತನ ಅನುಭವಗಳನ್ನು ಸಾರ್ವಜನಿಕರಿಗೆ ನೀಡಲು ವಿವಿಧ ಗ್ಯಾಲರಿಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ವಿವರಿಸಿದ್ದರು.
ಇದಕ್ಕೂ ಮುನ್ನ ಮಾತನಾಡಿದ ಕೆ.ಟಿ. ಶ್ರೀಕಂಠೇಗೌಡ, ಸಾವಿರಾರು ಕೋಟಿ ರು. ಬೆಲೆ ಬಾಳುವ ಈ ಜಾಗವನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಖಾಸಗಿ ವ್ಯಕ್ತಿಗಳು ಹಾಗೂ ಅಧಿಕಾರಿಗಳ ಹೆಸರಿನಲ್ಲಿ ಟ್ರಸ್ಟ್ ಮಾಡಲಾಗಿದೆ. ಮ್ಯೂಸಿಯಂ ಮಾಡುವ ಬದಲು ಉದ್ಯಾನವನ ಮಾಡಿ ಎಂದು ಸಲಹೆ ನೀಡಿದ್ದರು.