ಭದ್ರಾವತಿ ವಿಐಎಸ್‌ಪಿ ಪುನಶ್ಚೇತನಕ್ಕೆ ಅನುದಾನ ಕೊಡಿ: ಕೇಂದ್ರಕ್ಕೆ ಪತ್ರ ಬರೆದ ಸಚಿವ ಎಂ.ಬಿ. ಪಾಟೀಲ

By Sathish Kumar KH  |  First Published Feb 11, 2024, 8:33 PM IST

ಭದ್ರಾವತಿಯ  ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ (ವಿಐಎಸ್‌ಪಿ) ಪುನಶ್ಚೇತನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.


ಬೆಂಗಳೂರು (ಫೆ.11): ಭದ್ರಾವತಿಯ  ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ (ವಿಐಎಸ್‌ಪಿ) ಪುನಶ್ಚೇತನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು  ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರಿಗೆ ಒತ್ತಾಯಿಸಿದ್ದಾರೆ. 

ಈ ಸಂಬಂಧ ಸಿಂಧಿಯಾ ಅವರಿಗೆ ಪತ್ರ ಬರೆದಿರುವ ಸಚಿವ ಪಾಟೀಲ ಅವರು, 'ವಿಐಎಸ್‌ಪಿʼ ಮುಚ್ಚುವ ನಿರ್ಧಾರವನ್ನು ಮರುಪರಿಶೀಲಿಸಿ ಅದರ ಪುನಶ್ಚೇತನಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ವಿಐಎಸ್‌ಪಿ ಖಾಸಗೀಕರಣಗೊಳಿಸಲು ಷೇರುವಿಕ್ರಯಕ್ಕೆ ಮುಂದಾಗಿದ್ದ ಭಾರತೀಯ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್‌) ಪ್ರಯತ್ನವು ವಿಫಲವಾಗಿರುವನ್ನು ಪತ್ರದಲ್ಲಿ ಸಿಂಧಿಯಾ ಅವರ ಗಮನಕ್ಕೆ ತರಲಾಗಿದೆ. 1989ರವರೆಗೆ ಕರ್ನಾಟಕದ ಸರ್ಕಾರಿ  ವಲಯದ ಉದ್ಯಮವಾಗಿದ್ದ ʼವಿಐಎಸ್‌ಪಿʼ, ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಅಥವಾ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್‌) ಅಸಮರ್ಪಕ ಬಂಡವಾಳ ಹೂಡಿಕೆ ನೀತಿಯಿಂದಾಗಿ ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

Tap to resize

Latest Videos

HSRP ನಂಬರ್ ಪ್ಲೇಟ್ ಅಳವಡಿಕೆ ದಿನಾಂಕದ ಬಿಗ್‌ ಅಪ್ಡೇಟ್ ಕೊಟ್ಟ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ!

ದೇಶದಲ್ಲಿ ಕಳೆದ ಮೂರು ದಶಕಗಳಲ್ಲಿ ಉಕ್ಕು ಪ್ರಾಧಿಕಾರದ ಇತರ ಘಟಕಗಳಲ್ಲಿನ ಗಮನಾರ್ಹ ಹೂಡಿಕೆಗೆ ಹೋಲಿಸಿದರೆ, 'ವಿಐಎಸ್‌ಪಿ'ಯಲ್ಲಿ ದುರಸ್ತಿ ಮತ್ತು ನವೀಕರಣ ಉದ್ದೇಶಗಳಿಗೆ ಕೇವಲ 157 ಕೋಟಿ ರೂ. ವೆಚ್ಚ ಮಾಡಲಾಗಿದೆ.  ರಾಮನದುರ್ಗದಲ್ಲಿನ 497 ಎಕರೆ ಪ್ರದೇಶದಲ್ಲಿನ ಸಮೃದ್ಧ ಕಬ್ಬಿಣದ ಅದಿರು ಗಣಿಗಳು ಮತ್ತು ಬಳ್ಳಾರಿ ಜಿಲ್ಲೆಯಲ್ಲಿನ ಗಣಿಗಳು ದಶಕಗಳ ಕಾಲ ವಿಐಎಸ್‌ಪಿಗೆ ಅದಿರು ಪೂರೈಸುವ ಸಾಮರ್ಥ್ಯ ಹೊಂದಿವೆ. 2022ರಲ್ಲಿ ನಡೆದಿದ್ದ ʼವಿಐಎಸ್‌ಪಿʼಯ ಷೇರುವಿಕ್ರಯಕ್ಕೆ ಬಿಡ್‌ದಾರರ ನಿರಾಸಕ್ತಿ ಫಲವಾಗಿ ಹಿನ್ನಡೆ ಉಂಟಾಗಿದೆ.  ಈ ಕಾರಣಕ್ಕೆ ಈ ಘಟಕ ಮುಚ್ಚುವ ಸಾಧ್ಯತೆ ಬಗ್ಗೆ ಕಾರ್ಮಿಕರ ಸಂಘಟನೆಯು ತೀವ್ರ ಕಳವಳ ವ್ಯಕ್ತಪಡಿಸಿರುವುದನ್ನು ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರದ ಗಮನಕ್ಕೆ ತಂದಿದ್ದಾರೆ ಎಂದರು.

ಬರ ಪರಿಹಾರಕ್ಕೆ ಮನವಿ ಸಲ್ಲಿಸಿ 5 ತಿಂಗಳಾದ್ರೂ, ಬರಿಗೈಯಲ್ಲಿ ಬಂದ ಅಮಿತ್ ಶಾ; ಸಿಎಂ ಸಿದ್ದರಾಮಯ್ಯ ಟೀಕೆ

ವಿಐಎಸ್‌ಪಿಯ ತಯಾರಿಕಾ ಸಾಮರ್ಥ್ಯ, ಸ್ಥಳೀಯವಾಗಿ ಕಬ್ಬಿಣ ಅದಿರಿನ ಸಮೃದ್ಧ ಲಭ್ಯತೆ ಮತ್ತು ಕಾರ್ಮಿಕರ ಹಿತಾಸಕ್ತಿ ದೃಷ್ಟಿಯಿಂದ ಸಿಂಧಿಯಾ ಅವರು ಮಧ್ಯ ಪ್ರವೇಶಿಸಬೇಕು. ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1918ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಿದ್ದ ರಾಜ್ಯದ ಹೆಮ್ಮೆಯ ಈ ಉಕ್ಕು ಸ್ಥಾವರನ್ನು ಮುಚ್ಚುವ ನಿರ್ಧಾರ ಕೈಬಿಡುವಂತೆ ಉಕ್ಕು ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು. ಸ್ಥಾವರದ ಪುನಶ್ಚೇತನಕ್ಕೆ ಅಗತ್ಯವಾಗಿರುವ ಬಂಡವಾಳ ಹೂಡಿಕೆ ಮಾಡಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಪತ್ರದ ಮೂಲಕ ಆಗ್ರಹಿಸಿದ್ದಾರೆ.

click me!