ಅಭಿಮಾನಿಗಳು ಹಚ್ಚಿದ ಪಟಾಕಿ ಕಿಡಿ ಸಿಡಿದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಕಣ್ಣಿಗೆ ಗಾಯವಾಗಿ ಆಸ್ಪತ್ರೆ ಸೇರಿದ ಘಟನೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.
ಕುಣಿಗಲ್ (ತುಮಕೂರು) (ಜೂ.12): ಅಭಿಮಾನಿಗಳು ಹಚ್ಚಿದ ಪಟಾಕಿ ಕಿಡಿ ಸಿಡಿದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಕಣ್ಣಿಗೆ ಗಾಯವಾಗಿ ಆಸ್ಪತ್ರೆ ಸೇರಿದ ಘಟನೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಾಜಣ್ಣ ಭಾನುವಾರ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಗೆ ಚಾಲನೆ ನೀಡಲು ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು. ರಾಜಣ್ಣ ಅವರು ಕುಣಿಗಲ್ ಮಾರ್ಗವಾಗಿ ತೆರಳುತ್ತಿರುವ ಸುದ್ದಿ ತಿಳಿದ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಪಟ್ಟಣದಲ್ಲಿ ಅವರಿಗೆ ಅದ್ಧೂರಿ ಸ್ವಾಗತ ನೀಡಲು ನಿರ್ಧರಿಸಿದ್ದಾರೆ.
ಅದರಂತೆ ಹುಚ್ಚಮಾಸ್ತಿ ಗೌಡ ವೃತ್ತದಲ್ಲಿ ಕೆ.ಎನ್.ರಾಜಣ್ಣ ಅವರ ಕಾರು ತಡೆದು ಪುಷ್ಪಮಾಲೆ ಹಾಕಿ ಅಭಿನಂದಿಸಿದ್ದಾರೆ. ಈ ವೇಳೆ ಸಮೀಪದಲ್ಲೇ ಪಟಾಕಿ ಹಚ್ಚಿ ಸಂಭ್ರಮಿಸಿದ್ದು, ಆಗ ರಾಜಣ್ಣ ತಾವು ಧರಿಸಿದ್ದ ಕನ್ನಡಕ ತೆಗೆಯುತ್ತಿದ್ದಾಗಲೇ ಪಟಾಕಿಯ ಕಿಡಿಯೊಂದು ನೇರವಾಗಿ ಅವರ ಬಲ ಕಣ್ಣಿಗೆ ಬಡಿದಿದೆ. ಆಗ ತಕ್ಷಣ ಸಚಿವರನ್ನು ಪಟ್ಟಣದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ನೋವು ಕಡಿಮೆಯಾದ ಬಳಿಕ ರಾಜಣ್ಣ ಅವರು ಹಾಸನಕ್ಕೆ ತೆರಳಿದರು.
ಸರ್ಕಾರಿ ಭೂಮಿ ಅರ್ಹರಿಗೆ ಸಿಗಬೇಕು: ಸಚಿವ ದಿನೇಶ್ ಗುಂಡೂರಾವ್
ಟೋಲ್ ತೆರವಿಗೆ ಲೋಕೋಪಯೋಗಿ ಸಚಿವರ ಜತೆ ಮಾತನಾಡುವೆ: ಪೆಟ್ರೋಲ್ ಮತ್ತು ಡೀಸೆಲ್‌ಗೆ ನಮ್ಮ ಜನ ತೆರಿಗೆ ಕಟ್ಟೋದಿಲ್ವಾ. ಸರ್ವಿಸ್ ರಸ್ತೆಯೇ ಇಲ್ಲದೇ ಕೊರಟಗೆರೆ ಕ್ಷೇತ್ರದ ಎರಡು ಕಡೆ ಅವೈಜ್ಞಾನಿಕ ಟೋಲ್ ನಿರ್ಮಾಣ ಆಗಿವೆ. ಜನರಿಂದ ಹಣ ವಸೂಲಿ ಮಾಡದಂತೆ ಈಗಾಗಲೇ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಮಧುಗಿರಿ ಕ್ಷೇತ್ರದ ಶಾಸಕ ಹಾಗೂ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಸ್ಯಕಾಶಿಯಾದ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಶ್ರೀಮಠಕ್ಕೆ ಭೇಟಿ ನೀಡಿ ಮಾತನಾಡಿ, ಪಿಡಬ್ಯೂಡಿ ಸಚಿವರ ಜೊತೆ ನಾನೇ ಖುದ್ದಾಗಿ ಮಾತನಾಡಿ ಟೋಲ್ ತೆರವು ಮಾಡಿಸ್ತೀನಿ.
ಪ್ರವಾಸೋದ್ಯಮ ನಂಬಿಯೇ ಹತ್ತಾರು ದೇಶಗಳು ಅಭಿವೃದ್ಧಿಯ ಪಥದತ್ತ ಸಾಗುತ್ತಿವೆ. ಉದ್ಯೋಗ ಸೃಷ್ಟಿಗೆ ಪ್ರವಾಸಿ ಕ್ಷೇತ್ರವು ಹೆಚ್ಚಿನ ಸಹಕಾರಿ ಆಗಲಿದೆ. ಪ್ರವಾಸಿ ಕ್ಷೇತ್ರ ಅಭಿವೃದ್ಧಿ ಆದರೆ ಯುವಕರ ಜೀವನಮಟ್ಟಸುಧಾಕರಣೆ ಕಾಣಲಿದೆ. ತುಮಕೂರು ಜಿಲ್ಲೆಯ ಪ್ರವಾಸಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಸಂಪೂರ್ಣ ಸಹಕಾರ ಇರಲಿದೆ ಎಂದು ತಿಳಿಸಿದರು. ಸಿದ್ದರಬೆಟ್ಟಶ್ರೀಮಠ ಎಂದರೇ ನನಗೆ ತುಂಬಾನೇ ಪ್ರೀತಿ ವಿಶ್ವಾಸ. ಮಧುಗಿರಿ ಕ್ಷೇತ್ರದ ಜನರಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಮಾತಿನಂತೆ ನನಗೆ ಸಚಿವ ಸ್ಥಾನ ಸಿಕ್ಕಿದೆ.
ಮಾತು ತಪ್ಪದೇ ಎಲ್ಲ 5 ಗ್ಯಾರಂಟಿ ಈಡೇರಿಕೆ: ಡಿ.ಕೆ.ಶಿವಕುಮಾರ್
5 ವರ್ಷ ಮಧುಗಿರಿ ಕ್ಷೇತ್ರದ ಅಭಿವೃದ್ಧಿ ಮತ್ತು ಬಡಜನರ ರಕ್ಷಣೆಗೆ ನಾನು ಸದಾ ಜೊತೆ ಆಗಿರುತ್ತೇನೆ. ನನ್ನನ್ನು ನಂಬಿದ ಜನರ ಜೊತೆಯಲ್ಲಿದ್ದು ಮಧುಗಿರಿ ಜಿಲ್ಲೆಯ ರಚನೆಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ತುಮಕೂರು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಜಿಪಂ ಮಾಜಿ ಸದಸ್ಯೆ ಶಾಂತಲಾರಾಜಣ್ಣ, ಮುಖಂಡರಾದ ರಾಜರವೀಂದ್ರ ನಾಯಕ, ಹನುಮಂತರಾಯಪ್ಪ, ರವೀಶ್, ಗೋವಿಂದರಾಜು, ರಮೇಶ್, ರಾಮಚಂದ್ರಯ್ಯ, ಕೃಷ್ಣಪ್ಪ, ರುದ್ರಮುನಿ, ನಂಜುಂಡಸ್ವಾಮಿ ಸೇರಿದಂತೆ ಇತರರು ಇದ್ದರು.