ಕೊರೋನಾ ಹೆಚ್ಚಳ: ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗುತ್ತಾ?

By Kannadaprabha News  |  First Published Feb 18, 2021, 11:16 AM IST

ಲಾಕ್‌ಡೌನ್‌ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ| ಕೇರಳದಿಂದ ರಾಜ್ಯಕ್ಕೆ ಬರುತ್ತಿರುವವರಿಂದ ಕೊರೋನಾ ಹೆಚ್ಚಳ| ತಡರಾತ್ರಿ ಪಾರ್ಟಿಯಿಂದ ಸೋಂಕು ಹೆಚ್ಚಳ| ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿರಬಹುದು. ಆದರೆ ಕೋವಿಡ್‌ ನಮ್ಮನ್ನು ಸಂಪೂರ್ಣವಾಗಿ ಬಿಟ್ಟು ಹೋಗಿಲ್ಲ: ಸುಧಾಕರ್‌| 


ಬೆಂಗಳೂರು(ಫೆ.18): ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಿಂದ ರಾಜ್ಯಕ್ಕೆ ಆಗಮಿಸುತ್ತಿರುವವರಿಂದ ರಾಜ್ಯದಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣ ಹೆಚ್ಚಾಗುತ್ತಿದೆ. ಆದರೆ, ಲಾಕ್‌ಡೌನ್‌ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದರು ಆದರೆ, ಕೇರಳದಿಂದ ಬರುತ್ತಿರುವವರು ನೆಗೆಟಿವ್‌ ಆರ್‌ಟಿಪಿಸಿಆರ್‌ ವರದಿ ಹೊಂದಿರುವುದನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ಅಲ್ಲಿಂದ ಬರುವವರ ಮೇಲೆ ಗಡಿ ಭಾಗದಲ್ಲಿ ನಿಗಾವಹಿಸಲು ಅಗತ್ಯಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಕೇರಳದಿಂದ ಬರುವವವರು ಮಾರ್ಗಸೂಚಿ ಪಾಲಿಸುತ್ತಿದ್ದಾರೆಯೇ, ಇಲ್ಲವೇ ಎಂಬುದರ ಮೇಲೆ ಕಣ್ಣಿಡಲು ಸಹಕರಿಸುವಂತೆ ಗೃಹ ಇಲಾಖೆಯನ್ನು ಕೋರಲಾಗುವುದು ಎಂದು ಹೇಳಿದರು.

Latest Videos

undefined

ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿರಬಹುದು. ಆದರೆ ಕೋವಿಡ್‌ ನಮ್ಮನ್ನು ಸಂಪೂರ್ಣವಾಗಿ ಬಿಟ್ಟು ಹೋಗಿಲ್ಲ. ಹಾಗಾಗಿ ಕೋವಿಡ್‌ ಹಬ್ಬದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಪಾಲಿಸುವುದನ್ನು ನಾಗರಿಕರು ಮುಂದುವರೆಸಬೇಕು ಎಂದು ಇದೇ ವೇಳೆ ಅವರು ಮನವಿ ಮಾಡಿದರು.

ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ: ಜನರಲ್ಲಿ ಹೆಚ್ಚಿದ ಆತಂಕ..!

ತಡರಾತ್ರಿ ಪಾರ್ಟಿಯಿಂದ ಸೋಂಕು ಹೆಚ್ಚಳ:

ಬೆಂಗಳೂರಿನ ಬಿಳೇಕಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದೇ ತಡ ರಾತ್ರಿಯವರೆಗೆ ಪಾರ್ಟಿ ನಡೆಸಲಾಗಿದೆ. ಇದರಿಂದಾಗಿ ಸೋಂಕು ವ್ಯಾಪಕವಾಗಿ ಹಬ್ಬಿದೆ. ಈಗ ಈ ಅಪಾರ್ಟ್‌ಮೆಂಟ್‌ನಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ. ಪಾಸಿಟಿವ್‌ ಬಂದವರಿಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಆರನೇ ತರಗತಿ ಮೇಲ್ಪಟ್ಟು ತರಗತಿ ನಡೆಸಲು ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆ ಆಧರಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಕ್ರಮ ತೆಗೆದುಕೊಂಡಿದೆ. ಶಾಲೆ ಪ್ರಾರಂಭಿಸುವುದು ಸರಿಯಾದ ತೀರ್ಮಾನವಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿನಮ್ಮ ಮೊದಲ ಆದ್ಯತೆ ಎಂದು ಸುಧಾಕರ್‌ ಪ್ರತಿಪಾದಿಸಿದರು. ಮಾಚ್‌ರ್‍ನಿಂದ ಸಾಮಾನ್ಯ ಜನರಿಗೂ ಲಸಿಕೆ ಸಿಗುವ ಸಾಧ್ಯತೆಯಿದ್ದು ಎಲ್ಲರೂ ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

click me!