ಬಿಜೆಪಿ ಸರ್ಕಾರ ಬಂದ ನಂತರ ಔದ್ಯ​ಮಿಕ ರಂಗ​ದಲ್ಲಿ ವ್ಯಾಪಕ ಬದ​ಲಾ​ವ​ಣೆ: ಶೆಟ್ಟರ್‌

Kannadaprabha News   | Asianet News
Published : Sep 19, 2020, 08:38 AM IST
ಬಿಜೆಪಿ ಸರ್ಕಾರ ಬಂದ ನಂತರ ಔದ್ಯ​ಮಿಕ ರಂಗ​ದಲ್ಲಿ ವ್ಯಾಪಕ ಬದ​ಲಾ​ವ​ಣೆ: ಶೆಟ್ಟರ್‌

ಸಾರಾಂಶ

ಟಾಪ್‌-5 ಉದ್ಯಮಸ್ನೇಹಿ ಪಟ್ಟಿ​ಯಲ್ಲಿ ಕರ್ನಾ​ಟ​ಕ| ಮುಂದಿನ ವರ್ಷ ಟಾಪ್‌-5ನಲ್ಲಿ ರಾಜ್ಯ: ಶೆಟ್ಟರ್‌ ವಿಶ್ವಾಸ| ದೇಶದ ಸೇವೆಗಳ ರಫ್ತಿನ ವಿಭಾಗದಲ್ಲಿ ಕರ್ನಾಟಕ ಶೇ. 40 ರಷ್ಟು ಪಾಲು ಹೊಂದಿದೆ| 2019-2020ನೇ ಸಾಲಿನಲ್ಲಿ 100 ಬಿಲಿಯನ್‌ ಡಾಲರ್‌ಗಳಷ್ಟು ರಫ್ತು ಮಾಡಿದೆ| ರಾಜ್ಯದ ನೂತನ ಕೈಗಾರಿಕಾ ನೀತಿ 2020-2025 ಕೈಗಾರಿಕೆಗಳ ಸ್ಥಾಪನೆಗೆ ಸುಲಭವಾಗಿ ಅವಕಾಶಗಳನ್ನು ಕಲ್ಪಿಸಲಿದೆ| 

ಬೆಂಗಳೂರು(ಸೆ.19): ರಾಜ್ಯದಲ್ಲಿ ಕಲ್ಪಿಸಿರುವ ಕೈಗಾರಿಕಾ ಸೌಲಭ್ಯಗಳು ಹಾಗೂ ಕೈಗಾರಿಕಾ ನೀತಿಯಲ್ಲಿನ ಬದಲಾವಣೆಯಿಂದ ಮುಂದಿನ ವರ್ಷದ ಉದ್ಯಮ ಸ್ನೇಹಿ ಬಿಸಿನೆಸ್‌ ರ‍್ಯಾಂಕಿಂಗ್‌ನಲ್ಲಿ ಕರ್ನಾಟಕವು ಟಾಪ್‌ 5ರಲ್ಲಿ ಸ್ಥಾನ ಪಡೆಯಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ವಿಶ್ವಾಸ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

ಎಫ್‌ಕೆಸಿಸಿಐ ವತಿಯಿಂದ ನಗರದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 15ನೇ ರಫ್ತು ಉತ್ತೇಜನಾ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಈ ಬಾರಿ ಉದ್ಯಮ ಸ್ನೇಹಿ ರಾರ‍ಯಂಕ್‌ ಆಯ್ಕೆ ಪ್ರಕ್ರಿಯೆ ಕಳೆದ ವರ್ಷ ನವೆಂಬರ್‌ನಲ್ಲಿ ನಡೆದಿತ್ತು. ಸರ್ಕಾರ ಆಗಷ್ಟೇ ಅಧಿಕಾರಕ್ಕೆ ಬಂದಿದ್ದರಿಂದ ಹಾಗೂ ಕೈಗಾರಿಕಾ ನೀತಿಯಲ್ಲಿನ ಸಮಸ್ಯೆಯಿಂದ ರಾಜ್ಯವು ಹಿಂದುಳಿದಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತಾತ್ಮಕವಾಗಿ ಹಾಗೂ ನೀತಿಯಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತರಲಾಗಿದೆ.

ಇದರ ಪರಿಣಾಮ ಮುಂದಿನ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ನಾವು ಪ್ರತಿಫಲವನ್ನು ಪಡೆದುಕೊಳ್ಳಲಿದ್ದೇವೆ. ನೂತನ ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸೌಲಭ್ಯ ಕಲ್ಪಿಸುವ ನಿಯಮದಲ್ಲಿ ಸಾಕಷ್ಟು ತಿದ್ದುಪಡಿ ಮಾಡಿರುವುದು ಕೈಗಾರಿಕೆಗಳ ಪ್ರಗತಿಗೆ ಸಹಕಾರಿಯಾಗಲಿದ್ದು, ಉತ್ತಮ ರಾರ‍ಯಂಕ್‌ ಗಳಿಸಲು ಸಾಧ್ಯವಾಗಲಿದೆ ಎಂದರು.

ಹೊಸ ಕೈಗಾರಿಕಾ ನೀತಿ, ಕೈಗಾರಿಕೋದ್ಯಮಿಗಳಿಗೆ ಸಹಕಾರಿ: ಸಚಿವ ಜಗದೀಶ ಶೆಟ್ಟರ್‌

ದೇಶದ ಒಟ್ಟಾರೆ ಸಾಫ್ಟ್‌ವೇರ್‌ ರಫ್ತಿನಲ್ಲಿ ಶೇ. 17.04 ರಷ್ಟು ಕೊಡುಗೆ ನೀಡುತ್ತಿರುವ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರಮುಖ 6 ಕ್ಷೇತ್ರಗಳನ್ನು ಗುರುತಿಸಲಾಗಿದೆ. ಆರೋಗ್ಯ ಮತ್ತು ಸ್ವಾಸ್ಥ್ಯ ಸೇವೆಗಳು, ಶೈಕ್ಷಣಿಕ ಸೇವೆಗಳು, ಮೂಲ ಸೌಕರ್ಯ ಮತ್ತು ಕಟ್ಟಡ, ಲಾಜಿಸ್ಟಿಕ್‌ ಮತ್ತು ಸಾರಿಗೆ ಸೇವೆಗಳು ಹಾಗೂ ಮನರಂಜನಾ ಸೇವಾ ವಲಯಗಳನ್ನು ಪ್ರಮುಖ ಕ್ಷೇತ್ರಗಳಾಗಿ ಗುರುತಿಸಲಾಗಿದೆ. ಇವುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕರಡು ವರದಿ ಸಿದ್ದಪಡಿಸಲಾಗುತ್ತಿದೆ ಎಂದರು.

ದೇಶದ ಸೇವೆಗಳ ರಫ್ತಿನ ವಿಭಾಗದಲ್ಲಿ ಕರ್ನಾಟಕ ಶೇ. 40 ರಷ್ಟು ಪಾಲು ಹೊಂದಿದೆ. 2019-2020ನೇ ಸಾಲಿನಲ್ಲಿ 100 ಬಿಲಿಯನ್‌ ಡಾಲರ್‌ಗಳಷ್ಟು ರಫ್ತು ಮಾಡಿದೆ. ಕರ್ನಾಟಕ ರಾಜ್ಯ ಕೈಗಾರಿಕೆಗಳ ಅಭಿವೃದ್ಧಿಗೆ ಹಾಗೂ ಬೆಳವಣಿಗೆಗೆ ಸೂಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿದೆ. ರಾಜ್ಯದ ನೂತನ ಕೈಗಾರಿಕಾ ನೀತಿ 2020-2025 ಕೈಗಾರಿಕೆಗಳ ಸ್ಥಾಪನೆಗೆ ಸುಲಭವಾಗಿ ಅವಕಾಶಗಳನ್ನು ಕಲ್ಪಿಸಲಿದೆ ಎಂದು ಹೇಳಿದರು.

ಹೊಸದಾಗಿ ರಫ್ತು ಉದ್ಯಮ ಆರಂಭಿಸುವವರಿಗೆ ಸರ್ಕಾರವು ವಿಶೇಷ ಯೋಜನೆ ಘೋಷಿಸಬೇಕು. ರಫ್ತು ವಹಿವಾಟು ಪ್ರಗತಿಗಾಗಿ ಪ್ರತ್ಯೇಕ ಗ್ರೀನ್‌ ಚಾನೆಲ್‌ ಅವಶ್ಯಕತೆ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌. ಜನಾರ್ಧನ ಅವರು ಸಚಿವರಿಗೆ ಸಲ್ಲಿಸಿದರು.

ರಾಜ್ಯದ ಪ್ರಮುಖ 40 ಕೈಗಾರಿಕೋದ್ಯಮಿಗಳಿಗೆ ರಫ್ತು ಉತ್ತೇಜನಾ ಪ್ರಶಸ್ತಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪೆರಿಕಾಲ್‌ ಎಂ.ಸುಂದರ್‌, ಎಕ್ಸ್‌ಪೋರ್ಟ್‌ ಎಕ್ಸಲೆನ್ಸ್‌ ಅವಾರ್ಡ್‌ ಸಮಿತಿಯ ಬಿ.ಪಿ. ಶಶಿಧರ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ