ಕೊರೋನಾ ಕಾಟ: ಬಸ್‌ನಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದ್ರೆ ಸಸ್ಪೆಂಡ್‌..!

By Kannadaprabha News  |  First Published Sep 19, 2020, 7:49 AM IST

ಕೆಲವೊಮ್ಮೆ ಹೆಚ್ಚು ಪ್ರಮಾಣದಲ್ಲಿ ಪ್ರಯಾಣಿಕರು ಬರುತ್ತಾರೆ. ಅವರನ್ನು ತಡೆದಲ್ಲಿ ವಿನಾಕಾರಣ ಜಗಳವಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಿಯಮ ಪಾಲಿಸದಿದ್ದರೆ ಅಮಾನತು ಶಿಕ್ಷೆಗೊಳಗಾಗಬೇಕಾಗುತ್ತದೆ.ಹೀಗೆ ಇಬ್ಬಂದಿಯಲ್ಲಿ ನಾವು ಸಿಲುಕಿದ್ದೇವೆ ಎಂದು ಬಿಎಂಟಿಸಿ ಸಿಬ್ಬಂದಿಯ ಆಕ್ರೋಶ


ಬೆಂಗಳೂರು(ಸೆ.19): ಕೊರೋನಾ ಸೋಂಕು ಹರಡುವುದನ್ನು ತಡೆಯಲು ಹಲವು ಷರತ್ತುಗಳನ್ನು ವಿಧಿಸಿ ಸಂಚಾರ ಪ್ರಾರಂಭಿಸಿರುವ ಬಿಎಂಟಿಸಿ, ಬಸ್‌ಗಳಲ್ಲಿ ಆಸನಗಳಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವ ಚಾಲಕ ಮತ್ತು ನಿರ್ವಾಹಕರನ್ನು ಅಮಾನತು ಮಾಡಲು ಮುಂದಾಗಿದೆ.

ಕೊರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಆಸನಗಳಿರುವಷ್ಟು ಪ್ರಯಾಣಿಕರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ, ಆಸನಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸಿಕೊಂಡು, ಬಸ್‌ಗಳಲ್ಲಿ ನಿಂತು ಪ್ರಯಾಣಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ಒಂದು ವೇಳೆ ಬಸ್‌ಗಳಲ್ಲಿ ನಿಂತು ಪ್ರಯಾಣಿಸುತ್ತಿರುವುದು ಕಂಡು ಬಂದರೆ, ಚಾಲಕ ಮತ್ತು ನಿರ್ವಾಹಕರನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ. ಈ ಕುರಿತು ನಿಗಮದಿಂದ ಸೂಚನೆ ನೀಡಲಾಗಿತ್ತಾದರೂ, ಅದರ ಬಗ್ಗೆ ಚಾಲಕ ಮತ್ತು ನಿರ್ವಾಹಕರು ಎಚ್ಚರ ವಹಿಸಿರಲಿಲ್ಲ.

Latest Videos

undefined

ಇದೀಗ ಸೂಚನೆಯನ್ನು ಉಲ್ಲಂಘಿಸಿ ಹೆಚ್ಚಿನ ಪ್ರಯಾಣಿಕರನ್ನು ಬಸ್‌ ಒಳಗೆ ಹತ್ತಿಸಿಕೊಳ್ಳುತ್ತಿರುವ ಬಗ್ಗೆ ದೂರು ಬಂದ ಕಾರಣ, ಅಂತಹ ಚಾಲಕರನ್ನು ಅಮಾನತುಗೊಳಿಸಿ ಆದೇಶಿಸಲಾಗುತ್ತಿದೆ. ಅದರಂತೆ ಸೆ.15ರಂದು ಯಶವಂತಪುರ ಡಿಪೋದ ಕೆಎ 57 ಎಫ್‌ 1415 ಸಂಖ್ಯೆಯ ಬಸ್‌ ಚಾಲನೆ ಮಾಡುತ್ತಿದ್ದ ಸಣ್ಣೆಕೆಪ್ಪ ಹೊಕ್ರಾಣಿ ಎಂಬ ಚಾಲಕರು ರಾತ್ರಿ ವೇಳೆ ನಿಗದಿಗಿಂತ ಹೆಚ್ಚಿನ ಜನರನ್ನು ಬಸ್‌ನಲ್ಲಿ ಹತ್ತಿಸಿಕೊಂಡಿದ್ದರು. ಈ ಕುರಿತಂತೆ ಘಟಕ ವ್ಯವಸ್ಥಾಪಕರಿಗೆ ದೂರು ಬಂದಿತ್ತು. ದೂರನ್ನಾಧರಿಸಿ ಘಟಕ ವ್ಯವಸ್ಥಾಪಕರು ಸಣ್ಣೆಕೆಪ್ಪ ಅವರನ್ನು ಅಮಾನತು ಮಾಡಿದ್ದು, ಮುಂದಿನ ತನಿಖೆಗೆ ಆದೇಶಿಸಿದ್ದಾರೆ.

ಸಾರಿಗೆ ನಿಗಮದ 10,000 ನೌಕರರಿಗೆ ಸಂಬಳವಿಲ್ಲ

ನೌಕರರ ಆಕ್ರೋಶ:

ಬಸ್‌ ಸೇವೆ ನೀಡುವ ವೇಳೆ ಕೆಲವೊಮ್ಮೆ ಹೆಚ್ಚು ಪ್ರಮಾಣದಲ್ಲಿ ಪ್ರಯಾಣಿಕರು ಬರುತ್ತಾರೆ. ಅವರನ್ನು ತಡೆದಲ್ಲಿ ವಿನಾಕಾರಣ ಜಗಳವಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಿಯಮ ಪಾಲಿಸದಿದ್ದರೆ ಅಮಾನತು ಶಿಕ್ಷೆಗೊಳಗಾಗಬೇಕಾಗುತ್ತದೆ. ಹೀಗೆ ಇಬ್ಬಂದಿಯಲ್ಲಿ ನಾವು ಸಿಲುಕಿದ್ದೇವೆ ಎಂದು ಬಿಎಂಟಿಸಿ ಸಿಬ್ಬಂದಿಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

click me!