ಕೊರೋನಾ ವಿರುದ್ಧ ಹೋರಾಟ, ಮನೆ-ಮನೆ ಸಮೀಕ್ಷೆ ಚುರುಕುಗೊಳಿಸಿ, ಸಚಿವ ಸುಧಾಕರ್‌

By Kannadaprabha NewsFirst Published Jul 25, 2020, 8:23 AM IST
Highlights

ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಸಚಿವ ಕೆ. ಸುಧಾಕರ್‌| ಸಂಗ್ರಹ ಆಗುವ ಮಾಹಿತಿಯನ್ನು ವಲಯವಾರು ಅಧಿಕಾರಿಗಳ ಜತೆ ಹಂಚಿಕೊಂಡು ಕೊರೋನಾ ಆರೈಕೆ ಕೇಂದ್ರ ಹಾಗೂ ಕೊರೋನಾ ಆಸ್ಪತ್ರೆಗಳಿಗೆ ದಾಖಲು ಮಾಡುವ ನಿರ್ಣಯ ಕೈಗೊಳ್ಳಬೇಕು| ಮನೆ-ಮನೆ ಸಮೀಕ್ಷೆ ಚುರುಕುಗೊಳಿಸಿ. ಇದಕ್ಕೆ ಅಗತ್ಯವಿರುವ ಸಿಬ್ಬಂದಿ ನಿಯೋಜನೆ ಹಾಗೂ ತರಬೇತಿಗೆ ಕ್ರಮಕೈಗೊಳ್ಳಿ|

ಬೆಂಗಳೂರು(ಜು.25):  ನಗರದಲ್ಲಿ 12 ಸಾವಿರಕ್ಕೂ ಹೆಚ್ಚು ಕಂಟೈನ್‌ಮೆಂಟ್‌ ಪ್ರದೇಶಗಳಿವೆ. ಈ ಭಾಗದಲ್ಲಿ ಮನೆ-ಮನೆ ಸಮೀಕ್ಷೆ ನಡೆಸಿ ಐಎಲ್‌ಐ, ಸಾರಿ ಮತ್ತು ಹಿರಿಯ ನಾಗರಿಕರ ಮಾಹಿತಿ ಕಲೆ ಹಾಕಬೇಕು. ಲಕ್ಷಣ ಇರುವವರನ್ನು ಪರೀಕ್ಷೆ ನಡೆಸಬೇಕು ಎಂದು ವೈದ್ಯಶಿಕ್ಷಣ ಸಚಿವ ಕೆ. ಸುಧಾಕರ್‌ ಸೂಚಿಸಿದ್ದಾರೆ. 

ಶುಕ್ರವಾರ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಸಂಗ್ರಹ ಆಗುವ ಮಾಹಿತಿಯನ್ನು ವಲಯವಾರು ಅಧಿಕಾರಿಗಳ ಜತೆ ಹಂಚಿಕೊಂಡು ಕೊರೋನಾ ಆರೈಕೆ ಕೇಂದ್ರ ಹಾಗೂ ಕೊರೋನಾ ಆಸ್ಪತ್ರೆಗಳಿಗೆ ದಾಖಲು ಮಾಡುವ ನಿರ್ಣಯ ಕೈಗೊಳ್ಳಬೇಕು. ಹೀಗಾಗಿ ಮನೆ-ಮನೆ ಸಮೀಕ್ಷೆ ಚುರುಕುಗೊಳಿಸಿ. ಇದಕ್ಕೆ ಅಗತ್ಯವಿರುವ ಸಿಬ್ಬಂದಿ ನಿಯೋಜನೆ ಹಾಗೂ ತರಬೇತಿಗೆ ಕ್ರಮಕೈಗೊಳ್ಳಿ ಎಂದರು.

ನಗರದಲ್ಲಿ ನಿತ್ಯ ಕನಿಷ್ಠ 30 ಸಾವಿರ ಪರೀಕ್ಷೆ ನಡೆಸುವ ಗುರಿ ಹೊಂದಿದ್ದೆವು. ಇದಕ್ಕೆ ಅಗತ್ಯ ಪ್ರಯೋಗಾಲಯ ಹಾಗೂ ಪರೀಕ್ಷೆ ಕಿಟ್‌ ಇದ್ದರೂ ಸಿಬ್ಬಂದಿ ಕೊರತೆಯಿಂದ ಗುರಿ ತಲುಪಲು ಆಗುತ್ತಿಲ್ಲ. ನಗರದಲ್ಲಿರುವ ಲ್ಯಾಬ್‌ಗಳು, ಫೀವರ್‌ ಕ್ಲಿನಿಕ್‌ಗಳ ಸಿಬ್ಬಂದಿ ಬಳಸಿಕೊಂಡು ಪರೀಕ್ಷೆಯ ಗುರಿ ಮುಟ್ಟಲು ಆಗುತ್ತಿಲ್ಲ. ಮಾದರಿ ಸಂಗ್ರಹಕ್ಕೆ ಸಂಚಾರಿ ವಾಹನಗಳಿದ್ದರೂ ಸಿಬ್ಬಂದಿ ಕೊರತೆಯಿಂದ ಅವು ಬಳಕೆಯಾಗುತ್ತಿಲ್ಲ ಎಂದು ಹೇಳುತ್ತಿದ್ದೀರಿ. ಇಂತಹ ಸ್ಥಿತಿ ಇದ್ದಾಗ ಕೂಡಲೇ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಿ ಎಂದರು.

ರಾತ್ರೋರಾತ್ರಿ ಕೆ.ಸಿ.ಜನರಲ್‌ ಆಸ್ಪತ್ರೆ ಅವ್ಯವಸ್ಥೆ ಬಯಲು ಮಾಡಿದ ಸಚಿವ ಸುಧಾಕರ್‌!

ಜಾಗೃತಿ ಆಂದೋಲನ ಆಗಬೇಕು:

ಇದಲ್ಲದೆ ಜನಪ್ರತಿನಿಧಿಗಳು ಮತ್ತು ಸ್ಥಳೀಯರು ಕೊರೋನಾ ಕುರಿತ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕೊರೋನಾ ಸೋಂಕಿತರು, ಕ್ವಾರಂಟೈನ್‌ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಜನರಲ್ಲಿ ಅರಿವಿನ ಕೊರತೆಯಿದೆ. ಇದನ್ನು ನಿವಾರಿಸಲು ಪರಿಣಾಮಕಾರಿ ಜಾಗೃತಿ ಆಂದೋಲನಕ್ಕೆ ಕ್ರಿಯಾ ಯೋಜನೆ ರೂಪಿಸಬೇಕು. ಸಿಬ್ಬಂದಿ ಕೊರತೆ ನೀಗಿಸಲು ನೇರ ನೇಮಕಕ್ಕೆ ಉತ್ತಮ ಸ್ಪಂದನೆ ದೊರೆಯದ ಹುದ್ದೆಗಳ ವೇತನ ಹೆಚ್ಚಿಸಿ ಮತ್ತೆ ಪ್ರಕಟಣೆ ನೀಡಿ ಎಂದು ಹೇಳಿದರು.

ಸಮೀಕ್ಷೆಗಳಲ್ಲಿ ಸಂಗ್ರಹವಾಗುವ ಮಾಹಿತಿಯನ್ನು ವಲಯವಾರು ಅಧಿಕಾರಿ ಹಾಗೂ ಸಿಬ್ಬಂದಿಗೆ ತಲುಪಿಸಲು ವಿಫಲವಾಗುತ್ತಿದ್ದೇವೆ. ಇದಕ್ಕಾಗಿ ವಲಯವಾರು ಸ್ಥಳೀಯವಾಗಿ ಮಾಹಿತಿಯ ಡ್ಯಾಶ್‌ಬೋರ್ಡ್‌ ಸ್ಥಾಪಿಸಿ ವಾರ್‌ ರೂಂನ ಎಲ್ಲಾ ಮಾಹಿತಿ ಹಂಚಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಕಿಯೋನಿಕ್ಸ್‌ನಿಂದ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು. ವಿಡಿಯೋ ಸಂವಾದದಲ್ಲಿ ಹಿರಿಯ ಅಧಿಕಾರಿಗಳಾದ ಶಾಲಿನಿ ರಜನೀಶ್‌, ಅಜಯ್‌ಸೇಠ್‌, ಮಂಜುನಾಥ್‌ ಪ್ರಸಾದ್‌, ಮುನೀಶ್‌ ಮುದ್ಗಿಲ್‌, ಸತ್ಯವತಿ, ಡಿ. ರಣದೀಪ್‌, ಅನ್ಬುಕುಮಾರ್‌, ಡಾ. ಮಂಜುಳ ಹಾಜರಿದ್ದರು.

click me!