
ಕೊಳ್ಳೇಗಾಲ(ಜು.13): ಪರಿಶಿಷ್ಟಜಾತಿಗೆ ಮತ್ತು ಪಂಗಡದ ಸಮುದಾಯದವರಿಗೆ ಸದ್ಯದಲ್ಲೆ ಮೀಸಲಾತಿ ಹೆಚ್ಚಳ ಮಾಡಲಿದ್ದು, ಇದರ ಖ್ಯಾತಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಲಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟಜಾತಿ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಬಹಳ ದಿನಗಳದ್ದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಎಸ್ಸಿಗೆ ಶೇ 17, ಎಸ್ಟಿಗೆ ಶೇ 7.5 ಮೀಸಲಾತಿ ಕೊಡುವುದಾಗಿ ಭರವಸೆ ನೀಡಲಾಗಿತ್ತು, ಮೀಸಲಾತಿ ಹೆಚ್ಚಳ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುವುದಾಗಿ ನಾನು ಹೇಳಿದ್ದೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ವಾಲ್ಮೀಕಿ ಗುರು ಪೀಠದ ಸ್ವಾಮೀಜಿಯವರು ಕಳೆದ 153ದಿನದಿಂದ ಧರಣಿ ನಡೆಸುತ್ತಿದ್ದಾರೆ. ಸ್ವಾಮೀಜಿಯವರು ಮಠದಲ್ಲಿ ಕೂತು ಆದೇಶ ಮಾಡಿದರೆ ಸಾಕು ನಾವು ಅದನ್ನು ಮಾಡುವ ಶಕ್ತಿ ನಮಗಿದೆ, ಸ್ವಾಮೀಜಿಯವರು ಈ ರೀತಿ ಮಾಡುವುದು ಚಲೋ ಅಲ್ಲ ಎಂದ ಅವರು ತೀರ್ಮಾನ ತೆಗೆದುಕೊಂಡು ಧರಣಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮೀಸಲಾತಿ ಕೊಟ್ರೆ ಸಹಕಾರ, ಕೊಡದಿದ್ರೆ ಅಸಹಕಾರ: ಸರ್ಕಾರಕ್ಕೆ ಕೂಡಲ ಶ್ರೀ ಎಚ್ಚರಿಕೆ
ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾ.ನಾಗಮೋಹನ್ ದಾಸ್‌ರವರು ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ವರದಿ ನೀಡಿದ್ದಾರೆ, ಸುಭಾಷ್ ಅಡಿಯ ಬಗ್ಗೆ ವರದಿ ಕೊಟ್ಟಿದ್ದು ಇದು ಸಹ ನಾಗಮೋಹನ್ ದಾಸ್ ವರದಿಗೆ ಪೂರಕವಾಗಿದೆ ಎಂದು ಕೊಂಡಿದ್ದೇನೆ. ಮುಖ್ಯಮಂತ್ರಿ ಅವರು ಇದನ್ನು ನೋಡಿ ಕ್ಯಾಬಿನೆಟ್‌ಗೆ ತಂದು ತೀರ್ಮಾನ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಹೋರಾಟದ ಲಾಭ ಪಡೆಯಲು ಹವಣಿಸುತ್ತಿದೆ. ತಳವಾರ ಮತ್ತು ಪರಿವಾರ ಜಾತಿಗೆ ಎಸ್‌ಟಿ ಸರ್ಟಿಫಿಕೆಟ್ ಕೊಡಿಸುವ ಕಾರ್ಯವನ್ನು ಮಾಜಿ ಸಿಎಂ ಯಡಿಯೂರಪ್ಪರವರು, ಮಾಜಿ ಕೇಂದ್ರ ಸಚಿವರಾಗಿದ್ದ ಅನಂತ್‌ಕುಮಾರ್ ಜೊತೆಗೂಡಿ ಮಾಡಿಸಿದ್ದೇನೆ. ಮೀಸಲಾತಿ ಹೆಚ್ಚಳ ಮಾಡುವುದು ನಮ್ಮ ಆದ್ಯತೆ ಆಗಿದ್ದು ತಕ್ಷಣದಲ್ಲೆ ಮಾಡುತ್ತೇವೆ ಎಂದರು.
ಕಾಂಗ್ರೆಸ್‌ಗೆ ದಾಡಿಯಾಗಿತ್ತಾ?
ಸ್ವತಂತ್ರ್ಯ ಬಂದು 75 ವರ್ಷಗಳಿಂದ ಕಾಂಗ್ರೆಸ್‌ನವರು ಏನು ಮಾಡುತ್ತಿದ್ದರು. ಕಾಂಗ್ರೆಸ್ ನವರು ಪರಿಶಿಷ್ಟಜಾತಿ ಪಂಗಡಗಳಿಗೆ ಮೀಸಲಾತಿ ಕೊಡಲು ಆಗಲಿಲ್ಲ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ವಾಲ್ಮೀಕಿ ಹೆಸರು ಬಳಸಿ ಕೊಂಡು ಮತ ಪಡೆಯುತ್ತಿದ್ದವರು ಈ ಸಮುದಾಯಕ್ಕೆ ಏನು ಮಾಡಿದರು. ಮೀಸಲಾತಿ ಕೊಟ್ಟ ಖ್ಯಾತಿ ನರೇಂದ್ರ ಮೋದಿಯವರಿಗೆ, ಬೊಮ್ಮಾಯಿ ಅವರಿಗೆ ಬರಬೇಕು. ತಾಂತ್ರಿಕವಾಗಿ ನೋಡಬೇಕು, ಬೇರೆ ಬೇರೆ ಒಗ್ಗಟ್ಟಾಗಿ ಹೋರಾಟ ಮಾಡುವುದನ್ನು ಅಭಿನಂದಿಸಿದಿದ್ದೇನೆ ಎಂದರು.
ಬೊಮ್ಮಾಯಿ ಸರ್ಕಾರಕ್ಕೆ ಮತ್ತೊಂದು ಮೀಸಲಾತಿ ಸಂಕಟ..!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವುದನ್ನು ಬಿಟ್ಟು ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದರೆ ಅವರನ್ನು ಒಪ್ಪಬಹುದಿತ್ತು, ಚುನಾವಣೆ ಹತ್ತಿರ ಬರುವುದರಿಂದ ಮೀಸಲಾತಿ ಕೊಡದಿದ್ದರೆ ಇತ್ತ ಮುಖ ಕೂಡ ಹಾಕುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎನ್. ಮಹೇಶ್, ಹನೂರು ಶಾಸಕ ಆರ್. ನರೇಂದ್ರ, ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಜಿ.ಎನ್, ನಂಜುಂಡಸ್ವಾಮಿ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ರಾಮಚಂದ್ರ, ಜಿಲ್ಲಾಧ್ಯಕ್ಷ ಸುಂದರ್, ಉಪಾಧ್ಯಕ್ಷ ಡಾ, ದತ್ತೇಶ್ ಕುಮಾರ್ ಇದ್ದರು.
ಸಿದ್ದರಾಮಯ್ಯ ಕೇವಲ ಉತ್ಸವ ಮೂರ್ತಿ
ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಉತ್ಸವ ಮೂರ್ತಿಗೆ ಹೋಲಿಸಿದ್ದಾರೆ. ಸಿದ್ದರಾಮೋತ್ಸವದ ನಂತರ ಸಿದ್ದರಾಮಯ್ಯ ಕೇವಲ ಉತ್ಸವ ಮೂರ್ತಿಯಾಗಿಯೇ ಉಳಿಯಬೇಕಾಗುತ್ತದೆ ಎಂದು ಕೊಳ್ಳೇಗಾಲದಲ್ಲಿ ಸಚಿವ ವ್ಯಂಗ್ಯವಾಡಿದರು. ಸಿದ್ದರಾಮಯ್ಯಗೆ ಉತ್ಸವಮೂರ್ತಿ ಪರಿಸ್ಥಿತಿ ಬರುತ್ತೆ, ಜಾತ್ರೆ ಮುಗಿದ ತಕ್ಷಣ ಉತ್ಸವ ಮೂರ್ತಿ ಹೇಗೆ ಹೊರಗೆ ಇರುತ್ತೋ ಹಾಗೆ ಸಿದ್ದರಾಮಯ್ಯ ಕೂಡ ಹೊರಗೆ ಇರುವ ಪರಿಸ್ಥಿತಿ ಬರುತ್ತೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ