‘ಮಾತೃವಂದನಾ’ ಹಣ ನಿರೀಕ್ಷೆಯಲ್ಲಿ ಗರ್ಭಿಣಿಯರು, ತಾಯಂದಿರು

By Kannadaprabha News  |  First Published Jul 13, 2022, 1:15 PM IST

*  ಎರಡು ಮೂರು ವರ್ಷಗಳಿಂದ ಜಿಲ್ಲೆ ಫಲಾನುಭವಿಗಳಿಗೆ ಬರಬೇಕಿರುವ ಒಟ್ಟು ಹಣ 1.65 ಕೋಟಿ
*  ಬಡವರು, ಕೂಲಿಕಾರ್ಮಿಕ ಮಹಿಳೆಯರ ಆರ್ಥಿಕ ಸೌಲಭ್ಯ ಯೋಜನೆ ಸರ್ಕಾರ ನಿರ್ಲಕ್ಷಿಸಿ ಬಿಟ್ಟಿತೇ?
*  2010ರಲ್ಲಿ ಇಂದಿರಾ ಮಾತೃ ಯೋಜನೆ ಎಂಬ ಹೆಸರಿನಿಂದ ಆರಂಭಗೊಂಡ ಯೋಜನೆ 


ಗೋಪಾಲ್‌ ಯಡಗೆರೆ

ಶಿವಮೊಗ್ಗ(ಜು.13):  ಬಡವರು, ಕೂಲಿಕಾರ್ಮಿಕ ಗರ್ಭಿಣಿಯರಿಗೆ ಆರ್ಥಿಕವಾಗಿ ನೆರವಾಗಬೇಕಿದ್ದ ಮಾತೃವಂದನಾ ಯೋಜನೆ ಅನುದಾನ ಕೊರತೆ ಎದುರಿಸುತ್ತಿದೆ. ಫಲಾನುಭವಿಗಳಿಗೆ ಸಂಕಷ್ಟ ತಂದೊಡ್ಡಿದೆ. ಕಳೆದೊಂದು ವರ್ಷದ ಹಿಂದೆಯೇ ಈ ಮಾತೃವಂದನಾ ಯೋಜನೆ ಅಡಿಯಲ್ಲಿ ಸ್ವೀಕೃತಿಯಾಗಿದ್ದ ಸಾವಿರಾರು ಫಲಾನುಭಗಳಿಗೆ ಇನ್ನೂ ಹಣ ಬಂದಿಲ್ಲ. 2010ರಲ್ಲಿ ಇಂದಿರಾ ಮಾತೃ ಯೋಜನೆ ಎಂಬ ಹೆಸರಿನಿಂದ ಆರಂಭಗೊಂಡ ಯೋಜನೆ ಇದಾಗಿದೆ. 2017ರಲ್ಲಿ ಕೆಲವು ಬದಲಾವಣೆಗಳೊಂದಿಗೆ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಾಗಿ ಬದಲಾಯಿತು. ಈ ಯೋಜನೆ ಮೂಲಕ ತಾಯಂದಿರಿಗೆ ನೆರವು ನೀಡಲಾಗುತ್ತದೆ. ಬಹುತೇಕ ತಾಯಂದಿರು ರಕ್ತಹೀನತೆಯಿಂದ ಬಳಲುತ್ತಿದ್ದು, ಕಡಿಮೆ ತೂಕದ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಗರ್ಭಾಶಯದಲ್ಲಿ ಸರಿಯಾದ ಪೋಷಣೆ ಸಿಗದಿದ್ದಾಗ ಮಗುವಿನ ಮೇಲೆ ಅದು ಅಡ್ಡಪರಿಣಾಮ ಬೀರುತ್ತದೆ. ಈ ಯೋಜನೆ ಮೂಲಕ ಅಂತಹ ತಾಯಂದಿರಿಗೆ ಸಹಾಯಹಸ್ತ ನೀಡಲಾಗುತ್ತಿದೆ.

Tap to resize

Latest Videos

ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ ಪಡೆಯುವುದಕ್ಕಾಗಿ .5 ಸಾವಿರ ಮೊತ್ತವನ್ನು ಮೂರು ಕಂತುಗಳಲ್ಲಿ ಫಲಾನುಭವಿಗಳ ಆಧಾರ್‌ ಲಿಂಕ್‌ ಮಾಡಿರುವ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಹಿಸಲಾಗುತ್ತದೆ. ಗರ್ಭಿಣಿ ಎಂದು ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಮಾಡಿದ ನಂತರ ಮೊದಲು .1000, ಗರ್ಭಿಣಿಯಾಗಿ 6 ತಿಂಗಳ ನಂತರ ಎರಡನೇ ಕಂತು .2000, ಮಗು ಜನನ ಬಳಿಕ ಮೂರನೇ ಕಂತು .2000 ಹೀಗೆ ಮೂರು ಕಂತುಗಳಲ್ಲಿ ಹಣ ಒದಗಿಸಲಾಗುತ್ತಿದೆ. ಆದರೆ, ಗರ್ಭಿಣಿಯರ ಆರೈಕೆಗೆ ಸಿಗಬೇಕಾದ ಮೊದಲ ಕಂತಿನ ಹಣ, ಹೆರಿಗೆಯಾಗಿ ಮಗುವಿಗೆ ಒಂದು ವರ್ಷ ತುಂಬಿದರೂ ಫಲಾನುಭವಿಗಳ ಕೈ ಸೇರುವುದಿಲ್ಲ. ಹೀಗಾದರೆ ಯೋಜನೆಯಿಂದ ಏನು ಪ್ರಯೋಜನ? ಎಂಬುದು ಫಲಾನುಭವಿಗಳ ಪ್ರಶ್ನೆ.

ಭದ್ರಾವತಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ಸಂಸದ ಬಿ.ವೈ. ರಾಘವೇಂದ್ರ

ಮಾತೃವಂದನಾ ಯೋಜನೆ ಪಡೆಯಲು ಪತಿಯ ಲಿಖಿತ ಒಪ್ಪಿಗೆ ಮತ್ತು ಅವರ ಆಧಾರ್‌ ಕಾರ್ಡ್‌ ಕಡ್ಡಾಯ ಎಂದು ಯೋಜನೆಯ ಆರಂಭದಲ್ಲಿ ಸಿದ್ಧಪಡಿಸಿದ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಹೇಳಿದ್ದು, ಬಳಿಕ ಹೊರಡಿಸಿದ ಇದನ್ನು ಕಡ್ಡಾಯ ಅಲ್ಲ ಎಂದಿದೆ. ಆದರೆ, ಅಧಿಕಾರಿಗಳು ಮಾತ್ರ ಮೊದಲ ಸೂಚನೆಯನ್ನು ಮುಂದಿಟ್ಟುಕೊಂಡು ಪತಿಯ ಆಧಾರ್‌ ಕಾರ್ಡ್‌ ಎಂದು ಹೇಳುತ್ತಿರುವುದು ಫಲಾನುಭವಿಗಳಲ್ಲಿ ಬೇಸರ ತರಿಸಿದೆ. ಇದೇ ಕಾರಣಕ್ಕೆ ಅನೇಕ ಫಲಾನುಭವಿಗಳಿಗೆ ಸರಿಯಾದ ವೇಳೆಯಲ್ಲಿ ಲಾಭ ದೊರಕುತ್ತಿಲ್ಲ.

1.65 ಕೋಟಿ ಹಣ ಬಾಕಿ:

ಜಿಲ್ಲೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಮಾತೃವಂದನಾ ಯೋಜನೆ ಫಲಾನುಭವಿಗಳಿಗೆ ಒಟ್ಟು .1.65 ಕೋಟಿ ರು. ಹಣ ಬರಬೇಕಿದೆ. ಅನುದಾನ ಕೊರತೆ ಕಾರಣ ಈ ಯೋಜನೆಗೆ ಸರಿಯಾಗಿ ಹಣ ಬಿಡುಗಡೆಯಾಗುತ್ತಿಲ್ಲ ಎಂಬುದು ಅಧಿಕಾರಿಗಳು ಹೇಳುತ್ತಾರೆ. ಜಿಲ್ಲೆಯಲ್ಲಿ 2017ರಿಂದ ಈವರೆಗೆ ಈ ಯೋಜನೆಯಡಿ ಒಟ್ಟು 53413 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಹಲವರಿಗೆ ಇನ್ನು ಯೋಜನೆಯ ಹಣ ಬಂದಿಲ್ಲ. ಹಲವರಿಗೆ ಮೊದಲ ಹಂತದ ಕಂತಿನಂತೆ ಕ್ರಮವಾಗಿ .2 ಸಾವಿರವನ್ನು ನೇರವಾಗಿ ಗರ್ಭಿಣಿಯರ ಉಳಿತಾಯ ಖಾತೆಗೆ ಜಮಾ ಮಾಡಬೇಕಿತ್ತು. ಆದರೆ, ಗರ್ಭಿಣಿಯರು ನೀಡಿರುವ ದಾಖಲೆಗಳು ಸರಿಯಿರದ ಕಾರಣ ಈವರೆಗೂ ಹಣ ಸಂದಾಯವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಶಿವಮೊಗ್ಗದಲ್ಲಿ ವರುಣನ ಆರ್ಭಟ: ರೈಸ್ ಮಿಲ್ ಗೋಡೆ ಕುಸಿತ, ತಪ್ಪಿದ ಭಾರೀ ದುರಂತ

ಮಾತೃವಂದನಾ ಯೋಜನೆ ಬಡ ಮತ್ತು ಕೂಲಿಕಾರ್ಮಿಕ ಗರ್ಭಿಣಿಯರಿಗೆ ನೆರವಾಗುವ ಯೋಜನೆಯಾಗಬೇಕಿತ್ತು. ಅದರಲ್ಲೂ ವಿಶೇಷವಾಗಿ ಈ ಲಾಕ್‌ಡೌನ್‌ ಸಂದರ್ಭದಲ್ಲಿ ಗರ್ಭಿಣಿಯರ ಆರ್ಥಿಕ ನೆರವಿಗೆ ಕೇಂದ್ರ ಸರ್ಕಾರ ಶ್ರಮಿಸಬೇಕಿತ್ತು. ಆದರೆ, ಈ ಯೋಜನೆ ಗರ್ಭಿಣಿಯರ ಪಾಲಿಗೆ ಮರೀಚಿಕೆಯಾಗಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟಿಕಲ್ಲೂರು ಮೇಘರಾಜ್‌ ದೂರಿದ್ದಾರೆ.

ಈ ಯೋಜನೆ ಕೇಂದ್ರ ಮಹಿಳ ಮತ್ತು ಮಕ್ಕಳ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿಯರಲ್ಲಿ ಪೌಷ್ಟಿಕತೆ ಹೆಚ್ಚಿಸಲು ನೆರವಾಗುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಯೋಜನೆಗೆ ಉತ್ತೇಜನ ನೀಡದೆ, ಈ ಯೋಜನೆಯನ್ನು ನಿರ್ಲಕ್ಷಿಸಿದೆ. ಈ ಯೋಜನೆಗೆ ಅಗತ್ಯವುಳ್ಳ ಹಣವನ್ನು ಕೂಡಲೇ ಬಿಡುಗಡೆ ಮಾಡಲು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

click me!