ರೈತರಿಗೆ ಹೋಗಬೇಕಾದ ಪರಿಹಾರ ಏರ್‌ಟೆಲ್‌ಗೆ: ಹಣ ಪಡೆಯಲು ಪರದಾಟ

By Kannadaprabha NewsFirst Published Jun 5, 2020, 7:37 AM IST
Highlights

ಕೆಲ ರೈತರಿಂದ ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ಗೆ ಆಧಾರ್‌ ಜೋಡಣೆ| ಹೀಗಾಗಿ ಸರ್ಕಾರದ ಪರಿಹಾರ ಏರ್‌ಟೆಲ್‌ ಪೇಮೆಂಟ್‌ ಖಾತೆಗೆ| ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ನ ಶಾಖೆಗಳು ಇಲ್ಲ| ಏರ್‌ಟೆಲ್‌ಗೆ ನೋಟಿಸ್‌, ಹಣಕ್ಕಾಗಿ ಕ್ರಮ: ಬಿ.ಸಿ. ಪಾಟೀಲ್‌|

ಬೆಂಗಳೂರು(ಜೂ.05): ರಾಜ್ಯದ ಕೆಲವು ರೈತರು ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ಗಳಿಗೆ ಆಧಾರ್‌ ಕಾರ್ಡ್‌ ಜೋಡಣೆ ಮಾಡಿಕೊಂಡ ಪರಿಣಾಮ ಸರ್ಕಾರ ನೀಡಿದ ಪರಿಹಾರ ಧನ ಸುಲಭವಾಗಿ ಸಿಗದಂತಾಗಿದೆ. ಈ ಸಂಬಂಧ ಏರ್‌ಟೆಲ್‌ ಕಂಪನಿಗೆ ನೊಟೀಸ್‌ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲವರು ಆಧಾರ್‌ ಸಂಖ್ಯೆಯನ್ನು ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ ಖಾತೆಗೆ ಜೋಡಣೆ ಮಾಡಿರುವುದರಿಂದ ಪರಿಹಾರದ ಹಣ ಆ ಬ್ಯಾಂಕ್‌ ಖಾತೆಗೆ ಹೋಗಿರುವುದು ತಮ್ಮ ಗಮನಕ್ಕೆ ಬಂದಿದೆ. ಅದು ಯಾವುದೇ ಶಾಖೆಗಳನ್ನು ಹೊಂದಿಲ್ಲ. ಹೀಗಾಗಿ ಅದರ ಔಟ್‌ಲೆಟ್‌ಗಳಿಗೆ ಹೋಗಿ ಹಣ ಪಡೆಯಬೇಕಿದೆ. ಹಾವೇರಿಯಲ್ಲಿ 68 ರೈತರ ಹಣ ಏರ್‌ಟೆಲ್‌ ಕಂಪನಿಗೆ ಹೋಗಿದೆ. ಈಗ ಹಣ ವಾಪಸ್‌ ಪಡೆಯಬೇಕೆಂದರೆ ತಹಶೀಲ್ದಾರ್‌ ಪತ್ರ ಬೇಕು. ನಾವು ನೇರವಾಗಿ ಏರ್‌ಟೆಲ್‌ ಕಂಪನಿಗೆ ಆದೇಶ ಕೊಡಲು ಬರುವುದಿಲ್ಲ. ಬೇರೆ ಜಿಲ್ಲೆಗಳಲ್ಲಿಯೂ ಇಂತಹದ್ದೆ ಘಟನೆ ನಡೆದಿದೆ. ಇದನ್ನು ಪತ್ತೆ ಹಚ್ಚಲಾಗಿದ್ದು, ಏರ್‌ಟೆಲ್‌ ಕಂಪನಿಗೆ ನೊಟೀಸ್‌ ನೀಡಲಾಗುವುದು. ಈ ಸಂಬಂಧ ಅಧಿಕಾರಿಗಳ ಜತೆ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂದು ಚರ್ಚಿಸಿ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಹೋಂ ಗಾರ್ಡ್‌ಗಳನ್ನ ಕೆಲಸದಿಂದ ತೆಗೆಯಲ್ಲ: ಗೃಹ ಸಚಿವ ಬೊಮ್ಮಾಯಿ

ಆಧಾರ್‌ ಜೋಡಣೆಗೆ ಮನವಿ:

ಮೆಕ್ಕೆ ಜೋಳ ಬೆಳೆದ ರೈತರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಲಾ ಐದು ಸಾವಿರ ರು. ಪರಿಹಾರ ಧನದ ಮೊದಲ ಕಂತು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಆನ್‌ಲೈನ್‌ ಮೂಲಕ ಪರಿಹಾರ ಯೋಜನೆಗೆ ಚಾಲನೆ ನೀಡಲಾಗಿದೆ. ಚಾಲ್ತಿಯಲ್ಲಿರುವ ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ಸಂಖ್ಯೆ ಜೋಡಣೆ ಮಾಡಿದ ರೈತರಿಗೆ ಪರಿಹಾರ ಹೋಗಿದೆ. ಜೋಡಣೆ ಮಾಡದವರಿಗೆ ಪರಿಹಾರ ಹೋಗಿಲ್ಲ ಎಂದು ಬಿ.ಸಿ. ಪಾಟೀಲ್‌ ಸ್ಪಷ್ಟಪಡಿಸಿದರು. ಸರ್ಕಾರದ ವಿವಿಧ ಯೋಜನೆಗಳ ಅನುಕೂಲ ಪಡೆದುಕೊಳ್ಳಲು ರೈತರು ಆದಷ್ಟುಬೇಗ ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಕಲಿ ಬೀಜ ಮಾರಾಟ ಜಾಲ ಪತ್ತೆ:

ವಿಚಕ್ಷಣಾ ದಳ ನಡೆಸಿದ ಕಾರ್ಯಾಚರಣೆಯಿಂದ ನಕಲಿ ಬೀಜ ಮಾರಾಟ ಪತ್ತೆ ಮುಂದುವರಿದ್ದು, ಮೆಕ್ಕೆ ಜೋಳದಂತೆ ನಕಲಿ ಹತ್ತಿಬೀಜ ಮಾರಾಟ ಜಾಲವೂ ಪತ್ತೆಯಾಗಿದೆ. ರಾಯಚೂರಿನ ತುರುವೆಹಾಳದಲ್ಲಿ ಆಂಧ್ರ ಮೂಲಕ ಖಾಸಗಿ ಕಂಪನಿಗೆ ಸೇರಿದ ಮೈ ಸೀಡ್ಸ್‌ ಹೆಸರಿನ ಕಳಪೆ 100 ಕೆ.ಜಿ.ಕಳಪೆ ಹತ್ತಿ ಬೀಜ ಪ್ಯಾಕೇಟ್‌ ವಶಪಡಿಸಿಕೊಳ್ಳಲಾಗಿದೆ. 15 ದಿನಗಳ ಹಿಂದೆ ಈ ಖಾಸಗಿ ಕಂಪನಿಯಿಂದ ಬೀಜ ಕೊಂಡು ಬಿತ್ತಿದ ರೈತರಿಗೆ ಸಸಿ ಬಂದಿಲ್ಲ. ಇದನ್ನು ಗಮನಿಸಿದ ವಿಚಕ್ಷಣ ದಳ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅದೇ ರೀತಿ ಯಾದಗಿರಿಯ ಗೋದಾಮಿನಲ್ಲಿ ಹೈದರಾಬಾದ್‌ ಮೂಲದ ಕಂಪನಿಯೊಂದು ಅಕ್ರಮವಾಗಿ ದಾಸ್ತಾನು ಮಾಡಿದ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ನಡೆಸಿದ ದಾಳಿಯಲ್ಲಿ ಸುಮಾರು 34,595 ಕ್ವಿಂಟಾಲ್‌ ಹತ್ತಿಬೀಜ ವಶಪಡಿಸಿಕೊಳ್ಳಲಾಗಿದೆ ಎಂದರು.

ವಶಪಡಿಸಿಕೊಂಡ ಹತ್ತಿಬೀಜಗಳನ್ನು ಗುಣಮಟ್ಟಪತ್ತೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
 

click me!