
ಬೆಂಗಳೂರು(ಜು.11): ಅಗ್ರಿಕಲ್ಚರಲ್ ಪಿಹೆಚ್‌ಡಿ, ಎಂಎಸ್‌ಸಿ, ಡಾಕ್ಟರೇಟ್ ಪರೀಕ್ಷೆಗಳನ್ನ ಆಗಸ್ಟ್ ತಿಂಗಳಿಗೆ ಮುಂದೂಡಲು ನಿರ್ಧರಿಸಲಾಗಿದೆ. ಮುಂದಿನ ವರ್ಷದ ಪ್ರವೇಶದ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ಸಪ್ಟೆಂಬರ್ ಬಳಿಕ ಇದನ್ನು ತೀರ್ಮಾನ ಮಾಡುತ್ತೇವೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಅವರು ಹೇಳಿದ್ದಾರೆ.
ನಗರದಲ್ಲಿ ಇಂದು(ಶನಿವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸಪೇಟೆಯಲ್ಲಿ ಜಿಂದಾಲ್ ಕಂಪನಿಯ ನೌಕರರಿಗೆ ಕೊರೋನಾ ವೈರಸ್ ಹೆಚ್ಚಾಗಿ ಕಾಣಿಸಿಕೊಂಡಿದೆ. ಕೆಲವು ಕಡೆ ಲ್ಯಾಬ್ ರಿಪೋರ್ಟ್ ತಡವಾಗುತ್ತಿದೆ. ಕೊಪ್ಪಳದಲ್ಲಿ ಪ್ರತಿದಿನ 500 ಜನರ ಸ್ವ್ಯಾಬ್ ಪರಿಕ್ಷೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕೊರೋನಾ ವೈರಸ್ ಹಾಕುವ ನಿಟ್ಟಿನಲ್ಲಿ ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್ ಹಾಕುವ ಬಗ್ಗೆ ಸರ್ಕಾರದಲ್ಲಿ ಯಾವುದೇ ಚಿಂತನೆ ಇಲ್ಲ. ಶನಿವಾರವೂ ಲಾಕ್‌ಡೌನ್ ಸೂಕ್ತ ಅಲ್ಲ, ಲಾಕ್‌ಡೌನ್ ಸೂಕ್ತ ಪರಿಹಾರವೂ ಅಲ್ಲ. ಹೀಗಾಗಿ ಎರಡು ದಿನಕ್ಕಿಂತ ಒಂದು ದಿನ ಲಾಕ್‌ಡೌನ್ ಸರಿಯಾದ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.
ಪಿಪಿಇ ಕಿಟ್ ಖರೀದಿಯಲ್ಲಿ ಅವ್ಯವಹಾರ; ಆರೋಗ್ಯ ಇಲಾಖೆ ಹೇಳುವುದೇನು?
ಕೋವಿಡ್ ಪರಿಕರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೊನ್ನೆ ಕ್ಯಾಬಿನೆಟ್‌ನಲ್ಲಿ ಕೂಡ ಈ ಬಗ್ಗೆ ಚರ್ಚೆ ಆಗಿದೆ. ಆದ್ರೆ ಈವರೆಗೆ 500-600 ಕೋಟಿಯಷ್ಟು ಮಾತ್ರ ಖರೀದಿ ಆಗಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಅವರೇ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಹೇಳಿ ಅಂತಾನೂ ಸಿಎಂ ಹೇಳಿದ್ದಾರೆ. ಲೆಕ್ಕ ಕೊಡಿ ಅಂತ ಶುರು ಮಾಡಿರುವ ಅಭಿಯಾನ ಕೇವಲ ರಾಜಕೀಯದ ಗಿಮಿಕ್ ಅಗಿದೆ. ಇದರಿಂದ ಯಾವುದೇ ಹುರುಳಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ಕೋವಿಡ್ ತಡೆಯುವಲ್ಲಿ ಕಾಂಗ್ರೆಸ್‌ನವರು ಜೊತೆ ಕೈಜೋಡಿಸಲಿ. ಕೊರೋನಾ ಯಾವುದೇ ಒಂದು ಪಕ್ಷ ತಂದಿರೋದು ಅಲ್ಲ. ಕೊರೋನಾ ಹೆಚ್ಚಾಗಲು ತಬ್ಲಿಘಿಗಳು ಕಾರಣರಾಗಿದ್ದಾರೆ. ಕಾಂಗ್ರೆಸ್ ಇವರಿಗೆ ಬೆಂಬಲ ನೀಡುತ್ತದೆ. ಹೀಗಾಗಿ ಕೊರೋನಾ ಕಾಂಗ್ರೆಸ್ ಎನ್ನುವಂತಾಗಿದೆ. ಮೊದಲೇ ತಬ್ಲಿಘಿಗಳು ಸರಿಯಾಗಿ ಟೆಸ್ಟ್ ಮಾಡಿಸಿದ್ರೆ ಇಷ್ಟೊಂದು ಆಗ್ತಾ ಇತ್ತಾ? ಕಾಂಗ್ರೆಸ್ ಇಂಥವರಿಗೆ ಬೆಂಬಲ ನೀಡುತ್ತಾರೆ. ಆದರೆ, ಇಲ್ಲಿ ಲೆಕ್ಕ ಕೊಡಿ ಅಭಿಯಾನ ಮಾಡುತ್ತಾರೆ ಎಂದು ಹೇಳುವ ಮೂಲಕ ಸಚಿವ ಬಿ. ಸಿ.ಪಾಟೀಲ್ ಅವರು ಕಾಂಗ್ರೆಸ್ ನಾಯಕರ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ