ಕೊರೋನಾ ಮಣಿಸಿದ ಬೆಂಗಳೂರಿನ 93ರ ವೃದ್ಧ: ಮಧುಮೇಹ ಇದ್ದರೂ ಗುಣಮುಖ!

By Kannadaprabha NewsFirst Published Jul 11, 2020, 7:43 AM IST
Highlights

ಕೊರೋನಾವನ್ನು ಗೆದ್ದ ಬೆಂಗ್ಳೂರಿನ 93ರ ವೃದ್ಧ| ಮಧುಮೇಹ ಇದ್ದರೂ ಗುಣಮುಖ| ಸೋಂಕಿಂದ ಚೇತರಿಸಿದ ರಾಜ್ಯದ 3ನೇ ಹಿರಿ ವ್ಯಕ್ತಿ| 

ಬೆಂಗಳೂರು(ಜು.11): ಕೊರೋನಾದಿಂದ ವೃದ್ಧರಿಗೆ ಅಪಾಯ ಎಂಬ ಸುದ್ದಿಗಳ ನಡುವೆಯೇ ಮತ್ತೊಂದು ಆಶಾದಾಯಕ ಸಮಾಚಾರ ಲಭಿಸಿದೆ. ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಶಿಕ್ಷಣ ತಜ್ಞರಾದ 93 ವರ್ಷದ ವೃದ್ಧರೊಬ್ಬರು ಕೋವಿಡ್‌ 19 ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ!

ತನ್ಮೂಲಕ ಕೊರೋನಾ ಜಯಿಸಿದ ರಾಜ್ಯದ 3ನೆ ಅತಿ ಹಿರಿಯರಲ್ಲಿ ಒಬ್ಬರಾಗಿದ್ದಾರೆ. ಅಷ್ಟೆಅಲ್ಲ, ಮಧುಮೇಹದಂತಹ ಕೋ ಮಾರ್ಬಿಡ್‌ ಅನಾರೋಗ್ಯ ಹೊಂದಿದ್ದರೂ ರೋಗ ನಿರೋಧಕ ಶಕ್ತಿ ಕಡಿಮೆಯಿದ್ದರೂ ಸಕಾಲದಲ್ಲಿ ದೊರಕಿದ ಚಿಕಿತ್ಸೆಯಿಂದಾಗಿ ಈ ವಯೋವೃದ್ಧ ಕರೋನಾವನ್ನು ಮಣಿಸಿದ್ದಾರೆ. ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ 96 ರ್ವದ ಅಜ್ಜಿಯೊಬ್ಬರು ಗುಣಮುಖರಾಗಿ, ಕೊರೋನಾ ಗೆದ್ದ 2ನೇ ಹಿರಿಯ ವ್ಯಕ್ತಿ ಎನ್ನಿಸಿಕೊಂಡಿದ್ದರು.

96ರ ಇಳಿ ವಯಸ್ಸಲ್ಲೂ ಕೊರೋನಾ ಗೆದ್ದು ಬಂದ್ರು ಅಜ್ಜಿ..! ಆತ್ಮಸ್ಥೈರ್ಯವೇ ಬಲ

ಸುಸ್ತು, ಜ್ವರ:

ಸುಸ್ತು, ಜ್ವರ ಎಂಬ ಕಾರಣದಿಂದ 93 ವರ್ಷದ ಈ ಹಿರಿಯರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ನಡೆಸಿದ ಕೋವಿಡ್‌ 19 ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್‌ ಬಂದಿದ್ದರಿಂದ ಯಶವಂತಪುರ ಸಮೀಪದ ಸ್ಪಶ್‌ರ್‍ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಇದೀಗ ಅವರು ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಎಂದು ಸ್ಪಶ್‌ರ್‍ ಆಸ್ಪತ್ರೆಯ ವೈದ್ಯರಾದ ಡಾ. ಉಲ್ಲಾಸ್‌ ಗೋಪಾಲಕೃಷ್ಣ ಅವರು, ‘ನಮ್ಮೊಂದಿಗೆ 19 ದಿನಗಳಿದ್ದರು. ಅವರಿಗೆ ಕಿವಿ ಕೇಳಿಸುತ್ತಿರಲಿಲ್ಲ. ಕಣ್ಣು ಸಹ ಕಾಣಿಸುತ್ತಿರಲಿಲ್ಲ. ನಾವು ಪಿಪಿಇ ಕಿಟ್‌ ಧರಿಸಿ ಅವರಿಗೆ ಚಿಕಿತ್ಸೆ ನೀಡುವಾಗ ಗೊಂದಲಕ್ಕೆ ಒಳಗಾಗುತ್ತಿದ್ದರು. ತಮ್ಮ ಸುತ್ತಮುತ್ತ ವಿಚಿತ್ರವಾಗಿ ವೇಷ ಧರಿಸಿ ನಿಂತಿದ್ದಾರೆ ಎಂದು ಗಲಿಬಿಲಿಗೊಳ್ಳುತ್ತಿದ್ದರು. ನಾವು ಟ್ಯಾಬ್‌ನಲ್ಲಿ ಮನೆಯವರೊಂದಿಗೆ ವಿಡಿಯೋ ಕಾಲ್‌ ಮಾಡಿ ತೋರಿಸುತ್ತಿದ್ದಾಗ, ಗೆಲುವಾಗುತ್ತಿದ್ದರು. ಯಾವಾಗ ಮನೆಗೆ ಕರೆದೊಯ್ಯುವಿರಿ ಎಂದು ಖುಷಿಯಿಂದ ಕೇಳುತ್ತಿದ್ದರು’ ಎಂದು ಮಾಹಿತಿ ನೀಡಿದರು.

ಏನೂ ಆಗಲ್ಲ ಕಣ್ರಪ್ಪ, ಒಂದಿಷ್ಟು ಗಟ್ಟಿ ಮನಸ್ಸು ಮಾಡ್ಕೊಳ್ಳಿ: ಕೊರೋನಾ ಮಣಿಸಿದ 96ರ ಅಜ್ಜಿ!

‘ವಾಸ್ತವವಾಗಿ ಆ ಹಿರಿಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರಲಿಲ್ಲ. ಹಾಸಿಯಿಂದ ಎದ್ದು ಕೂರುವಷ್ಟೂಶಕ್ತರಾಗಿರಲಿಲ್ಲ. ದಿನನಿತ್ಯದ ಚಟುವಟಿಕೆಗಳಿಗೆ ಇತರರ ಮೇಲೆ ಅವಲಂಬಿತರಾಗಿದ್ದರು. ಜತೆಗೆ ಅವರು ಮಧುಮೇಹಕ್ಕೆ ಔಷಧ ತೆಗೆದುಕೊಳ್ಳುತ್ತಿದ್ದರು. ನಾವು ಸ್ಟಿರಾಯಿಡ್‌ ಕೊಡುತ್ತಿದ್ದರಿಂದ ಅವರ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತಿತ್ತು. ಅದನ್ನು ನಿಯಂತ್ರಿಸಲು ಇನ್ಸುಲಿನ್‌ ಇಂಜೆಕ್ಷನ್‌ ಕೊಡಬೇಕಾಗುತ್ತಿತ್ತು. ಜತೆಗೆ ಫಿಸಿಯೋಥೆರಪಿ ಮಾಡಲು ಕಷ್ಟವಾಗುತ್ತಿತ್ತು. ಅಲ್ಲದೆ, ಈ ಹಿರಿಯರು ಸದಾ ಮಲಗೇ ಇರುತ್ತಿದ್ದರಿಂದ ಒಂದು ವಾರ ಕಾಲ ಹೈ ಫೆä್ಲೕ ಆ್ಯಕ್ಸಿಜನ್‌ ನೀಡಲಾಗುತ್ತಿತ್ತು. ಕೋವಿಡ್‌-19 ವಾರ್ಡ್‌ನಲ್ಲೇ ಗುಣಮುಖರಾಗುವವರೆಗೆ ಚಿಕಿತ್ಸೆ ನೀಡಲಾಯಿತು. ಕಳೆದ 8-10 ದಿನಗಳಲ್ಲಿ ಆರೋಗ್ಯ ಸುಧಾರಣೆ ಕಂಡು ಬಂದಿದ್ದರಿಂದ ಜು.9ರಂದು ಡಿಸ್‌ಚಾಜ್‌ರ್‍ ಮಾಡಲಾಗಿದೆ’ ಎಂದು ತಿಳಿಸಿದರು.

ಭಯ ಬೇಡ:

‘ಜನರು ಕೊರೋನಾ ಬಂದಿದೆ ಎಂದು ಭಯ ಬೀಳಬಾರದು. ಯಾವುದೇ ಅನಾರೋಗ್ಯ ಲಕ್ಷಣಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಆಸ್ಪತ್ರೆಗೆ ಬಂದವರೆಲ್ಲ ಸಾವನ್ನಪ್ಪುತ್ತಾರೆ ಎಂಬ ಮನೋಭಾವ ಸರಿಯಲ್ಲ. ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆದರೂ ಚಿಕಿತ್ಸೆ ಫಲಕಾರಿಯಾಗುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾರೇ ಆದರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಈ ವೈರಸ್‌ನಿಂದ ಮುಕ್ತಿ ಪಡೆಯಬಹುದು’ ಎಂದು ಡಾ.ಉಲ್ಲಾಸ್‌ ಹೇಳಿದರು.

click me!