ಬೆಳ್ಳಾರೆಯಲ್ಲಿ ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿ ನೀಡಲಿದ್ದಾರೆ. ಇನ್ನು ಪ್ರವೀಣ್ ಕುಟುಂಬಕ್ಕೆ ಅಶ್ವತ್ಥ್ ನಾರಾಯಣ ವೈಯಕ್ತಿಕ ಪರಿಹಾರ ಘೋಷಣೆ ಮಾಡಿದ್ದಾರೆ.
ಬೆಂಗಳೂರು, (ಜುಲೈ,28): ಸಮಾಜ ವಿರೋಧಿ ಶಕ್ತಿಗಳ ಅಮಾನುಷ ಕ್ರೌರ್ಯಕ್ಕೆ ಬಲಿಯಾದ ಬಿಜೆಪಿ ಕಾರ್ಯಕರ್ತ ಮತ್ತು ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ವೈಯಕ್ತಿಕ ವಾಗಿ 10 ಲಕ್ಷ ರೂ. ನೆರವು ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿಇಂದು (ಗುರುವಾರ) ಸುದ್ದಿಗಾರರ ಜತೆ ಮಾತನಾಡಿದ ಅವರು, 10 ಲಕ್ಷ ರೂ.ಗಳ ಚೆಕ್ ಅನ್ನು ಪ್ರವೀಣ್ ಅವರ ಕುಟುಂಬಕ್ಕೆ ತಲುಪಿಸಲಾಗುವುದು. ಅವರ ಬಲಿದಾನಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ. ಇದನ್ನು ನೆರವು ಎಂದು ಹೇಳಲು ಇಷ್ಟ ಪಡುವುದಿಲ್ಲ. ಇದು ನನ್ನ ಕರ್ತವ್ಯವಾಗಿದೆ ಗದ್ಗದಿತರಾದರು.
ಪ್ರವೀಣ್ ನೆಟ್ಟಾರು ಹತ್ಯೆ: ಇಬ್ಬರು ಪ್ರಮುಖ ಆರೋಪಿಗಳ ಬಂಧನ
ಪ್ರವೀಣ್ ಅವರ ಹಂತಕರು ಎಲ್ಲೇ ಇದ್ದರೂ ಕಠಿಣ ಕ್ರಮ ಜರುಗಿಸಲಾಗುವುದು. ಪಕ್ಷದ ಕಾರ್ಯಕರ್ತರ ಆಕ್ರೋಶ ನನಗೆ ಅರ್ಥವಾಗುತ್ತದೆ. ಅಪರಾಧಿಗಳ ಹೆಡೆಮುರಿ ಕಟ್ಟುವ ಶಕ್ತಿ ಬಿಜೆಪಿ ಸರಕಾರಕ್ಕಿದೆ ಎಂದರು.
ಪ್ರವೀಣ್ ಮನೆಗೆ ಬೊಮ್ಮಾಯಿ ಭೇಟಿ
ಮಂಗಳವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರ್ ನಿವಾಸಕ್ಕೆ ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇತರೆ ಬಿಜೆಪಿ ನಾಯಕರು ಪ್ರವೀಣ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರ ಕುಟುಂಬಕ್ಕೆ ಪರಿಹಾರ ನೀಡುವ ಸಾಧ್ಯತೆಗಳಿವೆ.
ಇಬ್ಬರು ಆರೋಪಿಗಳ ಬಂಧನ
ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಸವಣೂರಿನ ಝಾಕೀರ್ ಮತ್ತು ಬೆಳ್ಳಾರೆಯ ಶಪೀಕ್ ಬಂಧಿತರು. ಇಬ್ಬರು ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಎಸ್ಪಿ ಹೃಷಿಕೇಶ್ ಸೋನಾವಣೆ ಹೇಳಿದ್ದಾರೆ.
ಬಿಜೆಪಿ ಯುವ ಮುಖಂಡನಾಗಿದ್ದ ಪ್ರವೀಣ್ ನೆಟ್ಟಾರು ನನ್ನು ಮಾರಕಾಸ್ತ್ರದಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ಕೊಲೆಯಾಗಿತ್ತು ನಡೆದಿತ್ತು. ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಪ್ರವೀಣ್ ನೆಟ್ಟಾರು ಚಿಕನ್ ಅಂಗಡಿ ನಡೆಸುತ್ತಿದ್ದ.
ಕೆಲ ದಿನಗಳ ಹಿಂದಷ್ಟೇ ಗುಂಪು ಹಲ್ಲೆಗೊಳಗಾಗಿ ಮೃತಪಟ್ಟಯುವಕನೊಬ್ಬನ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದ್ದು ಆಮಾಯಕನ ಕೊಲೆಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಪುತ್ತೂರಿನಲ್ಲಿ ರಾತ್ರೋರಾತ್ರಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಮನೆ ನಿರ್ಮಾಣವಾಗಬೇಕಿದ್ದ ಸ್ಥಳದಲ್ಲೇ ಮಗನ ಅಂತ್ಯಸಂಸ್ಕಾರ: ಬೆಳ್ಳಾರೆ ಸಮೀಪದ ನೆಟ್ಟಾರಿನ ಶೇಖರ ಪೂಜಾರಿ ಮತ್ತು ದಂಪತಿಯ ನಾಲ್ವರು ಮಕ್ಕಳಲ್ಲಿ ಕಿರಿಯವನಾದ ಪ್ರವೀಣ್ ಮನೆಗೆ ಆಧಾರಸ್ತಂಭವಾಗಬೇಕಿದ್ದ ಯುವಕ. ನಾಲ್ವರು ಮಕ್ಕಳ ಪೈಕಿ ಬಾಕಿ ಮೂವರೂ ಅಕ್ಕಂದಿರು, ಪ್ರವೀಣ್ ಏಕಮಾತ್ರ ಪುತ್ರರಾಗಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆಯಿಂದ ಭುಗಿಲೆದ್ದ ಆಕ್ರೋಶ; ಬಿಜೆಪಿ ಕಾರ್ಯಕರ್ತರು ಬೇರೆ ಪಕ್ಷಗಳಿಗೆ ಶಿಫ್ಟ್ ಆಗ್ತಾರಾ?
ಪ್ರವೀಣ್ ವಿದ್ಯಾಭ್ಯಾಸದ ಬಳಿಕ ಬೇರೆ ಕಡೆ ಉದ್ಯೋಗ ಮಾಡಿಕೊಂಡಿದ್ದು, ಬಳಿಕ ಚಿಕನ್ ಫಾರ್ಮೊಂದರಲ್ಲಿ ಮ್ಯಾನೇಜರ್ ಆಗಿದ್ದರು. ಕೆಲವು ಸಮಯದ ಹಿಂದಷ್ಟೇ ಅಕ್ಷಯ ಚಿಕನ್ ಫಾಮ್‌ರ್ ಎಂಬ ಸ್ವಂತ ಉದ್ಯಮವನ್ನು ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಸ್ಥಾಪಿಸಿದ್ದರು. ಇದರ ಜೊತೆಗೆ ಇನ್ನೋವಾ ಇಟ್ಟುಕೊಂಡು ಟ್ರಾವೆಲ್ಸ್ ಕೂಡಾ ನಡೆಸುತ್ತಿದ್ದರು.
ರಾಜಕೀಯ ಪಕ್ಷ ಹಾಗೂ ಹಿಂದೂ ಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರೂ ಪರಿಸರದ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದ ಪ್ರವೀಣ್ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು. ಸಮಾಜದ ಬೇರೆ ಬೇರೆ ಘಟನೆಗಳಿಗೆ ತಕ್ಷಣ ಪ್ರತಿಕ್ರಿಯಿಸುತ್ತಿದ್ದರು. ಬಿಲ್ಲವ ಯುವ ವಾಹಿನಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.