ಸಚಿವ ಅಶ್ವತ್ಥನಾರಾಯಣರಿಂದ 3 ಇಲಾಖೆಯಲ್ಲಿ ಕಡತ ಯಜ್ಞ!

By Kannadaprabha NewsFirst Published Jul 28, 2022, 12:33 PM IST
Highlights

 ತಮ್ಮ ಅಧೀನದಲ್ಲಿ ಬರುವ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗಳಲ್ಲಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಅವರು ನೂರಕ್ಕೆ ನೂರರಷ್ಟು ಕಡತ ವಿಲೇವಾರಿ ಮಾಡಿದ್ದಾರೆ. 

ಬೆಂಗಳೂರು (ಜು.28): ತಮ್ಮ ಅಧೀನದಲ್ಲಿ ಬರುವ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗಳಲ್ಲಿ ನೂರಕ್ಕೆ ನೂರರಷ್ಟು ಕಡತ ವಿಲೇವಾರಿ ಮಾಡುವ ಮೂಲಕ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಅವರು ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ  1 ವರ್ಷ ಪೂರೈಸಿದನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಎರಡು ವರ್ಷಗಳ ಆಳ್ವಿಕೆ ಪೂರೈಸಿದಾಗಲೂ ಇವರು ಇದೇ ಸಾಧನೆ ಮಾಡಿ, ಗಮನ ಸೆಳೆದಿದ್ದರು. ಬುಧವಾರ ರಾತ್ರಿ 8ರ ಹೊತ್ತಿಗೆ ಅಶ್ವತ್ಥನಾರಾಯಣ ಅವರು ನಿರ್ವಹಿಸುತ್ತಿರುವ ಮೂರೂ ಇಲಾಖೆಗಳಲ್ಲಿ ಯಾವೊಂದು ಕಡತವೂ ವಿಲೇವಾರಿಗೆ ಬಾಕಿ ಇರಲಿಲ್ಲ. ಹೀಗಾಗಿ ಗುರುವಾರದಿಂದ ಈ ಇಲಾಖೆಗಳಲ್ಲಿ ಹೊಸ ಕಡತಗಳ ಪರಿಶೀಲನೆ ಮತ್ತು ವಿಲೇವಾರಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ‘ಬೊಮ್ಮಾಯಿ ಅವರ ನೇತೃತ್ವದ ಸರಕಾರಕ್ಕೆ ಒಂದು ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ನನ್ನ ಅಡಿಯಲ್ಲಿರುವ ಇಲಾಖೆಗಳು ಮಾಡಿರುವ ಸಾಧನೆ ಗಮನಾರ್ಹವಾಗಿದೆ.ನನಗೆ ಬರುವ ಯಾವ ಕಡತಗಳನ್ನೂ ಅನಗತ್ಯವಾಗಿ ಇಟ್ಟುಕೊಳ್ಳಬಾರದು ಎನ್ನುವ ನಿಯಮವನ್ನು ನನ್ನ ಇಲಾಖೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಸುಗಮ ಮತ್ತು ಜನಪರ ಆಡಳಿತಕ್ಕೆ ಬಿಜೆಪಿ ಬದ್ಧವಾಗಿರುವುದರ ಸಂಕೇತವಿದು’ ಎಂದು ಅಶ್ವತ್ಥನಾರಾಯಣ ಪ್ರಕಟಣೆಯಲ್ಲಿ ಹೇಳಿದ್ದಾರೆ.

 ಐಐಟಿಗಳ ರೀತಿ ರಾಜ್ಯದಲ್ಲಿ ಏಳು ಕೆಐಟಿ ಸ್ಥಾಪನೆ:  ರಾಜ್ಯದ 14 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಪೈಕಿ ಏಳು ಕಾಲೇಜುಗಳನ್ನು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗಳ (ಐಐಟಿ) ಮಾದರಿಯಲ್ಲಿ ‘ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ’ಗಳಾಗಿ (ಕೆಐಟಿ) ಉನ್ನತೀಕರಿಸುವ ಸಂಬಂಧ ಸಮಗ್ರ ವಿಸ್ತೃತ ಯೋಜನಾ ವರದಿ ಸಲ್ಲಿಸಲು ಪ್ರೊ.ಸಡಗೋಪನ್‌ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

Latest Videos

ಜುಲೈ 30ರಂದು ಸಿಇಟಿ ಫಲಿತಾಂಶ: ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಮಾಹಿತಿ

ಬುಧವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಯೋಜನೆಯ ಅಡಿಯಲ್ಲಿ ಹಾಸನ, ಹಾವೇರಿ, ಕೆ.ಆರ್‌. ಪೇಟೆ, ಕಾರವಾರ, ರಾಮನಗರ ಮತ್ತು ತಳಕಲ್‌ನಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ಬೆಂಗಳೂರಿನ ಶ್ರೀ ಕೃಷ್ಣರಾಜೇಂದ್ರ ಸಿಲ್ವರ್‌ ಜ್ಯೂಬಿಲಿ ಟೆಕ್ನಾಲಜಿಕಲ್‌ ಇನ್ಸ್‌ಟಿಟ್ಯೂಟ್‌ ಅನ್ನು (ಎಸ್‌ಕೆಎಸ್‌ಜೆಐಟಿ) ಕೆಐಟಿ ಆಗಿ ಉನ್ನತೀಕರಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಡಿಪಿಆರ್‌ ಸಿದ್ಧಪಡಿಸಲು ಬೆಂಗಳೂರಿನ ಐಐಐಟಿ ಸ್ಥಾಪಕ ನಿರ್ದೇಶಕ ಪ್ರೊ.ಸಡಗೋಪಾಲನ್‌ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಪ್ರೊ.ಎಲ್‌.ಎಸ್‌. ಗಣೇಶ್‌, ಪ್ರೊ.ಸಿ ರಾಜೇಂದ್ರ, ಪ್ರೊ. ರಾಮಗೋಪಾಲ್‌ರಾವ್‌, ಪ್ರೊ. ಚಕ್ರವರ್ತಿ, ಪ್ರೊ.ಮಣೀಂದ್ರ ಅಗರವಾಲ್‌ ಮತ್ತು ಪ್ರೊ. ವೈ.ನರಹರಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಸಮಿತಿಗೆ ಎರಡು ತಿಂಗಳಲ್ಲಿ ಡಿಪಿಆರ್‌ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

CHAMARAJANAGAR: ಸಚಿವ ವಿ.ಸೋಮಣ್ಣ ಅಭಿಮಾನಿಗಳಿಂದ ಸರ್ಕಾರಿ ಕಾಲೇಜಿಗೆ ರೋಬೋಟಿಕ್ ಪ್ರಯೋಗಾಲಯ ಕೊಡುಗೆ

ಈ ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ ಹೆಚ್ಚಿನ ಬೇಡಿಕೆ ಮತ್ತು ಉದ್ಯೋಗಾವಕಾಶ ಇರುವ ತಲಾ 2 ವಿಭಾಗಗಳನ್ನು ಕೆಐಟಿ ಆಗಿ ಬೆಳೆಸಲಾಗುವುದು. ಇವುಗಳಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಅತ್ಯುನ್ನತ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಉತ್ತೇಜನ ನೀಡುತ್ತದೆ. ಇದಕ್ಕಾಗಿ ವಿದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವ ಒಡಂಬಡಿಕೆಗಳನ್ನು ಈ ಕಾಲೇಜುಗಳು ಮಾಡಿಕೊಳ್ಳಲಿವೆ. ಈ ಮೂಲಕ ಇವುಗಳನ್ನು ಅಂತಾರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳನ್ನಾಗಿ ಮಾಡಲಾಗುವುದು. ಈ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಒಟ್ಟು 95 ಕೋಟಿ ರೂ. ಅಗತ್ಯವಿದ್ದು, ಈಗಾಗಲೇ 21 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

click me!