ಲೈಸನ್ಸ್‌ ಪಡೆಯಲು ಕ್ರಷರ್‌ಗಳಿಗೆ 90 ದಿನ ಗಡುವು

By Kannadaprabha NewsFirst Published Mar 30, 2021, 8:08 AM IST
Highlights

ಪರವಾನಗಿ ಪಡೆಯದ ಗಣಿ ಮತ್ತು ಕ್ರಷರ್‌ ಉದ್ಯಮದವರಿಗೆ 90 ದಿನಗಳಲ್ಲಿ ಪರವಾನಗಿ ಪಡೆಯುವಂತೆ ನಿರ್ದೇಶನ ನೀಡಲಾಗಿದೆ. 

 ಬೆಂಗಳೂರು (ಮಾ.30):  ಗಣಿ ಸುರಕ್ಷತಾ ಮಹಾನಿರ್ದೇಶನಾಲಯದ (ಡಿಸಿಎಂಎಸ್‌) ಪರವಾನಗಿ ಪಡೆಯದ ಗಣಿ ಮತ್ತು ಕ್ರಷರ್‌ ಉದ್ಯಮದವರಿಗೆ 90 ದಿನಗಳಲ್ಲಿ ಪರವಾನಗಿ ಪಡೆಯುವಂತೆ ನಿರ್ದೇಶನ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಘಟನೆ ಬಳಿಕ ರಾಜ್ಯದಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಉದ್ಯಮ ಸಾಕಷ್ಟುನಷ್ಟದಲ್ಲಿದೆ. ಆರ್ಥಿಕತೆ ದೃಷ್ಟಿಯಿಂದ ಸ್ತಬ್ಧಗೊಳಿಸಿರುವ ಗಣಿಗಾರಿಕೆಯನ್ನು ಪುನರಾರಂಭಿಸುವಂತೆ ಆಡಳಿತ ಪಕ್ಷ, ಪ್ರತಿಪಕ್ಷ ಮತ್ತು ಉದ್ಯಮದಿಂದ ಒತ್ತಾಯಗಳು ಕೇಳಿಬರುತ್ತಿದೆ. ರಾಜ್ಯದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಗಣಿ ಮತ್ತು ಕ್ರಷರ್‌ ಉದ್ಯಮ ಇದ್ದು, ಇದರಲ್ಲಿ ಶೇ.10ರಷ್ಟುಮಾತ್ರ ಪರವಾನಗಿ ಹೊಂದಿವೆ. ಶೇ.90ರಷ್ಟುಪರವಾನಗಿ ಪಡೆದುಕೊಂಡಿಲ್ಲ. ಹೀಗಾಗಿ 90 ದಿನದಲ್ಲಿ ಪರವಾನಗಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೇ, ಈ ಸಂಬಂಧ ಹೊಸ ನಿಯಮವನ್ನು ಸಹ ಜಾರಿ ಮಾಡಲಾಗುವುದು ಎಂದು ಹೇಳಿದರು.

ಗಣಿ ಮತ್ತು ಕ್ರಷರ್‌ ಉದ್ಯಮ ನಷ್ಟದಲ್ಲಿರುವ ಕಾರಣ ಸರ್ಕಾರದ ಬೊಕ್ಕಸಕ್ಕೆ ಸುಮಾರು 300 ಕೋಟಿ ರು.ಗಿಂತ ಹೆಚ್ಚು ನಷ್ಟವಾಗಿದೆ. ಈ ಎರಡು ಉದ್ಯಮಕ್ಕೆ ಸ್ಫೋಟಕ ವಸ್ತುಗಳನ್ನು ಬಳಸುವುದು ಅನಿವಾರ್ಯವಾಗಿದೆ. ಅಭಿವೃದ್ಧಿ ಕಾರ್ಯ ಮುಂದುವರೆಯಬೇಕಾದರೆ ಉದ್ಯಮ ಆರಂಭಿಸುವುದು ಅತ್ಯಗತ್ಯ. ಉದ್ಯಮ ಸ್ಥಗಿತಗೊಂಡಿರುವ ಕಾರಣದಿಂದಾಗಿ ಕಚ್ಚಾವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಹೊರರಾಜ್ಯದವರು ದುಬಾರಿ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಉದ್ದಿಮೆದಾರರು ತಮ್ಮ ಉದ್ಯಮ ಆರಂಭಿಸಬಹುದು ಎಂದರು.

ರಾಜ್ಯದಲ್ಲಿ ಶೀಘ್ರ ಹೊಸ ಮೈನಿಂಗ್‌ ಯೋಜನೆ: ಸಚಿವ ಮುರುಗೇಶ ನಿರಾಣಿ

ಗಣಿಗಾರಿಕೆ ವೇಳೆ 2 ಕೆ.ಜಿ. ಸ್ಫೋಟಕ ವಸ್ತುಗಳನ್ನು ಖುದ್ದು ವ್ಯಕ್ತಿಗಳು ಸ್ಫೋಟಿಸಲು ಡಿಸಿಎಂಎಸ್‌ನಿಂದ ಯಾವುದೇ ಅನುಮತಿ ಬೇಕಾಗಿಲ್ಲ. ಅಲ್ಲದೇ, 5 ಎಕರೆಗಿಂತ ಕಡಿಮೆ ಇರುವ ಜಾಗದಲ್ಲಿ ಗಣಿ ಮಾಡುವವರಿಗೆ ಡಿಸಿಎಂಎಸ್‌ನಿಂದ ಅನುಮತಿ ಪಡೆದುಕೊಳ್ಳಲು ವಿನಾಯಿತಿ ನೀಡುವಂತೆ ಮನವಿಗಳು ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಗಣಿ ಸ್ಫೋಟ ಮಾಡುವ ವಿಧಾನದ ಬಗ್ಗೆ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದ ಅವರು, ಶೀಘ್ರದಲ್ಲಿಯೇ ಹೊಸ ಗಣಿಗಾರಿಕೆ ನೀತಿ ಜಾರಿಗೊಳಿಸಲಾಗುವುದು. ಇದು ದೇಶಕ್ಕೆ ಅನ್ವಯವಾಗುವಂತಹ ನೀತಿಯಾಗಲಿದೆ. 10 ಲಕ್ಷ ರು.ದೊಳಗೆ ಮನೆ ನಿರ್ಮಿಸುವವರಿಗೆ ಮತ್ತು ಪ್ರತಿಯೊಬ್ಬರಿಗೂ ಕೈಗೆಟುವ ದರದಲ್ಲಿ ಮರಳು ಸಿಗುವಂತಹ ನೀತಿ ಜಾರಿಗೊಳಿಸಲಾಗುವುದು ಎಂದು ಸಚಿವರು ವಿವರಿಸಿದರು.

ಏ.17ರಿಂದ ಜೂ.11ರವರೆಗೆ ಗಣಿ ಅದಾಲತ್‌ :  ಗಣಿಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕಾಗಿ ಏ.17ರಿಂದ ಜೂ.11ರವರೆಗೆ ರಾಜ್ಯದ ಐದು ವಿಭಾಗದಲ್ಲಿ ಗಣಿ ಅದಾಲತ್‌ ಆಯೋಜಿಸಲು ತೀರ್ಮಾನಿಸಲಾಗಿದೆ. ಏ.17ರಂದು ಬೆಂಗಳೂರಲ್ಲಿ ಮೊದಲ ಗಣಿ ಅದಾಲತ್‌ ನಡೆಸಲಾಗುತ್ತದೆ. ನಂತರ ಬೆಳಗಾವಿಯಲ್ಲಿ ಏ.30ರಂದು ಗಣಿ ಅದಾಲತ್‌ ನಡೆಸಲಾಗುವುದು. ಮೇ 15ರಂದು ಮೈಸೂರಿನಲ್ಲಿ, ಮೇ 29ರಂದು ಕಲಬುರಗಿಯಲ್ಲಿ ಮತ್ತು ಜೂ.11ರಂದು ಮಂಗಳೂರಲ್ಲಿ ಗಣಿ ಅದಾಲತ್‌ ನಡೆಯಲಿದೆ ಎಂದು ಸಚಿವ ನಿರಾಣಿ ತಿಳಿಸಿದರು

click me!