3.32 ಲಕ್ಷ ಕೇಸ್ ಇತ್ಯರ್ಥ: ರಾಷ್ಟ್ರೀಯ ದಾಖಲೆ!

Published : Mar 30, 2021, 07:59 AM IST
3.32 ಲಕ್ಷ ಕೇಸ್ ಇತ್ಯರ್ಥ: ರಾಷ್ಟ್ರೀಯ ದಾಖಲೆ!

ಸಾರಾಂಶ

ರಾಜ್ಯದಲ್ಲಿ ಒಂದೇ ದಿನ 3.32 ಲಕ್ಷ ಕೇಸ್‌ ಇತ್ಯರ್ಥ!| ಲೋಕ ಅದಾಲತ್‌ನಲ್ಲಿ ದಾಖಲೆ ಕೇಸು ವಿಲೇವಾರಿ| ಕಕ್ಷಿದಾರರಿಗೆ 1033 ಕೋಟಿ ರು. ಪರಿಹಾರ ಪಾವತಿ: ನ್ಯಾ

ಬೆಂಗಳೂರು(ಮಾ.30): ರಾಜ್ಯದಾದ್ಯಂತ ಮಾ.27ರಂದು ನಡೆದ ‘ಮೆಗಾ ಲೋಕ ಅದಾಲತ್‌’ನಲ್ಲಿ ದಾಖಲೆಯ ಒಟ್ಟು 3.32 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಿ, ಒಟ್ಟು 1,033 ಕೋಟಿ ರು. ಪರಿಹಾರವನ್ನು ಪಾವತಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್‌ ತಿಳಿಸಿದ್ದಾರೆ.

ಸೋಮವಾರ ಹೈಕೋರ್ಟ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 57,235 ವ್ಯಾಜ್ಯ ಪೂರ್ವ ಮತ್ತು ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿದ್ದ 4,87,141 ಪ್ರಕರಣಗಳು ಸೇರಿ ಒಟ್ಟು 5,44,376 ಪ್ರಕರಣಗಳನ್ನು ಮೆಗಾ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಗುರುತಿಸಲಾಗಿತ್ತು. ಅದರಲ್ಲಿ ರಾಜ್ಯಾದ್ಯಂತ 963 ನ್ಯಾಯಪೀಠಗಳು ಅದಾಲತ್‌ ನಡೆಸಿ 19,113 ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯಗಳಲ್ಲಿ ಬಾಕಿಯಿದ್ದ 3,13,823 ಪ್ರಕರಣಗಳು ಸೇರಿ ಒಟ್ಟು 3,32,936 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಆ ಪ್ರಕರಣಗಳ ಸಂಬಂಧ ಒಟ್ಟು 1033,53,65,965 ರು.ಗಳನ್ನು ಕಕ್ಷಿದಾರರಿಗೆ ಪರಿಹಾರವಾಗಿ ಪಾವತಿಸಲಾಗಿದೆ. ಅದಾಲತ್‌ನಲ್ಲಿ ಒಂದೇ ದಿನಕ್ಕೆ ಇಷ್ಟೊಂದು ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು ಇದೇ ಮೊದಲು ಮತ್ತು ದಾಖಲೆ ಸಹ ಆಗಿದೆ ಎಂದು ತಿಳಿಸಿದರು.

ಇತ್ಯರ್ಥಗೊಂಡ ಪ್ರಕರಣಗಳಲ್ಲಿ 3,853 ಪ್ರಕರಣಗಳು ಆಸ್ತಿ ಭಾಗ ಮಾಡುವುದಕ್ಕೆ ಸಂಬಂಧಿಸಿವೆ. ಸರ್ಕಾರಿ ಜಮೀನು ಸ್ವಾಧೀನ ಕುರಿತಂತೆ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ನಲ್ಲಿ ಇತ್ಯರ್ಥಗೊಂಡರೂ ಆದೇಶ ಜಾರಿಗೆ ಸಂಬಂಧಿಸಿದ 1,393 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಆ ಮೂಲಕ ಒಟ್ಟು 133,90,75,793 ಕೋಟಿ ರು. ಪರಿಹಾರ ಪಾವತಿಸಲಾಗಿದೆ. ಚೆಕ್‌ ಬೌನ್ಸ್‌ಗೆ ಸಂಬಂಧಿಸಿದಂತೆ 11,333 ಪ್ರಕರಣಗಳನ್ನು ಇತ್ಯರ್ಥಪಡಿಸಿ ಒಟ್ಟು 410 ಕೋಟಿ ರು. ಪರಿಹಾರ ಕೊಡಿಸಲಾಗಿದೆ. ಮೋಟಾರು ವಾಹನ ಕಾಯ್ದೆಯಡಿ 4351 ಪ್ರಕರಣಗಳನ್ನು ಇತ್ಯರ್ಥಪಡಿಸಿ, 144 ಕೋಟಿ ರು. ಕ್ಲೇಮು ಕೊಡಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಒಟ್ಟು 18,19,89,648 ರು. ದಂಡ ವಸೂಲಿ ಮಾಡಲಾಗಿದೆ. ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಅರ್ಜಿಗಳು ಐದಾರು ವರ್ಷಗಳು ಕಳೆದರೂ ಇತ್ಯರ್ಥವಾಗುವುದಿಲ್ಲ. ವಿವಾಹಕ್ಕೆ ಸಂಬಂಧಿಸಿದಂತೆ 2,859 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಮೈಸೂರು ಜಿಲ್ಲೆಗಳಲ್ಲಿ 29 ಜೋಡಿಗಳನ್ನು ಒಂದುಗೂಡಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಒಟ್ಟು 1100 ನ್ಯಾಯಾಧೀಶರು ದಿನಕ್ಕೆ 3 ಪ್ರಕರಣ ಇತ್ಯರ್ಥಪಡಿಸಿದರೂ 95 ಮಾನವ ದಿನಗಳಲ್ಲಿ ಒಟ್ಟು 3,12,694 ಪ್ರಕರಣಗಳನ್ನು ಬಗೆಹರಿಸಬಹುದು. ಅಷ್ಟುದಿನ ನ್ಯಾಯಾಲಯಗಳು ಕಲಾಪ ನಡೆಸಿದರೆ ನ್ಯಾಯಾಧೀಶರು ಮತ್ತು ಸಿಬ್ಬಂದಿಯ ವೇತನಕ್ಕಾಗಿ ಒಟ್ಟು 122,63,82,342 ರು. ಖರ್ಚಾಗುತ್ತದೆ. ಮೆಗಾ ಅದಾಲತ್‌ ಮೂಲಕ ಮಾ.27ರಂದು ಒಂದೇ ದಿನ 963 ನ್ಯಾಯಪೀಠಗಳು ಕಾರ್ಯನಿರ್ವಹಿಸಿ ಒಟ್ಟು 3,32,936 ಪ್ರಕರಣಗಳನ್ನು ಇತ್ಯರ್ಥಪಡಿಸಿ ರಾಜ್ಯ ಸರ್ಕಾರಕ್ಕೆ ಒಟ್ಟು 140,83,71,900 ರು. ಉಳಿತಾಯ ಮಾಡಲಾಗಿದೆ. ಮೆಗಾ ಲೋಕ ಅದಾಲತ್‌ ಯಶಸ್ಸು ಕಾಣಲು ವಕೀಲರು-ಕಕ್ಷಿದಾರರ ಸಹಕಾರ, ನ್ಯಾಯಮೂರ್ತಿಗಳು ಮತ್ತು ಸಿಬ್ಬಂದಿಯ ಪರಿಶ್ರಮವೇ ಕಾರಣ. ಇಷ್ಟುದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಕ್ಕೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಇತ್ಯರ್ಥಗೊಂಡ ಪ್ರಕರಣಗಳು

ಆಸ್ತಿ ಭಾಗ ವಿವಾದ- 3,853

ಚೆಕ್‌ ಬೌನ್ಸ್‌- 11,333

ಮೋಟಾರು ವಾಹನ ಕಾಯ್ದೆ- 4351

ವಿವಾಹ ವಿವಾದ- 2,859

ಸರ್ಕಾರಕ್ಕೆ ಉಳಿತಾಯವಾದ ಮೊತ್ತ- 140 ಕೋಟಿ ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ