ಮಿಲ್ಲಿಂಗ್‌ ದರ ಏರಿಕೆಗೆ ಗಿರಣಿಗಳು ಸಜ್ಜು: ಅಕ್ಕಿ ದರ ಶೀಘ್ರ ದುಬಾರಿ?

By Kannadaprabha News  |  First Published Jun 24, 2023, 8:42 AM IST

ವಾಣಿಜ್ಯ, ಕೈಗಾರಿಕೆಗಳ ವಿದ್ಯುತ್‌ ದರಗಳನ್ನು ಅವೈಜ್ಞಾನಿಕವಾಗಿ ಏಕಾಏಕಿ ಶೇ.40ಕ್ಕಿಂತ ಅಧಿಕವಾಗಿ ಹೆಚ್ಚಳ ಮಾಡಿರುವುದರಿಂದ ಭತ್ತದ ಮಿಲ್ಲಿಂಗ್‌ ದರವನ್ನು ಹೆಚ್ಚಿಸಲು ಅಕ್ಕಿ ಗಿರಣಿಗಳ ಮಾಲೀಕರ ಸಂಘ ಮುಂದಾಗಿದೆ. 


ಬೆಂಗಳೂರು (ಜೂ.24): ವಾಣಿಜ್ಯ, ಕೈಗಾರಿಕೆಗಳ ವಿದ್ಯುತ್‌ ದರಗಳನ್ನು ಅವೈಜ್ಞಾನಿಕವಾಗಿ ಏಕಾಏಕಿ ಶೇ.40ಕ್ಕಿಂತ ಅಧಿಕವಾಗಿ ಹೆಚ್ಚಳ ಮಾಡಿರುವುದರಿಂದ ಭತ್ತದ ಮಿಲ್ಲಿಂಗ್‌ ದರವನ್ನು ಹೆಚ್ಚಿಸಲು ಅಕ್ಕಿ ಗಿರಣಿಗಳ ಮಾಲೀಕರ ಸಂಘ ಮುಂದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಕ್ಕಿಯ ದರವೂ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರಸ್ತುತ ಪ್ರತಿ ಕ್ವಿಂಟಲ್‌ ಭತ್ತವನ್ನು ಮಿಲ್ಲಿಂಗ್‌ ಮಾಡಲು 100ರಿಂದ 110 ರು.ಗಳನ್ನು ಪಡೆಯಲಾಗುತ್ತಿದೆ. ಆದರೆ, ಇದೀಗ ವಿದ್ಯುತ್‌ ಪೂರೈಕೆಯ ಕನಿಷ್ಠ ಶುಲ್ಕ (ಮಿನಿಮಮ್‌ ಚಾರ್ಜ್‌) ಹೆಚ್ಚಿಸಿರುವುದರಿಂದ ಅಕ್ಕಿ ಗಿರಣಿ ಮಾಲೀಕರಿಗೆ ಹೊರೆಯಾಗಲಿದೆ. ಈ ಹಿಂದೆ 1 ಕೆವಿ ವಿದ್ಯುತ್‌ ಬಳಕೆಗೆ 260 ರು. ಇತ್ತು. ಈಗ ಅದನ್ನು ದಿಢೀರನೇ 350 ರು.ಗಳಿಗೆ ಹೆಚ್ಚಿಸಲಾಗಿದೆ. ಇದು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಅನಿವಾರ್ಯವಾಗಿ ಭತ್ತದ ಮಿಲ್ಲಿಂಗ್‌ ದರ ಹೆಚ್ಚಿಸಬೇಕಾಗುತ್ತದೆ ಎಂದು ಸಂಘದ ಮೂಲಗಳು ತಿಳಿಸಿವೆ.

Tap to resize

Latest Videos

ಬಿಜೆಪಿ-ಜೆಡಿ​ಎಸ್‌ ಮೈತ್ರಿ ಆಗಬಹುದು ಎಂದು ಅನಿಸುತ್ತಿದೆ: ಯೋಗೇಶ್ವರ್‌

ಅಕ್ಕಿ ಗಿರಣಿಗಳದ್ದು ಸೀಜನಲ್‌ ಉದ್ಯಮ. ಪ್ರತಿ ವರ್ಷ ಮೇ-ಜುಲೈ, ಡಿಸೆಂಬರ್‌- ಫೆಬ್ರವರಿ ಅವಧಿಯಲ್ಲಿ ಭತ್ತದ ಬೆಳೆ ಕಟಾವಿಗೆ ಬರುತ್ತದೆ. ಈ ಸಂದರ್ಭದಲ್ಲಿ ಮಾತ್ರ ಗಿರಣಿಗಳು ಕಾರ್ಯನಿರ್ವಹಿಸುತ್ತವೆ. ಉಳಿದಂತೆ ಏಳು ತಿಂಗಳು ಗಿರಣಿಗಳು ಬಂದ್‌ ಆಗಿರುತ್ತವೆ. ಅವೈಜ್ಞಾನಿಕವಾಗಿ ಶೇ.40ಕ್ಕಿಂತ ಹೆಚ್ಚು ವಿದ್ಯುತ್‌ ದರ ಜಾಸ್ತಿ ಮಾಡಿದರೆ ಮಾಲೀಕರು ಬದುಕುವುದಾದರೂ ಹೇಗೆ? ಇದು ಗ್ರಾಮೀಣ ಪ್ರದೇಶದಲ್ಲಿರುವ ಸಣ್ಣ ಗಿರಣಿಗಳಿಗೆ ಹೆಚ್ಚು ಸಮಸ್ಯೆಯೊಡ್ಡಲಿದ್ದು, ಭತ್ತದ ಮಿಲ್ಲಿಂಗ್‌ಗೆ ಅನಿವಾರ್ಯವಾಗಿ ದರ ಹೆಚ್ಚಿಸಬೇಕಾಗುತ್ತದೆ. ಜೊತೆಗೆ ಕೂಲಿಕಾರ್ಮಿಕರ ಸಮಸ್ಯೆ, ವಿದ್ಯುತ್‌ ಶುಲ್ಕ ಹೆಚ್ಚಳದಿಂದ ಅನೇಕ ಅಕ್ಕಿ ಗಿರಣಿಗಳು ನಷ್ಟದಲ್ಲಿವೆ.

ಸಾಗಣಿಕೆ, ಮಾರುಕಟ್ಟೆ ಸೇವಾ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳಿಂದ ಮಾರುಕಟ್ಟೆಯಲ್ಲೂ ಅಕ್ಕಿ ದರ ಹೆಚ್ಚಳವಾಗಲಿದ್ದು, ದಿನೋಪಯೋಗಿ ವಸ್ತುಗಳ ಬೆಲೆ ಹೆಚ್ಚಳದಿಂದ ನಲುಗಿರುವ ಗ್ರಾಹಕರಿಗೆ ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತಾಗಲಿದೆ. ಅದಕ್ಕೂ ಮೊದಲು ಸರ್ಕಾರ ವಾಣಿಜ್ಯ ಹಾಗೂ ಕೈಗಾರಿಕೆಗಳ ವಿದ್ಯುತ್‌ ಕನಿಷ್ಠ ಶುಲ್ಕದ ಹೆಚ್ಚಳ ಕಡಿತಗೊಳಿಸಬೇಕು. ಇಲ್ಲವೇ ಕನಿಷ್ಠ ಶುಲ್ಕ ರದ್ದುಪಡಿಸಲು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಅಕ್ಕಿ ಗಿರಣಿಗಳ ಸಂಘದ ಉಪಾಧ್ಯಕ್ಷ ಶ್ರೀನಿವಾಸ್‌ ಅವರು ಒತ್ತಾಯಿಸಿದರು.

ಸಾಕಷ್ಟು ಅಕ್ಕಿ ದಾಸ್ತಾನಿದ್ದರೂ ಕೇಂದ್ರ ಸರ್ಕಾರ ಕೊಡುತ್ತಿಲ್ಲ: ಸಚಿವ ಮುನಿಯಪ್ಪ

ಅಕ್ಕಿ ಬೆಲೆ ಕ್ವಿಂಟಲ್‌ಗೆ 200 ರು. ಏರಿಕೆ?: ಈ ಹಿಂದೆ ಎರಡು ವರ್ಷಗಳಿಗೊಮ್ಮೆ ವಿದ್ಯುತ್‌ ಕನಿಷ್ಠ ಶುಲ್ಕವನ್ನು 10ರಿಂದ 20 ರು.ಗಳು ಮಾತ್ರ ಹೆಚ್ಚು ಮಾಡುತ್ತಿದ್ದರು. ಆದರೆ ಈಗ ಅವೈಜ್ಞಾನಿಕವಾಗಿ 1 ಕೆವಿ ವಿದ್ಯುತ್‌ ಪೂರೈಕೆಗೆ 80ರಿಂದ 85 ರು.ಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಅಕ್ಕಿ ಗಿರಣಿ ಮಾಲೀಕರಿಗೆ ಹೊರೆಯಾಗಲಿದೆ. ಭತ್ತದ ಗಿರಣಿಗೂ ಅಕ್ಕಿಯ ದರ ಹೆಚ್ಚಳಕ್ಕೂ ನೇರವಾದ ಸಂಬಂಧ ಇಲ್ಲವಾದರೂ ಪರೋಕ್ಷವಾಗಿ ಬೆಲೆಯೂ ಹೆಚ್ಚುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ವಿವಿಧ ತಳಿಯ ಅಕ್ಕಿಗೆ ಬೇರೆ ಬೇರೆ ದರ ನಿಗದಿ ಮಾಡುತ್ತಾರೆ. ವಿದ್ಯುತ್‌ ದರ ಜಾಸ್ತಿ ಮಾಡಿರುವುದರಿಂದ ಪ್ರತಿ ಕ್ವಿಂಟಲ್‌ ಅಕ್ಕಿಯ ಬೆಲೆ 150 ರಿಂದ 200 ರು.ಗಳಿಗೂ ಅಧಿಕವಾದರೂ ಆಶ್ಚರ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

click me!