
ಬೆಂಗಳೂರು (ಮಾ.19): ಮಧ್ಯಪ್ರಾಚ್ಯ ಭೀಕರ ಯುದ್ಧದ ಪರಿಣಾಮದಿಂದ ಕೇವಲ ಎಲ್‌ಪಿಜಿ, ಆಹಾರ ಪದಾರ್ಥಗಳ ಮೇಲೆ ಮಾತ್ರವಲ್ಲ ಈಗ ನಾವು ಧರಿಸುವ ಬಟ್ಟೆಗೂ ತಟ್ಟಿದೆ. ಹೌದು, ಇರಾನ್ ಇಸ್ರೇಲ್ ಯುದ್ಧದ ಎಫೆಕ್ಟ್‌ನಿಂದಾಗಿ ರೆಡಿಮೇಡ್ ಬಟ್ಟೆಗಳ ದರ ಏರಿಕೆಯಾಗುವ ಆತಂಕ ಶುರುವಾಗಿದೆ.
ಬೆಂಗಳೂರಿನ ಪ್ರಸಿದ್ಧ ವಾಣಿಜ್ಯ ಕೇಂದ್ರವಾದ ಚಿಕ್ಕಪೇಟೆಯ ಜವಳಿ ಉದ್ಯಮಕ್ಕೆ ಯುದ್ಧದ ಬಿಸಿ ತಟ್ಟಿದೆ. ಹಬ್ಬಗಳ ಸಾಲು ಹತ್ತಿರ ಬರುತ್ತಿರುವ ಈ ಸಮಯದಲ್ಲಿ ದರ ಏರಿಕೆಯ ಭೀತಿ ಎದುರಾಗಿರುವುದು ವ್ಯಾಪಾರಸ್ಥರು, ಗ್ರಾಹಕರಲ್ಲಿ ಆತಂಕ ಶುರುವಾಗಿದೆ. ಒಂದು ವೇಳೆ ಬೆಲೆ ಏರಿಕೆಯಾದರೆ ವ್ಯಾಪಾರ ಕುಸಿಯುವ ಭೀತಿ ಒಂದೆಡೆಯಾದರೆ, ಗ್ರಾಹಕರಿಗೆ ಆರ್ಥಿಕ ಹೊರೆಯಾಗುವ ಚಿಂತೆ ಇನ್ನೊಂದೆಡೆ ಎದುರಾಗಿದೆ.
ಭಾರತದಿಂದ ಕುವೈತ್, ಕತಾರ್ ಸೇರಿದಂತೆ ಹಲವು ದೇಶಗಳಿಗೆ ಭಾರಿ ಪ್ರಮಾಣದಲ್ಲಿ ಜವಳಿ ರಫ್ತಾಗುತ್ತಿತ್ತು. ಅದರಲ್ಲೂ ವಿಶೇಷವಾಗಿ ಡೆನಿಮ್ ಮತ್ತು ಕಾಟನ್ ಬಟ್ಟೆಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆಯಿತ್ತು. ಆದರೆ ಯುದ್ಧದ ಹಿನ್ನೆಲೆಯಲ್ಲಿ ಈ ರಫ್ತು ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ಇದು ದೇಶೀಯ ಮಾರುಕಟ್ಟೆಯ ಪರಿಣಾಮವಾಗಿ, ಉದ್ಯಮ ನೆಲಕಚ್ಚುವ ಆತಂಕ ಎದುರಾಗಿದೆ.
ಇರಾನ್ ಇಸ್ರೇಲ್ ಯುದ್ಧದಿಂದಾಗಿ ಬಟ್ಟೆ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು, ರಾಸಾಯನಿಕಗಳು ಮತ್ತು ಡೈಗಳ ಆಮದು ಮಾಡಿಕೊಳ್ಳುವಲ್ಲಿ ತೊಂದರೆ ಉಂಟಾಗಿದೆ. ಅದರಲ್ಲೂ ಸಾಗಾಣಿಕೆ ವೆಚ್ಚ ಹೆಚ್ಚಾಗಿರುವುದು, ಆಮದು ಸಪ್ಲೈ ಚೈನ್ ಕಟ್ಟಾಗಿರುವುದು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಗುಜರಾತ್‌ನ ಸೂರತ್‌ನಂತಹ ಪ್ರಮುಖ ಉತ್ಪಾದನಾ ಕೇಂದ್ರಗಳಲ್ಲಿ ಬಟ್ಟೆಗಳ ದಾಸ್ತಾನು ಕ್ರಮೇಣ ಕಡಿಮೆಯಾಗುತ್ತಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಈ ಎಲ್ಲಾ ಬೆಳವಣಿಗೆಗಳಿಂದಾಗಿ ಏಪ್ರಿಲ್ ತಿಂಗಳಿನಿಂದ ರೆಡಿಮೇಡ್ ಬಟ್ಟೆಗಳ ದರದಲ್ಲಿ ಶೇ. 10 ರಿಂದ 15 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಸಿದ್ಧ ಉಡುಪುಗಳ ತಯಾರಿಕಾ ವೆಚ್ಚ ಹೆಚ್ಚಾಗಿರುವುದರಿಂದ, ಅನಿವಾರ್ಯವಾಗಿ ಆ ಹೊರೆಯನ್ನು ಗ್ರಾಹಕರ ಮೇಲೆ ಹಾಕಲು ಕಂಪನಿಗಳು ಮುಂದಾಗಿವೆ. ಇದು ಸದ್ಯಕ್ಕೆ ಬಟ್ಟೆ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ