
ಲಿಂಗರಾಜು ಕೋರಾ
ಬೆಂಗಳೂರು : ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಏರುತ್ತಲೇ ಇದೆ. 2025-26ನೇ ಸಾಲಿನಲ್ಲಿ ಒಬ್ಬರೇ ಶಿಕ್ಷಕರಿರುವ ಶಾಲೆಗಳ ಸಂಖ್ಯೆ 6,675 ತಲುಪಿದೆ.
ಕಳೆದ ಸಾಲಿನಲ್ಲಿ 6,158 ಇದ್ದ ಏಕೋಪಾಧ್ಯಾಯ ಸರ್ಕಾರಿ ಶಾಲೆಗಳ ಪಟ್ಟಿಗೆ ಈ ಸಾಲಿನಲ್ಲಿ ಇನ್ನೂ 517 ಶಾಲೆಗಳು ಹೊಸದಾಗಿ ಸೇರಿವೆ. ಇದು ಸರ್ಕಾರವೇ ವಿಧಾನಮಂಡಲ ಅಧಿವೇಶನದಲ್ಲಿ ನೀಡಿರುವ ಅಧಿಕೃತ ಅಂಕಿ ಅಂಶ. 2018ರಲ್ಲಿ 3450 ಇದ್ದ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 7 ವರ್ಷದಲ್ಲಿ ದುಪ್ಪಟ್ಟಾಗಿರುವುದನ್ನು ಸಾಬೀತುಪಡಿಸಿದೆ.
ಇಂತಹ ಶಾಲೆಗಳಲ್ಲಿ ಬಹುತೇಕ ಕಿರಿಯ ಪ್ರಾಥಮಿಕ ಶಾಲೆಗಳೇ ಹೆಚ್ಚು. 1ರಿಂದ 5ನೇ ತರಗತಿವರೆಗೆ ಕನಿಷ್ಠ ತರಗತಿಗೊಬ್ಬ ಶಿಕ್ಷಕರಾದರೂ ಇರಬೇಕು ಅಥವಾ 12 ಮಕ್ಕಳಿದ್ದರೆ ಕನಿಷ್ಠ ಇಬ್ಬರು ಶಿಕ್ಷಕರಿರಬೇಕೆಂಬ ನಿಯಮವಿದೆ. ಆದರೆ, ಇದು ಪಾಲನೆಯಾಗುತ್ತಿಲ್ಲ. ಇದಕ್ಕೆ ಕಾರಣ ಶಿಕ್ಷಕರ ಕೊರತೆ.
ಆದರೆ, ಅಧಿಕಾರಿಗಳು ಹೇಳುವುದು ಮಕ್ಕಳ ಸಂಖ್ಯೆ ಕೊರತೆ. ‘ಈ ಶಾಲೆಗಳಲ್ಲಿ ಕನಿಷ್ಠ 1ರಿಂದ ಗರಿಷ್ಠ 30ರವರೆಗೆ ಮಕ್ಕಳಿದ್ದಾರೆ. ಕೆಲವೆಡೆ ಅತಿಥಿ ಶಿಕ್ಷಕರನ್ನು ನೀಡಲಾಗಿದೆ. ಆದರೂ, ಬೇರೆ ದಾರಿ ಇಲ್ಲದೆ 2 ಹಾಗೂ 3 ತರಗತಿಯ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿಕೊಂಡು ಪಾಠ ಮಾಡುವಂತಾಗಿದೆ. ಇದರ ಜೊತೆಗೆ ಬಿಸಿಯೂಟ, ಕ್ಷೀರಭಾಗ್ಯ ಇತರೆ ಕೆಲಸಗಳು ನಮ್ಮ ಮೇಲಿವೆ ಎನ್ನುತ್ತಾರೆ’ ಶಿಕ್ಷಕರು.
ಸರ್ಕಾರಿ ಶಾಲೆಗಳಲ್ಲಿ ಕಳೆದ ಒಂದೂವರೆ ದಶಕದಿಂದ ಶೇ.30ರಷ್ಟು ಮಕ್ಕಳ ದಾಖಲಾತಿ ಕುಸಿದಿರುವುದು ಶಿಕ್ಷಣ ಇಲಾಖೆಯ ವಾರ್ಷಿಕ ವಿಶ್ಲೇಷಣಾ ವರದಿಯನ್ನು ಅವಲೋಕಿಸಿದಾಗ ಕಂಡುಬರುತ್ತದೆ. ಕೆಲ ವರ್ಷಗಳ ಕಾಲ ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಕಡಿಮೆಯಾಗಿದ್ದರೆ, ಇತ್ತೀಚಿನ ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ 2 ಲಕ್ಷ ಮಕ್ಕಳ ದಾಖಲಾತಿ ಕುಸಿಯುತ್ತಿದೆ.
ಉದಾಹರಣೆಗೆ, ಸರ್ಕಾರವೇ ಸದನದಲ್ಲಿ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದ 41 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಕಳೆದ ಸಾಲಿನಲ್ಲಿ 30.28 ಲಕ್ಷಕ್ಕು ಹೆಚ್ಚು ಮಕ್ಕಳು ದಾಖಲಾಗಿದ್ದರೆ, 2025-26ನೇ ಸಾಲಿನಲ್ಲಿ 28.03 ಲಕ್ಷಕ್ಕೆ ಇಳಿದಿದೆ. ಒಂದೇ ವರ್ಷದಲ್ಲಿ ಮಕ್ಕಳ ದಾಖಲಾತಿ 2.25 ಲಕ್ಷದಷ್ಟು ಕಡಿಮೆಯಾಗಿದೆ. ಈ ಮಕ್ಕಳೆಲ್ಲಾ ಖಾಸಗಿ ಶಾಲೆಗಳನ್ನು ಸೇರಿದ್ದಾರೆ.
10ಕ್ಕಿಂತ ಕಮ್ಮಿ ಮಕ್ಕಳು:
ಮಕ್ಕಳ ದಾಖಲಾತಿ ಕಡಿಮೆಯಾಗುವುದರೊಂದಿಗೆ 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ. ಕಳೆದ 3 ವರ್ಷಗಳ ಅಂಕಿ ಅಂಶಗಳನ್ನೇ ನೋಡುವುದಾದರೆ 2023-24ರಲ್ಲಿ 3,646 ಇದ್ದ 10ಕ್ಕಿಂತ ಕಡಿಮೆ ಮಕ್ಕಳ ಶಾಲೆಗಳ ಸಂಖ್ಯೆ 2024-25ರಲ್ಲಿ 4263ಕ್ಕೆ, 2025-26ರಲ್ಲಿ 5000 ಮೀರಿದೆ. ಇದು ರಾಜ್ಯ ಶಿಕ್ಷಣ ಇಲಾಖೆಯ ಮಾಹಿತಿಯಾದರೆ, ಕೇಂದ್ರ ಸರ್ಕಾರದ ವರದಿ ಪ್ರಕಾರ ಕರ್ನಾಟದಲ್ಲಿ 7000ಕ್ಕೂ ಹೆಚ್ಚು ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದು, ಈ ವಿಚಾರದಲ್ಲಿ ದೇಶದಲ್ಲಿ 5ನೇ ಸ್ಥಾನದಲ್ಲಿದೆ. ಇನ್ನು ರಾಜ್ಯದಲ್ಲಿ 30ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳ ಸಂಖ್ಯೆ 20 ಸಾವಿರಕ್ಕೂ ಹೆಚ್ಚಿದೆ.
60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ:
ಇನ್ನು, ಸರ್ಕಾರದಲ್ಲಿ ಅತಿ ಹೆಚ್ಚು ಹುದ್ದೆಗಳು ಖಾಲಿ ಇರುವುದು ಶಿಕ್ಷಣ ಇಲಾಖೆಯಲ್ಲಿ. ಸುಮಾರು 73 ಸಾವಿರ ಹುದ್ದೆಗಳು ಖಾಲಿ ಇರುವುದಾಗಿ ಸರ್ಕಾರವೇ ಸದನದಲ್ಲಿ ಉತ್ತರ ನೀಡಿದೆ. ಈ ಪೈಕಿ 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇಲಾಖೆಯಲ್ಲಿ 2.20 ಸಾವಿರಕ್ಕೂ ಹೆಚ್ಚು ಮಂಜೂರಾದ ಶಿಕ್ಷಕ ಹುದ್ದೆಗಳಿದ್ದರೂ ಹಾಲಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ 1.60 ಲಕ್ಷದಷ್ಟಿದೆ. ಮಾಹಿತಿ ಪ್ರಕಾರ, 2028ರವೇಳೆಗೆ ಇನ್ನೂ 28 ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕೆಂಬುದು ಪೋಷಕರು, ಶಿಕ್ಷಕರ ಸಂಘದ ಆಗ್ರಹವಾಗಿದೆ.
ಒಬ್ಬೊಬ್ಬರಿಗೊಂದು
ಪಾಠ ಹೇಗೆ ಸಾಧ್ಯ?
1 ತರಗತಿಯಲ್ಲಿ ಇಬ್ಬರು, ಇನ್ನೊಂದು ತರಗತಿಯಲ್ಲಿ 3, ಮತ್ತೊಂದು ತರಗತಿಯಲ್ಲಿ 5. ಇಷ್ಟು ಮಕ್ಕಳಿಗೆ ಒಂದೇ ಕ್ಲಾಸಲ್ಲಿ ಒಬ್ಬರೇ ಶಿಕ್ಷಕರನ್ನು ನೀಡದರೆ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತದೆ. ಮಕ್ಕಳು ಒಬ್ಬರೇ ಇರಲಿ, ಎಷ್ಟೇ ಇರಲಿ ವಿಷಯವಾರು ಪಾಠ ಮಾಡಲೇಬೇಕು. ಒಬ್ಬರೇ 26 ವಿಷಯಗಳ ಪಾಠ ಮಾಡಲು ಹೇಗೆ ಸಾಧ್ಯ? ಹಾಗಾಗಿ ಅಂತಹ ಶಾಲೆಗಳಿಗೆ ಕನಿಷ್ಠ ಇಬ್ಬರು ಕಾಯಂ ಶಿಕ್ಷಕರನ್ನಾದರೂ ಸರ್ಕಾರ ನೀಡಬೇಕು.
- ಚಂದ್ರಶೇಖರ ನುಗ್ಲಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ
- ಏಕೋಪಾಧ್ಯಾಯ ಶಾಲೆಗಳಲ್ಲಿ ಬಹುತೇಕ ಕಿರಿಯ ಪ್ರಾಥಮಿಕ ಶಾಲೆಗಳೇ ಹೆಚ್ಚು.
- ನಿಯಮ ಪ್ರಕಾರ 1-5ನೇ ಕ್ಲಾಸ್‌ವರೆಗೆ ಕನಿಷ್ಠ ತರಗತಿಗೊಬ್ಬ ಶಿಕ್ಷಕ ಇರಬೇಕು
- 12 ಮಕ್ಕಳಿದ್ದರೆ ಕನಿಷ್ಠ ಇಬ್ಬರು ಶಿಕ್ಷಕರಾದರೂ ಇರಬೇಕು ಎನ್ನುತ್ತದೆ ನಿಯಮ
- ಆದರೆ ಇದು ಪಾಲನೆಯಾಗುತ್ತಿಲ್ಲ. ಇದಕ್ಕೆ ಕಾರಣ ಶಿಕ್ಷಕರ ಸಂಖ್ಯೆಯ ಕೊರತೆ
- ರಾಜ್ಯಾದ್ಯಂತ 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಇದೀಗ ಖಾಲಿ
- 2028ರವೇಳೆಗೆ ಇನ್ನೂ 28 ಸಾವಿರ ಶಿಕ್ಷಕರು ನಿವೃತ್ತ. ಆಗ ಇನ್ನಷ್ಟು ಸಂಕಷ್ಟ
- ಈಗಲಾದರೂ ಶಿಕ್ಷಕರ ನೇಮಿಸಿ ಎಂದು ಪೋಷಕರು, ಶಿಕ್ಷಕರ ಸಂಘದ ಆಗ್ರಹ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ