ಕೇವಲ ಜಾತಿ ಹೆಸರಿಟ್ಟು ಟೀಕಿಸಿದರೆ ಅಪರಾಧವಲ್ಲ: ಹೈಕೋರ್ಟ್‌ ಆದೇಶ

By Kannadaprabha NewsFirst Published Jan 31, 2023, 3:40 AM IST
Highlights

ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಅಪಮಾನ ಮಾಡಲು ಮತ್ತು ಉದ್ದೇಶಪೂರ್ವಕವಾಗಿ ಆತನ ಜಾತಿ ಹೆಸರು ಹಿಡಿದು ನಿಂದಿಸಿದರೆ ಮಾತ್ರ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಅಪರಾಧವಾಗುತ್ತದೆ. 

ಬೆಂಗಳೂರು (ಜ.31): ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಅಪಮಾನ ಮಾಡಲು ಮತ್ತು ಉದ್ದೇಶಪೂರ್ವಕವಾಗಿ ಆತನ ಜಾತಿ ಹೆಸರು ಹಿಡಿದು ನಿಂದಿಸಿದರೆ ಮಾತ್ರ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಅಪರಾಧವಾಗುತ್ತದೆ. ಆದರೆ ಅಪಮಾನ ಮಾಡುವ ಉದ್ದೇಶವಿಲ್ಲದೆ ಕೇವಲ ಜಾತಿ ಹೆಸರನ್ನು ಉಲ್ಲೇಖಿಸಿ ಟೀಕೆ ಮಾಡಿದರೆ ಅದು ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. 

ಜಾತಿ ನಿಂದನೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ವಿವಿಧ ಸೆಕ್ಷನ್‌ ಅಡಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಆನೇಕಲ್‌ನ ಸೂರ್ಯನಗರದ ನಿವಾಸಿ ವಿ.ಶೈಲೇಶ್‌ಕುಮಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ. ಜಯಮ್ಮ ಎಂಬುವರು 2020ರ ಜೂ.14ರಂದು ಸೂರ್ಯನಗರ ಠಾಣೆ ಪೊಲೀಸರಿಗೆ ದೂರು ನೀಡಿ, ತನ್ನ ಮಗ ಮತ್ತು ಆತನ ಸ್ನೇಹಿತರು ಕ್ರಿಕೆಟ್‌ ಆಡುತ್ತಿದ್ದಾಗ ಎರಡು ತಂಡಗಳ ನಡುವೆ ಜಗಳ ನಡೆದಿದೆ. 

ಅರಣ್ಯ, ವನ್ಯಜೀವಿ ಉಳಿದರೆ ಮಾತ್ರ ಮನುಕುಲ ಉಳಿವು: ರಿಷಬ್‌ ಶೆಟ್ಟಿ

ಇದೇ ಕಾರಣಕ್ಕೆ ತನ್ನ ಮಗನನ್ನು ಅಪಹರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು. ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿದ್ದರು. ಈ ವೇಳೆ ದೂರುದಾರರ ಮಗನನ್ನು ಜಾತಿಯ ಹೆಸರು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿತ್ತು. ಇದರಿಂದ ಅರ್ಜಿದಾರ ಶೈಲೇಶ್‌ ಮತ್ತಿತರ ಆರೋಪಿಗಳ ಎಸ್ಸಿ-ಎಸ್ಟಿಕಾಯ್ದೆ ಮತ್ತು ಐಪಿಸಿ ವಿವಿಧ ಸೆಕ್ಷನ್‌ಗಳಡಿ ಅಧೀನ ನ್ಯಾಯಾಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಆರೋಪಿ ಶೈಲೇಶ್‌ ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದ.

ಸಂಪುಟ ವಿಸ್ತರಣೆ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಣಯ: ಸಿಎಂ ಬೊಮ್ಮಾಯಿ

ಪ್ರಕರಣದಲ್ಲಿ ಸಂತ್ರಸ್ತ (ದೂರುದಾರರ ಮಗ) ಹಾಗೂ ಅರ್ಜಿದಾರರ ನಡುವೆ ಕ್ರಿಕೆಟ್‌ ಆಟದ ವಿಚಾರವಾಗಿ ಜಗಳ ನಡೆದಿದೆ. ಆಗ ಎರಡೂ ಕಡೆಯವರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಸಂತ್ರಸ್ತನ ಜಾತಿ ಹೆಸರನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ, ಅರ್ಜಿದಾರ ಉದ್ದೇಶಪೂರ್ವಕವಾಗಿ ಅಥವಾ ಅಪಮಾನ ಮಾಡಲೆಂದೇ ಸಂತ್ರಸ್ತನ ಜಾತಿ ಹೆಸರು ಉಲ್ಲೇಖಿಸಿ ನಿಂದಿಸಿದ್ದಾನೆ ಎನ್ನುವುದಕ್ಕೆ ಯಾವುದೇ ವಿವರಗಳಿಲ್ಲ ಎಂದು ತಿಳಿಸಿದ ಹೈಕೋರ್ಟ್‌, ಅರ್ಜಿದಾರನ ವಿರುದ್ಧದ ಎಸ್ಸಿ-ಎಸ್ಟಿದೌರ್ಜನ್ಯ ತಡೆ ಕಾಯ್ದೆಯಡಿಯ ಪ್ರಕರಣ ರದ್ದುಪಡಿಸಿತು. ಆದರೆ, ಮಾರಕಾಸ್ತ್ರಗಳಿಂದ ಹಲ್ಲೆ, ಅಪಹರಣ, ಉದ್ದೇಶಪೂರ್ವಕ ಅಪಮಾನ ಹಾಗೂ ಬೆದರಿಕೆ ಆರೋಪಗಳ ಸಂಬಂಧ ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣಗಳ ವಿಚಾರಣೆ ಮುಂದುವರಿಸಲು ಅಧೀನ ನ್ಯಾಯಾಲಯಕ್ಕೆ ಅನುಮತಿ ನೀಡಿದೆ.

click me!