6 ಜಿಲ್ಲೆಗಳಲ್ಲಿ ಗರ್ಭಿಣಿಯರ ಮನೆಗೆ ಮಾತೃಪೂರ್ಣ ಸೌಲಭ್ಯ: ಸಚಿವ ಹಾಲಪ್ಪ ಆಚಾರ್‌

By Kannadaprabha NewsFirst Published Sep 14, 2022, 12:58 PM IST
Highlights

ಯೋಜನೆಯಡಿ 8 ತಿಂಗಳು ತುಂಬಿದ ಗರ್ಭಿಣಿಯರಿಗೆ ಹಾಗೂ ಹೆರಿಗೆಯಾದ 45 ದಿನಗಳವರೆಗೆ ಬಾಣಂತಿಯರಿಗೆ ಬಿಸಿಯೂಟವನ್ನು ಮನೆಗೆ ನೀಡಲು ಅವಕಾಶ ಕಲ್ಪಿಸಲಾಗಿದೆ

ವಿಧಾನ ಪರಿಷತ್‌(ಸೆ.14):  ಗರ್ಭಿಣಿ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಠಿಕ ಬಿಸಿಯೂಟ ನೀಡುವ ‘ಮಾತೃಪೂರ್ಣ’ ಯೋಜನೆಯನ್ನು ಈ ವರ್ಷದ ಮಳೆಗಾಲ ಮುಗಿಯುವವರೆಗೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಫಲಾನುಭವಿಗಳ ಮನವಿ ಮೇರೆಗೆ ಮನೆಗೆ ಕಚ್ಚಾ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೋಜನೆಯಡಿ 8 ತಿಂಗಳು ತುಂಬಿದ ಗರ್ಭಿಣಿಯರಿಗೆ ಹಾಗೂ ಹೆರಿಗೆಯಾದ 45 ದಿನಗಳವರೆಗೆ ಬಾಣಂತಿಯರಿಗೆ ಬಿಸಿಯೂಟವನ್ನು ಮನೆಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ಕಾರಣದ ಮೇಲೆ ಅಂಗನವಾಡಿ ಕೇಂದ್ರಕ್ಕೆ ಬರಲು ಆಗದಿದ್ದವರಿಗೆ ಅವರ ಮನೆಯ ಸದಸ್ಯರ ಮೂಲಕ ಬಿಸಿಯೂಟ ತೆಗೆದುಕೊಂಡು ಹೋಗಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದರು.

ಅಧಿಕಾರದ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ಸಿಗರು: ಸಚಿವ ಹಾಲಪ್ಪ ಆಚಾರ್‌

ಗರ್ಭಿಣಿಯರು ಅಂಗನವಾಡಿಗೆ ಬಂದು ಬಿಸಿಯೂಟ ಸೇವಿಸಬೇಕೆಂಬ ಪದ್ಧತಿ ಅಮಾನವೀಯವಾಗಿದೆ, ಇದಕ್ಕೆ ಬದಲಾಗಿ ಮನೆಗೆ ಆಹಾರ ಪದಾರ್ಥ ಪೂರೈಸಬೇಕು ಇಲ್ಲವೇ ವೆಚ್ಚವಾಗುವ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕೆಂದು ಬಿಜೆಪಿಯ ಭಾರತಿ ಶೆಟ್ಟಿಸದಸ್ಯರ ಸಲಹೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಮೊದಲು ಅವರ ಮನೆಗೆ ಬಿಸಿಯೂಟ ನೀಡುವ ಇಲ್ಲವೇ ಆಹಾರ ಪದಾರ್ಥ ತಲುಪಿಸಲಾಗುತ್ತಿತ್ತು, ಆದರೆ ಇದರಿಂದ ಯೋಜನೆ ಪೂರ್ಣಪ್ರಮಾಣದಲ್ಲಿ ಫಲಾನುಭವಿಗೆ ತಲುಪುವುದಿಲ್ಲ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡಬೇಕೆಂಬ ಉದ್ದೇಶವೇ ವಿಫಲವಾಗುವ ಸಾಧ್ಯತೆ ಹೆಚ್ಚು ಎಂಬ ಕಾರಣದಿಂದಲೇ ಅಂಗನವಾಡಿಗೆ ಬಂದು ಬಿಸಿಯೂಟ ಪಡೆಯುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಸಮರ್ಥಿಸಿಕೊಂಡರು.

ಕೆಲವು ಫಲಾನುಭವಿಗಳು ಅಂಗನವಾಡಿಗೆ ಬಂದು ಊಟ ಮಾಡಲು ಇಚ್ಛಿಸಬಹುದು, ಕೆಲವರು ಮನೆಗೆ ಆಹಾರ ಪದಾರ್ಥ ನೀಡುವಂತೆ ಕೇಳಬಹುದು, ಹಾಗಾಗಿ ಸೌಲಭ್ಯ ಪಡೆಯುವ ವಿಧಾನವನ್ನು ಫಲಾನುಭವಿಗಳ ಇಚ್ಛೆಗೆ ಬಿಡಲಾಗಿದೆ ಎಂದು ಸಚಿವ ಹಾಲಪ್ಪ ಆಚಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

click me!