Mann Ki Baat: ಖುಷಿ, ಜ್ಞಾನ ಹಂಚಿದ ಬೆಳಕಿನಂತಹ ಮಾತಿನ ಸರಣಿ

By Kannadaprabha News  |  First Published May 1, 2023, 10:29 AM IST

ಮನ್‌ ಕೀ ಬಾತ್‌ನಂತಹ ಕಾರ‍್ಯಕ್ರಮದ ಮೂಲಕ ರಾಜಕೀಯೇತರ ಕಾರಣಕ್ಕೆ ಜನರ ಜತೆ ಪ್ರಧಾನಿ ಬೆರೆಯೋದೇ ನಮಗೆ ಖುಷಿ ಎಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಹೇಳಿದ್ದಾರೆ. ಪ್ರಧಾನಿ ಮೋದಿ ಸಾಮಾನ್ಯ ಕುಟುಂಬದಿಂದ ಬಂದವರು. ಹಾಗಾಗಿ ಸಾಮಾನ್ಯ ಕುಟುಂಬದ ಕಷ್ಟದ ಅರಿವಿದೆ. ಅದರಿಂದಾಗಿಯೇ ಅವರಿಂದ ಇಂಥದ್ದೊಂದು ಕಾರ್ಯಕ್ರಮ ಸಾಧ್ಯವಾಗಿದೆ. 
 



ಬೆಂಗಳೂರು (ಮೇ.01): ಹಿರಿಯರು, ಕಿರಿಯರು, ದೊಡ್ಡವರು, ಸಣ್ಣವರು ಎಂಬ ಯಾವುದೇ ಭೇದವಿಲ್ಲದೆ ಎಲ್ಲರನ್ನೂ ತಲುಪುವಂತೆ ಮಾತನಾಡುವುದು ಸುಲಭವಲ್ಲ. ದೇಶದ ಕುರಿತು, ದೇಶದ ಅಭಿವೃದ್ಧಿ ಯ ಕುರಿತು, ಯಾವುದೋ ಹಳ್ಳಿಯಲ್ಲಿ ಕುಳಿತು ಒಳ್ಳೆಯ ಕೆಲಸ ಮಾಡಿದ ವ್ಯಕ್ತಿಗಳ ಕುರಿತು ಮನಸ್ಸು ಮುಟ್ಟುವಂತೆ ಮಾತನ್ನಾಡುವುದು ಸಾಧಾರಣ ವಿಷಯವಲ್ಲ. ಮಾತಿನ ಮೂಲಕ ವೇ ಅನೇಕ ವಿಚಾರಗಳ ಮೇಲೆ ಬೆಳಕು ಹಾಯಿಸುವ ಪ್ರಧಾನ ಮಂತ್ರಿಗಳ ಮನ್‌ ಕಿ ಬಾತ್‌ ಕಾರ್ಯಕ್ರಮದ 100ನೇ ಸಂಚಿಕೆ ಪ್ರಸಾರವಾಗಿರುವುದು ಹೆಮ್ಮೆ, ಸಂತೋಷ ಮತ್ತು ಅಚ್ಚರಿಯ ಸಂಗತಿ. ಮನ್‌ ಕಿ ಬಾತ್‌ ಆರಂಭವಾಗಿದ್ದು 2014ರಲ್ಲಿ. ಅಲ್ಲಿಂದ ಸತತವಾಗಿ 8 ವರ್ಷಗಳಿಗೂ ಅಧಿಕ ಸಮಯ ದೇಶದ ಜನರೊಂದಿಗೆ ಸಂಹವನ ಇಟ್ಟುಕೊಂಡಿರುವುದು ಅಚ್ಚರಿಯೇ ಸರಿ. ನಾನು ಸಮಯ ಸಿಕ್ಕಾಗಲೆಲ್ಲಾ ಮನ್‌ ಕಿ ಬಾತ್‌ ಕೇಳುತ್ತೇನೆ. ನನ್ನ ಖುಷಿಗಾಗಿ, ತಿಳುವಳಿಕೆಗಾಗಿ ಕೇಳುತ್ತೇನೆ. ಅವರ ಮಾತಿಗಾಗಿ, ಮಾತಿನ ಶೈಲಿಗಾಗಿ, ವಿಚಾರಕ್ಕಾಗಿ ಮರುಳಾಗುತ್ತೇನೆ. ಅವರು ಅಲ್ಲಿ ರಾಜಕೀಯ ಮಾತನಾಡುವುದಿಲ್ಲ. ಪಕ್ಷದ ಕುರಿತು ಹೇಳುವುದಿಲ್ಲ. ಬದಲಾಗಿ ಸಿರಿಧಾನ್ಯದ ಕುರಿತು ಮಾತನಾಡುತ್ತಾರೆ. ನಮ್ಮ ಸಹಜ ಜೀವನದ ಕುರಿತು ಮಾತ ನಾಡುತ್ತಾರೆ. ರೈತನ ಕುರಿತು, ಸಾವಯವ ಕೃಷಿ ಕುರಿತು, ಭೇಟಿ ಬಚಾವೋ ಭೇಟಿ ಪಡಾವೋ ಅಭಿಯಾನದ ಕುರಿತು.. ಹೀಗೆ ಯಾವ್ಯಾವ ವಿಚಾರಗಳು ಸಮಾಜದ ಕಟ್ಟಕಡೆಯ ಜನರನ್ನು ತಲುಪಬೇಕೋ ಆ ಸಂಗತಿಗಳ ಕುರಿತು ಮಾತನಾಡುತ್ತಾ ದಾರಿಗೆ ದೀಪವಾಗುತ್ತಾರೆ. ಯೋಚನೆಗೆ ದಾರಿಯಾಗುತ್ತಾರೆ. ಅದಕ್ಕಾಗಿ ನನಗೆ ಅವರ ಮನ್‌ ಕಿ ಬಾತ್‌ ನನಗಿಷ್ಟ.

ಸಾಮಾನ್ಯರಲ್ಲೇ ಅಸಾಮಾನ್ಯ ಮೋದಿ: ಪ್ರಧಾನಮಂತ್ರಿಯೊಬ್ಬರು ರಾಜಕೀಯ ಕಾರಣವಿಲ್ಲದೆ ಹೀಗೆ ಸಾಮಾನ್ಯರನ್ನು ತಲುಪುವುದನ್ನು ನೋಡುವುದೇ ಖುಷಿ. ಬಹುಶಃ ಅದಕ್ಕೆ ಕಾರಣ ಅವರ ಹಿನ್ನೆಲೆ. ಅವರು ಸಾಮಾನ್ಯ ಕುಟುಂಬದಿಂದ ಬಂದವರು. ಹಾಗಾಗಿ ಸಾಮಾನ್ಯ ಕುಟುಂಬದ ಕಷ್ಟಗೊತ್ತಿರುತ್ತದೆ. ನೋವು ನಲಿವು ಗೊತ್ತಿರುತ್ತದೆ. ಅದರಿಂದಾಗಿಯೇ ಇಂಥದ್ದೊಂದು ಕಾರ್ಯಕ್ರಮ ಸಾಧ್ಯ ವಾಗಿದೆ ಅಂದುಕೊಳ್ಳುತ್ತೇನೆ. ಕೊರೋನಾ ಸಂದರ್ಭದಲ್ಲಂತೂ ಅವರು ಜನತೆಗೆ ಮಾತಿನ ಮೂಲಕ ತುಂಬಿದ ಧೈರ್ಯ ಅಷ್ಟಿಷ್ಟಲ್ಲ. ಅದರ ಜೊತೆಗೆ ಸಾಮಾನ್ಯರ ಪ್ರಶ್ನೆಗೆ ಉತ್ತರ ಕೊಡುತ್ತಾ, ಕಳವಳಗಳಿಗೆ ಭರವಸೆ ನೀಡುತ್ತಾ, ಬಡ ಕುಟುಂಬದ ಮಹಿಳೆ, ಮಕ್ಕಳ ಜೊತೆ ಮಾತನಾಡುತ್ತಾ, ತಾನೂ ಅವರಲ್ಲಿ ಒಬ್ಬರಾಗುತ್ತಾ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಹುದ್ದೆಯ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ.

Tap to resize

Latest Videos

ಜನರಿಗೆ ತಿಳಿವಳಿಕೆ ನೀಡುವ ಪ್ರಧಾನಿ: ಸಮಾಜ ಕೆಲವು ವಿಚಾರಗಳಲ್ಲಿ ನೆರವು ಬಯಸುತ್ತದೆ. ಅದರಲ್ಲಿ ಪ್ರಮುಖವಾದುದು ವೈದ್ಯಕೀಯ ಕ್ಷೇತ್ರ, ಶಿಕ್ಷಣ ಕ್ಷೇತ್ರ ಮತ್ತು ಪರಿಸರ ಎಂಬುದು ನನ್ನ ಆಲೋಚನೆ. ಆರೋಗ್ಯ ಸೇವೆ ಹೇಗೆ ಉತ್ತಮ ಪಡಿಸಬಹುದು ಎಂದು ದೊಡ್ಡವರು ಹೇಳಿದಾಗ ಅದಕ್ಕೊಂದು ತೂಕ ಇರುತ್ತದೆ. ಅದನ್ನು ಮೋದಿಯವರು ತಮ್ಮ ಕಾರ್ಯಕ್ರಮದಲ್ಲಿ ಮಾಡಿದ್ದಾರೆ. ಶಾಲೆ, ಕಾಲೇಜುಗಳ ಮಕ್ಕಳಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಿದ್ದಾರೆ. ಗ್ಲೋಬಲ್‌ ವಾರ್ಮಿಂಗ್‌ ಕುರಿತು ಮಾತನಾಡಿ ಪರಿಸರ ಪ್ರೀತಿ ಹುಟ್ಟಿಸಲು ಯತ್ನಿಸಿದ್ದಾರೆ. ಇವೆಲ್ಲವೂ ನಮ್ಮ ಒಳಿತಿಗಾಗಿ, ದೇಶದ ಜನರ ಮೇಲಿನ ಅಪರಿಮಿತ ಪ್ರೀತಿಯಿಂದ ಮಾಡಿದ್ದಾರೆ ಅಂತಲೇ ನನಗನ್ನಿಸುತ್ತದೆ. ಇಲ್ಲದಿದ್ದರೆ ಪ್ರಧಾನಮಂತ್ರಿಯೊಬ್ಬರು ಈ ಥರದ ಕೆಲಸ ಮಾಡಬೇಕಾಗಿರಲಿಲ್ಲ. ಮಾಡಿದ್ದಾರೆ ಎಂದರೆ ಅದನ್ನು ಗುರುತಿಸುವುದು ಕೂಡ ನಮ್ಮ ಜವಾಬ್ದಾರಿ.

ಮಹಿಳಾ ಸಬಲೀಕರಣ, ಆರೋಗ್ಯದಲ್ಲಿ ಸುಧಾರಣೆ, ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಬಿಲ್ ಗೇಟ್ಸ್ ಮೆಚ್ಚುಗೆ!

ಸಾಧಕರಿಗೆ ಬೆನ್ನು ತಟ್ಟಿ ಪ್ರೋತ್ಸಾಹ: ನನಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾಗಿದ್ದು ಯಾವುದೋ ಒಂದು ಹಳ್ಳಿಯ ಪ್ರತಿಭೆಯನ್ನು ಅವರು ಗುರುತಿಸುವ ಪರಿ. ನಾವು ಕಲಾವಿದರು. ಚಪ್ಪಾಳೆಗಾಗಿ ಬದುಕುವವರು. ಜನರು ಪ್ರತಿಭೆ ಗುರುತಿಸಿ ಚಪ್ಪಾಳೆ ತಟ್ಟಿದಾಗ ಧನ್ಯತೆ ಆವರಿಸುತ್ತದೆ. ಆದರೆ ಅದೆಷ್ಟೋ ಮಂದಿಗೆ ಒಳ್ಳೆಯ ಕೆಲಸವನ್ನು ಗುರುತಿಸುವವರಿರುವುದಿಲ್ಲ. ಗುರುತಿಸಿ ಬೆನ್ನು ತಟ್ಟಿಪೋ›ತ್ಸಾಹಿಸುವವರಿರುವುದಿಲ್ಲ. ಅಂಥದ್ದರಲ್ಲಿ ಮೋದಿಯವರು ಅದೆಷ್ಟೋ ತೆರೆಮರೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಆ ಜೀವಕ್ಕೆ ಅದು ಧನ್ಯತೆಯ ಕ್ಷಣ. ಅವರಿಗಷ್ಟೇ ಅಲ್ಲ, ಅವರ ಮನೆಯವರಿಗೆ, ಅವರ ಊರಿನವರಿಗೆ, ಆ ನಾಡಿಗೆ ಎಲ್ಲರಿಗೂ ಖುಷಿಯ ಕ್ಷಣ. ಆ ಮೆಚ್ಚುಗೆ, ಪೋ›ತ್ಸಾಹ ಎಲ್ಲಕ್ಕಿಂತ ದೊಡ್ಡದು ಎಂದು ನಾನು ನಂಬಿದ್ದೇನೆ. ಆ ಬೆನ್ನುತಟ್ಟುವಿಕೆಯೇ ಮತ್ತಷ್ಟುಒಳ್ಳೆಯ ಕೆಲಸ ಮಾಡಲು ಸ್ಫೂರ್ತಿ.

ಮನ್‌ ಕೀ ಬಾತ್‌' 100ನೇ ಸಂಚಿಕೆ: ವಿವಿಧ ಕ್ಷೇತ್ರದ ದಿಗ್ಗಜರಿಂದ ಪ್ರಶಂಸೆಯ ಸುರಿಮಳೆ

ಮಾತಿನ ಮೂಲಕ ಖುಷಿ ಮತ್ತು ಜ್ಞಾನ ಎರಡನ್ನೂ ಹಂಚುವುದು ತಮಾಷೆಯ ಮಾತಲ್ಲ. ಅದನ್ನು ಸಾಧ್ಯವಾಗಿಸಿದ ಮೋದಿಯವರಿಗೆ ಪ್ರೀತಿಪೂರ್ವಕ ಧನ್ಯವಾದ ಮತ್ತು ಅಭಿನಂದನೆ.

click me!