Mann Ki Baat: ಜನರಿಗೆ ಹೊಸ ದೃಷ್ಟಿ ನೀಡಿದ ಮನ್‌ ಕೀ ಬಾತ್‌: ಸಿಎಂ ಬೊಮ್ಮಾಯಿ

Published : Apr 30, 2023, 08:43 AM IST
Mann Ki Baat: ಜನರಿಗೆ ಹೊಸ ದೃಷ್ಟಿ ನೀಡಿದ ಮನ್‌ ಕೀ ಬಾತ್‌: ಸಿಎಂ ಬೊಮ್ಮಾಯಿ

ಸಾರಾಂಶ

ದೇಶದ ಪ್ರಧಾನಿಯೊಬ್ಬರು ಭಾರತದ ಇತಿಹಾಸದ ಪುಟಗಳಲ್ಲಿ ಅನೇಕ ಪ್ರಥಮಗಳನ್ನು ದಾಖಲಿಸಬಹುದು ಎನ್ನುವುದನ್ನು ಸಾಬೀತು ಮಾಡಿದವರು ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ. ಅವರಿಗೆ ಈ ದೇಶದ ಬಗ್ಗೆ ಇರುವ ಅಸಾಧಾರಣ ಪ್ರೀತಿ ಮತ್ತು ದೇಶದಲ್ಲಿ ಮಹತ್ವದ ಪರಿವರ್ತನೆ ತರಬೇಕೆನ್ನುವ ಪ್ರಾಮಾಣಿಕ ಕಳಕಳಿಯಿಂದಾಗಿ ದೇಶ ದೇಶಗಳಲ್ಲಿ ಇಂದು ಮೋದಿಯವರನ್ನು ಕೇವಲ ರಾಜಕಾರಣಿ ಎಂದಾಗಲೀ ಅಥವಾ ಬಿಜೆಪಿಯ ವರಿಷ್ಠ ನಾಯಕರೆಂದಾಗಲೀ ಗುರ್ತಿಸದೇ ಅದಕ್ಕಿಂತ ಮಿಗಿಲಾದ ಮಹಾನ್‌ ವ್ಯಕ್ತಿ ಎಂದು ಗುರ್ತಿಸಲಾಗುತ್ತಿದೆ: ಬೊಮ್ಮಾಯಿ 

ಬೆಂಗಳೂರು(ಏ.30):  ಮೋದಿಯವರು ಒಂದು ಚಿಂತನೆಯನ್ನು ಈ ಕಾರ್ಯಕ್ರಮದ ಮೂಲಕ ಪ್ರಸಾರ ಮಾಡಿದರೆ ಅದು ಅಲ್ಲಿಗೇ ಮುಗಿಯುವುದಿಲ್ಲ. ಅದು ದೇಶದ ಜನರ ಚಿಂತನೆಯಾಗಿ ರೂಪ ಪಡೆದುಕೊಳ್ಳುತ್ತಿರುವುದು ಮನ್‌ ಕೀ ಬಾತ್‌ ಕಾರ್ಯಕ್ರಮದ ಬಹುದೊಡ್ಡ ಸಾಧನೆ.

ದೇಶದ ಪ್ರಧಾನಿಯೊಬ್ಬರು ಭಾರತದ ಇತಿಹಾಸದ ಪುಟಗಳಲ್ಲಿ ಅನೇಕ ಪ್ರಥಮಗಳನ್ನು ದಾಖಲಿಸಬಹುದು ಎನ್ನುವುದನ್ನು ಸಾಬೀತು ಮಾಡಿದವರು ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ. ಅವರಿಗೆ ಈ ದೇಶದ ಬಗ್ಗೆ ಇರುವ ಅಸಾಧಾರಣ ಪ್ರೀತಿ ಮತ್ತು ದೇಶದಲ್ಲಿ ಮಹತ್ವದ ಪರಿವರ್ತನೆ ತರಬೇಕೆನ್ನುವ ಪ್ರಾಮಾಣಿಕ ಕಳಕಳಿಯಿಂದಾಗಿ ದೇಶ ದೇಶಗಳಲ್ಲಿ ಇಂದು ಮೋದಿಯವರನ್ನು ಕೇವಲ ರಾಜಕಾರಣಿ ಎಂದಾಗಲೀ ಅಥವಾ ಬಿಜೆಪಿಯ ವರಿಷ್ಠ ನಾಯಕರೆಂದಾಗಲೀ ಗುರ್ತಿಸದೇ ಅದಕ್ಕಿಂತ ಮಿಗಿಲಾದ ಮಹಾನ್‌ ವ್ಯಕ್ತಿ ಎಂದು ಗುರ್ತಿಸಲಾಗುತ್ತಿದೆ. ದೇಶ ನಡೆಸುವುದೆಂದರೆ ಬರೀ ಅಧಿಕಾರ ಚಲಾಯಿಸುವುದಲ್ಲ ಎನ್ನುವ ವಿನೀತ ಭಾವವು ಮೋದಿಯವರನ್ನು ರಾಜಕಾರಣದಿಂದ ಮೇಲೆದ್ದು ನಿಲ್ಲುವಂತೆ ಮಾಡಿದೆ. ಮೋದಿಯವರು ತಮ್ಮದೇ ಚಿಂತನೆಯ ಮೂಲಕ ಆರಂಭಿಸಿದ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮವು ಇಂದು ದೇಶಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಈ ‘ಮನ್‌ ಕೀ ಬಾತ್‌’ನ 100 ನೇ ಸಂಚಿಕೆ ಇದೇ ಏಪ್ರಿಲ್‌ 30ರಂದು ಪ್ರಸಾರವಾಗಲಿರುವುದು ವಿಶೇಷ.

ಮಹಿಳಾ ಸಬಲೀಕರಣ, ಆರೋಗ್ಯದಲ್ಲಿ ಸುಧಾರಣೆ, ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಬಿಲ್ ಗೇಟ್ಸ್ ಮೆಚ್ಚುಗೆ!

ವೈವಿಧ್ಯತೆಯ ಆಗರ

ಪ್ರಧಾನಿಯಾದವರಿಗೆ ನೂರೆಂಟು ಕೆಲಸಗಳ ಒತ್ತಡವಿದ್ದಾಗ್ಯೂ ಈವರೆಗೂ ನಿರಂತರವಾಗಿ ಪ್ರತಿ ತಿಂಗಳು ಕಡೇ ಭಾನುವಾರ ಮೋದಿಯವರು ಈ ಕಾರ್ಯಕ್ರಮಕ್ಕಾಗಿ ಬಿಡುವು ಮಾಡಿಕೊಂಡು ದೇಶದ ಜನರೊಂದಿಗೆ ಸಂವಾದ ನಡೆಸುವ ಮೂಲಕ ಈ ಕಾರ್ಯಕ್ರಮವನ್ನು ಪ್ರತಿಯೊಬ್ಬ ದೇಶವಾಸಿಗಳಿಗೂ ತಲುವಂತೆ ಮಾಡುತ್ತಿದ್ದಾರೆ. ಮೋದಿಯವರ ಈ ಕಾರ್ಯಕ್ರಮದಿಂದಾಗಿ ಮೊದಲನೆಯದಾಗಿ ಬಹುತೇಕ ಮನೆಗಳಲ್ಲಿ ಮೂಲೆಗೆ ಸೇರಿದ್ದ ರೇಡಿಯೋ, ಮನೆಯ ಟೇಬಲ್‌ ಅಥವಾ ಡೈನಿಂಗ್‌ ಟೇಬಲ್‌ ಮೇಲೆ ರಾರಾಜಿಸುವಂತಾಗಿದೆ. ಎರಡನೆಯದಾಗಿ ಮೋದಿಯವರು ಈ ದೇಶವು ಅದೆಷ್ಟುವೈವಿಧ್ಯಪೂರ್ಣ ಸಂಸ್ಕೃತಿ, ವೇಷಭೂಷಣ, ಆಚಾರ-ವಿಚಾರ, ಕಲೆ, ಸ್ವಾವಲಂಬೀ ಉದ್ಯೋಗ ಮುಂತಾದವುಗಳನ್ನು ಹೊಂದಿದೆಯೋ ಅಷ್ಟೇ ವೈವಿಧ್ಯಪೂರ್ಣ ವಿಷಯಗಳನ್ನೇ ಮನ್‌ ಕೀ ಬಾತ್‌ನಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಈ ಮೂಲಕ ದೇಶದ ಯಾವುದೋ ಮೂಲೆಯಲ್ಲಿ ಇರುವ ಯುವಕ ಯುವತಿಯರ ಪ್ರತಿಭೆಯನ್ನು ಇಡೀ ದೇಶದ ಜನರಿಗೆ ಪರಿಚಯಿಸುತ್ತಿದ್ದಾರೆ. ಇಂತಹ ಪ್ರಸ್ತಾಪಗಳಿಂದಲೇ ಅನೇಕ ಯುವಕ-ಯುವತಿಯರು ಪ್ರೇರಣೆ ಪಡೆಯುವಂತೆ ಮಾಡುತ್ತಿರುವುದು ಮನ್‌ ಕೀ ಬಾತ್‌ ಕಾರ್ಯಕ್ರಮದ ಬಹುದೊಡ್ಡ ಉಪಲಬ್ಧಿ ಎನ್ನುವುದು ನಿಸ್ಸಂಶಯ.

ಚಿಂತನೆಯಷ್ಟೇ ಅಲ್ಲ

ಮೋದಿಯವರು ಒಂದು ಚಿಂತನೆಯನ್ನು ಈ ಕಾರ್ಯಕ್ರಮದ ಮೂಲಕ ಪ್ರಸಾರ ಮಾಡಿದರೆ ಅದು ಅಲ್ಲಿಗೇ ಮುಗಿಯುವುದಿಲ್ಲ. ಅದು ದೇಶದ ಜನರ ಚಿಂತನೆಯಾಗಿ ರೂಪ ಪಡೆದುಕೊಳ್ಳುತ್ತಿರುವುದು ಮನ್‌ ಕೀ ಬಾತ್‌ ಕಾರ್ಯಕ್ರಮದ ಬಹುದೊಡ್ಡ ಸಾಧನೆ. ಹೀಗೆ ಯಾವುದಾದರೂ ಒಂದು ವಿಷಯ ಪ್ರಸ್ತಾಪಿಸಿ ಜನರು ಆ ವಿಷಯದ ಬಗ್ಗೆ ಚರ್ಚೆ ನಡೆಸಿ ಅದರ ಅಂತಿಮ ಗುರಿ ಏನು ಎನ್ನುವುದನ್ನು ನಿರ್ಧರಿಸುವಂತಾಗಬೇಕು. ಮೋದಿಯವರ ಈ ಪ್ರಯತ್ನಕ್ಕೆ ಇಂತಹ ಯಶೋಗಾಥೆಯ ನಿದರ್ಶನಗಳೂ ಇವೆ ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ.

ಸಿರಿಧಾನ್ಯ ವರ್ಷ

ಉದಾಹರಣೆಗೆ ಉಲ್ಲೇಖಿಸುವುದಾದರೆ, 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದೇ ವಿಶ್ವಸಂಸ್ಥೆ ಘೋಷಿಸಿದೆ. ಪ್ರಧಾನಿ ಮೋದಿಯವರು ಈಗಾಗಲೇ ಸಿರಿಧಾನ್ಯದ ಬೆಳೆ, ಸಿರಿಧಾನ್ಯದ ವಿವಿಧ ಖಾದ್ಯಗಳ ಬಗ್ಗೆ ಮನ್‌ ಕೀ ಬಾತ್‌ನಲ್ಲಿ ಪ್ರಸ್ತಾಪಿಸಿದ್ದರು. ಕಳೆದ ವರ್ಷದ ಸಂಚಿಕೆಯೊಂದರಲ್ಲಿ ಕಲಬುರ್ಗಿಯ ಆಳಂದ ಮತ್ತು ಬೀದರಿನ ಸಿರಿಧಾನ್ಯ ಬೆಳೆಯುವ ರೈತರ ಸಹಕಾರ ಸಂಘ ಹಾಗೂ ಮಹಿಳಾ ಸಹಕಾರ ಸಂಘದ ಪ್ರಸ್ತಾಪ ಮಾಡಿದ್ದರು. ಮೋದಿಯವರು ಸಿರಿಧಾನ್ಯ ಬೆಳೆಯುವವರಿಗೆ ಪ್ರೋತ್ಸಾಹ ನೀಡಿದ್ದರಿಂದ ಈ ಕ್ಷೇತ್ರದಲ್ಲಿ ಉದ್ಯಮ ನಡೆಸುತ್ತಿರುವ ಸಾಕಷ್ಟುಜನರಿಗೆ ಸ್ವಾವಲಂಬನೆಯ ಬದುಕು ದೊರೆಯಿತು.

‘ಶ್ರೀ ಅನ್ನ’ ನಾಮಕರಣ

ಕರ್ನಾಟಕದಲ್ಲಿ ಸಿರಿಧಾನ್ಯ ಎಂದು ಕರೆಯಲ್ಪಡುವ ಧಾನ್ಯಗಳನ್ನು ಮೋದಿಯವರು ‘ಶ್ರೀ ಅನ್ನ’ ಎಂದೂ ನಾಮಕರಣ ಮಾಡಿದ್ದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಪ್ರಯುಕ್ತ ಕೇಂದ್ರದ ಬಜೆಟ್‌ನಲ್ಲಿ ಶ್ರೀ ಅನ್ನ ಯೋಜನೆಯನ್ನು ಘೋಷಿಸುವ ಮೂಲಕ ಭಾರೀ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆ ಬೆಳೆಯುವಂತೆ ಉತ್ತೇಜನ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಸಿರಿಧಾನ್ಯವು ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬುತ್ತಿದೆಯಷ್ಟೇ ಅಲ್ಲ, ಹೇರಳ ಪೌಷ್ಟಿಕತೆ ಹೊಂದಿರುವ ಸಿರಿಧಾನ್ಯಗಳ ಬಳಕೆಯಿಂದ ದೇಶದ ಕೆಲವು ಕಡೆಗಳಲ್ಲಿರುವ ಅಪೌಷ್ಟಿಕತೆ ನಿವಾರಣೆಗೂ ಸಹಕಾರಿಯಾಗುತ್ತಿದೆ. ಸಿರಿಧಾನ್ಯಗಳ ಬಳಕೆಯಿಂದ ಅನೇಕ ರೋಗಗಳಿಗೂ ಪರಿಹಾರವಿದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರವೇ ಇದಕ್ಕೆ ಈಗ ಉತ್ತೇಜನ ನೀಡುತ್ತಿದೆ. ಕರ್ನಾಟಕದಲ್ಲೂ ಈ ಬಾರಿಯ ಬಜೆಟ್ಟಿನಲ್ಲಿ ಸಿರಿಧಾನ್ಯ ಕೃಷಿಗೆ ಉತ್ತೇಜನ ನೀಡಿದ್ದೇವೆ.
ಯೋಗ ಸರ್ವವ್ಯಾಪಿಯಾಗಿದೆ

ಮೋದಿಯವರು ಯೋಗ ದಿನವನ್ನಾಗಿ ಜೂನ್‌ 21ನ್ನು ಮೊದಲು ಘೋಷಣೆ ಮಾಡಿದ್ದೂ ಇದೇ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಎನ್ನುವುದು ಬಹಳ ಮಹತ್ವದ ಸಂಗತಿ. ಇಂದು ಈ ದಿನವನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ವನ್ನಾಗಿ ಬಹುತೇಕ ದೇಶಗಳು ಆಚರಿಸುತ್ತಿವೆ. ಭಾರತದ ಶ್ರೇಷ್ಠ ವಿದ್ಯೆಯಾದ ಯೋಗವನ್ನು ವಿಶ್ವದಲ್ಲಿ ಜನಪ್ರಿಯಗೊಳಿಸಲು ಮೋದಿಯವರು ಮನ್‌ ಕೀ ಬಾತ್‌ ಮೂಲಕವೇ ಮೊದಲು ಪೀಠಿಕೆ ಹಾಕಿದ್ದರು. ಅದು ಈಗ ಭಾರೀ ಯಶಸ್ವೀ ಅಭಿಯಾನವಾಗಿ ವಿಶ್ವವ್ಯಾಪಿಯಾಗಿದೆ. ಮನ್‌ ಕೀ ಬಾತ್‌ ಕಾರ್ಯಕ್ರಮದ ಪರಿಣಾಮದ ಹಲವು ಆಯಾಮಗಳಲ್ಲಿ ಇದೂ ಒಂದಾಗಿದೆ.

ಯುವಕರಿಗೆ ಹೊಸ ದೃಷ್ಟಿ

ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳ ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಮೋದಿಯವರು ಬೆಂಗಳೂರಿನಲ್ಲಿ ಸಕ್ರಿಯವಾಗಿರುವ ‘ಯುತ್‌ ಫಾರ್‌ ಪರಿವರ್ತನ್‌’ ಸಂಘಟನೆ ಕುರಿತು ಉಲ್ಲೇಖಿಸಿದ್ದರು. ಈ ಸಂಘಟನೆಯ ಪ್ರಮುಖರಿಗೂ ಇದು ಅಚ್ಚರಿಯ ಸಂಗತಿಯಾಗಿತ್ತು. ಬೆಂಗಳೂರು ನಗರದಲ್ಲಿ ಈ ಸಂಘಟನೆಯು ಪ್ರಮುಖವಾಗಿ ಪರಿಸರ ಮತ್ತು ನಗರದ ಸೌಂದರ್ಯೀಕರಣದ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಕಳೆದ ಎಂಟು ವರ್ಷಗಳಿಂದಲೂ ಸಕ್ರಿಯವಾಗಿರುವ ಈ ಸಂಘಟನೆಯು ಯುವಕರಿಗೆ ಹೊಸ ದೃಷ್ಟಿನೀಡಿದೆ ಎಂದು ಮೋದಿಯವರು ಹೇಳಿದ್ದರು. ಯುವಕರು ವ್ಯವಸ್ಥೆಯ ಬಗ್ಗೆ ದೂರುವುದನ್ನೇ ಕಾಯಕ ಮಾಡಿಕೊಳ್ಳದೆ ಹೇಗೆ ತಾವೇ ಸ್ವತಃ ಪರಿವರ್ತನೆಯ ಭಾಗವಾಗಬಹುದು ಎನ್ನುವುದನ್ನು ಈ ಸಂಘಟನೆ ತೋರಿಸಿಕೊಟ್ಟಿದೆ.

ಜೇನು ಕೃಷಿ ಪ್ರಸ್ತಾಪ

ಇಂದು ಜೇನು ಕೃಷಿಯಲ್ಲಿ ತೊಡಗುವವರ ಸಂಖ್ಯೆ ಕುಸಿಯುತ್ತಿರುವ ಸಂದರ್ಭದಲ್ಲೇ ಶಿರಸಿಯ ಮಧುಕೇಶ್ವರ ಹೆಗಡೆ ಅವರ ಸಾಧನೆಯನ್ನು ಮೋದಿಯವರು ಇತ್ತೀಚಿನ ತಮ್ಮ ಮನ್‌ ಕೀ ಬಾತ್‌ನಲ್ಲಿ ಉದಾಹರಿಸಿದ್ದು ನೂರಾರು ಜೇನು ಕೃಷಿಕರನ್ನು ಹುಟ್ಟುಹಾಕಿದೆ. ಮಧುಕೇಶ್ವರ ಹೆಗಡೆಯವರು ಜೇನು ಉತ್ಪಾದನೆಯಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿರುವುದಷ್ಟೇ ಅಲ್ಲದೇ ಜೇನು ಕೃಷಿಯಲ್ಲಿ ಆಸಕ್ತಿ ಇರುವವರಿಗೆ ತರಬೇತಿ, ಜೇನು ಸಾಕಲು ಅಗತ್ಯವಾದ ಗೂಡು, ಜೇನು ಹುಳ ಮತ್ತಿತರ ಸೌಲಭ್ಯವನ್ನೂ ಒದಗಿಸುತ್ತಿದ್ದಾರೆ. ಜೊತೆಗೆ ಅನೇಕ ಜೇನು ಆಧಾರಿತ ತಿನಿಸುಗಳ ಉತ್ಪಾದನೆಯಲ್ಲೂ ತೊಡಗಿದ್ದಾರೆ. ಜೇನು ಕೃಷಿಯಿಂದ ಸ್ವಾವಲಂಬಿ ಬದುಕು ನಡೆಸಲು ಮೋದಿಯವರು ತಮ್ಮ ಮನ್‌ ಕೀ ಬಾತ್‌ ಮೂಲಕ ಯುವಕರಲ್ಲಿ ವಿಶ್ವಾಸ ಮೂಡಿಸಿದ್ದರೆ ಅದಕ್ಕಿಂತ ದೊಡ್ಡ ಸಾಧನೆ ಯಾವುದಿದೆ?

ಅನೇಕ ವೈಶಿಷ್ಟ್ಯಗಳ ಪರಿಚಯ

ಇಂದು ಮನ್‌ ಕೀ ಬಾತ್‌ ಭಾರೀ ಜನಪ್ರಿಯವಾಗಿದ್ದರೆ ಅದಕ್ಕೆ ಮೋದಿಯವರು ಆಯ್ದುಕೊಳ್ಳುವ ವಿಷಯಗಳು ಕಾರಣ. ದೇಶದ ಯಾವುದೋ ಮೂಲೆಯಲ್ಲಿ ಪ್ರಚಾರವಿಲ್ಲದೇ ನಡೆದಿರುವ ಸಮಾಜಮುಖೀ ಕಾರ್ಯವನ್ನು ಮೋದಿ ಈ ಕಾರ್ಯಕ್ರಮದಲ್ಲಿ ಉಲ್ಲೇಖಿಸುತ್ತಾರೆ. ಇದರಿಂದ ಇನ್ನಾವುದೋ ಮೂಲೆಯಲ್ಲಿರುವ ಜನರ ಸಮಸ್ಯೆಗೆ ಪರಿಹಾರ ಸಿಗಬಹುದಾದ ಸಂದರ್ಭಗಳೂ ಇವೆ. ಮೋದಿಯವರು ಒಮ್ಮೆ ಟೆಲಿಮೆಡಿಸಿನ್‌ ವಿಷಯದಲ್ಲಿ ಮಾತನಾಡುವಾಗ ಈಶಾನ್ಯ ರಾಜ್ಯದಲ್ಲಿ ವೈದ್ಯರೊಬ್ಬರು ಈ ಸೇವೆಯನ್ನು ನೀಡುತ್ತಿರುವುದನ್ನು ಉಲ್ಲೇಖಿಸಿದ್ದರು. ಇದು ದೇಶದ ಇನ್ನಾವುದೋ ಮೂಲೆಯಲ್ಲಿರುವ ವ್ಯಕ್ತಿಯ ಸಮಸ್ಯೆಗೆ ಪರಿಹಾರವಾಗಿ ಸಾರ್ಥಕಗೊಳ್ಳುತ್ತಿದೆ.

ಆಟಿಕೆಗಳ ಉದ್ಯಮ

ಕಳೆದ ವರ್ಷ ಜುಲೈನಲ್ಲಿ ಮೋದಿಯವರು ದೇಶದ ಆಟಿಕೆಗಳ ಉದ್ಯಮಗಳ ಸ್ಥಿತಿ-ಗತಿ ಕುರಿತಾಗಿ ಮಾತನಾಡಿದ್ದರು. ಬೆಂಗಳೂರಿನ ಸ್ಟಾರ್ಚ್‌ ಅಪ್‌ ಉದ್ಯಮವೊಂದು ಹೇಗೆ ಆಟಿಕೆಗಳ ತಯಾರಿಕೆಯಲ್ಲಿ ಸಾಧನೆ ಮಾಡುತ್ತಿದೆ ಎನ್ನುವ ವಿಷಯ ಹೇಗೋ ಮೋದಿಯವರನ್ನು ತಲುಪಿತ್ತು. ಈ ಉದ್ಯಮದ ವಹಿವಾಟು ಹೇಗಿದೆ ಎನ್ನುವ ಮಾಹಿತಿಯನ್ನೂ ಮೋದಿ ಒದಗಿಸಿ ದೇಶೀಯವಾಗಿ ಆಟಿಕೆ ಉತ್ಪಾದನಾ ಉದ್ಯಮ ನಡೆಸುವವರಿಗೆ ಭರವಸೆಯ ದಿನಗಳು ಮುಂದಿವೆ ಎನ್ನುವ ದೃಢವಾದ ನಂಬಿಕೆಯನ್ನೂ ಮೂಡಿಸಿದರು. ದೇಶೀಯವಾಗಿ ಇಂದು ಆಟಿಕೆಗಳ ತಯಾರಿಕೆ ಮತ್ತು ರಫ್ತು ಗಮನಾರ್ಹವಾಗಿ ಹೆಚ್ಚಿದೆ ಎನ್ನುವ ಸ್ವಾರಸ್ಯವನ್ನೂ ಅವರು ಹಂಚಿಕೊಂಡಿದ್ದಾರೆ. ಈ ಮೊದಲು ಸುಮಾರು 3000 ಕೋಟಿ ರು.ಗಳಷ್ಟು ಆಟಿಕೆಗಳು ನಮ್ಮ ದೇಶಕ್ಕೆ ಆಮದಾಗುತ್ತಿತ್ತು. ಆದರೆ ಈಗ ನಮ್ಮದೇ ಉದ್ಯಮಗಳಿಂದಾಗಿ ಶೇ.70ರಷ್ಟು ಆಮದು ಕಡಿಮೆಯಾಗಿದೆ ಎನ್ನುವ ಅಂಶವು ಕರ್ನಾಟಕದ ಪಾಲಿಗೆ ಆಶಾದಾಯಕ ಸಂಗತಿಯೇ ಹೌದು.

ಮನ್‌ ಕೀ ಬಾತ್‌' 100ನೇ ಸಂಚಿಕೆ: ವಿವಿಧ ಕ್ಷೇತ್ರದ ದಿಗ್ಗಜರಿಂದ ಪ್ರಶಂಸೆಯ ಸುರಿಮಳೆ

ಕೊಪ್ಪಳ ಕ್ಲಸ್ಟರ್‌ಗೆ ಉತ್ತೇಜನ

ಮೋದಿಯವರ ಪ್ರೇರಣೆಯಿಂದಾಗಿ ಇದೀಗ ಕೊಪ್ಪಳದಲ್ಲಿ ಆರಂಭಗೊಂಡಿರುವ ಆಟಿಕೆ ಉತ್ಪಾದನಾ ಕ್ಲಸ್ಟರ್‌ನಲ್ಲಿ ಭಾರೀ ಬಂಡವಾಳ ಹೂಡಿಕೆಯ ಅವಕಾಶ ತೆರೆದುಕೊಂಡಂತಾಗಿದೆ. ಚನ್ನಪಟ್ಟಣದ ಆಟಿಕೆ ಉತ್ಪಾದನೆಗೆ ಈಗಾಗಲೇ ವಿಶ್ವವ್ಯಾಪಿ ಖ್ಯಾತಿಯಿದೆ. ಇದಕ್ಕೆ ಮನ್‌ ಕೀ ಬಾತ್‌ನಲ್ಲಿ ಮೋದಿಯವರ ವಿಷಯ ಪ್ರಸ್ತಾಪದಿಂದ ಮತ್ತಷ್ಟುಬೇಡಿಕೆ ಹೆಚ್ಚುವ ಅವಕಾಶದೆ.

ಸರ್ವವ್ಯಾಪಿ ಸರ್ವಸ್ಪರ್ಶಿ

ಮೋದಿಯವರು ಹೀಗೆ ಒಂದೆರಡು ವಿಷಯಗಳಲ್ಲ, ಭಿನ್ನ ಕ್ಷೇತ್ರದ ನೂರಾರು ವಿಷಯಗಳನ್ನು ಸ್ಪರ್ಶಿಸಿದ್ದಾರೆ. ಇದು ದೇಶದಲ್ಲೇ ಹೊಸ ಅಲೆಯನ್ನು ಸೃಷ್ಟಿಸಿ ಜನರ ಚಿಂತನೆಯಲ್ಲೇ ಬದಲಾವಣೆ ತರುವಷ್ಟುಪ್ರಭಾವಿಯಾಗಿದೆ. ಇದರ ನೇರ ಲಾಭ ಜನಸಾಮಾನ್ಯರಿಗೆ ಸಿಗುವುದು ಒಂದಾದರೆ, ದೇಶದ ಆರ್ಥಿಕತೆ ಸುಧಾರಣೆಗೆ ಹೊಸ ಆಯಾಮವನ್ನೂ ನೀಡಿದಂತಾಗಿದೆ. ಒಂದರ್ಥದಲ್ಲಿ ಮೋದಿಯವರ ಮನ್‌ ಕೀ ಬಾತ್‌ ಸರ್ವ ವ್ಯಾಪಿ-ಸರ್ವಸ್ಪರ್ಶಿ ಎಂದರೆ ಉತ್ಪ್ರೇಕ್ಷೆಯೇನೂ ಆಗದು. ಇದೀಗ 100 ಸಂಚಿಕೆಯನ್ನು ಪೂರ್ಣಗೊಳಿಸುತ್ತಿರುವ ಮನ್‌ ಕೀ ಬಾತ್‌ ಕಾರ್ಯಕ್ರಮ ಇನ್ನೂ ನೂರು ತಲುಪಿ ಹಾಗೇ ಮುಂದುವರಿಯುತ್ತಿರಲಿ ಎಂದು ಹಾರೈಸುತ್ತೇನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ