ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಶನಿವಾರ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದೆ.
ಕಲಬುರಗಿ/ಶಹಾಬಾದ್ (ನ.20): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಶನಿವಾರ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದೆ.
ಮಾಲಗತ್ತಿ ಸಮೀಪದ ತಮ್ಮ ಫಾರ್ಮ್ ಹೌಸ್ ಮನೆಯಿಂದ ರಾತ್ರಿ 1.30 ಗಂಟೆ ಸುಮಾರಿಗೆ ಕಲಬುರಗಿ ಕಡೆಗೆ ಹೊರಟಿದ್ದಾಗ ಕಾಗಿಣಾ ಸೇತುವೆ ಮಾಲಗತ್ತಿ ಮಧ್ಯೆ ಕಾರು ತಡೆದು ಹಲ್ಲೆ ನಡೆಸಿದ ಬಳಿಕ ಗುಂಪು ಪರಾರಿಯಾಗಿದೆ.
ಪ್ರಿಯಾಂಕ್ ಖರ್ಗೆ ನಾಯಕ ಅಲ್ಲ, ನಾನ್ ಸೆನ್ಸ್ : ಬಿಜೆಪಿ ನಾಯಕ ಮಣಿಕಂಠ ರಾಠೋಡ್ ಕಿಡಿ
ಮಣಿಕಂಠ ರಾಠೋಡ್ ಅವರಿದ್ದ ಕಾರು ತಡೆದು ದುಷ್ಕರ್ಮಿಗಳು ಮದ್ಯದ ಬಾಟಲಿ, ಕಲ್ಲುಗಳಿಂದ ದಾಳಿ ಮಾಡಿದ್ದಾರೆ. ದಾಳಿಯಿಂದಾಗಿ ಮಣಿಕಂಠ ರಾಠೋಡ್ ತಲೆಗೆ ಮತ್ತು ಎದೆ, ತೋಳು, ಕಿವಿಬಳಿ ತೀವ್ರ ಪೆಟ್ಟಾಗಿದೆ. ತಲೆಯಿಂದ ರಕ್ತ ಸುರಿದು ಅವರು ನೆಲಕ್ಕೆ ಬಿದ್ದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮಣಿಕಂಠ ಅವರ ಜೊತೆಗಿದ್ದ ಶ್ರೀಕಾಂತ ಸುಲೇಗಾಂವ್ ಎಂಬುವವರೂ ಗಾಯಗಳಾಗಿವೆ. ಗಾಯಗೊಂಡ ಇಬ್ಬರನ್ನೂ ರಾತ್ರಿಯೇ ಕಲಬುರಗಿಯ ಮೆಡಿಕೇರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖರ್ಗೆ ಕುಟುಂಬದ ಹತ್ಯೆಗೆ ಸಂಚು: ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ದೂರು
ನನ್ನ ಮೇಲಿನ ಹಲ್ಲೆಗೆ ಪ್ರಿಯಾಂಕ್ ಖರ್ಗೆ ಕಾರಣ: ರಾಠೋಡ್
ತಮ್ಮ ಮೇಲಿನ ಹಲ್ಲೆಗೆ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕಾರಣ ಎಂದು ಮಣಿಕಂಠ ರಾಠೋಡ್ ಆರೋಪಿಸಿದ್ದಾರೆ. ಹಲ್ಲೆ ಘಟನೆ ಹಿಂದೆ ಪ್ರಿಯಾಂಕ್ ಖರ್ಗೆ ಅವರ ಕುಮ್ಮಕ್ಕಿದೆ. ಇತ್ತೀಚೆಗೆ ನಾನು ಅವರ ವಿರುದ್ಧ ಬೆಂಗಳೂರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೆ. ಹೀಗಾಗಿ ನನ್ನ ಕೊಲೆ ಮಾಡಿಸುವ ಉದ್ದೇಶದಿಂದ ದಾಳಿ ಮಾಡಿಸಿದ್ದಾರೆ ಎಂದು ದೂರಿದ್ದಾರೆ.