
ಶ್ರೀನಿವಾಸಪುರ (ಕೋಲಾರ ಜಿಲ್ಲೆ) : ಬೇಸಿಗೆಯಲ್ಲಿ ಕೇಜಿಗೆ 100 ರು.ವರೆಗೆ ಮಾರಾಟ ಆಗುತ್ತಿದ್ದ ಮಾವಿನ ಹಣ್ಣಿನ ದರ ಈಗ ಕೆ.ಜಿ.ಗೆ 3-4 ರು.ಗೆ (ಒಂದು ಟನ್‌ಗೆ ಮಾವಿನ ಬೆಲೆ 3 ರಿಂದ 4 ಸಾವಿರ ರು.ಗೆ) ಕುಸಿದಿದೆ. ಹೀಗಾಗಿ ರೈತರು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಾವಿಗೆ ಸಹಾಯಧನ ನೀಡಬೇಕು ಎಂದು ಆಗ್ರಹಿಸಿ ಬುಧವಾರ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಬಂದ್ ಆಚರಿಸಲಾಗಿದೆ ಹಾಗೂ ಮಾವನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.
ಬೆಲೆ ಕುಸಿತದಿಂದ ಕಂಗೆಟ್ಟಡ ಮಾವು ಬೆಳೆಗಾರರು ಕರೆ ನೀಡಿದ್ದ ಈ ಬಂದ್‌ಗೆ ವಿವಿಧ ರೈತ ಸಂಘಟನೆಗಳು, ಬಿಜೆಪಿ, ಜೆಡಿಎಸ್ ಪಕ್ಷಗಳು, ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದವು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ತೋತಾಪುರಿ ಹಾಗೂ ವಿವಿಧ ತಳಿಯ ಮಾವಿನಕಾಯಿಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು. ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು, ಸರ್ಕಾರಿ, ಖಾಸಗಿ ಶಾಲಾ-ಕಾಲೇಜುಗಳು ಮುಚ್ಚಿದ್ದವು. ಬಸ್ ಸಂಚಾರ ಕೂಡ ಸ್ಥಗಿತಗೊಂಡಿತ್ತು. ಇದರಿಂದಾಗಿ ಕೋಲಾರ, ಚಿಂತಾಮಣಿ, ಮುಳಬಾಗಿಲಿಗೆ ಹೋಗಲು ಬಸ್‌ಗಳ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಎಸ್.ಮುನಿಸ್ವಾಮಿ, ನೆರೆಯ ಆಂಧ್ರದಲ್ಲಿ ಮಾವು ಬೆಳೆಗಾರರಿಗೆ ಅಲ್ಲಿನ ರಾಜ್ಯ ಸರ್ಕಾರ 1 ಟನ್‌ಗೆ 4 ಸಾವಿರ ರು. ಸಹಾಯಧನ ನೀಡುತ್ತಿದೆ. ಅದೇ ರೀತಿ ರಾಜ್ಯದಲ್ಲೂ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.
‘ಮಾವು ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ಸಹಾಯಧನಕ್ಕಾಗಿ ಆಗ್ರಹಿಸಿ ನಿರಂತರ ಹೋರಾಟ ಮಾಡುತ್ತಿದ್ದರೂ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮ ಅಹವಾಲು ಆಲಿಸಿಲ್ಲ. ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಮಾವಿನಕಾಯಿಗಳನ್ನು ರಾಶಿ ಹಾಕಿ, ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಅಲ್ಲದೆ, ಗುರುವಾರ ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾವು ಬೆಳೆಗಾರರು, ಉಸ್ತುವಾರಿ ಸಚಿವರ ಸಭೆ ಆಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶ್ರೀನಿವಾಸಪುರದ ಮಾವಿನರಸದ ಖಾರ್ಖಾನೆಯವರು ಕಳೆದ ವರ್ಷದ ಸ್ಟಾಕ್ ಇದೆ ಎಂದು ಹೇಳಿ ಖರೀದಿ ನಿಲ್ಲಿಸಿದ್ದೂ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.
- ಮಾವಿನ ಹಣ್ಣಿನ ಬೆಲೆ ಸತತ 10 ದಿನಗಳಿಂದ ನಿರಂತರ ಕುಸಿತ
- ಸರ್ಕಾರದ ಸಹಾಯಧನಕ್ಕಾಗಿ ಆಗ್ರಹಿಸಿ ರೈತರಿಂದ ಹೋರಾಟ
- ಆದರೂ ತಮ್ಮ ನೋವನ್ನು ಸರ್ಕಾರ ಕೇಳುತ್ತಿಲ್ಲ ಎಂದು ಆಕ್ರೋಶ
- ಸಮಸ್ಯೆಗೆ ಸ್ಪಂದಿಸದಿದ್ದರೆ ಬೆಂಗಳೂರಲ್ಲಿ ಹೋರಾಡುವ ಎಚ್ಚರಿಕೆ
- ವಿಧಾನಸೌಧದ ಮುಂಭಾಗದಲ್ಲಿ ಮಾವು ಸುರಿಯುವ ಬೆದರಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ