
ಪಾಂಡವಪುರ (ಜೂ.11): ಎತ್ತುಗಳ ಮಾರಾಟದ ವಿಚಾರವಾಗಿ ಯುವಕರ ಗುಂಪು ಇಬ್ಬರಿಗೆ ಡ್ಯ್ರಾಗರ್‌ನಿಂದ ಇರಿದು ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಪಟ್ಟಸೋಮನಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ಬಿ.ಕೆ.ಅರುಣ್‌ಕುಮಾರ್, ರಾಘವೇಂದ್ರ, ಕೇಶವ ಮತ್ತು ಮನು ಎಂಬುವವರು ಹಲ್ಲೆ ನಡೆಸಿರುವ ಆರೋಪಿಗಳು. ಅದೇ ಗ್ರಾಮದ ಶರತ್ ಹಾಗೂ ಪಿ.ಎಸ್.ಪ್ರಮೋದ್ ಹಲ್ಲೆಯಿಂದ ಮಾರಣಾಂತಿಕವಾಗಿ ಗಾಯಗೊಂಡವರು.
ಆರೋಪಿ ಬಿ.ಕೆ.ಅರುಣ್‌ಕುಮಾರ್ ಅವರ ಎತ್ತುಗಳನ್ನು ಹಲ್ಲೆಗೊಳಗಾಗಿರುವ ಪಿ.ಎಸ್.ಪ್ರಮೋದ್ ಮತ್ತು ಶರತ್ ಇತ್ತೀಚೆಗೆ ಮಾರಾಟ ಮಾಡಿಸಿದ್ದರು. ಈ ಎತ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿಸಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಅರುಣ್‌ಕುಮಾರ್ ಶನಿವಾರ ರಾತ್ರಿ ಇಬ್ಬರೊಂದಿಗೆ ಜಗಳ ತೆಗೆದು ತನ್ನ ಸಹಚರರೊಂದಿಗೆ ಸೇರಿಕೊಂಡು ಡ್ಯ್ರಾಗರ್‌ನಿಂದ ಹೊಟ್ಟೆಗೆ ಚುಚ್ಚಿರುವ ಪರಿಣಾಮ ಶರತ್ ತೀವ್ರವಾಗಿ ಗಾಯಗೊಂಡಿದ್ದಾರೆ.
ತಕ್ಷಣ ಇವರನ್ನು ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ. ಮತ್ತೊಬ್ಬ ವ್ಯಕ್ತಿ ಪ್ರಮೋದ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ. ಹಲ್ಲೆಗೊಳಗಾದ ಪ್ರಮೋದ್ ನೀಡಿರುವ ಹೇಳಿಕೆ ಮತ್ತು ದೂರಿನ ಮೇರೆಗೆ ಪಾಂಡವಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಚಲಿಸುತ್ತಿದ್ದ ರೈಲಿಗೆ ಸಿಲುಕಿ ವೃದ್ಧ ಸಾವು
ಕೆ.ಆರ್.ಪೇಟೆ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ವೃದ್ಧನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಂದಗೆರೆ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಮಂದಗೆರೆ ಗ್ರಾಮದ ರಾಜೇಗೌಡ (75) ಮೃತ ವ್ಯಕ್ತಿ. ರೈಲು ಹಳಿ ದಾಟುವ ಸಮಯದಲ್ಲಿ ಮೈಸೂರು-ಧಾರವಾಡ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿರುವ ಶಂಕೆ ವ್ಯಕ್ತತವಾಗಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಮೃತ ರಾಜೇಗೌಡ ದೇಹದ ಅಂಗಾಂಗಗಳು ಛಿದ್ರ ಛಿದ್ರಗೊಂಡಿವೆ. ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ