
ಮಂಗಳೂರು (ಮೇ.13): ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ, ಸುಳ್ಳು ಸುದ್ದಿ, ದುರುದ್ದೇಶಪೂರಿತ ಪೋಸ್ಟ್ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಅದರಂತೆ ಅನೇಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇದು ಮುಂದುವರಿಯಲಿದೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ನಕಲಿ ಖಾತೆಗಳ ಮೂಲಕ ದುರುದ್ದೇಶದ ಪೋಸ್ಟ್ ಹಾಕುತ್ತಿರುವುದು ಕಂಡುಬಂದಿದ್ದು, ಅವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿಯೂ ಕ್ರಮ ವಹಿಸಲಾಗುತ್ತಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಸೈನಿಕರ ವಿರುದ್ಧದ ಯಾವುದೇ ಅಪಪ್ರಚಾರ, ಹೇಳಿಕೆಯನ್ನು ಸಹಿಸಲಾಗದು. ದೇಶದ ವಿಚಾರ ಬಂದಾಗ ನಾವೆಲ್ಲರೂ ಒಂದೇ. ಈಗಾಗಲೇ ತಿರಂಗಾ ಯಾತ್ರೆ ನಡೆಸಲಾಗಿದ್ದು, ಭಾರತೀಯ ಸೇನೆ ಮತ್ತು ಭಾರತ ಸರ್ಕಾರದ ಜತೆ ನಾವಿರುವುದನ್ನು ಸ್ಪಷ್ಟಪಡಿಸಲಾಗಿದೆ. ದೇಶದ ಏಕತೆ, ಭದ್ರತೆಗೆ ಚ್ಯುತಿ ತರುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕಲಾಗದು ಎಂದು ದಿನೇಶ್ ಗುಂಡೂರಾವ್ ಎಚ್ಚರಿಸಿದರು.
ಕೊಲೆಗೀಡಾದ ಸುಹಾಸ್ ಶೆಟ್ಟಿ ಮನೆಗೆ ಸರ್ಕಾರದ ಪ್ರತಿನಿಧಿಗಳು ಭೇಟಿ ನೀಡದ ಕುರಿತ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ಕೊಲೆ ಯಾವ ಕಾರಣಕ್ಕೆ ಆಗಿದೆ ಎಂಬುದನ್ನು ತಿಳಿದು ಅದರನುಸಾರ ಸರ್ಕಾರ ತನ್ನ ಜವಾಬ್ಧಾರಿ ನಿರ್ವಹಿಸುತ್ತದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಶಿಕ್ಷಿಸುವುದು ಸರ್ಕಾರದ ಆದ್ಯತೆ. ಈ ನಿಟ್ಟಿನಲ್ಲಿ ಪೊಲೀಸರು ಈಗಾಗಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಇದನ್ನೂ ಓದಿ: ಬಿಜೆಪಿಯವ್ರಿಗೆ ಮಾನ ಮಾರ್ಯಾದೆ ಇಲ್ಲ, ಅವರು ಸುಳ್ಳು ಹೇಳ್ತಾರೆ, ನೀವು ನಂಬ್ತೀರಿ: ಸಿಎಂ ಕಿಡಿ
ಶಾಸಕ ಹರೀಶ್ ಪೂಂಜಾ ಹೇಳಿಕೆ, ನಿಂದನೆಗೆ ಸಂಬಂಧಿಸಿ ಕಾನೂನಾತ್ಮಕವಾಗಿ ಕ್ರಮ ವಹಿಸಲಾಗಿದೆ. ಅವರು ಉಪಯೋಗಿಸುವ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ವೈಯಕ್ತಿಕ ಟೀಕೆಗೆ ನಾನು ಉತ್ತರಿಸುವುದಿಲ್ಲ. ಅದು ಅವರ ಕೀಳು ಅಭಿರುಚಿ, ಮನಸ್ಥಿತಿಯನ್ನು ತೋರಿಸುತ್ತದೆ. ಅವರ ಹೇಳಿಕೆ ಅವರ ವ್ಯಕ್ತಿತ್ವದ ಕೈಗನ್ನಡಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ