
ಬೆಂಗಳೂರು (ಏ.27): ಇಡೀ ರಾಜ್ಯವನ್ನೇ ನಡುಗಿಸಿದ್ದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಖ್‌ಗೆ ಎನ್ಐಎ (NIA) ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 94 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ವಿಶೇಷವೆಂದರೆ, ವಿಚಾರಣೆ ವೇಳೆ ಆರೋಪಿ ಮೊಹಮ್ಮದ್ ಶಾರೀಖ್ ತನ್ನ ಮೇಲಿನ ತಪ್ಪುಗಳನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದನು.
2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ತನಿಖೆಯ ವೇಳೆ ಉಗ್ರ ಶಾರೀಖ್ ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನವನ್ನು ಗುರಿಯಾಗಿಸಿಕೊಂಡು ಬಾಂಬ್ ಇಡಲು ಹೋಗುತ್ತಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ಆದರೆ, ವಿಧಿಯಾಟ ಎಂಬಂತೆ ದೇವಸ್ಥಾನ ತಲುಪುವ ಮೊದಲೇ ಮಾರ್ಗಮಧ್ಯೆ ಆಟೋದಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಇದರಿಂದ ದೊಡ್ಡ ಮಟ್ಟದ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿತ್ತು.
ಈ ಸ್ಫೋಟದಲ್ಲಿ ಆರೋಪಿ ಶಾರೀಖ್ ಸ್ವತಃ ಗಾಯಗೊಂಡಿದ್ದಲ್ಲದೆ, ಮುಗ್ಧ ಆಟೋ ಚಾಲಕ ಪುರುಷೋತ್ತಮ್ ಪೂಜಾರಿ ಅವರು ತೀವ್ರವಾಗಿ ಗಾಯಗೊಂಡಿದ್ದರು. ಸುಮಾರು 3 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಶಾರೀಖ್‌ನನ್ನು ಎನ್ಐಎ ವಶಕ್ಕೆ ಪಡೆದಿತ್ತು. ಸುದೀರ್ಘ ತನಿಖೆ ನಡೆಸಿದ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಶಾರೀಖ್ ನ್ಯಾಯಾಧೀಶರ ಮುಂದೆ ವಿಚಿತ್ರ ಮನವಿಯೊಂದನ್ನು ಸಲ್ಲಿಸಿದ್ದನು. 'ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದೇನೆ, ಆರೋಗ್ಯ ಸರಿ ಇಲ್ಲದ ಕಾರಣ ಔಷಧಿಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತಿದೆ. ದಯವಿಟ್ಟು ನನ್ನನ್ನು ಬೆಂಗಳೂರಿನಿಂದ ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಿ' ಎಂದು ಕೋರಿದ್ದನು.
ಆದರೆ ಈ ಮನವಿಯನ್ನು ಕಡಾಖಂಡಿತವಾಗಿ ತಿರಸ್ಕರಿಸಿದ ನ್ಯಾಯಾಧೀಶರು, 'ಬೆಂಗಳೂರಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳು ಲಭ್ಯವಿವೆ. ಶಿವಮೊಗ್ಗಕ್ಕಿಂತ ಇಲ್ಲಿಯೇ ಚಿಕಿತ್ಸೆ ಉತ್ತಮವಾಗಿದೆ' ಎಂದು ಕಿವಿಮಾತು ಹೇಳಿ ಮನವಿಯನ್ನು ವಜಾಗೊಳಿಸಿದರು. ಶಾರೀಖ್ ವಿರುದ್ಧ ಕೇವಲ ಈ ಪ್ರಕರಣ ಮಾತ್ರವಲ್ಲದೆ, ಶಿವಮೊಗ್ಗದ ತುಂಗಾ ತೀರದಲ್ಲಿ ನಡೆಸಿದ ಟ್ರಯಲ್ ಬ್ಲಾಸ್ಟ್ ಪ್ರಕರಣದ ವಿಚಾರಣೆಯೂ ಬಾಕಿ ಇದೆ. ಸದ್ಯ ಎನ್ಐಎ ನ್ಯಾಯಾಲಯ ನೀಡಿರುವ ಈ ತೀರ್ಪು ಉಗ್ರ ಚಟುವಟಿಕೆಗಳಲ್ಲಿ ತೊಡಗುವವರಿಗೆ ಕಠಿಣ ಸಂದೇಶ ರವಾನಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ