ಕನ್ನಡ ನಾಡಿನ ಮಕ್ಕಳು ಕನ್ನಡ ಪರೀಕ್ಷೇಲೇ ಫೇಲ್‌ ಕಳವಳಕಾರಿ

Published : Apr 27, 2026, 11:57 AM ISTUpdated : Apr 27, 2026, 12:06 PM IST
SSLC

ಸಾರಾಂಶ

ಈ ಬಾರಿಯ SSLC ಪರೀಕ್ಷೆಯಲ್ಲಿ ಐತಿಹಾಸಿಕ ಫಲಿತಾಂಶ ಬಂದಿದ್ದರೂ, ಪ್ರಥಮ ಭಾಷೆ ಕನ್ನಡದಲ್ಲೇ ಸುಮಾರು 19 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದು ಕನ್ನಡ ಬೋಧನಾ ಕ್ರಮ, ಭಾಷೆಯ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ತಕ್ಷಣದ ಪರಾಮರ್ಶೆಯ ಅಗತ್ಯವನ್ನು ಒತ್ತಿಹೇಳುತ್ತದೆ.

ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದೊಂದು ದಿನ ಹಿಂದಿಗೆ ಪ್ರಸ್ತಾಪಿಸಿದಂತೆ ಗ್ರೇಡಿಂಗ್‌ ಅಥವಾ ಗ್ರೇಸ್‌ ಮಾರ್ಕ್ಸ್‌ ಕೊಟ್ಟು ಕನ್ನಡ ವಿಷಯದಲ್ಲಿ ಪಾಸು ಮಾಡಬೇಕಾದ ದುರ್ದಿನ ಬಂದೀತು.

ಶೈಕ್ಷಣಿಕ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿರುವ ವಾರ್ಷಿಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಇದೇ ಮೊದಲ ಬಾರಿಗೆ ಪರೀಕ್ಷೆ ಬರೆದ ಶೇ.90ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕೋವಿಡ್‌ ವೇಳೆ ಎಲ್ಲರನ್ನೂ ಪಾಸ್‌ ಮಾಡಿದ ಹೊರತಾಗಿ ಈ ಪರಿಯ ಫಲಿತಾಂಶ ದಾಖಲಾಗುತ್ತಿರುವುದು ಇದೇ ಮೊದಲಾಗಿರುವ ಕಾರಣ ಇದನ್ನು ಐತಿಹಾಸಿಕ ಎಂದು ಬಣ್ಣಿಸಲಾಗುತ್ತಿದೆ. ಅದರಲ್ಲಿ ಅತಿಶಯೋಕ್ತಿ ಏನಿಲ್ಲ. ಶೂನ್ಯ ಫಲಿತಾಂಶ (ಒಬ್ಬರೂ ಪಾಸ್‌ ಆಗದಿರುವುದು)ದಿಂದ ಕುಖ್ಯಾತಿಗೀಡಾಗಿದ್ದ ಸರ್ಕಾರಿ ಶಾಲೆಗಳು ಅದರಿಂದ ಹೊರಬಂದಿವೆ. ಶಿಕ್ಷಕರ ಸಾಧನೆ, ಮುಖ್ಯ ಶಿಕ್ಷಕರ ನಿಗಾ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಶ್ರಮ ಮತ್ತು ಶಿಕ್ಷಣ ಸಚಿವರ ಬಗ್ಗೆ ಪ್ರಶಂಸೆಯ ಮಳೆಯಾಗುತ್ತಿದೆ. ಐತಿಹಾಸಿಕ ಫಲಿತಾಂಶದಲ್ಲೇ ಕನ್ನಡಿಗರು ಅತ್ಯಂತ ಕಳವಳ ಪಡಬೇಕಾಗಿರುವ ವಿಚಾರವೊಂದು ಕಣ್ಣು ಕುಕ್ಕುವಂತೆ ಕಾಣುತ್ತಿದೆ. ಅದೇನೆಂದರೆ, ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಳಿದೆಲ್ಲಾ ವಿಷಯಗಳಿಗೆ ಹೋಲಿಸಿದರೆ ಪ್ರಥಮ ಭಾಷೆಯಲ್ಲೇ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಅದರಲ್ಲೂ ಕನ್ನಡದಲ್ಲೇ 19 ಸಾವಿರ ಮಕ್ಕಳು ಫೇಲ್‌ ಆಗಿದ್ದಾರೆ.

ಕರ್ನಾಟಕದಲ್ಲಿದ್ದುಕೊಂಡು, ಕನ್ನಡ ಮಾತನಾಡುವ ಮಕ್ಕಳೇ ಕನ್ನಡ ಪರೀಕ್ಷೆಯಲ್ಲೇ ಅನುತ್ತೀರ್ಣರಾದರೆ ಏನು ಹೇಳಬೇಕು?2-3 ದಶಕಗಳ ಹಿಂದೆ ವಿದ್ಯಾರ್ಥಿಗಳಿಗೆ ಗಣಿತ ಎಂಬುದು ಕಬ್ಬಿಣದ ಕಡಲೆಯಾಗಿತ್ತು. ಅದನ್ನು ಬಿಟ್ಟರೆ ಇಂಗ್ಲಿಷ್‌ ಎಂದರೆ ಮಕ್ಕಳು ಹೆದರುತ್ತಿದ್ದವು. ನವೀನಾ ಬೋಧನಾ ವಿಧಾನಗಳಿಂದಾಗಿ ಆ ಎರಡೂ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ. ಆದರೆ ಆ ವಿಷಯಗಳಿಗಿಂತ ಈಗ ಮಕ್ಕಳಿಗೆ ಕನ್ನಡವೇ ಅತ್ಯಂತ ಕಠಿಣವಾಗುತ್ತಿರುವಂತೆ ಕಾಣುತ್ತಿದೆ. ಬೇರೆ ಭಾಷೆಗಳನ್ನು ಕಲಿಸುವ ಭರದಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆಯೇ? ಅಥವಾ ಈಗಿನ ಕಾಲಕ್ಕೆ ತಕ್ಕಂತೆ ಬೋಧನಾ ಪ್ರಕ್ರಿಯೆ ನಡೆಯುತ್ತಿಲ್ಲವೇ? ಅಥವಾ ಈಗಿನ ಮಕ್ಕಳಿಗೆ ಹಿಂದಿನ ರೀತಿಯಲ್ಲಿ ಕಲಿಸುತ್ತಿರುವ ಕನ್ನಡ ತಲೆಗೇ ಹೋಗುತ್ತಿಲ್ಲವೇ? ಇದು ನಿಜಕ್ಕೂ ಶಿಕ್ಷಕರು, ಶಿಕ್ಷಣ ತಜ್ಞರು, ಸರ್ಕಾರ ಗಂಭೀರವಾಗಿ ಪರಾಮರ್ಶೆ ನಡೆಸಬೇಕಾಗಿರುವ ವಿಚಾರ. 

ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಕನ್ನಡವನ್ನು ಕಡ್ಡಾಯಗೊಳಿಸಬಹುದು, ಅಂಗಡಿ- ಕಚೇರಿಗಳ ಫಲಕದಲ್ಲಿ ಕನ್ನಡವನ್ನು ಕಡ್ಡಾಯ ಮಾಡಲೂಬಹುದು. ಆದರೆ ಅದನ್ನು ಓದಬೇಕಾದ ಮಕ್ಕಳು ಕನ್ನಡದಲ್ಲೇ ಫೇಲಾಗುತ್ತಿವೆ ಎಂದರೆ ಅದು ಅವರಿಗಷ್ಟೇ ಅಲ್ಲ ನಮ್ಮ ಭಾಷೆಗೇ ಗಂಡಾಂತರ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದೊಂದು ದಿನ ಹಿಂದಿಗೆ ಪ್ರಸ್ತಾಪಿಸಿದಂತೆ ಗ್ರೇಡಿಂಗ್‌ ಅಥವಾ ಗ್ರೇಸ್‌ ಮಾರ್ಕ್ಸ್‌ ಕೊಟ್ಟು ಕನ್ನಡ ವಿಷಯದಲ್ಲಿ ಪಾಸು ಮಾಡಬೇಕಾದ ದುರ್ದಿನ ಬಂದೀತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಾಲ್ವರು ಸಾಗುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ: ಇಬ್ಬರ ದಾರುಣ ಸಾವು, ಯುವತಿ ಕಾಲು ಕಟ್: ಅಪಘಾತದ ರಭಸಕ್ಕೆ ಛಿದ್ರವಾದ ದೇಹಗಳು
ಅತಿ ಕಡಿಮೆ ಕನ್ನಡ ಮಾತನಾಡುವ Top 5 ಜಿಲ್ಲೆಗಳು… ಬೆಂಗಳೂರಿಗೆ ಯಾವ ನಂ?