7 ದಿನ 170 ಗಂಟೆ ನಿರಂತರ ಭರತನಾಟ್ಯ : ವಿಶ್ವದಾಖಲೆ ಬರೆದ ಮಂಗಳೂರಿನ ರೆಮೋನಾ ಪೆರೇರಾ

Published : Jul 29, 2025, 01:23 PM ISTUpdated : Jul 29, 2025, 01:29 PM IST
 Remona Perera Sets New World Record with 170 Hours of Continuous Bharatanatyam

ಸಾರಾಂಶ

ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೋನಾ ಪೆರೇರಾ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಈ ಹಿಂದಿನ 127  ಗಂಟೆಗಳ ದಾಖಲೆಯನ್ನು ಮುರಿದಿದ್ದಾರೆ.

ಕೇವಲ 5ರಿಂದ 10 ನಿಮಿಷ ಡಾನ್ಸ್ ಮಾಡುವುದಕ್ಕೂ ಸಾಕಷ್ಟು ಶಕ್ತಿ ಬೇಕು. 10ರಿಂದ 15 ನಿಮಿಷ ನಿರಂತರ ಡಾನ್ಸ್ ಮಾಡಿದವರೇ ಸುಸ್ತಾಗೋದನ್ನು ನೀವು ನೋಡಿರ್ತಿರಿ. ಇನ್ನೂ ನೀವೇ ಡಾನ್ಸರ್ ಅಥವಾ ನೃತ್ಯಗಾರ್ತಿ/ನೃತ್ಯಗಾರನಾಗಿದ್ದರೆ ಇದರ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ, ಅರ್ಧ ಗಂಟೆ ನಿರಂತರ ಡಾನ್ಸ್ ಮಾಡೋದು ಎಷ್ಟು ಕಷ್ಟ ಎಂಬುದು ನಿಮಗೆ ಗೊತ್ತಿರುತ್ತದೆ. ಆದರೆ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ನಿರಂತರ 170 ಗಂಟೆಗಳ ಕಾಲ ನೃತ್ಯ ಮಾಡುವ ಮೂಲಕ ವಿನೂತನವಾದ ವಿಶ್ವದಾಖಲೆಯನ್ನು ಬರೆಯುವುದರ ಜೊತೆಗೆ ಇತಿಹಾಸ ಸೃಷ್ಟಿಸಿದ್ದಾರೆ.

ಕ್ರೈಸ್ತ ಸಮುದಾಯದ ರೆಮೋನಾರಿಂದ ಭರತನಾಟ್ಯದಲ್ಲಿ ಸಾಧನೆ:

ಭರತನಾಟ್ಯ ಪ್ರವೀಣೆಯಾಗಿರುವ ಮಂಗಳೂರಿನ ಹೆಮ್ಮೆಯ ಕ್ರೈಸ್ತ ಸಮುದಾಯದ ವಿದ್ಯಾರ್ಥಿನಿ, ಸೇಂಟ್ಅಲೋಶಿಯಸ್ ಕಾಲೇಜಿನಲ್ಲಿ ಫೈನಲ್ ಇಯರ್ ಬಿಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ರೆಮೋನಾ ಪೆರೇರಾ ಎಂಬುವವರೇ ಈ ಸಾಧನೆ ಮಾಡಿದವರು. ಸುಮಾರು 7 ದಿನಗಳ ಕಾಲ 170 ಗಂಟೆಗಳವರೆಗೆ ಅವರು ನಿರಂತರ ಭರತನಾಟ್ಯ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇವರ ಈ ಅಮೋಘವಾದ ಸಾಧನೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿದೆ.

ವಿದ್ಯಾರ್ಥಿನಿಯ ಈ ಮಹಾನ್ ಸಾಧನೆಗೆ ಸೇಂಟ್ ಆಲೋಶಿಯಸ್ ಕಾಲೇಜು ಸಂಪೂರ್ಣ ಬೆಂಬಲ ನೀಡಿದ್ದು, ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್‌ನಲ್ಲಿ ರೆಮೋನಾ ಪಿರೇರಾ ಅವರ ಈ ನೃತ್ಯ ಮ್ಯಾರಥಾನ್‌ ಸಾಧನೆಗೆ ವೇದಿಕೆ ಒದಗಿಸಿದೆ.

127 ಗಂಟೆಗಳ  ದಾಖಲೆಯನ್ನು ಬ್ರೇಕ್ ಮಾಡಿದ ರೆಮೋನಾ:

ಈ ಹಿಂದೆ ಭರತನಾಟ್ಯವನ್ನು 127 ಗಂಟೆಗಳ ಕಾಲ ನಿರಂತರ ಮಾಡಿದ ಸಾಧನೆ ರೆಕಾರ್ಡ್ ಆಗಿತ್ತು. ಆದರೆ ಈ ಈಗ ರೆಮೋನಾ ಪಿರೇರಾ ಅವರು ಸುಮಾರು 170 ಗಂಟೆಗಳ ಕಾಲ ನೃತ್ಯ ಮಾಡುವ ಮೂಲಕ ಈ ಹಿಂದಿನ ಸಾಧನೆಯನ್ನು ಮುರಿದಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ರೆಮೋನಾ ಅವರು ಈ ಸಾಧನೆ ಮಾಡಿದ ಮೊದಲಿಗರಾಗಿ ಹೊರ ಹೊಮ್ಮಿದ್ದಾರೆ.

ರೆಮೋನಾ ಅವರು ಕಳೆದ 13 ವರ್ಷಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದು, ಈ ಶಾಸ್ತ್ರೀಯ ನೃತ್ಯದಲ್ಲಿ ಅವರು ಈಗಾಗಲೇ ಹಲವು ಸಾಧನೆ ಮಾಡಿದ್ದಾರೆ. ಈಗ ಅವರು ಮಾಡಿದ ಈ 170 ಗಂಟೆಗಳ ಸಾಧನೆಗೆ ಅವರು ಸುಮಾರು ವರ್ಷಗಳಿಂದ ತಯಾರಿ ನಡೆಸಿದ್ದಾರೆ. ತಮ್ಮ ಕಾಲೇಜು ಅಧ್ಯಯನದ ಜೊತೆಗೆ ದಿನವೂ 5 ರಿಂದ 6 ಗಂಟೆಗಳ ಕಾಲ ಅಭ್ಯಾಸ ಮಾಡಿದ್ದಾರೆ.

ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಅಧಿಕಾರಿಗಳ ಉಪಸ್ಥಿತಿಯಲ್ಲೇ ರೆಮೋನಾ ಪಿರೇರಾ ಅವರು ಈ ಸಾಧನೆ ಮಾಡಿದ್ದಾರೆ. ರೆಮೋನಾ ಅವರ ಈ ಸಾಹಸಕ್ಕೆ ಅವರ ಕಾಲೇಜಿನ ಉಪನ್ಯಾಸಕರು, ಜೊತೆಗೆ ಓದುತ್ತಿರುವ ಸಹಪಾಠಿಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಜೊತೆಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

ವರ್ಷದಿಂದ ತಯಾರಿ, ಶಿಸ್ತುಬದ್ಧ ಡಯಟ್:

ಈ ಸಾಧನೆಯ ಸಮಯದಲ್ಲಿ ರೆಮೋನಾ ಅವರು ಸಂಪೂರ್ಣ ಶಿಸ್ತುಬದ್ಧವಾದ ಆಹಾರ ಪದ್ಧತಿಯನ್ನು ಅನುಸರಿಸಿದ್ದಾರೆ. ಪ್ರತಿ 3 ಗಂಟೆಗೆ 15 ನಿಮಿಷಗಳ ಕಾಲ ಅವರು ವಿರಾಮ ತೆಗೆದುಕೊಂಡಿದ್ದು, ಆ ಸಮಯದಲ್ಲಿ ಬಹಳ ಸರಳವಾದ ಆಹಾರವನ್ನು ಸೇವಿಸಿದ್ದಾರೆ. ಈ ಸಮಯದಲ್ಲಿ ಕೇವಲ ಬಾಳೆಹಣ್ನು, ಮೊಸರು, ಎಳನೀರು ಹಾಗೂ ಚೆನ್ನಾಗಿ ಬೇಯಿಸಿದ ಅನ್ನವನ್ನು ಸೇವಿಸಿದ್ದಾರೆ. ಈ ಸಾಧನೆಯ ಸಿದ್ಧತೆಯಲ್ಲಿ ತೊಡಗಿದ್ದಾಗಲೇ ಅವರು ಈ ಆಹಾರ ಪದ್ಧತಿಯನ್ನು ಮಾಡಲು ಶುರು ಮಾಡಿದ್ದರು.

ಇದೇ ವೇಳೆ ನುರಿತ ವೈದ್ಯರು ಇದ್ದ ವೈದ್ಯಕೀಯ ತಂಡ, ಆಂಬುಲೆನ್ಸ್ ಸಿಬ್ಬಂದಿ ಕೂಡ ಹಾಜರಿದ್ದು, ಆಕೆಯ ಆರೋಗ್ಯವನ್ನು ಕಾಲಕಾಲಕ್ಕೆ ತಪಾಸಣೆ ಮಾಡಿದ್ದಾರೆ. ತಮ್ಮ 7 ದಿನಗಳ ಕಾಲದ ಈ ನಿರಂತರ ನೃತ್ಯದ ವೇಳೆ ರೆಮೋನಾ ರೆಕಾರ್ಡ್‌ ಆಗಿದ್ದ ಸಂಗೀತಕ್ಕೆ ಭರತನಾಟ್ಯದ ವಿವಿಧ ಪ್ರಕಾರಗಳನ್ನು ಪ್ರದರ್ಶಿಸಿದ್ದು, ಅವರ ಈ ಸಾಧನೆ ಸಮರ್ಪಣೆ, ಮನೋಸಂಕಲ್ಪವಿದ್ದರೆ ಯಾವುದು ಅಸಾಧ್ಯವಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ
ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಸಲೀಂ ಮೇಲೆ ಅನುಮಾನ