ಮಂಡ್ಯದ ನ್ಯಾಯದಾನದ ಮೇಲೆ ಕವಿದೀತೇ ಹುಬ್ಬಳ್ಳಿ ಎನ್‌ಕೌಂಟರ್ ಕಾರ್ಮೋಡ?

ಮಂಡ್ಯದಲ್ಲಿ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಪೊಲೀಸರು ಸತ್ಯವನ್ನು ಬಯಲುಗೊಳಿಸಿ ನ್ಯಾಯ ಒದಗಿಸಿದರು. ಆದರೆ ಹುಬ್ಬಳ್ಳಿಯಲ್ಲಿ ನಡೆದ ಎನ್‌ಕೌಂಟರ್ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಉಳಿದಿವೆ. ಈ ಎರಡೂ ಘಟನೆಗಳು ಭಾರತದಲ್ಲಿ ಮಕ್ಕಳ ಸುರಕ್ಷತೆ ಮತ್ತು ನ್ಯಾಯದಾನದ ಬಗ್ಗೆ ಚರ್ಚೆ ಹುಟ್ಟುಹಾಕಿವೆ.

Mandya vs Hubballi tragedy of girls 2 faces of justice sat

ಗಿರೀಶ್ ಲಿಂಗಣ್ಣ, (ಲೇಖಕರು ರಕ್ಷಣಾ ವಿಶ್ಲೇಷಕ)

ಯಾವುದಾದರೂ ಮಗುವಿನ ಮೇಲೆ ಭೀಕರ ಕೃತ್ಯಗಳು ನಡೆದಾಗ ಸಮಸ್ತ ಸಮಾಜಕ್ಕೇ ಅದು ನೋವುಂಟು ಮಾಡುತ್ತದೆ. ಆದರೆ, ನ್ಯಾಯದ ಮೇಲೆ ಗೊಂದಲಗಳ ಕಾರ್ಮೋಡ ಕವಿದರೆ ಏನಾದೀತು? ಕರ್ನಾಟಕದ ಮಂಡ್ಯದಲ್ಲಿ 2022ರಲ್ಲಿ ನಡೆದ ಪ್ರಕರಣ ಮತ್ತು 2025ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣಗಳು ಇದಕ್ಕೆ ಉದಾಹರಣೆಯಾಗಿದ್ದು, ಅವೆರಡೂ ಸಂಪೂರ್ಣ ಭಿನ್ನವಾದ ಪಥವನ್ನು ಹಿಡಿದಿದ್ದವು. ಆಗಿನ ಎಸ್‌ಪಿ ಎನ್ ಯತೀಶ್ ಅವರ ನೇತೃತ್ವದಲ್ಲಿ ಮಂಡ್ಯ ಪೊಲೀಸರು ಬಾಲಕಿಯೊಬ್ಬಳ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದಲ್ಲಿ ತನಿಖೆಯ ಮೂಲಕ ಸತ್ಯವನ್ನು ಬಯಲುಗೊಳಿಸಿ, ಜನರ ನಂಬಿಕೆ ಗಳಿಸಿದ್ದರು. ಹುಬ್ಬಳ್ಳಿಯ ಪ್ರಕರಣದಲ್ಲಿ ನಡೆದ ಎನ್‌ಕೌಂಟರ್ ಐದು ವರ್ಷದ ಅಮಾಯಕ ಬಾಲಕಿಯ ಹತ್ಯೆಯ ಸುತ್ತ ಒಂದಷ್ಟು ಪ್ರಶ್ನೆಗಳನ್ನು ಹಾಗೆಯೇ ಉಳಿಸಿದೆ. ಅತ್ಯಾಚಾರದ ಕುರಿತು ಖಾತ್ರಿಯಾಗಿರದ ಒಂದಷ್ಟು ಗಾಳಿ ಸುದ್ದಿಗಳು ಏನಾದರೂ ಹುಬ್ಬಳ್ಳಿಯಲ್ಲಿ ನ್ಯಾಯವನ್ನು ಹಳಿ ತಪ್ಪಿಸಿರಬಹುದೇ? ನಮ್ಮ ಮಕ್ಕಳನ್ನು ಕೋಲಾಹಲಕ್ಕೆ ಎಡೆಯಿಲ್ಲದೆ, ಸ್ಪಷ್ಟತೆಯೊಡನೆ ಕಾಪಾಡಿಕೊಳ್ಳಲು ಭಾರತ ಮಾಡಬೇಕಾದುದೇನು?

Latest Videos

ಮಂಡ್ಯ: ವಿಚಾರಣಾ ಸತ್ಯಕ್ಕೊಂದು ಮಾನದಂಡ
ಅಕ್ಟೋಬರ್‌ 2022ರಲ್ಲಿ, ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಒಂದು ಭೀಕರ ಘಟನೆ ನಡೆಯಿತು. 51 ವರ್ಷದ ಟ್ಯೂಷನ್ ಶಿಕ್ಷಕನಾದ ಕಾಂತರಾಜು ಎಂಬಾತ ತನ್ನ 10 ವರ್ಷ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರವೆಸಗಿ ಹತ್ಯೆ ನಡೆಸಿದ್ದ. ಎಸ್‌ಪಿ ಯತೀಶ್ ಅವರ ನೇತೃತ್ವದಲ್ಲಿ, ಆಗಿನ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳು ಕೇವಲ 14 ದಿನಗಳ ಅವಧಿಯಲ್ಲಿ 683 ಪುಟಗಳ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಈ ವರದಿ ಆರೋಪಿಯ ದೂರವಾಣಿ ಕರೆ ಮಾಹಿತಿಗಳು, ಸಿಸಿಟಿವಿ ದೃಶ್ಯಾವಳಿಗಳು, ಹಗ್ಗವನ್ನು ಖರೀದಿಸಿದ್ದರ ರಶೀದಿ, ಮತ್ತು ಲಭ್ಯ ಸಾಕ್ಷಿಗಳನ್ನು ಒಳಗೊಂಡಿದ್ದು, ಯಾವುದೇ ಸುಳ್ಳುಗಳು ಮತ್ತು ಅನುಮಾನಗಳಿಗೆ ಎಡೆ ನೀಡಿರಲಿಲ್ಲ. ಘಟನೆಯ ಬಳಿಕ ಶಿಕ್ಷಕ ಕಾಂತರಾಜು ಸಹ ಬಾಲಕಿಯನ್ನು ಹುಡುಕುತ್ತಿದ್ದವರೊಡನೆ ಸೇರಿ, ಆಕೆಗಾಗಿ ಹುಡುಕುವಂತೆ ನಟಿಸುತ್ತಾ ತಾನು ಅಮಾಯಕ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ. ಆದರೆ ಪೊಲೀಸರು ಕಲೆಹಾಕಿದ ಸಾಕ್ಷಿಗಳು ಆತ ನಡೆಸಿದ ಅಪರಾಧವನ್ನು ಜಾಹೀರುಗೊಳಿಸಿದ್ದವು. ಅದಕ್ಕೆ ಆತ ಕೊಲೆಯ ಹಿಂದಿನ ದಿನ ಮೃತ ಬಾಲಕಿಗೆ ಕರೆ ಮಾಡಿದ್ದೂ ಸಾಕ್ಷಿಯಾಗಿತ್ತು. ಅಕ್ಟೋಬರ್ 2024ರಲ್ಲಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಕಾಂತರಾಜುಗೆ ಜೀವಾವಧಿ ಜೈಲು ಶಿಕ್ಷೆ ಘೋಷಿಸಿ, 60,000 ರೂಪಾಯಿಗಳ ದಂಡ ವಿಧಿಸಿದರು. ಮೃತ ಬಾಲಕಿಯ ಕುಟುಂಬಕ್ಕೆ ನ್ಯಾಯ ಲಭಿಸಿ, ಮಂಡ್ಯ ಹೆಚ್ಚು ಸುರಕ್ಷಿತವಾಯಿತು. ಈ ನ್ಯಾಯದಾನ ಅತ್ಯಂತ ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಸಮಾಜದಲ್ಲಿ ನಂಬಿಕೆಯ ಬೆಳಕು ಮೂಡಿಸಿತ್ತು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮಗುವಿನ ಅತ್ಯಾ*ಚಾರ ಕೊಲೆ: ಆರೋಪಿ ಎನ್‌ಕೌಂಟಗೆ ಬಲಿ!

ಹುಬ್ಬಳ್ಳಿ: ಸತ್ಯವನ್ನು ಮೀರಿದ ಗಾಳಿಸುದ್ದಿ?
ಎಪ್ರಿಲ್ 13ರಂದು, ಹುಬ್ಬಳ್ಳಿಯ ವಿಜಯನಗರದ ಶೆಡ್ ಒಂದರಲ್ಲಿ ಐದು ವರ್ಷ ವಯಸ್ಸಿನ ಹೆಣ್ಣು ಮಗು ಒಬ್ಬಳನ್ನು ಅತ್ಯಾಚಾರವೆಸಗಿ ಹತ್ಯೆ ನಡೆಸಲಾಯಿತು. 35 ವರ್ಷ ವಯಸ್ಸಿನ ರಿತೇಶ್ ಕುಮಾರ್ ಎಂಬ ಕಾರ್ಮಿಕ ಈ ದುಷ್ಕೃತ್ಯ ಎಸಗಿದ್ದ ಎನ್ನಲಾಗಿತ್ತು. ಆತ ಬಾಲಕಿಗೆ ಚಾಕೋಲೇಟ್ ಆಮಿಷ ಒಡ್ಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಆದರೆ ಕೇವಲ ಈ ದೃಶ್ಯಾವಳಿ ಸಂಪೂರ್ಣ ಕತೆಯನ್ನು ಹೇಳಿತ್ತೇ? ಹುಬ್ಬಳ್ಳಿ ಕಮಿಷನರ್ ಎನ್ ಶಶಿಕುಮಾರ್ ಅವರ ತಂಡ ವೇಗವಾಗಿ ಕಾರ್ಯಾಚರಿಸಿ, ರಿತೇಶ್‌ನನ್ನು ಪತ್ತೆಹಚ್ಚಿತು. ಆದರೆ, ಬಳಿಕ ನಡೆದಿದ್ದೇನು? ಪೊಲೀಸರು ರಿತೇಶ್ ತಮ್ಮತ್ತ ಕಲ್ಲುಗಳನ್ನು ಎಸೆದು ದಾಳಿ ನಡೆಸತೊಡಗಿದ, ಅದಕ್ಕೆ ಪ್ರತಿಯಾಗಿ ಸಬ್ ಇನ್ಸ್ಪೆಕ್ಟರ್ ಅನ್ನಪೂರ್ಣೇಶ್ವರಿ ಅವರು ಎಚ್ಚರಿಕೆಯ ಗುಂಡು ಹಾರಿಸಿದರು. ಅವು ಆರೋಪಿಯ ಕಾಲು ಮತ್ತು ಬೆನ್ನಿಗೆ ಹೊಡೆದವು ಎಂದು ವಿವರಣೆ ನೀಡಿದ್ದಾರೆ. ಆಸ್ಪತ್ರೆಗೆ ತಲುಪುವ ಮುನ್ನವೇ ಗುಂಡೇಟು ತಿಂದ ರಿತೇಶ್ ಮೃತಪಟ್ಟಿದ್ದ. ಆದರೆ, ಆತನನ್ನು ತಡೆಯಲು ಗುಂಡು ಹಾರಿಸುವುದು ಇದ್ದ ಏಕೈಕ ಮಾರ್ಗವಾಗಿತ್ತೇ? ಈ ಎನ್‌ಕೌಂಟರ್ ಸತ್ಯವನ್ನೂ ಮೌನವಾಗಿಸಿತೇ?

ಬಾಲಿಕಿಯನ್ನು ಉಸಿರುಗಟ್ಟಿಸಿ ಹತ್ಯೆ ನಡೆಸಲಾಗಿತ್ತು. ಆದರೆ ಆಕೆಯನ್ನು ಅತ್ಯಾಚಾರ ನಡೆಸಿ ಹತ್ಯೆಗೈಯಲಾಗಿದೆ ಎಂದು ಸುದ್ದಿ ಹಬ್ಬತೊಡಗಿತು. ಪೋಸ್ಟ್ ಮಾರ್ಟಂ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳುವ ಮುನ್ನವೇ ಅತ್ಯಾಚಾರ ನಡೆದಿದೆ ಎಂಬ ಸುದ್ದಿಗಳು ಹಬ್ಬಿದವು. ಅತ್ಯಾಚಾರ ನಡೆದಿರುವುದು ಖಾತ್ರಿಯಾಗದಿದ್ದರೂ, ಆ ಸುದ್ದಿ ಜನರು ಆಕ್ರೋಶಗೊಳ್ಳುವಂತೆ ಮಾಡಿತು. ಆರೋಪಿ ರಿತೇಶ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾದುದನ್ನು ಸ್ಥಳೀಯರು ಸಂಭ್ರಮಿಸಿದರು. ಆದರೆ, ಈ ಹತ್ಯೆಯಿಂದ ಹತ್ಯಾ ಕೃತ್ಯದಲ್ಲಿ ಅವನೊಬ್ಬನೇ ಭಾಗಿಯಾಗಿದ್ದನೇ? ಅಥವಾ ಬೇರೆ ಯಾರಾದರೂ ಆತನೊಡನೆ ಸೇರಿದ್ದರೆ? ಹಾಡು ಹಗಲಿನಲ್ಲೇ ಓರ್ವ ಬಾಲಕಿ ಹೇಗೆ ಅಪಾಯಕ್ಕೆ ತುತ್ತಾದಳು? ಎಂಬಂತ ಪ್ರಶ್ನೆಗಳಿಗೆ ಉತ್ತರ ಲಭಿಸದಂತಾಗಿದೆ. ವಿಚಾರಣೆ ನಡೆಯದೆ, ಮೃತ ಬಾಲಕಿಯ ಕುಟುಂಬಕ್ಕೆ ಹೇಗೆ ನೆಮ್ಮದಿ ಸಿಗಲು ಸಾಧ್ಯ? ಹುಬ್ಬಳ್ಳಿಯ ಬೀದಿಗಳು ನಿಜಕ್ಕೂ ಸುರಕ್ಷಿತವಾಗಿವೆಯೇ ಅಥವಾ ಇಂದಿಗೂ ಭೀತಿ ಹೊಂದಿವೆಯೇ? ಗಾಳಿಸುದ್ದಿಗಳು ನ್ಯಾಯ ಪ್ರಕ್ರಿಯೆಯನ್ನು ನೇರವಾಗಿ ಕೊನೆಯ ಹಂತಕ್ಕೆ ತಲುಪಿಸಿದವೇ? ಇವೆಲ್ಲ ಪ್ರಶ್ನೆಗಳು ಎನ್‌ಕೌಂಟರ್ ಬಳಿಕ ತಲೆದೋರಿವೆ.

ಇದನ್ನೂ ಓದಿ: ಐದು ವರ್ಷದ ಬಾಲಕಿಯ ಕೊ*ಲೆ ಪ್ರಕರಣ, ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾ*ಚಾರ ಸಾಬೀತು!

ತನಿಖೆಯಲ್ಲಿ ಸ್ಪಷ್ಟತೆಯೇ ಗುರಿಯಾಗಬೇಕು
ಮಂಡ್ಯದ ಎಸ್‌ಪಿ ಯತೀಶ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಿದ ತನಿಖಾಧಿಕಾರಿ ಈ ಪ್ರಕರಣದಲ್ಲಿ ಒಂದು ಮಾನದಂಡವನ್ನೇ ನಿರ್ಮಿಸಿದ್ದಾರೆ. ಅವರು ಸಲ್ಲಿಸಿದ್ದ 683 ಪುಟಗಳ ಆರೋಪ ಪಟ್ಟಿ ಎಲ್ಲರಿಗೂ ಸತ್ಯ ವಿಚಾರಗಳು ತಲುಪುವಂತೆ ಮಾಡಿತ್ತು. ಈ ತನಿಖೆ ಕಾಂತರಾಜುವಿನ ಅಪರಾಧವನ್ನು ಸಾಬೀತುಪಡಿಸಿ, ಮಂಡ್ಯದ ಜನತೆಯಲ್ಲಿ ನ್ಯಾಯ ಪ್ರಕ್ರಿಯೆಯತ್ತ ಭರವಸೆ ಮೂಡಿಸಿತು. ಪೊಲೀಸರು ತೋರಿಸಿದ್ದ ಪಾರದರ್ಶಕತೆಯಿಂದಾಗಿ ಜನರಲ್ಲಿ ನಂಬಿಕೆ ಹೆಚ್ಚಾಗಿತ್ತು. ಆದರೆ ಹುಬ್ಬಳ್ಳಿ ಪ್ರಕರಣದಲ್ಲಿ ಇಂತಹ ಬೆಳವಣಿಗೆ ಸಾಧ್ಯವೇ?

ಹುಬ್ಬಳ್ಳಿಯ ಎನ್‌ಕೌಂಟರ್ ಒಂದು ರೀತಿ ಮಬ್ಬಿನಂತೆ ತೋರುತ್ತಿದೆ. ಶಶಿಕುಮಾರ್ ಅವರ ತಂಡ ಧೈರ್ಯವಾಗಿ ಕಾರ್ಯಾಚರಿಸಿದ್ದೇನೋ ಹೌದು, ಆದರೆ ಈ ಪ್ರಕರಣದಲ್ಲಿ ಅಷ್ಟೇ ಸಾಕೇ? ಸಿಸಿಟಿವಿ ದೃಶ್ಯಗಳಲ್ಲಿ ರಿತೇಶ್ ಕೈವಾಡ ಸ್ಪಷ್ಟವಾಗಿ ದಾಖಲಾಗಿದೆ. ಆದರೆ, ಆತನ ಸಾವು ಪ್ರಕರಣದ ತನಿಖೆಯಲ್ಲಿ ಒಂದು ಶೂನ್ಯವನ್ನು ಸೃಷ್ಟಿಸಿದೆ. ಪೋಸ್ಟ್ ಮಾರ್ಟಂ ವರದಿ ಬರುವ ಮುನ್ನವೇ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ಸುದ್ದಿ ಹೇಗೆ ಹಬ್ಬಿತು? ಹೇಗೆ ಜನರ ಆಕ್ರೋಶಕ್ಕೆ ಕಾರಣವಾಯಿತು? ಒಂದು ವೇಳೆ ತನಿಖೆ ನಡೆದಿದ್ದರೆ, ಅತ್ಯಾಚಾರದ ಬದಲು ಕೇವಲ ಹತ್ಯೆಯಷ್ಟೇ ನಡೆದಿತ್ತೇ ಎಂಬುದು ಬೆಳಕಿಗೆ ಬರುತ್ತಿತ್ತೇ? ಅಥವಾ ಎನ್‌ಕೌಂಟರ್‌ಗೆ ಜನರ ಆಕ್ರೋಶವೇ ಕಾರಣವಾಯಿತೇ? ನ್ಯಾಯ ಜನರ ಭಯಕ್ಕೆ ಉತ್ತರ ನೀಡಬೇಕೇ ಹೊರತು ಜನರನ್ನು ಇನ್ನಷ್ಟು ಹೆದರಿಸಬಾರದಲ್ಲ?

ಭಾರತಕ್ಕೆ ಇಂತಹ ಪ್ರಕರಣಗಳ ತನಿಖೆಯಲ್ಲಿ ಮಂಡ್ಯ ಪೊಲೀಸರು ಅನುಸರಿಸಿದ ವಿಧಾನದ ಅಗತ್ಯವಿದೆ. 2022ರಲ್ಲಿ ಎಸ್‌ಪಿ ಯತೀಶ್ ಅವರ ನಾಯಕತ್ವ ಪೊಲೀಸರು ಸತ್ಯಗಳನ್ನು ತೆರೆದಿಡಬಲ್ಲರು ಎಂದು ಸಾಬೀತುಪಡಿಸಿತ್ತು. ಹುಬ್ಬಳ್ಳಿಯ ಎನ್‌ಕೌಂಟರ್ ಓರ್ವ ವ್ಯಕ್ತಿಯನ್ನು ತಡೆಯಿತಾದರೂ, ಇಂತಹ ಸಮಸ್ಯೆಯನ್ನು ತಡೆಯಲು ಸಾಧ್ಯವಾದೀತೇ? ಒಂದು ವೇಳೆ ನ್ಯಾಯಾಲಯದ ವಿಚಾರಣೆ ನಡೆದಿದ್ದರೆ, ಮಕ್ಕಳನ್ನು ರಕ್ಷಿಸಲು ಹೆಚ್ಚಿನ ಗಸ್ತು ಅಗತ್ಯವಿದೆಯೇ? ನಮ್ಮ ಪ್ರದೇಶಗಳನ್ನು ಇನ್ನಷ್ಟು ಸುರಕ್ಷಿತಗೊಳಿಸಬೇಕೆ? ಗಾಳಿ ಸುದ್ದಿಗಳು ಸಮಸ್ಯೆಯನ್ನು ಪರಿಹರಿಸುವುದಕ್ಕಿಂತಲೂ ಪರಿಸ್ಥಿತಿಯನ್ನು ಬಿಗಡಾಯಿಸಲು ಕಾರಣವಾದೀತೇ ಎಂಬಂತಹ ಅಂಶಗಳೆಡೆಗೆ ಬೆಳಕು ಚೆಲ್ಲಬಹುದಿತ್ತೇನೋ.

ಇದನ್ನೂ ಓದಿ: ಹುಬ್ಬಳ್ಳಿ ಎನ್‌ಕೌಂಟರ್ vs ಮಂಡ್ಯದ ನ್ಯಾಯದಾನ: ಮಕ್ಕಳ ಅ*ಚಾರದ ಎರಡು ಪ್ರಕರಣಗಳು

ಮಕ್ಕಳ ರಕ್ಷಣೆಗೆ ಪ್ರಯತ್ನಗಳು
ಪ್ರತಿಯೊಂದು ಮಗುವಿನ ಸಾವೂ ಸಮಾಜಕ್ಕೆ ಬಹುದೊಡ್ಡ ನಷ್ಟ. ಮಂಡ್ಯ ಸ್ಪಷ್ಟ ಸಾಕ್ಷಿಗಳೊಡನೆ ಕಾಂತರಾಜು ಇನ್ನೆಂದೂ ಇಂತಹ ಅಪರಾಧ ನಡೆಸಲು ಸಾಧ್ಯವಿಲ್ಲ ಎಂದು ಖಾತ್ರಿಪಡಿಸಿತು. ಆದರೆ ಹುಬ್ಬಳ್ಳಿಯ ಘಟನೆ ಇಂದಿಗೂ ಹಲವಾರು ಪ್ರಶ್ನೆಗಳನ್ನು ಉಳಿಸಿದೆ. ಇಲ್ಲಿ ನಿಜಕ್ಕೂ ನ್ಯಾಯ ಸಂದಾಯವಾಯಿತೇ? ಅಥವಾ ಇದು ಜನರನ್ನು ಸಮಾಧಾನಗೊಳಿಸಲು ಕೈಗೊಂಡ ಕ್ರಮವೇ? ಇನ್ನೂ ಖಾತ್ರಿಯಾಗದ ಅತ್ಯಾಚಾರದ ಸುದ್ದಿಗಳು ಪರಿಸ್ಥಿತಿ ಕೈಮೀರುವಂತೆ ಮಾಡಿದವೇ? ಒಂದು ವೇಳೆ ಬಾಡಿ ಕ್ಯಾಮರಾಗಳು, ಮುಕ್ತ ದಾಖಲೆಗಳು ಅಥವಾ ನ್ಯಾಯಾಲಯದ ವಿಚಾರಣೆಗಳು ನಿಜ ಹೊರಬರುವಂತೆ ಮಾಡುತ್ತಿದ್ದವೇ? ಹುಬ್ಬಳ್ಳಿ ಶೆಡ್ ಕೇವಲ ಒಂದು ದುರಂತಕ್ಕೆ ಸಾಕ್ಷಿ ಮಾತ್ರವಲ್ಲದೆ, ಸಮಾಜಕ್ಕೊಂದು ಸವಾಲೂ ಹೌದು. ಮಂಡ್ಯ ಇಂತಹ ಘಟನೆಗೆ ಸರಿಯಾದ ಉತ್ತರ ನೀಡಿತ್ತು. ಹುಬ್ಬಳ್ಳಿ ಮತ್ತು ಭಾರತ ನಾವು ನ್ಯಾಯವನ್ನು ರಕ್ಷಕನನ್ನಾಗಿಸಬೇಕೆ ಅಥವಾ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿಸಿದರೆ ಸಾಕೇ ಎಂಬ ಕುರಿತು ಚಿಂತಿಸಬೇಕಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

vuukle one pixel image
click me!