
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.15): ರಾಜ್ಯ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ 60 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಪ್ರತಿ ಮನೆಯ ಬಿಪಿಎಲ್ ಕಾರ್ಡ್ ಹೋಲ್ಡರ್ ಮನೆ ಒಡತಿಗೆ ಮಾಸಿಕ ತಲಾ 2000 ರೂ. ಹಣವನ್ನು ಗೃಹಲಕ್ಷ್ಮಿ ಯೋಜನೆ ಅಡಿ ನೀಡಲಾಗುತ್ತಿದೆ. ಈ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು, ಇದೀಗ ಅತ್ತೆ ಸೊಸೆ ಇಬ್ಬರೂ ತಮ್ಮ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿದ್ದು, ತೋಟಕ್ಕೆ 3 ಇಂಚಿನಷ್ಟು ನೀರು ಬಂದಿದೆ.
ಈ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಹೀನಬೈಲ್ ಗ್ರಾಮದಲ್ಲಿ ನಡೆದಿದೆ. ಕಡಹೀನಬೈಲು ಗ್ರಾಮದ ಜೇಮ್ಸ್-ಜೆಸ್ಸಿ ದಂಪತಿ ತಮ್ಮ ತೋಟದಲ್ಲಿ ಕಳೆದ ವರ್ಷ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ 2 ಬೋರ್ ಕೊರೆಸಿದರೂ ನೀರು ಬಂದಿರಲಿಲ್ಲ. ಆದ್ದರಿಂದ ಈ ಕುಟುಂಬವು ಸಾವಿರಾರು ರೂ. ಕಳೆದುಕೊಂಡು ನಷ್ಟವನ್ನು ಅನುಭವಿಸಿತ್ತು. ಆದರೆ, ಮನೆಯಲ್ಲಿ ಗಂಡಸರು ಕೂಡಿಟ್ಟು ಹಣವನ್ನು ಹಾಕಿ ಬೋರ್‌ವೆಲ್ ಕೊರೆಸಿದರೂ ಬಾರದ ಬಂದಿರಲಿಲ್ಲ.
ಇದೀಗ ನಾವು (ಅತ್ತೆ-ಸೊಸೆ) ಸೇರಿಕೊಂಡು ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಕೊಟ್ಟ ಹಣದಲ್ಲಿ ಬೋರ್‌ವೆಲ್ ಕೊರೆಸುತ್ತೇವೆ ಎಂದು ಸಂಕಲ್ಪವನ್ನು ಮಾಡಿದ್ದಾರೆ. ಆಗ, ಬೇರೊಬ್ಬರ ಜಮೀನಿಗೆ ಬೋರ್‌ವೆಲ್ ಕೊರೆಯಲು ಬಂದಿದ್ದ ವಾಹನವನ್ನು ನೋಡಿ, ನಮ್ಮ ತೋಟದಲ್ಲಿಯೂ ಬೋರ್‌ವೆಲ್ ಹಾಕುವುಂತೆ ಸೂಚನೆ ನೀಡಿದ್ದಾರೆ. ಇದೇ ಗೃಹಲಕ್ಷ್ಮಿ ಹಣ ಅತ್ತೆ, ಸೊಸೆಗೆ ಅದೃಷ್ಟವನ್ನು ತಂದು ಕೊಟ್ಟಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ತೆ ಸೊಸೆ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಬೋರ್ ಕೋರಿಸಿ ತೋಟಕ್ಕೆ ನೀರು ತಂದುಕೊಟ್ಟಿದ್ದಾರೆ.
ಇದನ್ನೂ ಓದಿ: ಪತ್ನಿ ವಿರುದ್ಧ ದೂರು ನೀಡಿದ ಪತಿ: ಮಸೀದಿ ಮುಂದೆಯೇ ಯುವಕರ ಗುಂಪಿನಿಂದ ಮಹಿಳೆ ಮೇಲೆ ಹಲ್ಲೆ
13 ತಿಂಗಳ ಹಣದಲ್ಲಿ ಬೋರ್: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಕೊಡುತ್ತಿದ್ದ ತಲಾ 2,000 ರೂ. ಹಣವನ್ನು ಯಾವುದಕ್ಕೂ ಖರ್ಚು ಮಾಡಿದೇ ತಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದರು. ಒಟ್ಟು 13 ತಿಂಗಳ ಗೃಹಲಕ್ಷ್ಮಿ ಹಣವು ಅತ್ತೆ-ಸೊಸೆ ಇಬ್ಬರದ್ದೂ ಸೇರಿ 26,000 ರೂ. ಸಂಗ್ರಹವಾಗಿತ್ತು. ಈ ಹಣದಲ್ಲಿ ಅತ್ತೆ, ಸೊಸೆ ಸೇರಿ ತಮ್ಮ ತೋಟದಲ್ಲಿ ಬೋರ್ ಕೊರೆಸಿದ್ದಾರೆ. ಇದೀಗ ಬೋರ್‌ವೆಲ್‌ನಲ್ಲಿ 3 ಇಂಚಿನಷ್ಟು ನೀರು ಬಂದಿದೆ. ಜೇಮ್ಸ್ ಪತ್ನಿ ಜೆಸ್ಸಿ ಹಾಗೂ ಜೇಮ್ಸ್ ತಾಯಿ ಫಿಲೋಮಿನಾ ಅವರಿಗೆ ಬಂದ 13 ತಿಂಗಳ ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್ ಕೊರೆಸಿದ್ದು, ಅಡಿಕೆ ತೋಟಕ್ಕೆ ಅಗತ್ಯವಾಗಿ ಬೇಕಾಗಿದ್ದ ನೀರನ್ನು ಒದಗಿಸುವಲ್ಲಿ ಸಫಲರಾಗಿದ್ದಾರೆ.
ಅನುಷ್ಠಾನ ಸಮಿತಿಯಿಂದ ಸನ್ಮಾನ :
ಕಳೆದ ವರ್ಷ ಇದೇ ದಂಪತಿ ತಮ್ಮ ತೋಟದಲ್ಲಿ 2 ಬೋರ್ ತೆಗೆಸಿದ್ದರು. ಆದರೆ, ಎರಡೂ ಬೋರ್ ಫೇಲ್ ಆಗಿದ್ದವು. ಆದರೆ, ಈಗ 13 ತಿಂಗಳ ಗೃಹಲಕ್ಷ್ಮಿ ಹಣ ಕೂಡಿಟ್ಟು ಈಗ ಮತ್ತೆ ಬೋರ್ ತೆಗೆಸಿದ್ದು ಈಗ 3 ಇಂಚು ನೀರು ಬಂದಿದೆ. ಇದರಿಂದ ಜೇಮ್ಸ್ ದಂಪತಿ ಹಾಗೂ ತಾಯಿ ಫೊಲೋಮಿನಾ ಗೃಹಲಕ್ಷ್ಮಿ ಯೋಜನೆ ಹಾಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಅತ್ತೆ ಫಿಲೋಮಿನಾ ಹಾಗೂ ಸೊಸೆ ಜೆಸ್ಸಿಗೆ ಸನ್ಮಾನ ಮಾಡಿದ್ದಾರೆ.
ಇದನ್ನೂ ಓದಿ: ಗಂಡನ ಪ್ರೈವೇಟ್ ಪಾರ್ಟ್‌ಗೆ ಕೈ ಹಾಕಿದ ಯುವತಿ; ರಣಚಂಡಿಯಾದ ಆಂಟಿ, ಮುಂದಾಗಿದ್ದು ಮಹಾಯುದ್ಧ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ