
ಮೈಸೂರು (ಜ.30) : ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರಿನ ಗಾಂಧಿ ಚೌಕದಲ್ಲಿ ಸೋಮವಾರ ಪ್ರತಿಭಟಿಸಿದರು.
ಕೆರಗೋಡು ಗ್ರಾಮ ಪಂಚಾಯ್ತಿ ಸದಸ್ಯರು 108 ಅಡಿಯ ಧ್ವಜಸ್ಥಂಭದಲ್ಲಿ ಹನುಮಧ್ವಜ ಹಾರಿಸಲು ತೀರ್ಮಾನಿಸಿದ್ದರು. ಪೊಲೀಸರು ನುಗ್ಗಿ ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್ ಮಾಡಿ ಧ್ವಜ ಇಳಿಸಿದ್ದಾರೆ. ಸರ್ಕಾರವು ಪೊಲೀಸರಿಂದ ರಾಜ್ಯದಲ್ಲಿ ಗೂಂಡಾಗಿರಿ ನಡೆಸುತ್ತಿದೆ. ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಕೆರೆಗೋಡು ಗ್ರಾಮದ ಪ್ರತಿ ಮನೆಯಲ್ಲೂ ಹನುಮ ಧ್ವಜ ಹಾರಿಸುವ ಮುಖಾಂತರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆ ಹಿಂದೂಗಳು ವರ್ಸಸ್ ಕಾಂಗ್ರೆಸ್ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಅಂತ್ಯ ಕಾಣಲಿದೆ ಎಂದು ಅವರು ದೂರಿದರು.
ಹನುಮ ಧ್ವಜ ಹಾರಾಟ:
ಈ ವೇಳೆ ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ ಮಾತನಾಡಿ, ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜವನ್ನು ಕೆಳಗಿಳಿಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಹನುಮ ಧ್ವಜ ಹಾರಾಟ ನಡೆಸುತ್ತಿವೆ. ಸರ್ಕಾರಕ್ಕೆ ತಾಕತ್ತಿದ್ದರೆ ತಡೆಯಲಿ. ಹನುಮ ಧ್ವಜ, ರಾಮ ವಿರೋಧಿಯಾದ ಸರ್ಕಾರಕ್ಕೆ ಜನ ಬುದ್ಧಿ ಕಲಿಸಲಿದ್ದಾರೆ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ರಾಮ ಮಂದಿರ ಉದ್ಘಾಟನೆಯ ನಂತರ ಕಾಂಗ್ರೆಸ್ ಆತಂಕಗೊಂಡಿದೆ. ಹೀಗಾಗಿ ತನ್ನ ಹಿಂದೂ ವಿರೋಧಿ ನಡವಳಿಕೆಯನ್ನು ಮುಂದುವರಿಸಲು ಯತ್ನಿಸುತ್ತಿದೆ. ಅದರ ಭಾಗವಾಗಿಯೇ ಕೆರೆಗೋಡು ಗ್ರಾಮದ ಹನುಮ ಧ್ವಜವನ್ನು ತೆರವುಗೊಳಿಸಿರುವ ಘಟನೆ ಎಂದು ಆರೋಪಿಸಿದರು.
ಹನುಮ ಧ್ವಜ ವಿಚಾರದಲ್ಲಿ ಬಿಜೆಪಿ ಎಂದಿಗೂ ರಾಜಕೀಯ ಮಾಡುವುದಿಲ್ಲ. ಬಿಜೆಪಿ ಬೆಳೆದು ಬಂದಿರುವುದೇ ಹಿಂದೂ ಧರ್ಮದ ಪರವಾದ ಹೋರಾಟದ ಮೂಲಕವೇ. ಕೇಸರಿಯನ್ನು ಬಿಜೆಪಿ ಬ್ರ್ಯಾಂಡ್ ಆಗಿ ಮಾಡಿರುವುದು ಕಾಂಗ್ರೆಸ್. ನಾವು ಯಾವತ್ತೂ ಹಸಿರು ಬಣ್ಣವನ್ನು ಒಪ್ಪಿಕೊಂಡಿಲ್ಲ. ರೈತರ ಹಸಿರನ್ನು ಒಪ್ಪಿಕೊಂಡಿದ್ದೇವೆ. ಇನ್ನೊಂದು ಧರ್ಮದ ಹಸಿರನ್ನಲ್ಲ ಎಂದು ಅವರು ಟೀಕಿಸಿದರು.
ಮಾಜಿ ಸಚಿವ ಸಿ.ಎಚ್. ವಿಜಯಶಂಕರ್, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಹಿಂದುಳಿದ ವರ್ಗಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್. ರಘು, ಮುಖಂಡರಾದ ಹೇಮಂತ್ ಕುಮಾರ್ ಗೌಡ, ಬಿ.ಪಿ. ಮಂಜುನಾಥ್, ಲಕ್ಷ್ಮಿದೇವಿ, ಕವೀಶ್ ಗೌಡ, ಪ್ರಮೀಳಾ ಭರತ್, ಚಿಕ್ಕವೆಂಕಟು, ಬಿ.ವಿ. ಮಂಜುನಾಥ, ಫಣೀಶ್, ಗಿರಿಧರ್, ಕೆ. ದೇವರಾಜು, ಜೋಗಿ ಮಂಜು, ಬೆಟ್ಟೇಗೌಡ, ಗಿರೀಶ್ ಗೌಡ, ಶಂಕರ್, ಅನಿಲ್ ಥಾಮಸ್ ಮೊದಲಾದವರು ಇದ್ದರು.
ಸಿಎಎ, ಸಮಾನ ನಾಗರಿಕ ಸಂಹಿತೆ ಜಾರಿ ಆಗೋದು ಗ್ಯಾರಂಟಿ, ಆಗಲೇಬೇಕು: ಪ್ರಮೋದ್ ಮುತಾಲಿಕ್
ಸಿದ್ದರಾಮಯ್ಯನವರೇ ನೀವು ನಿಮ್ಮ ಕನಸಿನಲ್ಲಾದರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಏಕವಚನದಲ್ಲಿ ಮಾತನಾಡಿದ್ದೀರಾ?, ಈ ಹಿಂದೆ ಉಪರಾಷ್ಟ್ರಪತಿಗಳನ್ನು ಅಣುಕಿಸುವ ಮೂಲಕ ಅವಮಾನ ಮಾಡಲಾಗಿತ್ತು. ಈಗ ರಾಷ್ಟ್ರಪತಿಗಳನ್ನು ಏಕ ವಚನದಲ್ಲಿ ಕರೆಯುವ ಮೂಲಕ ಅವರಿಗೆ ಅವಮಾನ ಮಾಡಿದ್ದೀರಾ. ರಾಮಮಂದಿರ ಉದ್ಘಾಟನೆ ನಂತರ ನೀವು ಆತಂಕಗೊಂಡಿದ್ದೀರಾ. ರಾಮಮಂದಿರದ ಎಲ್ಲಾ ಕ್ರೆಡಿಟ್ ಮೋದಿ ಅವರಿಗೆ ಹೋಗುತ್ತದೆಂದು ಭಯಭೀತಗೊಂಡಿದ್ದೀರಾ. ಹೀಗಾಗಿ ನಿಮ್ಮ ಬಾಯಲ್ಲಿ ಏನೇನೋ ಮಾತು ಬರುತ್ತಿದೆ.
- ಟಿ.ಎಸ್. ಶ್ರೀವತ್ಸ, ಶಾಸಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ