
ಮಂಗಳೂರು (ಜೂ.7): ದಕ್ಷಿಣ ಭಾರತ ಮತ್ತು ಉತ್ತರ ಭಾರತ ನಡುವಿನ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ನವಯುಗ ಎಕ್ಸ್‌ಪ್ರೆಸ್ ರೈಲು ಸಂಚಾರ ಪುನಾರಂಭ ಆಗ್ರಹಿಸಿ ಕರಾವಳಿಯಲ್ಲಿ ಸಹಿ ಸಂಗ್ರಹ ಅಭಿಯಾನ (https://chng.it/ZHyVGkdqFs) ಆರಂಭಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ಆರಂಭಗೊಂಡ ಸಹಿ ಅಭಿಯಾನ ಜುಲೈ 6 ರ ರಾತ್ರಿ 12 ಗಂಟೆಯ ತನಕ 30 ದಿನಗಳ ಕಾಲ ನಡೆಯಲಿದೆ ಎಂದು ದ.ಕ. ಜಿಲ್ಲಾ ರೈಲು ಬಳಕೆದಾರರ ಸಮಿತಿ ತಿಳಿಸಿದೆ. ಈ ರೈಲು ಓಡಾಟದ ಮಹತ್ವ ಏನು?:
1990ರಲ್ಲಿ ಮಂಗಳೂರಿನಿಂದ ಜಮ್ಮು ತಾವಿ ತನಕ ಆರಂಭಗೊಂಡ ಈ ರೈಲು ಸೇವೆ 2015ರಲ್ಲಿ ಕತ್ರ ತನಕ ವಿಸ್ತರಣೆಗೊಂಡಿತು. ಈ ರೈಲು ದಕ್ಷಿಣ ಭಾರತ ಹಾಗೂ ಉತ್ತರ ಭಾರತ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಈ ರೈಲು ಕರ್ನಾಟಕದ ಮಂಗಳೂರಿನಿಂದ ಸಂಜೆ 5 ಗಂಟೆಗೆ ಹೊರಟು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರದ ಕತ್ರಕ್ಕೆ ಸುಮಾರು 12 ರಾಜ್ಯಗಳ ಮೂಲಕ ಸಂಚರಿಸುತ್ತಿತ್ತು. ಈ ರೈಲು ತನ್ನ ಪ್ರಯಾಣದಲ್ಲಿ 3,686 ಕಿ.ಮೀ. ಕ್ರಮಿಸಿ, 70 ಗಂಟೆ 5 ನಿಮಿಷ ಅವಧಿಯನ್ನು ತೆಗೆದುಕೊಂಡು ಪ್ರಯಾಣದ ದೂರದ ಲೆಕ್ಕದಲ್ಲಿ ದೇಶದ 4ನೇ ದೊಡ್ಡ ರೈಲು ಎಂಬ ಖ್ಯಾತಿಗೆ ಪಾತ್ರವಾಗಿತ್ತು.
ಈ ರೈಲು ತನ್ನ ಪ್ರಯಾಣದಲ್ಲಿ ಮಂಗಳೂರು, ಪಾಲಕ್ಕಾಡ್, ಕೊಯಂಬತ್ತೂರು, ಸೇಲಂ, ತಿರುಪತಿ, ವಿಶಾಖಪಟ್ಟಣ, ನಾಗಪುರ, ಜಾನ್ಸಿ, ಆಗ್ರಾ, ಮಥುರ, ದೆಹಲಿ, ಪಠಾಣಕೋಟ್, ಜಮ್ಮು, ಕತ್ರ ಹೀಗೆ ಹಲವಾರು ಪ್ರಸಿದ್ಧ ನಗರಗಳು, ಯಾತ್ರಾ ಸ್ಥಳಗಳನ್ನು ಹಾದುಹೋಗುತ್ತಿದ್ದುದರಿಂದ ಹಲವು ರಾಜ್ಯಗಳ ಜನರ ಬಹಬೇಡಿಕೆಯ ರೈಲಾಗಿತ್ತು. ಕರಾವಳಿ ಕರ್ನಾಟಕ, ಉತ್ತರ ಕೇರಳದಿಂದ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಏಕೈಕ ರೈಲು ನವಯುಗ ಎಕ್ಸ್‌ಪ್ರೆಸ್ ರೈಲು ಆಗಿತ್ತು. 20 ಕೋಚ್‌ಗಳ ಈ ರೈಲಿಗೆ ಈರೋಡಿನಲ್ಲಿ ತಿರುನೆಲ್ವೆಲಿಯಿಂದ ಬರುವ ಸ್ಲಿಪ್ ಕೋಚುಗಳನ್ನು ಜೋಡಿಸಿ ಕತ್ರ ಕಡೆಗೆ ಪ್ರಯಾಣವನ್ನು ಮುಂದುವರಿಸುತ್ತಿತ್ತು. ಕೊರೋನಾ ಲಾಕ್‌ಡೌನ್ ವೇಳೆ ಭಾರತೀಯ ರೈಲ್ವೆ ಇಲಾಖೆ ದೇಶದಾದ್ಯಂತ ಎಲ್ಲ ರೈಲು ಸೇವೆಗಳನ್ನು ರದ್ದುಗೊಳಿಸಿತ್ತು. ಲಾಕ್‌ಡೌನ್ ತೆಗೆದ ನಂತರ 2021ರಲ್ಲಿ ರೈಲ್ವೆ ಇಲಾಖೆಯು ಎಲ್ಲ ರೈಲು ಸೇವೆಗಳನ್ನು ಮರು ಆರಂಭಿಸಲು ನಿರ್ಧರಿಸಿ ಹೆಚ್ಚಿನ ರೈಲು ಸೇವೆಗಳು ಈಗಾಗಲೇ ಆರಂಭಗೊಂಡಿದೆ. ಆದರೆ ಮಂಗಳೂರು ಸೆಂಟ್ರಲ್-ಕತ್ರಾ ನವಯುಗ ಎಕ್ಸ್‌ಪ್ರೆಸ್ ಮಾತ್ರ ಇನ್ನೂ ಹಳಿ ಏರಿಲ್ಲ.
ತಿರುನೆಲ್ವೆಲಿಯಿಂದ ಕತ್ರ ಕಡೆಗೆ ನವಯಗ ಎಕ್ಸಪ್ರೆಸ್ ಜತೆಗೆ ಇದ್ದ ಸ್ಲಿಪ್ ರೈಲನ್ನು ಸ್ವತಂತ್ರ ರೈಲಾಗಿ ಮಾಡಿ ಪ್ರಸ್ತುತ 18 ಕೋಚ್‌ಗಳ ಎಲ್.ಹೆಚ್.ಬಿ ರೇಕ್‌ನೊಂದಿಗೆ ಸಂಚರಿಸುತ್ತಿದೆ. ಆದರೆ ಮಂಗಳೂರಿನಿಂದ ಕತ್ರಕ್ಕೆ ಹೋಗುವ ರೈಲನ್ನು ತಿರುನೆಲ್ವೆಲಿಯಿಂದ ಹೋಗುವ ರೈಲಿನ ಸ್ಲಿಪ್ ರೈಲು ಎಂದು ನೆಪ ಹೇಳಿ ರೈಲ್ವೆ ಇಲಾಖೆಯು ಈ ರೈಲನ್ನು ಇನ್ನೂ ಆರಂಭಿಸಿಲ್ಲ. ಇದು ಈ ಭಾಗದ ಜನರಿಗೆ ಅನ್ಯಾಯ ಆಗಿದ್ದು, ಜನರ ಆಕ್ರೋಶಕ್ಕೂ ಕಾರಣವಾಗಿದೆ.
ಕರ್ನಾಟಕ ಭಾಗದಲ್ಲಿ ಪುನಾರಂಭಿಸಲು ಬೇಡಿಕೆ:
ಪ್ರಸ್ತುತ ಮತ್ತೆ ಈ ರೈಲನ್ನು ಪುನರಾರಂಭಿಸಲು ಬೇಡಿಕೆಗಳು ಕೇಳಿ ಬರುತ್ತಿದೆ. ತಿರುನೆಲ್ವೆಲಿಯಿಂದ ಕತ್ರಕ್ಕೆ ಹೋಗುವ ರೈಲು ಸ್ವತಂತ್ರವಾಗಿ ಓಡುತ್ತಿರುವ ಕಾರಣ ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ನವಯುಗ ಎಕ್ಸ್‌ಪ್ರೆಸ್ ರೈಲನ್ನು ಕರಾವಳಿ ಕರ್ನಾಟಕ,ಮಧ್ಯ ಕರ್ನಾಟಕ,ಉತ್ತರ ಕರ್ನಾಟಕದ ಎಲ್ಲಾ ಜನರಿಗೆ ದೇಶದ ರಾಜಧಾನಿ ದೆಹಲಿಗೆ ತೆರಳಲು ಹಾಗೂ ಪವಿತ್ರ ವೈಷ್ಣೋ ದೇವಿ ಯಾತ್ರೆಗೆ ತೆರಳಲು ಉಪಯೋಗ ಆಗುವಂತೆ ಮಂಗಳೂರು-ಹಾಸನ-ಮೀರಜ್-ಪುಣೆ ದೆಹಲಿ ಮಾರ್ಗದಲ್ಲಿ ಓಡಿಸಬೇಕು. ಇದರಿಂದ ಕರ್ನಾಟಕದ ಹಲವು ಭಾಗಗಳ ಜನರಿಗೆ ಉಪಯೋಗ ಆಗುತ್ತದೆ ಎಂದು ಮಂಗಳೂರಿನ ರೈಲ್ವೆ ಬಳಕೆದಾರ ಸಮಿತಿಯು ರೈಲ್ವೆ ಇಲಾಖೆ, ದಕ್ಷಿಣ ರೈಲ್ವೆ ವಲಯ ಹಾಗೂ ನೈರುತ್ಯ ರೈಲ್ವೆ ವಲಯವನ್ನು ವಿನಂತಿಸಲು ಸಹಿ ಅಭಿಯಾನ ಆರಂಭಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ