
ಮಂಗಳೂರು (ಜೂ.7): ಯಾವುದೇ ಕಾರಣಕ್ಕೂ ಮಂಗಳೂರನ್ನು ಮಣಿಪುರ ಮಾಡಲು ಬಿಡಲ್ಲ. ಅದಕ್ಕಾಗಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ. ಕಟ್ಟುನಿಟ್ಟಾಗಿ ಕ್ರಮ ಜರುಗಲಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ದ.ಕ.ದಲ್ಲಿ ಕೋಮು ಸಂಘರ್ಷದ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಿಎಂ ಸಲಹೆಯಂತೆ ಗುರುವಾರ ಜಿಲ್ಲೆಗೆ ಆಗಮಿಸಿದ ಅವರು ನಗರದಲ್ಲಿ ಧಾರ್ಮಿಕ ಮುಖಂಡರ ಜತೆ ಚರ್ಚಿಸಿದರು.
ಇಡೀ ರಾಜ್ಯದಲ್ಲಿ ಶೇ.90ರಷ್ಟು ಉಗ್ರವಾದ, ಕೋಮುವಾದಕ್ಕೆ ಕಡಿವಾಣ ಹಾಕಿದ್ದೇವೆ. ಆದರೆ ದ.ಕ. ಜಿಲ್ಲೆಯಲ್ಲಿ ಮಾತ್ರ ಅದು ಸಾಧ್ಯವಾಗುತ್ತಿಲ್ಲ. ಕೋಮುವಾದದ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಆಗಲಿದೆ. ಇಲ್ಲಿನ ವಿಚಾರಗಳ ಬಗ್ಗೆ ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದ್ದೇನೆ. ಬೆಂಗಳೂರಿಗೆ ಹೋಗಿ ಸಿಎಂ ಅವರ ಗಮನಕ್ಕೂ ತರುತ್ತೇನೆ ಎಂದು ತಿಳಿಸಿದರು.
ಸೂತ್ರಧಾರಿಗಳು ಕಾರಣ:
ದ.ಕ. ಕೋಮು ಸೌಹಾರ್ದತೆಗೆ ಯಾವ ಧಕ್ಕೆಯೂ ಇಲ್ಲದೆ ಬೆಳೆದ ಜಿಲ್ಲೆ. ಆದರೆ ಈಗ ಕೆಲವು ಅದೃಶ್ಯ ಶಕ್ತಿಗಳ ಕಾರಣಕ್ಕಾಗಿ ಕೊಲೆಗಳು ನಡೆಯುತ್ತಿವೆ. ಆದರೂ ಶೇ.99ರಷ್ಟು ಜನರು ಬಹಳ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ಕೋಮು ಸಂಘರ್ಷಗಳಲ್ಲಿ ಪಾತ್ರಧಾರಿಗಳ ದೂರಿ ಪ್ರಯೋಜನವಿಲ್ಲ, ಇದರ ಹಿಂದೆ ಕೆಲ ಸೂತ್ರಧಾರಿಗಳು ಇದ್ದಾರೆ. ಅವರು ಯಾರು ಅಂತ ಎಲ್ಲರಿಗೂ ಗೊತ್ತಿದೆ, ಅದನ್ನು ನೋಡಿಕೊಳ್ಳಬೇಕಿದೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ಆದಷ್ಟು ಶೀಘ್ರದಲ್ಲಿ ಎಲ್ಲ ಧರ್ಮಗಳ ಧರ್ಮಗುರುಗಳನ್ನು ಕರೆದು ಮಾತುಕತೆ ನಡೆಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಜತೆ ಮಾತನಾಡಿದ್ದೇನೆ ಎಂದರು.
ಮುಸ್ಲಿಂ ಮುಖಂಡರ ರಾಜಿನಾಮೆ ವಾಪಸ್:
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ಹುದ್ದೆಗಳಿಗೆ ಮುಸ್ಲಿಂ ಮುಖಂಡರು ರಾಜೀನಾಮೆ ನೀಡಿದ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ನ ಮುಸ್ಲಿಂ ಮುಖಂಡರ ರಾಜೀನಾಮೆ ವಾಪಸ್‌ಗೆ ಮನವಿ ಮಾಡುತ್ತೇನೆ. ಕೆಲವು ನಡೆಯಬಾರದ ಘಟನೆ ನಡೆದಿದೆ. ನಾವು ಸಂವಿಧಾನ ಮತ್ತು ನ್ಯಾಯದ ಪರ ಇದ್ದೇವೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಲು ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ಯಾರನ್ನೂ ಕಳೆದುಕೊಳ್ಳಲು ತಯಾರಿಲ್ಲ. ಯಾವುದೋ ಸಂದರ್ಭದಲ್ಲಿ ಭಾವನಾತ್ಮಕವಾಗಿ ಮನಸ್ಸಿಗೆ ನೋವಾದಾಗ ರಾಜೀನಾಮೆ ಕೊಟ್ಟಿದ್ದಾರೆ. ಎಲ್ಲರಿಗೂ ರಾಜೀನಾಮೆ ವಾಪಸ್ ಪಡೆಯಲು ಮನವಿ ಮಾಡುವುದಾಗಿ ಹೇಳಿದರು.
ಮಂಗಳೂರಿಗೆ ಆಗಮಿಸಿದ ಬಿಕೆ ಹರಿಪ್ರಸಾದ್ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು, ಧಾರ್ಮಿಕ ಮುಖಂಡರನ್ನು ಭೇಟಿಯಾದರು. ಬಳಿಕ ಇತ್ತೀಚೆಗೆ ಕೊಲೆಗೀಡಾದ ಅಬ್ದುಲ್ ರೆಹಮಾನ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಮಳೆಯಿಂದ ಗುಡ್ಡ ಕುಸಿದು ಸಾವಿಗೀಡಾದ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ