ಮಹದೇಶ್ವರ ಪ್ರತಿಮೆ ಚಾಮರಾಜನಗರ ಜಿಲ್ಲೆಯ ಹಿರಿಮೆ ಹೆಚ್ಚಿಸಿದೆ: ಸಿಎಂ ಬೊಮ್ಮಾಯಿ

By Kannadaprabha News  |  First Published Mar 19, 2023, 3:40 AM IST

ಮಹದೇಶ್ವರರ ಪ್ರತಿಮೆ ನಿರ್ಮಾಣದಿಂದ ಕ್ಷೇತ್ರದ ಹಿರಿಮೆ, ಗರಿಮೆ ಎತ್ತಿ ಹಿಡಿಯುವ ಕೆಲಸವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


ಚಾಮರಾಜನಗರ (ಮಾ.19): ಮಹದೇಶ್ವರರ ಪ್ರತಿಮೆ ನಿರ್ಮಾಣದಿಂದ ಕ್ಷೇತ್ರದ ಹಿರಿಮೆ, ಗರಿಮೆ ಎತ್ತಿ ಹಿಡಿಯುವ ಕೆಲಸವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಿರ್ಮಾಣ ಮಾಡಿರುವ 108 ಅಡಿ ಎತ್ತರದ ಮಲೆ ಮಹದೇಶ್ವರ ಸ್ವಾಮಿ ಪ್ರತಿಮೆ, ಬೆಳ್ಳಿರಥವನ್ನು ಲೋಕಾರ್ಪಣೆ ಮಾಡಿ, ಮಹದೇಶ್ವರ ಬೆಟ್ಟದ ದೀಪದ ಒಡ್ಡುವಿನಲ್ಲಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಹದೇಶ್ವರರ ಇಷ್ಟು ದೊಡ್ಡಮೂರ್ತಿ ಚೆನ್ನಾಗಿ ಮೂಡಿ ಬಂದಿದ್ದು, ಜೀವಕಳೆ ಇದೆ. ಮಹದೇಶ್ವರರ ಪ್ರತಿಮೆ ನಿರ್ಮಾಣಕ್ಕಾಗಿ ಶ್ರಮಿಸಿದ ಎಲ್ಲರೂ ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. 

ಮಹದೇಶ್ವರರ ಪ್ರತಿಮೆ ಅನಾವರಣಗೊಳಿಸುವ ಅವಕಾಶ ದೊರೆತಿದ್ದು ನನ್ನ ಯೋಗ ಎಂದರು. ಮಲೆಮಹದೇಶ್ವರರ ಪವಾಡಗಳು ಜನರ ಮನಸ್ಸಿನಲ್ಲಿ ಉಳಿದಿದೆ. ಮಲೆಮಹದೇಶ್ವರರನ್ನು ಪೂಜಿಸಿ ನಂತರ ತಮ್ಮ ಕಾಯಕವನ್ನು ಪ್ರಾರಂಭಿಸುವ ಲಕ್ಷಾಂತರ ಜನರು ಈ ಭಗದಲ್ಲಿ ಇದ್ದಾರೆ. ಪ್ರತಿವರ್ಷ ಎರಡರಿಂದ ಮೂರು ಲಕ್ಷ ಜನ ಕಾಲ್ನಡಿಗೆಯಲ್ಲೇ ಬಂದು ಮಾದಪ್ಪನದರ್ಶನ ಪಡೆದು ತಮ್ಮ ಭಕ್ತಿಯನ್ನು ಮೆರೆಯುತ್ತಾರೆ ಎಂದು ಅವರು ತಿಳಿಸಿದರು. ಮಲೆಮಹದೇಶ್ವರ ಬೆಟ್ಟದಲ್ಲಿ ನೂರಾರು ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ. 

Tap to resize

Latest Videos

undefined

ಕಾಫಿ ಬೆಳೆಗಾರರ 10 ಹೆಚ್‌ಪಿವರೆಗಿನ ಪಂಪ್ ಸೆಟ್​ಗೆ ಉಚಿತ ವಿದ್ಯುತ್: ಸಿಎಂ ಬೊಮ್ಮಾಯಿ‌ ಘೋಷಣೆ

ಕ್ಷೇತ್ರಕ್ಕೆ ಬರುವ ಭಕ್ತರಿಗೆ ವಾಸ್ತವ್ಯ, ದಾಸೋಹ, ದರ್ಶನ, ಸಾರಿಗೆ ವ್ಯವಸ್ಥೆ ಸೇರದಂತೆ ಹಲವುಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಪ್ರಾಧಿಕಾರದಿಂದಮಾಡಲಾಗುತ್ತಿದೆ. ಸಚಿವ ವಿ. ಸೋಮಣ್ಣ ಅವರ ಕಾಳಜಿಯಿಂದ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ ಎಂದರು. ಮಹದೇಶ್ವರನ ದರ್ಶನ ಪಡೆದು ಸಮಸ್ತ ಕನ್ನಡ ನಾಡಿನ ಜನರ ಬದುಕು ಸುಭೀಕ್ಷವಾಗಲಿ. ಎಲ್ಲರೂ ಸ್ವಾವಲಂಬಿಗಳಾಗಲಿ. ಸಮೃದ್ಧ ಕರ್ನಾಟಕಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ. ನಾಡಿನ ದಾರ್ಶನಿಕರ ಪ್ರೇರಣೆ ಎಲ್ಲರೂ ಪಡೆಯುವಂತಾಗಲಿ. ಮಹದೇಶ್ವರರ ಚರಿತ್ರೆ ಪವಾಡಗಳನ್ನು ತಿಳಿಯುವಂತಾಗಲಿ ಎಂದು ಮುಖ್ಯಮಂತ್ರಿಯವರುತಿಳಿಸಿದರು.

ಇತ್ತೀಚೆಗೆ ಇಲ್ಲಿಗೆ ಬಂದಾಗ ಈ ಭಾಗದ ಕಾಡಂಚಿನ ಜನರ ಸಮಸ್ಯೆಗಳಾದ ಶಾಲೆ, ಆಸ್ಪತ್ರೆ, ಬಸ್‌, ಸಂಪರ್ಕ ರಸ್ತೆ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಲಾಗಿತ್ತು. ಈ ಬಗ್ಗೆ ಜಿಲ್ಲಾ​ಧಿಕಾರಿಗಳು ವರದಿ ಕಳುಹಿಸಿದ್ದಾರೆ. ಎರಡು ದಿನದಲ್ಲಿ ಈ ಬಗ್ಗೆ ಸಮಗ್ರ ಅದೇಶ ಹೊರಡಿಸಲಿದ್ದೇವೆ. ಜಾಗೇರಿ ಸಮಸ್ಯೆಯನ್ನೂ ಅತೀ ಶೀಘ್ರದಲ್ಲಿ ಪರಿಹರಿಸಲಿದ್ದೇವೆ. ಸರ್ವೆಕಾರ್ಯ ಮುಗಿದಿದ್ದು, ಕೆಲ ತಾಂತ್ರಿಕ ಕೆಲಸವಿದೆ. ಮೂರು ನಾಲ್ಕು ದಿನದಲ್ಲಿ ಆದೇಶ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪ್ರತಿಮೆ ಉದ್ಘಾಟನೆ ಅವಿಸ್ಮರಣೀಯ: ಸಚಿವ ವಿ. ಸೋಮಣ್ಣ ಮಾತನಾಡಿ, ಈ ದಿನ ನನ್ನ ಜೀವನದ ಅವಿಸ್ಮರಣೀಯವಾಗಿದೆ. ಮಹದೇಶ್ವರರ ಪ್ರತಿಮೆ ಉದ್ಘಾಟನೆಯು ಮನಸ್ಸಿಗೆ ಉಲ್ಲಾಸ ಭಕ್ತಿ ಉಂಟು ಮಾಡುವ ಕಾರ್ಯವಾಗಿದೆ ಎಂದರು. ಮಾದಪ್ಪನ ಪ್ರತಿಮೆ ನಿರ್ಮಾಣದಿಂದ ಮಹದೇಶ್ವರರ ವಿಚಾರಧಾರೆಗಳು ಜಗತ್ತಿಗೆ ಪರಿಚಯಿಸುವ ಕೆಲಸವಾಗಿದೆ. ಸರ್ಕಾರ ಹಾಗೂ ಪ್ರಾಧಿಕಾರ ಒಗ್ಗೂಡಿ ಕೆಲಸ ಮಾಡಿದರೆ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂಬುದಕ್ಕೆ ಈ ಕಾರ್ಯವೇ ನಿದರ್ಶನ ಎಂದು ತಿಳಿಸಿದರು. ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಮಾತನಾಡಿ, ಮಾದಪ್ಪನ ಕ್ಷೇತ್ರಕ್ಕೆ ಬಂದ ತಕ್ಷಣವೇ ಭಕ್ತಾಧಿಗಳಿಗೆ ಮಾದಪ್ಪನ ದರ್ಶನವಗುತ್ತಿದೆ. ಸಾಕ್ಷಾತ್‌ ಮಾದಪ್ಪನೆ ಹುಲಿಯನ್ನೇರಿ ಹೋಗುವಂತಹ ಪ್ರತಿಮೆ ನಿರ್ಮಾಣವಾಗಿದೆ. ಕತ್ತಲು ರಾಜ್ಯವನ್ನು ಬೆಳಕು ಮಾಡಿದ ಕೀರ್ತಿ ಮಹದೇಶ್ವರನಿಗೆ ಸಲ್ಲುತ್ತದೆ ಎಂದರು.

ಐತಿಹಾಸಿಕ ದಿನ: ಶಾಸಕರಾದ ಆರ್‌. ನರೇಂದ್ರ ಮಾತನಾಡಿ, ಮಹದೇಶ್ವರರ ಪ್ರತಿಮೆ ಲೋಕಾರ್ಪಣೆಗೊಂಡ ಇಂದು ಐತಿಹಾಸಿಕ ದಿನವಾಗಿದೆ. ಮಹದೇಶ್ವರರ ಪ್ರತಿಮೆ ಸುಂದರವಾಗಿ ಮೂಡಿ ಬಂದಿದ್ದು, ಭಕ್ತಿ ಭಾವ ಉಂಟು ಮಾಡಿದೆ. ಉಳಿದ ಸಣ್ಣ ಪುಟ್ಟಕೆಲಸಗಳು ಮುಂದಿನ ದಿನಗಳಲ್ಲಿ ಆಗಲಿವೆ. ಕ್ಷೇತ್ರದಲ್ಲಿ 187 ಕೋಟಿ ರು. ವೆಚ್ಚದ ಕಾಮಗಾರಿಗಳು ಎಲ್ಲರ ಸಹಕಾರದಿಂದ ಆಗಿವೆ ಎಂದರು. 

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾ​ರ​ಸ್ವಾಮಿ ಟೀಕೆ

ಇದೇ ವೇಳೆ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು. ಸಾಲೂರು ಬೃಹನ್ಮಠದ ಹಿರಿಯ ಗುರುಸ್ವಾಮೀಜಿ, ಪೀಠಾಧಿಪತಿ ಶಾಂತಮಲ್ಲಿಕಾರ್ಜುನಸ್ವಾಮೀಜಿ, ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಶಾಸಕರಾದ ಎನ್‌. ಮಹೇಶ್‌, ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ವಿಧಾನಪರಿಷತ್‌ ಮಾಜಿ ಸದಸ್ಯಫ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ, ಜಿಲ್ಲಾ ಉಸ್ತುವಾರಿ ಸಚಿವರ ಪತ್ನಿ ಶೈಲಜಾ ಸೋಮಣ್ಣ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ, ಜಿ,ಪಂ.ಸಿಇಒ ಎಸ್‌. ಪೂವಿತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ, ಪ್ರಾ​ಕಾರದ ಉಪಕಾರ್ಯದರ್ಶಿ ಬಸವರಾಜು, ಉಪವಿಭಾಗಾಧಿಕಾರಿ ಗೀತಾ ಹುಡೇದ ಕಾರ್ಯಕ್ರಮದಲ್ಲಿ ಇದ್ದರು.

click me!