ವಾರದ ಹಿಂದೆ ಪ್ರಧಾನಿ ಮೋದಿ ಉದ್ಘಾಟಿಸಿದ ಎಕ್ಸ್‌ಪ್ರೆಸ್‌ವೇ ದುಸ್ಥಿತಿ
ನಾಲ್ಕು ನೀರಿನಲ್ಲಿ ಸಿಲುಕಿ ಕೆಟ್ಟುನಿಂತ ವಾಹನಗಳು
ಹೆದ್ದಾರಿಯಲ್ಲಿ ಸಂಭವಿಸಿದ ಸರಣಿ ಅಪಘಾತಗಳು
ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಮಾ.18): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದು ವಾರದ ಹಿಂದಷ್ಟೇ ಉದ್ಘಾಟಿಸಿದ 8,500 ಕೋಟಿ ರೂ. ವೆಚ್ಚದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ದುಸ್ಥಿತಿ ಕಂಡು ರಾಜ್ಯದ ಜನರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ರಸ್ತೆಯಲ್ಲಿ 3-4 ಅಡಿ ನೀರು ನಿಂತಿದ್ದು, ಕೆಲ ವಾಹನಗಳು ಕೆಟ್ಟು ಹೋದರೆ ಮತ್ತೆ ಕೆಲವು ಸರಣಿ ಅಪಘಾತಕ್ಕೀಡಾಗಿವೆ.
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೇ.90 ಪೂರ್ಣಗೊಂಡಿದ್ದು, ಇನ್ನೂ ಹಲವು ಕಾಮಗಾರಿಗಳು ಬಾಕಿಯಿವೆ. ಆದರೆ, ತರಾತುರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾ.12ರಂದು ಬಂದು ರಸ್ತೆಯನ್ನು ಲೋಕಾರ್ಪಣೆ ಮಾಡಿ ಹೋಗಿದ್ದಾರೆ. ಇದಾದ ಎರಡು ದಿನಗಳ ನಂತರ ಮಾ.14ರಂದು ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇಗೆ ಟೋಲ್ ಸಂಗ್ರವನ್ನೂ ಆರಂಭಿಸಲಾಗಿದೆ. ಆದರೆ ಈ ರಸ್ತೆಯಲ್ಲಿ ದೊಡ್ಡ ಮಟ್ಟದಲ್ಲಿ ನೀರು ನಿಲ್ಲುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. 8,480 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಲಾಗುತ್ತಿರುವ ರಸ್ತೆಯಲ್ಲಿ ನೀರು ನಿಂತಿರುವುದಕ್ಕೆ ರಸ್ತೆ ಬಳಕೆದಾರರು ಮೋದಿ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಟ್ಟು ನಿಂತ ಕಾರಿಗೆ ಲಾರಿ ಡಿಕ್ಕಿ: ಮಳೆ ನೀರಿಗೆ ಕೆಟ್ಟುನಿಂತ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಕರೆ ಮಾಡಿದರು ಯಾರೊಬ್ಬರು ನೆರವಿಗೆ ಬಂದಿಲ್ಲಎಂದು ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಬಾರಿ ಟೋಲ್ ಕಟ್ಟಿದರೂ ಸರಿಯಾದ ವ್ಯವಸ್ಥೆ ಇಲ್ಲ, ಹೆದ್ದಾರಿ ಕ್ರೆಡಿಟ್ ಗಾಗಿ ಕಿತ್ತಾಡುವ ರಾಜಕೀಯ ನಾಯಕರು ಸಮಸ್ಯೆ ಎದುರಾದಾಗ ಸ್ಥಳಕ್ಕೆ ಬರುವುದಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಗರಂ ಆಗಿದ್ದಾರೆ.
ಕಳೆದ ವರ್ಷವೂ ಸೃಷ್ಟಿಯಾಗಿದ್ದ ಅವಾಂತರ: ಇನ್ನೂ ಕಳೆದ ವರ್ಷ ಕೂಡ ಎಕ್ಸ್‌ಪ್ರೆಸ್ ವೇ ನಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾಕಷ್ಟು ವಾಹನಗಳು ಜಲಾವೃತಗೊಂಡು ಅವಾಂತರ ಸೃಷ್ಟಿಯಾಗಿತ್ತು. ಆಗ ಕಾಮಗಾರಿ ಪ್ರಗತಿ ಹಂತದಲ್ಲಿದೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಅಧಿಕಾರಿಗಳು ಸಬೂಬು ಹೇಳಿದ್ದರು. ಆದರೆ ಇದೀಗ ಮತ್ತೆ ಅದೇ ಸ್ಥಳದಲ್ಲಿ ನೀರು ನಿಂತಿರೋದು ಅವೈಜ್ಞಾನಿಕ ಕಾಮಗಾರಿಗೆ ಸಾಕ್ಷಿಯಾಗಿವೆ. ಉದ್ಘಾಟನೆಯಾದ ಒಂದೇ ವಾರಕ್ಕೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೆದ್ದಾರಿ ಪ್ರಾಧಿಕಾರದಿಂದ ನೀರು ಹರಿಸಲು ಯತ್ನ: ಇನ್ನೂ ಹೆದ್ದಾರಿಯಲ್ಲಿ ಮಳೆ ಅವಾಂತರದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಡಿಬಿಎಸ್ ಸಿಬ್ಬಂದಿ ನೀರನ್ನ ಹೊರಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಜೆಸಿಬಿ ಹಾಗೂ ಹಿಟಾಚಿ ವಾಹನಗಳ ಮೂಲಕ ಡ್ರೈನೇಜ್ ವ್ಯವಸ್ಥೆ ಮಾಡಿ ನೀರು ಹೊರಹಾಕಿದ್ದಾರೆ. ಇಷ್ಟಾದರೂ ಸ್ಥಳಕ್ಕೆ ಬಾರಿಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ. ಒಟ್ಟಾರೆ ದುಬಾರಿ ಟೋಲ್ ಕಟ್ಟಿ ಎಕ್ಸ್‌ಪ್ರೆಸ್ ವೇ ಸಂಚಾರ ಮಾಡಿದ್ರೂ ವಾಹನ ಸವಾರರು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದೆ. ಇನ್ನಾದರೂ ಹೆದ್ದಾರಿ ಪ್ರಾಧಿಕಾರ ಸಮಸ್ಯೆ ಬಗೆಹರಿಸುವುದೇ ಎಂದು ಕಾದುನೋಡಬೇಕಿದೆ.
ಹೆದ್ದಾರಿ ಪೂರ್ಣಗೊಳ್ಳದೇ ಸುಂಕ ವಸೂಲಿ ಸರಿಯಲ್ಲ: ಸಿದ್ದರಾಮಯ್ಯ
ಟೋಲ್ ಕಟ್ಟಿದವರಿಗೆ ಮಾತ್ರ ಉತ್ತಮ ರಸ್ತೆ: ಬೆಂಗಳೂರಿನಿಂದ ಮೈಸೂರುವರೆಗೆ ಇರುವ ಎಲ್ಲ ನಿವಾಸಿಗಳು ಉಚಿತವಾಗಿ ಸಂಚಾರ ಮಾಡುತ್ತಿದ್ದ ರಸ್ತೆಯನ್ನು ಅಭಿವೃದ್ಧಿ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಕಟ್ಟಿದವರಿಗೆಮಾತ್ರ ಉತ್ತಮ ರಸ್ತೆಯನ್ನು ಒದಗಿಸುತ್ತಿದೆ. ಉಳಿದಂತೆ ಸರ್ವಿಸ್ ರಸ್ತೆಗಳಲ್ಲಿ ನಾಲ್ಕೈದು ಅಡಿ ನೀರು ನಿಲ್ಲುತ್ತಿದ್ದು ಹರಿದು ಹೋಗಲು ವ್ಯವಸ್ಥೆಯೇ ಇಲ್ಲದಂತಾಗಿದೆ. ಇನ್ನು ಅಂಡರ್ ಪಾಸ್‌ಗಳನ್ನು ನಿರ್ಮಾಣ ಮಾಡಿದ ಸ್ಥಳದಲ್ಲಿ ನೀರು ನಿಂತಿದ್ದು, ಸ್ಥಳೀಯ ವಾಹನ ಸವಾರರು ರಸ್ತೆ ದಾಟಲು ಪರದಾಡುತ್ತಿದ್ದಾರೆ.