ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಮಲೆಯಾಳಿ ಚಾಲಕರು; ಕನ್ನಡಿಗರಿಗೆ ಕೈಕೊಟ್ಟ ಸರ್ಕಾರ

By Sathish Kumar KH  |  First Published May 30, 2024, 7:32 PM IST

ಕನ್ನಡ ನಾಡು, ನುಡಿ, ಸಾಹಿತ್ಯ ಸೇವೆಗೆ ನೃಪತುಂಗ ಪ್ರಶಸ್ತಿ ಕೊಡುವ ಬಿಎಂಟಿಸಿ ಸಂಸ್ಥೆಯು ಎಲೆಕ್ಟ್ರಿಕ್ ಬಸ್‌ಗಳಿಗೆ ಮಲೆಯಾಳಿ ಚಾಲಕರನ್ನು ನೇಮಕ ಮಾಡಿಕೊಂಡು ಕನ್ನಡಿಗರಿಗೆ ವಂಚನೆ ಮಾಡಿದೆ. 


ಬೆಂಗಳೂರು (ಮೇ 30): ರಾಜ್ಯದಲ್ಲಿ ಕನ್ನಡ ಭಾಷೆಯ ಉಳಿವು ಹಾಗೂ ಬೆಳವಣಿಗೆಗಾಗಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (Bengaluru Metropolitan Transport Corporation - BMTC) ಪ್ರತಿವರ್ಷ ನೃಪತುಂಗ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದೆ. ಆದರೆ, ಈಗ ಉದ್ಯೋಗ ನೀಡುವಲ್ಲಿ ಕನ್ನಡಿಗರಿಗೆ ದೊಡ್ಡ ಮಟ್ಟದ ವಂಚನೆಯನ್ನೇ ಮಾಡಲಾಗಿದೆ. ಬೆಂಗಳೂರಿನಲ್ಲಿ ಸಂಚಾರ ಮಾಡುವ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ಗಳಿಗೆ ಮಲೆಯಾಳಿ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಈಗಾಗಲೇ ಬೆಂಗಳೂರಿನ ಬಹುತೇಕ ಖಾಸಗಿ ಉದ್ಯೋಗ ಕ್ಷೇತ್ರಗಳಲ್ಲಿ ಪರಭಾಷಿಕರೇ ಮೇಲುಗೈ ಸಾಧಿಸಿದ್ದಾರೆ. ಹೊಸದಾಗಿ ಕನ್ನಡ ಯುವಜನರು ಉದ್ಯೋಗಕ್ಕೆ ಹೋದರೂ ಅವರನ್ನು ಸೇರಿಸಿಕೊಳ್ಳದೇ ತೆಲುಗು, ತಮಿಳು ಕೇರಳದ ಮಲೆಯಾಳಿಗರನ್ನು ಸೇರಿಸಿಕೊಳ್ಳಲು ವ್ಯವಸ್ಥಿತ ಹುನ್ನಾರ ಮಾಡುತ್ತಿದ್ದಾರೆಂಬುದು ನಗ್ನಸತ್ಯವಾಗಿದೆ. ಇನ್ನು ಬೆಂಗಳೂರಿನ ಸ್ಥಳೀಯ ಆಡಳಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಕಚೇರಿಗಳು ಸೇರಿ ಹಲವು ಸರ್ಕಾರಿ ಇಲಾಖೆಗಳಲ್ಲಿ ಕೆಳ ಹಂತದ ಎಲ್ಲ ಹುದ್ದೆಗಳು ಅನ್ಯ ಭಾಷಿಕರ ಪಾಲಾಗಿವೆ. ಆದರೆ, ಬಿಎಂಟಿಸಿ ಮಾತ್ರ ಇದಕ್ಕೆ ಹೊರತಾಗಿದ್ದು, ಕನ್ನಡಿಗರೇ ಸಾರ್ವಭೌಮರಾಗಿದ್ದರು. ಈಗ ಬಿಎಂಟಿಸಿಯಲ್ಲಿಯೂ ಪರಭಾಷಿಕರ ನೇಮಕಾತಿ ಹೆಚ್ಚಳವಾದಲ್ಲಿ ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಬೆಂಗಳೂರಿನಲ್ಲಿ ಸ್ಥಾನವೇ ಇಲ್ಲದಂತಾಗಲಿದೆ.

Tap to resize

Latest Videos

undefined

ಮೋದಿ ಮತ್ತೆ ಪ್ರಧಾನಿಯಾಗಲೆಂದು ಬಾಗಲಕೋಟೆಯಿಂದ ಅಯೋಧ್ಯೆಗೆ ಪಾದಯಾತ್ರೆ ಮಾಡಿದ ಕನ್ನಡಿಗ

ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬಿಎಂಟಿಸಿಯಲ್ಲಿ ಪರಭಾಷಿಕರ ಕಾರುಬಾರು? ಶುರುವಾಗಿದೆ. ಕನ್ನಡ ಬಾರದವರು ಬಿಎಂಟಿಸಿ ಬಸ್‌ಗಳಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗ ಸಾರ್ವಭೌಮ ಕೇವಲ ಹೆಸರಿಗಷ್ಟೆನಾ? ಎಂಬ ಪ್ರಶ್ನೆ ಪ್ರಯಾಣಿಕರಿಂದ ಹಾಗೂ ಕನ್ನಡ ಭಾಷಾಪರ ಹೋರಾಟಗಾರರಿಂದ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಕ್ತಿ ಯೋಜನೆ ಜಾರಿಗೆ ತರಲಾಗಿದ್ದು, ಬಸ್‌ಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಹೊಸ ಬಸ್‌ಗಳನ್ನು ಖರೀದಿ ಮಾಡಲಾಗಿದೆ. ಹೊಸ ಬಸ್‌ಗಳ ಖರೀದಿ ವೇಳೆ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲಕರನ್ನು ನೇಮಕ ಮಾಡಿಕೊಳ್ಳುವಾಗ ಸರ್ಕಾರದಿಂದ ಕೇರಳ ಹಾಗೂ ಮಹಾರಾಷ್ಟ್ರದ ಚಾಲಕರನ್ನು ನೇಮಕ ಮಾಡಕೊಳ್ಳಲಾಗಿದೆ.

ಬಿಎಂಟಿಸಿ ಎಲೆಕ್ಟ್ರಿಕಲ್ ಬಸ್‌ಗಳಿಗೆ ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕ ಮಾಡಿಕೊಳ್ಳುವಾಗ ಕಡಿಮೆ ವೇತನಕ್ಕೆ ಚಾಲಕರನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ನೆರೆಯ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರ ಚಾಲಕರಿಗೆ ಗಾಳ ಹಾಕಲಾಗಿದೆ. ಗುತ್ತಿಗೆ ಸಂಸ್ಥೆಗಳು ಹಣವನ್ನು ಉಳಿಸಲು ಹೊರ ರಾಜ್ಯದವರಿಗೆ ಮಣೆ ಹಾಕಿದ್ದು, ಕನ್ನಡಿಗರು ಉದ್ಯೋಗ ವಂಚಿತರಾಗಿದ್ದಾರೆ. ಇದರಿಂದಾಗಿ ಎಲೆಕ್ಟ್ರಿಕ್‌ ಬಸ್‌ಗಳಲ್ಲಿ ಕನ್ನಡ ಭಾಷೆ ಬಾರದ ಚಾಲಕರೊಂದಿಗೆ ಬಸ್ ಕಂಡಕ್ಟರ್‌ಗಳು ಸಂವಹನ ಮಾಡಲಾಗದೇ ಬೇಸತ್ತು ಹೋಗಿದ್ದಾರೆ. ಕನ್ನಡ ಬಾರದ ಚಾಲಕರು ಹಾಗೂ ಕಂಡಕ್ಟರ್ ನಡುವೆ ಸಂವಹನ ಸಮಸ್ಯೆ ಎದುರಾಗಿದ್ದು, ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಕೂಡ ಕೇಳಿಬಂದಿವೆ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಚಾಲಕರು ಬಹುತೇಕ ಮಲೆಯಾಳಿಗಳಾಗಿದ್ದು, ಅವರಿಗೆ ಕನ್ನಡ ಬರುವುದಿಲ್ಲ. ಇನ್ನು ಇವರಿಗೆ ನಗರದ ರಸ್ತೆಯ ಮಾರ್ಘಗಳು ಕೂಡ ಗೊತ್ತಿಲ್ಲದೇ ಕಂಡಕ್ಟರ್ ಅವರನ್ನು ಕೇಳಲು ಸಂವಹನವೂ ಸರಿಯಾಗಿ ಸಾಧಿಸಲಾಗದೇ ಒದ್ದಾಡುತ್ತಿದ್ದಾರೆ. ಇನ್ನು ಕಂಡಕ್ಟರ್‌ಗಳು ಕೂಡ ಇವರಿಗೆ ಯಾವ ಮಾರ್ಗದಲ್ಲಿ ಹೋಗಬೇಕು ಎಂದು ಹೇಳಿದರೂ ಅರ್ಥವಾಗದೇ ಎಲ್ಲೆಂದರಲ್ಲಿ ಬಸ್‌ಗಳನ್ನು ಸಿಗ್ನಲ್‌ಗಳಲ್ಲಿ ನಿಲ್ಲಿಸಿ ಸಮಸ್ಯೆ ಉಂಟುಮಾಡುತ್ತಿದ್ದಾರೆ. 

ಲಾಭಕ್ಕಾಗಿ ಕನ್ನಡವನ್ನೇ ಮಾರಿಕೊಳ್ಳುವ ಗುತ್ತಿಗೆ ಸಂಸ್ಥೆಗಳು: ಇನ್ನು ಬಿಎಂಟಿಸಿ ಬಸ್‌ಗಳಿಗೆ ಗುತ್ತಿಗೆ ಆಧಾರದಲ್ಲಿ ಚಾಲಕರ ಸೇವೆ ನೀಡಲು ಟೆಂಡರ್ ಕರೆದಲ್ಲಿ ಹೊರ ರಾಜ್ಯದವರೇ ಹೆಚ್ಚಾಗಿ ಭಾಗವಹಿಸಿ ಅತ್ಯಂತ ಕಡಿಮೆ ಬೆಲೆಗೆ ಬಿಡ್ ಮಾಡುತ್ತಾರೆ. ಇನ್ನು ಕಡಿಮೆ ದರ ಬಿಡ್‌ ಮಾಡಿದ ಹೊರ ರಾಜ್ಯದ ಸಂಸ್ಥೆಗಳು ಅಥವಾ ಸ್ಥಳೀಯರೇ ಟೆಂಡರ್ ಪಡೆದುಕೊಂಡರೂ ಅವರು ಹೆಚ್ಚು ಲಾಭದ ಆಸೆಗಾಗಿ ಕನ್ನಡ ನಾಡು, ನುಡಿ ಹಾಗೂ ಕನ್ನಡಿಗರನ್ನು ಮಾರಲೂ ಸಿದ್ಧರಾಗಿರುತ್ತಾರೆ. ಹೀಗಾಗಿ, ಕಡಿಮೆ ಬೆಲೆಗೆ ಚಾಲಕರ ಸೇವೆ ಪೂರೈಸಲು ಹೊ ರರಾಜ್ಯಗಳಿಂದ ಕಡಿಮೆ ಬೆಲೆಗೆ ಚಾಲಕರನ್ನು ಕರೆದುಕೊಂಡು ಬರುತ್ತಾರೆ. ಇದರಿಂದ ಗುತ್ತಿಗೆ ಸಂಸ್ಥೆ ಮಾಲೀಕರು ದೊಡ್ಡ ಮಟ್ಟದ ಲಾಭ ಮಾಡಿಕೊಳ್ಳಲಿದ್ದಾರೆ.

Breaking: ಬೆಂಗಳೂರು ಜನರೇ ಅಲರ್ಟ್‌, ಈ ಎರಡು ದಿನ ನಗರಕ್ಕೆ ನೀರು ಪೂರೈಕೆ ಇಲ್ಲ!

ಬಿಎಂಟಿಸಿಯಲ್ಲಿ ಒಟ್ಟು 6,000 ಬಸ್‌ಗಳು ಸೇವೆ ನೀಡುತ್ತಿವೆ. ಇದರಲ್ಲಿ ಮೂರು ಕಂಪನಿಯ 648 ಎಲೆಕ್ಟ್ರಿಕ್ ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಎಲೆಕ್ಟ್ರಿಕ್ ಬಸ್ ಗಳಲ್ಲಿ ಚಾಲಕರನ್ನು ಮಾತ್ರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇನ್ನು ಪ್ರಯಾಣಿಕರಿಗೆ ಕನ್ನಡದಲ್ಲಿಯೇ ಮಾತನಾಡುತ್ತಾ ಹಣ ಪಡೆದು ಟಿಕೆಟ್ ನೀಡಲು ಅನುಕೂಲ ಆಗುವಂತೆ ಕನ್ನಡಿಗ ಕಂಡಕ್ಟರ್‌ಗಳನ್ನು ಸಂಚಾರ ಸೇವೆಗೆ ನಿಯೋಜನೆ ಮಾಡಲಾಗುತ್ತದೆ. ಈ ಮೂಲಕ ಗುತ್ತಿಗೆ ಸಂಸ್ಥೆ ಮತ್ತು ಬಿಎಂಟಿಸಿ ನಿರ್ಲಕ್ಷ್ಯದಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. 

ನಿಯಮ ಗಾಳಿಗೆ ತೂರುವ ಗುತ್ತಿಗೆ ಏಜೆನ್ಸಿಗಳು: ಇನ್ನು ರಾಜ್ಯದಲ್ಲಿನ ಯಾವುದೇ ಸರ್ಕಾರಿ ಇಲಾಖೆ, ಸರ್ಕಾರಿ ಸಂಸ್ಥೆಗಳು, ನಿಗಮ ಮತ್ತು ಮಂಡಳಿಗಳಿಗೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನಿಯೋಜನೆ ಮಾಡುವುದಕ್ಕೆ ಸ್ಥಳೀಯರಿಗೆ ಆಧ್ಯತೆ ನೀಡುವಂತೆ ನಿಯಮದಲ್ಲಿ ತಿಳಿಸಲಾಗಿರುತ್ತದೆ. ಆದರೆ, ಈ ನಿಯಮ ಗಾಳಿಗೆ ತೂರಿದ ಗುತ್ತಿಗೆ ಏಜೆನ್ಸಿಗಳು ಹೊರ ರಾಜ್ಯದವರನ್ನು ನೇಮಕಾತಿ ಮಾಡುತ್ತದೆ. ಕಳೆದೆರಡು ವಾರದ ಹಿಂದೆ ಎಲೆಕ್ಟ್ರಿಕ್ ಬಸ್ ಚಾಲಕರು ಗುತ್ತಿಗೆ ಏಜೆನ್ಸಿಗಳಿಂದ ಸರಿಯಾಗಿ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಇಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಕನ್ನಡಿಗರು ಕೆಲಸ ಬಿಟ್ಟು ಹೋಗಿದ್ದರು. ಇದರಿಂದ ತೆರವಾದ ಸ್ಥಾನಗಳಿಗೆ ಗುತ್ತಿಗೆ ಏಜೆನ್ಸಿಗಳು ಕಡಿಮೆ ವೇತನಕ್ಕೆ ಪರಭಾಷಿಕರ ಕರೆತಂದು ಕೆಲಸ ಮಾಡಿಸುತ್ತಿವೆ.

click me!