ಬಂದೂಕುಗಳು ಇದ್ದರೂ ಮಹದೇವಪ್ಪನವರು ಅಹಿಂಸಾ ತತ್ವಕ್ಕೆ ಕಟ್ಟಿಬದ್ದರಾಗಿದ್ದರಿಂದ ಯಾರೂ ಗುಂಡು ಹಾರಿಸಬಾರದೆಂದು ಆಜ್ಞೆ ಮಾಡಿಬಿಟ್ಟರು. ಆದರೆ ಎದುರಾಳಿಗಳ 3-4 ಬುಲೆಟ್‌ಗಳು ಮೈಲಾರರ ಎದೆ ಸೀಳಿಬಿಟ್ಟವು. ಅಹಿಂಸೆ ಅಹಿಂಸೆ... ಭಾರತ್ ಮಾತಾ ಕಿ ಜೈ ಎನ್ನುತ್ತಾ ಅವರು ನೆಲಕ್ಕುರುಳಿದರು.
ನಮ್ಮ ದೇಶದ ಸ್ವಾತಂತ್ಯ ಸಂಗ್ರಾಮದಲ್ಲಿ ಭಾಗವಹಿಸಿ ಪ್ರಾಣತ್ಯಾಗ ಮಾಡಿದ ಮಹನೀಯರ ಸಾಲಿನಲ್ಲಿ ಎದ್ದು ಕಾಣುವ ಪ್ರಮುಖ ಹೆಸರು, ಹುತಾತ್ಮ ಮೋಟೆಬೆನ್ನೂರಿನ ಮೈಲಾರ ಮಹಾದೇವಪ್ಪನವರದು. ಅತಿ ಚಿಕ್ಕ (14) ವಯಸ್ಸಿನಲ್ಲಿಯೇ ಅವರು ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದುಕೊಂಡು ತಮ್ಮ ತಲೆ ಮೇಲಿನ ವಿದೇಶಿ ಜರಿ ಟೊಪ್ಪಿಗೆಯನ್ನು ತೆಗೆದು ನೆಲಕ್ಕೆ ಬಿಸಾಡಿ ಶಾಲೆ, ಮನೆ, ಹುಟ್ಟೂರುಗಳನ್ನು ತೊರೆದು ಹೋರಾಟದ ಕೇಂದ್ರಗಳಾದ ಧಾರವಾಡ, ಕಲಾದಗಿಗಳಲ್ಲಿ ವಿಧಾಯಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಹೊರಟರು. ಅಲ್ಲಿ ಅವಶ್ಯಕ ತರಬೇತಿ ಪಡೆದುಕೊಂಡರು. ಹೀಗೆ ಧಾರವಾಡದ ಯುವಕರ ಸಂಘದಲ್ಲಿದ್ದಾಗ ಹಿರಿಯರಾದ ರಂಗನಾಥ್ ದಿವಾಕರ್, ಹಳ್ಳಿಕೇರಿ ಗುದ್ಲೆಪ್ಪ ಮುಂತಾದ ಹಿರಿಯ ಹೋರಾಟಗಾರರ ಸಂಪರ್ಕ ದೊರೆಯಿತು. ಅತ್ಯುತ್ಸಾಹದ ಮಹದೇವಪ್ಪ ತಾನು ಇನ್ನೂ ಹೆಚ್ಚಿನ ಪಾತ್ರ ವಹಿಸಬೇಕು ಸ್ವಾತಂತ್ರ್ಯ ಆಂದೋಲನದಲ್ಲಿ ಎಂದು ಅಂದುಕೊಳ್ಳುತ್ತಿದ್ದ. ಇಂತಹ ಒಂದು ಸುದಿನ ಅವನನ್ನು ಅರಸಿಕೊಂಡು ಬಂದೇ ಬಿಟ್ಟಿತು. ಈತನ ಮನೋ ಇಂಗಿತ ಅರಿತ ದಿವಾಕರರು, ಗಾಂಧೀಜಿಯವರ ಕೋರಿಕೆಯಂತೆ, ಮಹಾದೇವನನ್ನು ಸಬರಮತಿಗೆ ಕಳಿಸಿಕೊಡಲು ಮುಂದಾದರು. ಇದನ್ನೇ ಕಾಯುತ್ತಿದ್ದ ಆತ ಅತ್ಯುತ್ಸಾಹದಿಂದ ಅಲ್ಲಿಗೆ ಹೊರಟ.
ಕರ್ನಾಟಕದ ಏಕಮೇವ ಪ್ರತಿನಿಧಿ:
ಹೀಗೆ ಮಹದೇವ ಹೊರಟಿದ್ದು ದಂಡಿ ಯಾತ್ರೆಯಲ್ಲಿ ಭಾಗಿಯಾಗಲು. ಗಾಂಧೀಜಿಯವರೊಡನೆ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು. 1930ರ ಮಾರ್ಚ್ 12 ರಿಂದ ಏಪ್ರಿಲ್ 6ರ ವರೆಗೆ 370 ಕಿಲೋಮೀಟರ್ ದೂರವನ್ನು 25 ದಿನಗಳಲ್ಲಿ ಕ್ರಮಿಸಿ, ಬ್ರಿಟಿಷರು ವಿಧಿಸಿದ ಉಪ್ಪಿನ ತೆರಿಗೆಯನ್ನು ಧಿಕ್ಕರಿಸಲು ದಂಡಿಯ ಸಮುದ್ರ ತೀರ ತಲುಪಿದಾಗ, ಗಾಂಧೀಜಿಯವರ ಜೊತೆ ಯುವಕ ಮಹದೇವನಿಗೂ 6 ತಿಂಗಳು ಕಾರಾಗೃಹ ಶಿಕ್ಷೆಯಾಯಿತು. ಹೀಗೆ ಭಾಗವಹಿಸಿದ ಶಿಕ್ಷೆಗೆ ಗುರಿಯಾದ ಕರ್ನಾಟಕದ ಏಕಮೇವ ಪ್ರತಿನಿಧಿ ಮೈಲಾರ ಮಾದೇವಪ್ಪ, ಇವರು ಭಾಗವಹಿಸದೆ ಹೋಗಿದ್ದರೆ.... ಈ ಐತಿಹಾಸಿಕ ಆಂದೋಲನದಲ್ಲಿ ಕನ್ನಡನಾಡಿನ ಸಾಧನೆ ಶೂನ್ಯವಾಗಿ ಹೋಗುತ್ತಿತ್ತು. ಅದನ್ನು ನಿವಾರಿಸಿದ ಕೀರ್ತಿ ಕನ್ನಡಿಗರ ಕೆಚ್ಚೆದೆಯ ಕುರುಹಾದ ಮೈಲಾರ ಮಹಾದೇವಪ್ಪ.
ಇದನ್ನೂ ಓದಿ: India@75: ಕಾನೂನು ಭಂಗ ಚಳವಳಿಯ ತೀವ್ರತೆ ಸಾರುವ ಹಾವೇರಿ ವೀರಸೌಧ
ಉಪ್ಪಿನ ಮೈಲಾರರು:
ಹೀಗೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಮಹಾದೇವ ಮೈಲಾರರು, ಜೈಲಿನಿಂದ ಬಿಡುಗಡೆಗೊಂಡು ಕನ್ನಡ ನಾಡಿಗೆ ಬಂದಾಗ ಅವರಿಗೆ ವೀರೋಚಿತ ಸ್ವಾಗತ ದೊರೆಯಿತು. ಭವ್ಯ ಮೆರವಣಿಗೆ, ಸಭೆ ಸಮಾರಂಭಗಳು ಸಾಂಗವಾಗಿ ನೆರವೇರಿದವು. ಮುಂದೆ ಅವರು ಉಪ್ಪಿನ ಮೈಲಾರ ಎಂದೇ ಪ್ರಸಿದ್ಧರಾದರು. ಆದರೆ ಮಹಾದೇವ ಇದಾವುದನ್ನೂ ತಲೆಗೇರಿಸಿಕೊಳ್ಳಲಿಲ್ಲ. ಸಾಬರಮತಿ ಆಶ್ರಮದಲ್ಲಿ ದೊರೆತ ತರಬೇತಿ ಅನುಭವಗಳನ್ನು ಅನುಷ್ಠಾನಗೊಳಿಸಲು ಕೊರಡೂರು ಗ್ರಾಮದಲ್ಲಿ, ಗ್ರಾಮ ಸೇವಾಶ್ರಮ ಪ್ರಾರಂಭಿಸಿದರು. ಅಲ್ಲಿ ಚರಕ ತರಬೇತಿ, ನೂಲುವುದು, ಲಡಿ ಸುತ್ತುವುದು, ಬಟ್ಟೆ ತಯಾರಿಸುವುದು ನಂತರ ತಲೆಮೇಲೆ ಹೊತ್ತು ಮಾರುವುದು. ಅಸ್ಪೃಶ್ಯತಾ ನಿವಾರಣೆ, ಹರಿಜನಕೇರಿ ಸ್ವಚ್ಛಗೊಳಿಸುವುದು, ಯೋಗಾಸನ, ವ್ಯಾಯಾಮ, ಆಯುರ್ವೇದ, ದೇಸಿ ಔಷಧಿ ಪ್ರಯೋಗ ಇತ್ಯಾದಿ ತರಬೇತಿಕೊಡಲು ವ್ಯವಸ್ಥೆ ಮಾಡಲಾಯಿತು. ಇಷ್ಟೊತ್ತಿಗೆ ಮಹಾದೇವಪ್ಪರ ಹಿಂದೆ ಒಂದು ದೊಡ್ಡ ಹೋರಾಟಗಾರರ ತಂಡವೇ ನಿರ್ಮಾಣವಾಗಿತ್ತು.
ನಿರಂತರ ಹೋರಾಟ:
ಆಂಗ್ಲರ ಆಡಳಿತವನ್ನು ನೆಲಸಮಗೊಳಿಸಲು, ಆ ಸರ್ಕಾರವನ್ನು ನಿಷ್ಕ್ರಿಯಗೊಳಿಸಲು ಹಾಕಿಕೊಂಡ ಕಾರ್ಯಕ್ರಮಗಳು ಉಗ್ರಸ್ವರೂಪ ಪಡೆದುಕೊಳ್ಳತೊಡಗಿದವು. ಇಂತಹ ಎಲ್ಲವುಗಳಲ್ಲಿಯೂ ಮೈಲಾರರ ತಂಡ ಕ್ರಿಯಾಶೀಲವಾಗಿ ತೊಡಗಿಕೊಂಡಿತು. ಬ್ರಿಟಿಷರ ಸರ್ಕಾರಿ ಖಜಾನೆ, ಅಂಚೆ, ರೈಲ್ವೆ ಕಚೇರಿಗಳನ್ನು ಧ್ವಂಸಮಾಡುವುದು, ಲೂಟಿ ಹೊಡೆಯುವುದು ಇತ್ಯಾದಿಗಳನ್ನು ವ್ಯವಸ್ಥಿತವಾಗಿ ನಡೆಸುತ್ತ ಮುನ್ನಡೆಯಲಾಯಿತು. ಮುಂದಿನ 10-12 ವರ್ಷಗಳಲ್ಲಿ ಮೈಲಾರರು ನಾಲ್ಕಾರು ಸಲ ಬಂಧಿಸಲ್ಪಟ್ಟು ತಮ್ಮ ಹರೆಯದ ಬಹುಭಾಗವನ್ನು ಕಾರಾಗೃಹದಲ್ಲಿಯೇ ಕಳೆಯುವಂತಾಯಿತು. ಹಾಗೆಯೇ ಅವರ ಧರ್ಮಪತ್ನಿ ಸಿದ್ಧಮ್ಮ ಕೂಡ ಗುಜರಾತ್ ಹಾಗೂ ಕರ್ನಾಟಕದ ಕೆಲವು ಜೇಲುಗಳಲ್ಲಿ ಶಿಕ್ಷೆ ಅನುಭವಿಸಿ ಹೊರಬರುತ್ತಿದ್ದರು.
ಹೀಗೆ ಸಾಬರಮತಿ ಆಶ್ರಮದಲ್ಲಿ ಗಾಂಧೀಜಿ ಹಾಗೂ ಕಸ್ತೂರಬಾ ಅವರ ಜೊತೆಯಲ್ಲಿ ಇದ್ದು, ಸ್ವಾತಂತ್ರ್ಯ ಆಂದೋಲನದಲ್ಲಿ ಧುಮುಕಿ ಜೈಲುವಾಸ ಅನುಭವಿಸಿದ ದಂಪತಿ ಸಿಗುವುದು ದೇಶದಲ್ಲಿಯೇ ಅಪರೂಪ. ಇತಿಹಾಸದಲ್ಲಿ ಅನೇಕ ಕನ್ನಡಿಗರಿಗೆ ಆದ ಅವಜ್ಞೆ ಇವರನ್ನೂ ಬಿಡಲಿಲ್ಲ. ಮುಂದೆ ಚಲೇ ಜಾವ್ ಚಳುವಳಿಯಲ್ಲೂ ಮಹದೇವಪ್ಪ ಹಾಗೂ ಅವರ ತಂಡದ (ಪ್ರಮುಖರು: ಎಫ್.ಎಸ್.ತಾವರೆ, ವೆಂಕಣ್ಣಾಚಾರ್ಯ ವಾಯಿ ಇವರಿಬ್ಬರೂ ನಂತರ ಶಾಸಕರಾದರು) ಅನೇಕರು ಆಂದೋಲನದಲ್ಲಿ ಸಕ್ರಿಯವಾಗಿ ತೊಡಹಿಸಿಕೊಂಡು ಜೈಲು ಶಿಕ್ಷೆ ಅನುಭವಿಸಿದರು.
ಅಂತಿಮ ಹೋರಾಟ:
ಬಹುದೊಡ್ಡ ಪ್ರಮಾಣದಲ್ಲಿ ಯುವಕರನ್ನು ಆಂದೋಲನಕ್ಕೆ ಸೆಳೆಯಬೇಕೆಂದು ಮಹಾದೇವಪ್ಪನವರು ಕಾರ್ಯಪ್ರವೃತ್ತರಾದರು. ಇದರಂಗವಾಗಿ ಹೊಸರೀತಿಯ ಕಂದಾಯ ಕಚೇರಿ / ಖಜಾನೆಯನ್ನು ಧ್ವಂಸ ಮಾಡಲು ಯೋಜನೆಯನ್ನು ಹಾಕಿಕೊಳ್ಳಲಾಯಿತು. ಇಷ್ಟೊತ್ತಿಗಾಗಲೇ ಬ್ರಿಟಿಷ್ ಸರಕಾರ ಮಹದೇವಪ್ಪರನ್ನು ಹಿಡಿದುಕೊಟ್ಟವರಿಗೆ ಬಹುದೊಡ್ಡ ಮೊತ್ತದ ನಗದು ಬಹುಮಾನ ಘೋಷಿಸಿ ಆಗಿತ್ತು. ಇದಕ್ಕಾಗಿಯೇ ದೂರದ ಪುಣೆಯಿಂದ ವಿಶೇಷ ಪೊಲೀಸ್ ಪಡೆಯನ್ನು ತರಿಸಲಾಗಿತ್ತು ಕೂಡ. ಇದೆಲ್ಲ ಗೊತ್ತಿದ್ದೂ ಮಹಾದೇವಪ್ಪನವರು ಎದೆಗುಂದಲಿಲ್ಲ. ಹಾಕಿಕೊಂಡ ಯೋಜನೆಯಂತೆ, 1943ರ ಏಪ್ರಿಲ್ 1 ರಂದು ಬೆಳಗಿನ 7ರ ಹೊತ್ತಿಗೆ ಎರಡು ತಂಡಗಳಲ್ಲಿ ಚಕ್ಕಡಿಗಳಲ್ಲಿ ಮಾರುವೇಷದಲ್ಲಿ ಬಂದು ವೀರಭದ್ರ ಗುಡಿಯಲ್ಲಿದ್ದ ಖಜಾನೆಗೆ ಮುತ್ತಿಗೆ ಹಾಕಲಾಯಿತು. ತಕ್ಷಣ ಎಚ್ಚೆತ್ತ ವಿಶೇಷ ಪೊಲೀಸ್ ಪಡೆ ಗುಂಡಿನ ಮಳೆ ಸುರಿಸತೊಡಗಿತು. ಇವರಲ್ಲಿಯೂ ಸಾಕಷ್ಟು ಬಂದೂಕುಗಳು ಇದ್ದರೂ ಮಹದೇವಪ್ಪನವರು ಅಹಿಂಸಾ ತತ್ವಕ್ಕೆ ಕಟ್ಟಿಬದ್ದರಾಗಿದ್ದರಿಂದ ಯಾರೂ ಗುಂಡು ಹಾರಿಸಬಾರದೆಂದು ಆಜ್ಞೆ ಮಾಡಿಬಿಟ್ಟರು. ಆದರೆ ಎದುರಾಳಿಗಳ 3-4 ಬುಲೆಟ್‌ಗಳು ಮೈಲಾರರ ಎದೆ ಸೀಳಿಬಿಟ್ಟವು. ಅಹಿಂಸೆ ಅಹಿಂಸೆ... ಭಾರತ್ ಮಾತಾ ಕಿ ಜೈ ಎನ್ನುತ್ತಾ ಅವರು ನೆಲಕ್ಕುರುಳಿದರು. ಆಗ ವಯಸ್ಸು ಕೇವಲ 32. ಈ ಹುತಾತ್ಮನ ಜೊತೆಗೆ ವೀರಯ್ಯ ಹಿರೇಮಠ್, ತೀರಕಪ್ಪ ಮಡಿವಾಳರ ಎಂಬ ಇಬ್ಬರು ಹೋರಾಟಗಾರರೂ ವೀರಮರಣ ಅಪ್ಪಿದರು. ಇವರ ತ್ಯಾಗ ಬಲಿದಾನ ಕೊಂಡಾಡಿದ ಕವಿ ಸಮ್ಮದ್ ಸಾಹೇಬರ ಲಾವಣಿಯ ಈ ಒಂದು ಸಾಲು ನೋಡಿ...ದಿಟ್ಟನ ಹೆಸರನು ಹುಟ್ಟಿದ ಕೂಸಿಗೆ ಇಟ್ಟರೂ ತೀರದು ಉಪಕಾರ.
ಹೌದು ಇಂತಹ ಶ್ರೇಷ್ಠರ ಹೆಸರು ಭಗತ್ ಸಿಂಗ್, ರಾಜಗುರು, ಸುಖದೇವರ ಸಾಲಿನಲ್ಲಿ ನಿಲ್ಲುವಂತಹದು. ಏಪ್ರಿಲ್ 1 ಅವರು ಹುತಾತ್ಮರಾದ ದಿನ. ಇಂದು ಅವರನ್ನು ಭಕ್ತಿ ಗೌರವದಿಂದ ಸ್ಮರಿಸುವುದು ಭಾರತೀಯರೆಲ್ಲರ ಆದ್ಯ ಕರ್ತವ್ಯ.